Friday, June 14, 2024

ಸತ್ಯ | ನ್ಯಾಯ |ಧರ್ಮ

ಹಿಂದೂ ಯುವಕರ ಹತ್ಯೆಯ ಲಾಭವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆಯೇ ಬಿಜೆಪಿ?

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ ನಡೆದಿರುವ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಗೆ ಜನರ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಸೇರಿದಂತೆ ಬಿಜೆಪಿ ನಾಯಕರ ವಿರುದ್ದ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರವೀಣ್‌ ನೆಟ್ಟಾರು ಪಾರ್ಥಿವ ಶರೀರವನ್ನು ನೋಡಲು ಬಂದಿದ್ದ ನಳೀನ್‌ ಕುಮಾರ್‌ ಕಟೀಲ್‌ ಗೆ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಘೇರಾವ್‌ ಹಾಕಿದ್ದಲ್ಲದೆ ಅವರ ಕಾರನ್ನು ಧ್ವಂಸ ಮಾಡಲು ಮುಂದಾಗಿದ್ದರು.

ಹರ್ಷ ಕೊಲೆ ಪ್ರಕರಣ ಇನ್ನೂ ಹಸಿ ಹಸಿಯಾಗಿರುವಾಗಲೇ ಬೆಳ್ಳಾರೆಯಲ್ಲಿ ನಡೆದಿರುವ ಪ್ರವೀಣ್ ಕೊಲೆ ಬಿಜೆಪಿ ಕಾರ್ಯಕರ್ತರ ಹಾಗೂ ಸಂಘಪರಿವಾರದಲ್ಲಿ ಕೆಲಸ ಮಾಡುವ ಯುವಕರಿಗೆ ಆಘಾತವನ್ನು ಉಂಟು ಮಾಡಿದೆ. ಬಿಜೆಪಿ ನಾಯಕರು ಹಿಂದೂ ಕಾರ್ಯಕರ್ತರ ಹತ್ಯೆಯ ಲಾಭವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

ಫೆ. 21, 2022ರ ಸೋಮವಾರ ಸೆಕ್ಷನ್‌ 144 ಜಾರಿಯಲ್ಲಿದ್ದರೂ ಹರ್ಷ ಶವವನ್ನು ಮೆರವಣಿಗೆಯಲ್ಲಿ ತರಲಾಯಿತು. ಇದರಲ್ಲಿ ಬಿಜೆಪಿ ನಾಯಕ ಕೆ ಎಸ್‌ ಈಶ್ವರಪ್ಪ, ಸಂಸದ ಬಿ ವೈ ರಾಘವೇಂದ್ರ ಭಾಗವಹಿಸಿದ್ದರು. ಕೋಮು ಘರ್ಷಣೆಗೆ ಎಡೆ ಮಾಡಿಕೊಡುವ ಎಲ್ಲಾ ಸನ್ನಿವೇಶಗಳನ್ನೂ ಸೃಷ್ಟಿಸಿ ಶವಯಾತ್ರೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಲ್ಲು ತೂರಾಟ, ಮದರಸಾ ಹಾಗೂ ಇತರ ಕಟ್ಟಡಗಳ ಮೇಲೆ ಕಲ್ಲು ತೂರಾಟ ನಡೆಯಿತು. ಅನೇಕರು ಗಾಯಗೊಂಡರು, ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಆದರೆ ಪಟ್ಟು ಬಿಡದ ಬಿಜೆಪಿ ನಾಯಕರು ಶವಯಾತ್ರೆ ನಡೆಸಿದರು.

ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆಯೇ?

ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ಹತ್ಯೆಯನ್ನು ಬಿಜೆಪಿ ನಾಯಕರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಹತ್ಯೆಯ ನಂತರ ಶವಯಾತ್ರೆ ನಡೆಸಿ ಗಲಬೆ ನಡೆಸುವ ರೀತಿಯಲ್ಲಿ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಕರಾವಳಿಯಲ್ಲಿ ಕೋಮು ಗಲಬೆಗಳಲ್ಲಿ ಹತ್ಯೆಗೆ ಒಳಗಾಗಿರುವ ಬಹುತೇಕ ಎಲ್ಲಾ ಹಿಂದೂ ಕಾರ್ಯಕರ್ತರು ಬಿಲ್ಲವ, ಮೊಗವೀರ, ಮಡಿವಾಳ ಮುಂತಾದ ಅತ್ಯಂತ ಹಿಂದುಳಿದಿರುವ ಸಮುದಾಯದವರು. ಬಿಲ್ಲವ ಸಮುದಾಯದಲ್ಲಿ ತಮ್ಮ ಯುವಕರ ಸಾವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಅಸಮಧಾನ ವ್ಯಕ್ತವಾಗುತ್ತಿದೆ.

https://www.facebook.com/104768065312443/posts/pfbid02egVvH9BXt1x2hR7cr9JP7xwBqu8KvU2T3dANkRNm6QDuFiEniuyTbFbrJxPwDtSul/

ಮೆರವಣಿಗೆ ನಡೆಸಿ ಮತ್ತಷ್ಟೂ ಗಲಬೆ ಸೃಷ್ಟಿಸುವ ರಾಜಕೀಯ ತಂತ್ರವೇ?
ಹಿಂದೂ ಕಾರ್ಯಕರ್ತರ ಹತ್ಯೆಯ ನಂತರ ಬಿಜೆಪಿ ನಡೆಸುವ ಶವಯಾತ್ರೆಯಿಂದ ಬಿಜೆಪಿಯ ಪೊಲಿಟಿಕಲ್‌ ಮೈಲೇಜ್‌ ಹೆಚ್ಚುತ್ತಿದೆ. ಆದರೆ ಈ ಶವ ಯಾತ್ರೆಯಲ್ಲಿ ಕಲ್ಲು ತೂರಾಟ ನಡೆದರೆ, ಗಲಬೆಯಾಗಿ ಸಾವನ್ನಪ್ಪಿದರೆ ಬಲಿಯಾಗುವುದು ಹಿಂದುಳಿದ ಸಮುದಾಯಗಳ ಯುವಕರು.

https://www.facebook.com/104768065312443/posts/pfbid02JF2MNRB4GWq2bxJaxcbH3jfNqQA2vyyKt1ErHv115annhNrNonjjp2TJSoEewEz4l/

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತ ನವೀನ್‌ ಸೂರಿಂಜೆ ಹೀಗೆ ಬರೆದುಕೊಂಡಿದ್ದಾರೆ:

https://m.facebook.com/story.php?story_fbid=pfbid02gBDGE4Sb1AmbRSzFdHbMKmgyLHd91cb2pjW9J5RmBEzehjHuz8ubgUaUtGd3x1PMl&id=100002162800765


2006 ಡಿ.1ರಂದು ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಮೇಲೆ ಮಂಗಳೂರಿನ ಕುಳಾಯಿ ಹೊನ್ನಕಟ್ಟೆಯಲ್ಲಿರುವ ಅವರ ಮಾರ್ಬಲ್‌ ಟ್ರೇಡ್‌ ಕಂಪೆನಿ ಆವರಣದಲ್ಲಿ ಕ್ವಾಲಿಸ್‌ ವಾಹನದಲ್ಲಿ ಬಂದ ದುಷ್ಕರ್ಮಿಗಳು ಮರಣಾಂತಿಕ ದಾಳಿ ನಡೆಸಿದ್ದರು. ತೀವ್ರ ಸ್ವರೂಪದ ಗಾಯಗೊಂಡಿದ್ದ ಸುಖಾನಂದ ಶೆಟ್ಟಿ ಅವರನ್ನು ತತ್‌ಕ್ಷಣ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಅವರು ಸಾವನ್ನಪ್ಪಿ ದ್ದರು. ಆಗ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿತ್ತು. ಕರಾವಳಿಯ ಮಟ್ಟಿಗಂತೂ ಪೂರ್ಣಪ್ರಮಾಣದ ಬಿಜೆಪಿ ಸರ್ಕಾರವೇ ಇತ್ತು. ನಾಗರಾಜ ಶೆಟ್ಟಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

ಯಾವುದೇ ಕಾರಣಕ್ಕೂ ಸುಖಾನಂದ ಶೆಟ್ಟಿಯ ಶವ ಮೆರವಣಿಗೆ ಮಾಡಬಾರದು ಎಂದು ಆಗ ಮಂಗಳೂರು ಎಸ್ಪಿಯಾಗಿದ್ದ ದಯಾನಂದ ಆದೇಶ ನೀಡಿದ್ದರು. ನಾವು ಎಜೆ ಆಸ್ಪತ್ರೆಯಿಂದ ಮೂಲ್ಕಿಯವರೆಗೆ ಶವ ಮೆರವಣಿಗೆ ಮಾಡಿಯೇ ಮಾಡ್ತೀವಿ ಎಂದು ಉಸ್ತುವಾರಿ ಸಚಿವ ನಾಗರಾಜ ಶೆಟ್ಟಿ ಹಠ ಹಿಡಿದರು‌ ಸರ್ಕಾರವೇ ಮುಂದೆ ನಿಂತು ಅನಾಹುತವನ್ನು ಆಹ್ವಾನಿಸುವ ಶವ ಮೆರವಣಿಗೆ ನಡೆದಿದ್ದು ಇದೇ ಮೊದಲು.

ಸಚಿವ ನಾಗರಾಜ ಶೆಟ್ಟಿ ನೇತೃತ್ವದಲ್ಲಿ ಶವ ಮೆರವಣಿಗೆ ಶುರುವಾಯಿತು. ನಗರದ ಕುಂಟಿಕಾನದಲ್ಲಿರುವ ಎಜೆ ಆಸ್ಪತ್ರೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕವಾಗಿ ಸುಖಾನಂದ ಶೆಟ್ಟಿ ಹುಟ್ಟೂರು ಮೂಲ್ಕಿಗೆ ಶವ ಮೆರವಣಿಗೆ ನಡೆಯಿತು. ಶವ ಮೆರವಣಿಗೆ ಕೋಮುಸೂಕ್ಷ್ಮ ಪ್ರದೇಶವಾಗಿರುವ ಸುರತ್ಕಲ್ ಅನ್ನು ಹಾದು ಹೋಗಬೇಕಿತ್ತು. ಭಾರೀ ಸಂಖ್ಯೆಯ ಪೊಲೀಸರು ಜಮಾವಣೆಗೊಂಡಿದ್ದರು.

ಶವ ಮೆರವಣಿಗೆ ಸುರತ್ಕಲ್ ದಾಟುತ್ತಿದ್ದಂತೆ ಮೆರವಣಿಗೆಯಲ್ಲಿ ಭಾಗವಹಿಸುವವರ ಸಂಖ್ಯೆಯೂ ಹೆಚ್ಚಾಯ್ತು. ಮೂಲ್ಕಿ – ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲಿಯವರೆಗೂ ಬಿಜೆಪಿ ಗೆದ್ದಿರಲಿಲ್ಲ. ಸುಖಾನಂದ ಶೆಟ್ಟಿಯೇ ಮೂಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿತರಾಗಿದ್ದರಿಂದ ಹಿಂದುತ್ವ ಕಾರ್ಯಕರ್ತರ ಮಧ್ಯೆ ಪ್ರಭಾವಿಯಾಗಿದ್ದರು. ಹಾಗಾಗಿ ಹಿಂದುತ್ವ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಗೆ ಜೋಡಣೆ ಆಗುತ್ತಿದ್ದರು.

ಶವ ಮೆರವಣಿಗೆ ಮೂಲ್ಕಿ ತಲುಪುತ್ತಿದ್ದಾಗ ಕತ್ತಲಾಗುತ್ತಿತ್ತು. ಕರಾವಳಿ ಅಲೆಯ ವರದಿಗಾರನಾಗಿ ನಾನೂ ಮೆರವಣಿಗೆಯಲ್ಲಿದ್ದೆ. ಒಂದು ಕಡೆ ಮಸೀದಿಯನ್ನು ಹಾದು ಶವ ಮೆರವಣಿಗೆ ಹೋಗಬೇಕಿತ್ತು. ಎಸ್ಪಿ ದಯಾನಂದ್ ಮುನ್ನೆಚ್ಚರಿಕಾ ಕ್ರಮವಾಗಿ ಇನ್ನಷ್ಟು ಪೊಲೀಸರನ್ನು ತರಿಸಿದ್ದರು. ಶವ ಮೆರವಣಿಗೆಯಲ್ಲಿದ್ದ ಜನ ಪೂರ್ತಿ ಉದ್ವಿಗ್ನಗೊಂಡಿದ್ದರು. ದಿನೇಶ್ ಪೂಜಾರಿ ಮತ್ತು ಪ್ರೇಮ್ ಕೋಟ್ಯಾನ್ ಎಂಬ ಇಬ್ಬರು ಬಿಲ್ಲವ ಹುಡುಗರು ಪೊಲೀಸರ ಜೊತೆ ತಗಾದೆಗೆ ಇಳಿದರು. ಎಸ್ಪಿ ದಯಾನಂದ್ ಮೇಲೆ ಕೈ ಮಾಡಲು ಹೋದರು. ತಕ್ಷಣ ಎಸ್ಪಿಯ ಗನ್ ಮ್ಯಾನ್ ಅರುಣ್ ಆಳ್ವ ತನ್ನಲ್ಲಿದ್ದ ರಿವಾಲ್ವರ್ ತೆಗೆದವರೇ ದಿನೇಶ್ ಪೂಜಾರಿ ಮತ್ತು ಪ್ರೇಮ್ ಕೋಟ್ಯಾನ್ ಮೇಲೆ ಗುಂಡು ಹಾರಿಸಿದರು. ಸುಖಾನಂದ ಶೆಟ್ಟಿ ಶವದ ಮೆರವಣಿಗೆಯಲ್ಲಿ ಇನ್ನೆರಡು ಶವಗಳು ಉರುಳಿದವು.


ಶವ ಸುಖಾನಂದ ಶೆಟ್ಟಿಯದ್ದು, ಶವ ಮೆರವಣಿಗೆಗೆ ಹಠ ಹಿಡಿದಿದ್ದು ನಾಗರಾಜ ಶೆಟ್ಟಿ, ಗುಂಡು ಹಾರಿಸಿದ್ದು ಅರುಣ್ ಆಳ್ವ. ಶವ ಮೆರವಣಿಗೆಯಲ್ಲಿ ಅನ್ಯಾಯವಾಗಿ ಶವವಾಗಿದ್ದು ಬಿಲ್ಲವ ಯುವಕರಾದ ದಿನೇಶ್ ಪೂಜಾರಿ ಮತ್ತು ಪ್ರೇಮ್ ಕೋಟ್ಯಾನ್…! ಈಗಲೂ ಮಂಗಳೂರಿನ ಬಿಜೆಪಿ ಅಥವಾ ಹಿಂದುತ್ವವಾದಿಗಳ ಸಭೆಯಲ್ಲಿ ಸುಖಾನಂದ ಶೆಟ್ಟಿಯವರ ಫೋಟೊ ಇಟ್ಟು ಹೂ ಹಾಕುತ್ತಾರೆ. ಆದರೆ ಸುಖಾನಂದ ಶೆಟ್ಟಿಗಾಗಿ ಬಲಿಯಾದ ದಿನೇಶ್ ಪೂಜಾರಿ, ಪ್ರೇಮ್ ಕೋಟ್ಯಾನ್ ಎಂಬ ಬಿಲ್ಲವ ಹುಡುಗರನ್ನು ಮರೆತಿದ್ದಾರೆ. ಶವ ಮೆರವಣಿಗೆಗೂ ಮುನ್ನ ಇದನ್ನು ನೆನಪು ಮಾಡಿಕೊಳ್ಳಿ..

Related Articles

ಇತ್ತೀಚಿನ ಸುದ್ದಿಗಳು