Thursday, March 12, 2026

ಸತ್ಯ | ನ್ಯಾಯ |ಧರ್ಮ

ಶಾಲಾ ಶಿಕ್ಷಣದಲ್ಲಿ  ಹಿಂದಿಯನ್ನು ಕಡ್ಡಾಯವಾಗಿ ತೆಗೆಯಬೇಕು : ಹಿಂದಿ ವಿರೋಧಿ ಕರ್ನಾಟಕ ವೇದಿಕೆ

ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯ ವಿಷಯವಾಗಿ ಇರಿಸುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಬುಧವಾರ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದವು. “ಹಿಂದಿ ವಿರೋಧಿ ಕರ್ನಾಟಕ” ವೇದಿಕೆಯ ನೇತೃತ್ವದಲ್ಲಿ ಹಲವು ಸಂಘಟನೆಗಳ ಕಾರ್ಯಕರ್ತರು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ವರ್ಷ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕನ್ನಡ ನಾಡಿನ ಮಕ್ಕಳಿಗೆ ಅನವಶ್ಯಕವಾಗಿ ಹಿಂದಿ ಕಲಿಸಲಾಗುತ್ತಿದೆ, ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಶಾಲಾ ಹಂತದಲ್ಲೇ ತಾಯ್ನುಡಿಯಾಗಿ ಕನ್ನಡ ಮತ್ತು ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಮಾತ್ರ ಇರುವ ಎರಡು ನುಡಿ ಪದ್ಧತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಎರಡು ತಿಂಗಳಿನಿಂದ “ಪಾಸ್ ವಿತೌಟ್ ಹಿಂದಿ” ಹಾಗೂ ಶಾಲಾ ಶಿಕ್ಷಣದಲ್ಲಿ ಹಿಂದಿ ಕೈಬಿಡುವಂತೆ ವಿವಿಧ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಆದರೂ ರಾಜ್ಯ ಸರ್ಕಾರ ಈ ವಿಷಯಕ್ಕೆ ಗಮನ ನೀಡಿಲ್ಲ ಎಂದು ಆರೋಪಿಸಿ ಎಸ್‌ಎಸ್‌ಎಲ್‌ಸಿ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಲಾಗಿದೆ ಎಂದು ಸಂಘಟನೆಗಳು ತಿಳಿಸಿವೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಇಲಾಖೆಯ ನಿರ್ದೇಶಕ ಮಹೇಶ್ ಅವರು ಪ್ರತಿಕ್ರಿಯಿಸಿ, “ಹಿಂದಿ ವಿರೋಧಿ ಕರ್ನಾಟಕ” ವೇದಿಕೆಯ ಪ್ರತಿನಿಧಿಗಳಿಂದ ಮನವಿ ಪತ್ರ ಸ್ವೀಕರಿಸಿದರು. ಈ ಮನವಿಯಲ್ಲಿ ಸರ್ಕಾರಕ್ಕೆ ಐದು ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಗಿದೆ.

ಪ್ರಮುಖವಾಗಿ 2026-27 ಶೈಕ್ಷಣಿಕ ವರ್ಷದಿಂದ ಎರಡು ನುಡಿ ಕಲಿಕಾ ಪದ್ಧತಿಯನ್ನು ಜಾರಿಗೊಳಿಸಬೇಕು, ಥೋರಟ್ ಆಯೋಗದ ವರದಿಯನ್ನು ಶಾಸನಸಭೆ ಹಾಗೂ ಸಾರ್ವಜನಿಕ ಚರ್ಚೆಗೆ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ. ದ್ವಿಭಾಷಾ ನೀತಿ ಜಾರಿಗೆ ಬರುವವರೆಗೆ ವಿದ್ಯಾರ್ಥಿಗಳಿಗೆ ಹಿಂದಿ ಪರೀಕ್ಷೆಯನ್ನು ಕಡ್ಡಾಯಗೊಳಿಸಬಾರದು ಎಂಬುದೂ ಬೇಡಿಕೆಗಳಲ್ಲಿ ಸೇರಿದೆ.

ಇದೇ ವೇಳೆ ಹಿಂದಿನ ವರ್ಷಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯದಲ್ಲಿ ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣರೆಂದು ಘೋಷಿಸಬೇಕು. ಜೊತೆಗೆ ಹಿಂದಿ ಭಾಷಾ ಶಿಕ್ಷಕರ ನೇಮಕಾತಿಯನ್ನು ರದ್ದುಪಡಿಸಿ, ಈಗಾಗಲೇ ನೇಮಕಗೊಂಡಿರುವ ಶಿಕ್ಷಕರನ್ನು ಕನ್ನಡ ಶಿಕ್ಷಕರಾಗಿ ನಿಯೋಜಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ಇನ್ನೂ ರಾಜ್ಯದ ಶಿಕ್ಷಣ ಪಠ್ಯಕ್ರಮದಲ್ಲಿ ‘ಹಿಂದಿ ರಾಷ್ಟ್ರ ಭಾಷೆ’ ಎಂಬ ಕಲ್ಪಿತ ವಿಷಯವನ್ನು ತೆಗೆದುಹಾಕಬೇಕು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ “ಪಾಸ್ ವಿತೌಟ್ ಹಿಂದಿ” ನಿಯಮವನ್ನು ತಕ್ಷಣ ಜಾರಿಗೆ ತರಬೇಕು ಎಂದು ಆಗ್ರಹಿಸಲಾಗಿದೆ.

ಈ ಬೇಡಿಕೆಗಳನ್ನು ಸರ್ಕಾರ ತಕ್ಷಣ ಅಂಗೀಕರಿಸದಿದ್ದರೆ ಮಾರ್ಚ್ 30ರಂದು ನಡೆಯಲಿರುವ ಹಿಂದಿ ಭಾಷಾ ಪರೀಕ್ಷೆಯ ದಿನ ರಾಜ್ಯದಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಕನ್ನಡಪರ, ದಲಿತ, ರೈತ ಹಾಗೂ ಜನಪರ ಸಂಘಟನೆಗಳು ನೀಡಿವೆ.

ಪ್ರತಿಭಟನೆಯಲ್ಲಿ ಜಾಣಗೆರೆ ವೆಂಕಟರಾಮಯ್ಯ, ಕೋಡಿಹಳ್ಳಿ ಚಂದ್ರಶೇಖರ್, ಸಾರಾ ಗೋವಿಂದು, ಶಿವರಾಮೇಗೌಡ, ಅಭಿ ಒಕ್ಕಲಿಗ, ರಾಧಾಕೃಷ್ಣ, ಪಾರ್ವತೀಶ್ ಬಿಳಿದಾಳೆ, ಚೇತನ್, ರಾಮ್ ಪ್ರಸಾದ್, ವಿಜಯ್ ಕುಮಾರ್, ಶಿವಕುಮಾರ್, ಪದ್ಮ, ಮಂಜುಳ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page