Monday, June 17, 2024

ಸತ್ಯ | ನ್ಯಾಯ |ಧರ್ಮ

‘ಹಿಂದೂ’ ಎನ್ನೋ ಅನುಕೂಲ ಸಿಂಧು

ʼಹಿಂದೂʼ ಅನ್ನೋ ಪದ ಅದು ಧರ್ಮದ ಹೆಸರೇ? ಹಿಂದೂ ಅನ್ನೋದು ಜೀವನ ಪದ್ಧತಿಯೇ? ಯಾವುದೋ ನದಿ  ದಂಡೆಯ (ಸಿಂಧೂ) ಜನ ಸಮೂಹಕ್ಕೆ ಬಳಸಲಾದ ಪದವೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಲೇಖಕ ಸೂರ್ನಳ್ಳಿ ಶಂಕ್ರ.

ಇತ್ತೀಚೆಗೆ ಬಿಡುಗಡೆಗೊಂಡ ಹಿರಿಯ ಚಲನ ಚಿತ್ರ ನಿರ್ದೇಶಕ ಮಣಿರತ್ನಮ್ ರವರ ʼಪೊನ್ನಿಯನ್ ಸೆಲ್ವನ್ʼ ಸಿನಿಮಾ ಕುರಿತಂತೆ ಮತ್ತೊಬ್ಬ ನಿರ್ದೇಶಕ ವೆಟ್ರಿಮಾರನ್ ರವರು ದಕ್ಷಿಣದ ರಾಜರಾಜ ಚೋಳ ಹಿಂದೂ ಆಗಿರಲಿಲ್ಲ, ನಿರಂತರವಾಗಿ ನಮ್ಮ ಗುರುತುಗಳನ್ನು ಕಸಿದುಕೊಳ್ಳಲಾಗುತ್ತಿದೆ, ಹಿಂದೆ ತಿರುವಳ್ಳುವರ್ ಆಯಿತು, ಈಗ ರಾಜರಾಜ ಚೋಳನನ್ನು ಹಿಂದೂ ಎಂದು ಕರೆದು ತಮ್ಮ ಹೇರಿಕೆಯನ್ನು ಅವರು ಮುಂದುವರೆಸಿದ್ದಾರೆ ಎಂಬ ಹೇಳಿಕೆಗೆ ಪೂರಕವಾಗಿ ಖ್ಯಾತ ನಟ ಕಮಲ್ ಹಾಸನ್ ರವರು ದನಿಗೂಡಿಸಿ ಜೋಳರ ಕಾಲದಲ್ಲಿ ’ಹಿಂದೂ ಧರ್ಮ’ ಎಂಬುದೇ ಅಸ್ತಿತ್ವದಲ್ಲಿರಲಿಲ್ಲ ಇದು ತಮ್ಮ ಆಡಳಿತದ ಅನುಕೂಲಕ್ಕೋಸ್ಕರ ಬ್ರಿಟಿಷರು ಸೃಷ್ಟಿಸಿಕೊಂಡಂತದ್ದು ಎನ್ನುವ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆ ದೇಶಾದ್ಯಂತವರ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದ್ದು, ಅನೇಕ ಸಂಪ್ರದಾಯವಾದಿಗಳು ಕಮಲಹಾಸನ್ ರವರ ವಿರುದ್ಧ ಮುಗಿಬಿದ್ದಿದ್ದರು. ಕೆಲವರಂತೂ ಅತಿರೇಕಕ್ಕಿಳಿದು ಬೇಕೆಂತಲೇ ಕಮಲ್ ಹಾಸನ್ ರನ್ನು ಕಮಲ್ ’ಹಸನ್’ ಎಂದು ಲೇವಡಿಗಿಳಿದು ಟೀಕಿಸಿದ್ದರು. ಸ್ವತಃ ಸಾಂಪ್ರದಾಯಿಕ ಅಯ್ಯಂಗಾರ್ ಬ್ರಾಹ್ಮಣ ಕುಟುಂಬದವರಾದ ಕಮಲ್ ಹಾಸನ್ ರವರ ಈ ಹೇಳಿಕೆ ನಿಜಕ್ಕೂ ಧಾರ್ಮಿಕ ಸೋಗುಗಳ ಅತಿರೇಕದ ಈ ಸಂದರ್ಭದಲ್ಲಿ ಮರು ವಿಮರ್ಶೆಗೆ ಒಳಪಡಲೇ ಬೇಕಾದಂತದ್ದೇ ಆಗಿದೆ.

ಹದಿನೈದಿಪ್ಪತ್ತು ವರ್ಷಗಳ ಹಿಂದೆ ಹೊಸದಾಗಿ ಬಂದ ನನ್ನ ಸಹೋದ್ಯೋಗಿ ಕಮ್ ರೂಮ್ ಮೇಟ್ ಒಬ್ರು ಹೀಗೆ ಮಾತನಾಡುತ್ತಾ ಅಲ್ಲಾ ಇವರೇ, ಈ ಹಿಂದೂ ಅನ್ನೋ ವಿಚಾರದ ಬಗ್ಗೆ ನೀವೇನು ಹೇಳ್ತೀರಿ ಅಂತ ನನ್ನನ್ನು ಕೇಳಿದ್ದರು. ಅದಕ್ಕೆ ಉತ್ತರವಾಗಿ ನಾನು ನಿಜ ಹೇಳಬೇಕೆಂದರೆ ಈ ಹಿಂದೂ ಅನ್ನೋ ಪದ ಅದು ಧರ್ಮದ ಹೆಸರೇ ಅಲ್ಲ. ಅದೊಂದು ಪ್ರಾದೇಶಿಕ ಗುರುತಿಸುವಿಕೆ ಅಷ್ಟೆ ಅಂತ ಇನ್ನೂ ಕೆಲ ವಿಷಯಗಳನ್ನು ನನಗಿಂತಲೂ ಕಿರಿಯರಾದ ಅವರಲ್ಲಿ ಹೇಳಿದ್ದೆ. ಆದರೆ ಮರು ದಿವಸ ಊರಿನ ಪರಿಚಯ ಅಷ್ಟಾಗಿ ಇರದ ಅವರ ಜೊತೆ ಅವರು ಕರೆದ ಕಾರಣ ಕಂಪೆನಿಯಾಗಿ ಕ್ಷೌರದ ಅಂಗಡಿಗೆ ಹೋಗಿದ್ದೆ. ಅವರ ಸರದಿ ಬರುವ ತನಕ ಅಲ್ಲಿದ್ದ ಪತ್ರಿಕೆಗಳನ್ನು ಓದುತ್ತಾ ಕಾಯುತ್ತಿದ್ದ ನಮಗೆ ಅಲ್ಲಿದ್ದ ದಿನಪತ್ರಿಕೆಯಲ್ಲಿದ್ದ ವಿಚಾರವೊಂದು ಕಣ್ಣಿಗೆ ಬಿತ್ತು. ಅದನ್ನ ಜೊತೆಯಲ್ಲಿದ್ದ ಅವರಿಗೂ ತೋರಿಸಿದರೆ ಅವರು ನಕ್ಕು ನೀವು ನಿನ್ನೆ ಇದನ್ನೇ ಓದಿ ಹೇಳಿದ್ದಾ.. ಅಂತ ನನ್ನ ಕೇಳಿದರು. ಅದಕ್ಕೆ ನಾನು ಇದು ಇವತ್ತಿನ ಪೇಪರ್ ಮಾರಾಯ್ರೆ ಅಂದೆ. ಆ ಜನಪ್ರಿಯ ದಿನಪತ್ರಿಕೆಯಲ್ಲಿ ಬನ್ನಂಜೆ ಗೋವಿಂದಾಚಾರ್ಯರು ದೇವರು, ಧರ್ಮ, ಆಧ್ಯಾತ್ಮಗಳ ಕುರಿತಾಗಿ ದಿನವೂ ಸಣ್ಣದೊಂದು ವಿಚಾರ ಬರೆಯುತ್ತಿದ್ದರು. ಅದರಲ್ಲವರು ಆ ದಿನ ʼಹಿಂದೂʼ ಎನ್ನುವ ಪದದ ಬಗ್ಗೆ ಬರೆದಿದ್ದರು. ಹಿಂದಿನ ದಿವಸ ನಾವು ಚರ್ಚಿಸಿದಂತಹ ವಿಚಾರವೇ ಅದರಲ್ಲಿತ್ತು. ಹಿಂದೂ ಹೆಸರಿನ ಧರ್ಮ ಇಲ್ಲವೆಂದೇ ಅದರಲ್ಲವರು ಬರೆದಿದ್ದರು. ಸತ್ಯ ಯಾವತ್ತಿದ್ದರೂ ಸತ್ಯವೇ; ಅದು ಯಾವತ್ತೂ ಬದಲಾಗದು. ಅದು ದೊಡ್ಡ ದೊಡ್ಡ ಆಧ್ಯಾತ್ಮಿಕ ಗ್ರಂಥಗಳನ್ನು ಓದಿರುವ, ಬರೆದಿರುವ, ವಿಮರ್ಶಿಸಿರುವ ಬನ್ನಂಜೆಯವರೇ ಆಗಿರಲಿ ನನ್ನಂತಹ ಚೂರುಪಾರು ತಿಳಕೊಂಡವನೂ ಆಗಿದ್ದಿರಬಹುದು. ಇವತ್ತಾದರೂ ಆಗಬಹುದು ನೂರು ವರ್ಷ ಕಳೆದ ಬಳಿಕವಾದರೂ ಇರಬಹುದು ಸತ್ಯ ಯಾವತ್ತಿಗೂ ಸತ್ಯವೇ ಆಗುಳಿಯುವುದೇ ಅದರ ಹೆಚ್ಚುಗಾರಿಕೆ.

ಪ್ರಾಚೀನ ಭಾರತದಲ್ಲಿ ನಿರ್ದಿಷ್ಟ ಧರ್ಮಾಚರಣೆಗೆಂದು ಕಟ್ಟುನಿಟ್ಟಿನ ಸಾರ್ವಜನಿಕ ಒತ್ತಾಯ ಎಲ್ಲೂ ಕಾಣಸಿಗದು. ಅನೇಕ ಸಂಪ್ರದಾಯಗಳು ಕಟ್ಟುಪಾಡುಗಳನ್ನು ಆಚರಿಸುವಂತಹ ಅನೇಕ ಸಮುದಾಯಗಳು ಪ್ರಾಚೀನ ಭಾರತದಲ್ಲಿದ್ದವು. ಯಾವುದೇ ಮತಧರ್ಮಗಳ ಯಾವ ಹಂಗನ್ನೂ ಇಟ್ಟುಕೊಳ್ಳದೇ ಸುಖಿಯಾಗಿ ಬದುಕುವವರೂ ಇದ್ದರು. ಅದೇ ರೀತಿ ಗುರುತಿನಲ್ಲಿ ಒಂದು ಮತಕ್ಕೆ ಸೇರಿದ್ದರೂ ಕೂಡ ಸ್ಥಳೀಯವಾಗಿ ಮಾನ್ಯತೆಯುಳ್ಳ ಇನ್ನೊಂದು ಸಂಪ್ರದಾಯದ ದೇವರನ್ನೂ ಕೂಡ ಮುಕ್ತ ಮನಸ್ಸಿನಿಂದ ಆರಾಧಿಸುವವರೂ ಕೂಡ ಸಾಕಷ್ಟಿದ್ದರು. ಮುಖ್ಯವಾಗಿ ಯಾವುದೋ ರಾಜನ ಮೇಲೆ ಪ್ರಭಾವಿಸಲ್ಪಟ್ಟ ಧರ್ಮಾಚರಣೆಗಳು ಸ್ಥಳೀಯವಾಗಿ ಮಾನ್ಯತೆಯನ್ನು ಪಡೆದುಕೊಳ್ಳುತ್ತಿದ್ದವು. ಪ್ರಮುಖವಾಗಿ ಕಂಡುಬರುವ ಜೈನ ಬೌದ್ಧ ಧರ್ಮಗಳ ಪ್ರಭಾವಕ್ಕೊಳಗಾದ ರಾಜ ಮಹಾರಾಜರುಗಳು ಆ ಧರ್ಮಗಳ ಪ್ರಚಾರವನ್ನು ಮುತುವರ್ಜಿ ವಹಿಸಿ ನಡೆಸಿದಂತಹ ಉದಾಹರಣೆಗಳು ಸಾಕಷ್ಟಿವೆ. ಚಂದ್ರ ಗುಪ್ತ ಮೌರ್ಯನಂತವರು ದಕ್ಷಿಣದಲ್ಲಿ ಜೈನ ಧರ್ಮ ಪ್ರಸಾರಕ್ಕೆ ತಮ್ಮದೇ ಆದಂತಹ ಕೊಡುಗೆಯನ್ನು ನೀಡಿದರೆ ಆತನ ಮೊಮ್ಮಗ ಅಶೋಕ ಬೌದ್ಧ ಧರ್ಮದ ಪ್ರಚಾರಕ್ಕೆ ತೊಡಗಿಸಿಕೊಂಡಿದ್ದ. ಅದೇ ರೀತಿ, ಇದೇ ಅಶೋಕನ ಮೊಮ್ಮಗನಿಂದಾಗಿ ಜೈನ ಧರ್ಮ ದೇಶಾದ್ಯಂತ ಮತ್ತಷ್ಟು ಬೆಳಗಿತು. ಅನೇಕ ಬಸದಿಗಳು ಚೈತ್ಯಾಲಯಗಳು ಇವನ ಕಾಲದಲ್ಲೇ ಕಟ್ಟಲ್ಪಟ್ಟವು.

ಉತ್ತರ ಭಾರತದಲ್ಲಿ ಹುಟ್ಟಿದ್ದ ಬೌದ್ಧ ಹಾಗು ಜೈನಧರ್ಮಗಳು ಒಂದು ಕಾಲದಲ್ಲಿ ಕರ್ನಾಟಕದಲ್ಲೂ ವ್ಯಾಪಕವಾಗಿ ಹರಡಿದ್ದವು ಇದಕ್ಕೆ ಸಾಕ್ಷಿಯೆಂಬಂತೆ ಅನೇಕ ಕುರುಹುಗಳು ಇಂದಿಗೂ ಅಲ್ಲಲ್ಲಿ ದೊರೆಯುತ್ತವೆ. ಅಜಿಲ, ಬಲ್ಲಾಳ, ಬಂಗ, ಚೌಟರಂತಹ ತುಳುನಾಡಿನ ಅನೇಕ ಅರಸು ಮನೆತನಗಳು ಜೈನ ಪರಂಪರೆಯನ್ನು ಅನುಸರಿಸುತ್ತಿದ್ದರೂ ಚಾಲ್ತಿಯಲ್ಲಿರುವ ವೈದಿಕ ದೇವರ ಆರಾಧನೆಯೂ ಕೂಡ ನಡೆಯುತಿತ್ತು. ದೇಶದಲ್ಲಿ ಬೌದ್ಧ ಜೈನ ಸಂಪ್ರದಾಯಗಳಲ್ಲದೇ ನಾಥ, ಶೈವ, ಶಾಕ್ತರಂತಹ ಅನೇಕ ಪರಂಪರೆಗಳಿದ್ದರೂ ಎಲ್ಲರೂ ಒಂದಾಗಿ ಸಹಬಾಳ್ವೆಯಿಂದ ಬದುಕಿದ್ದರು.

ಇನ್ನು ’ಹಿಂದೂ’ ಎನ್ನುವ ಪದ ಎಲ್ಲರಿಗೂ ಗೊತ್ತಿರುವಂತೆ ಇದೊಂದು ಪ್ರಾದೇಶಿಕ ಗುರುತಿಸುವಿಕೆಗಾಗಿ ಸೃಷ್ಟಿಯಾದಂತಹ ಪದ. ಸಿಂಧೂ ಪ್ರಾಂತ್ಯದ ಮಂದಿಯನ್ನು ಕರೆಯಲು ಬಳಸಲ್ಪಟ್ಟಂತಹ ಈ ಪದ ಮುಂದೆ ಒಂದು ಒಟ್ಟಾರೆ ಸಮುದಾಯವನ್ನು ಗುರುತಿಸುವುದಕ್ಕೆ ಬಳಕೆಯಾದದ್ದು ಇತಿಹಾಸದ ಚಲನಶೀಲತೆಗೊಂದು ಸಣ್ಣ ಸಾಕ್ಷಿಯಷ್ಟೆ. ಇಂತಹ ಯಾವುದೋ ಹೆಸರು ಯಾವುದೋ ರೂಪದಲ್ಲಿ ಪರಿವರ್ತನೆಗೊಂಡು ಬಳಸಲ್ಪಟ್ಟಂತಹ ಲೆಕ್ಕವಿಲ್ಲದಷ್ಟು ಉದಾಹರಣೆಗಳು ಆಗಾಗ ಜರಗುತ್ತಲಿರುತ್ತವೆ. ಇದರಲ್ಲೇನೂ ವಿಶೇಷವಿಲ್ಲ. ಭಾರತಕ್ಕೆ ಹೊರಟ ಕೊಲಂಬಸ್ ದಾರಿತಪ್ಪಿ ಯಾವುದೋ ಪ್ರದೇಶ (ಈಗಿನ ಅಮೆರಿಕಾ) ವನ್ನು ತಲುಪಿ ಅಲ್ಲಿನವರನ್ನೇ ’ಇಂಡಿಯನ್’ ಎಂದು ಕರೆದು ಆ ಹೆಸರನ್ನು ಈಗಲೂ ಅಲ್ಲಿನ ಮೂಲನಿವಾಸಿಗಳಿಗೆ ಶಾಶ್ವತವಾಗಿ ತಗುಲಿಸಿರುವಂತೆ, ಯಾವುದೋ ನದಿದಂಡೆಯ (ಸಿಂಧೂ) ಜನಸಮೂಹಕ್ಕೆ ಬಳಸಲಾದ ಪದವೊಂದು ಆ ನದಿಪಾತ್ರವನ್ನು ದಾಟಿ ಇಡೀ ದೊಡ್ಡದೊಂದು ಭೂಭಾಗವನ್ನು ಪಸರಿಸಿ ಬೆಳೆದದ್ದಕ್ಕೆ ಅದರದ್ದೇ ಆದಂತಹ ಇತಿಹಾಸವಿದೆ.

ಕಮಲ್ ಹಾಸನ್ ರವರು ಉಲ್ಲೇಖಿಸಿರುವಂತೆ ಹಿಂದೂ ಹೆಸರಲ್ಲಿ ಮುಸ್ಲಿಮ್ ಕ್ರಿಶ್ಚಿಯನೇತರ ಸಮುದಾಯಗಳನ್ನು ಒಗ್ಗೂಡಿಸಿದ್ದು ಬ್ರಿಟಿಷರಾದರೂ ಈ ಹೆಸರು ಅವರ ಸೃಷ್ಟಿಯೇನಲ್ಲ. ಅಸಲಿಗೆ ಈ ರಾಷ್ಟ್ರವನ್ನು ’ಹಿಂದೂಸ್ಥಾ’ನ’ವೆಂದು ಕರೆದವರೇ ದೆಹಲಿಯನ್ನಾಳಿದ ಮುಸ್ಲಿಮ್ ದೊರೆಗಳು. ಆಡಳಿತದ ಅನುಕೂಲಕ್ಕಾಗಿ ಸಾಮಾಜಿಕ ದಾಖಲೀಕರಣದ ಹೆಸರಲ್ಲಿ ಮುಸ್ಲಿಮ್ ಮತ್ತು  ಕ್ರಿಶ್ಚಿಯಾನಿಟಿಗೆ ಸೇರದೇ ಇಲ್ಲದವರನ್ನು ಸಾರಾಸಗಟಾಗಿ ಅಲ್ಲದಿದ್ದರೂ (ಸಿಖ್ಖರು, ಜೈನರು, ಬೌದ್ಧರೇ ಮೊದಲಾದವರನ್ನು ಹೊರತುಪಡಿಸಿ) ಒಟ್ಟಾರೆಯಾಗಿ ಕೆಲ ಜನಸಮುದಾಯಗಳನ್ನು ಹಿಂದೂ ಎಂದು ಅಧಿಕೃತವಾಗಿ ದಾಖಲಿಸಲ್ಪಟ್ಟಿದ್ದು ಅದು ಬ್ರಿಟಿಷರ ಆಡಳಿತಾವಧಿಯಲ್ಲೇ.

ಬ್ರಿಟಿಷರು ಒತ್ತಟ್ಟಿಗೆ ತಂದಂತಹ ಈ ಹೊಸ ಸಮುದಾಯದಲ್ಲಿ ಮುಖ್ಯವಾಗಿ ವೈದಿಕ ಮತ್ತು ಅವೈದಿಕ ಸಂಪ್ರದಾಯಗಳನ್ನು ಅನುಸರಿಸುವಂತಹ ಅನೇಕ ಜನ ಸಮುದಾಯಗಳಿವೆ. ಮೂಲತ: ಇದೀಗ ಕರೆಯಲ್ಪಡುವಂತಹ ಹಿಂದೂ ಸಮುದಾಯ ವೈದಿಕ ಸಂಪ್ರದಾಯದ ಆಧಾರದಲ್ಲಿ ಗುರುತಿಸಲ್ಪಡುತ್ತಿದ್ದರೂ ಒಟ್ಟಾರೆಯಾಗಿ ಈ ಹಿಂದೂ ಸಮುದಾಯದಲ್ಲಿನ ವೈದಿಕ ಪರಂಪರೆಯನ್ನು ಅನುಸರಿಸುವ ಮೇಲ್ವರ್ಗದವರ ಸಂಖ್ಯೆ ತೀರಾ ಕಡಿಮೆ. ಹೀಗಿದ್ದೂ ಕೂಡ ಸಾಮಾಜಿಕವಾಗಿ ಆ ಸಮುದಾಯ ಪ್ರಭಾವವನ್ನು ಹೊಂದಿರುವ ಕಾರಣ ಎಲ್ಲಾ ವಿಚಾರದಲ್ಲೂ ನಿರ್ಣಾಯಕ ಪಾತ್ರವನ್ನು ಈ ಸಣ್ಣ ಸಮುದಾಯವೇ ಹೊಂದಿರುವುದು ಕೂಡಾ ಹೌದು. ದೇಶವನ್ನು ರಾಜ ಪರಂಪರೆ ಆಳುವ ಸಮಯದಿಂದಲೂ ರಾಜಕೀಯವಾಗಿ ಪ್ರಭಾವವನ್ನಿಟ್ಟುಕೊಂಡಿರುವ ವೈದಿಕ ಸಮುದಾಯಕ್ಕೆ ತನ್ನೀ ಸಣ್ಣ ಸಂಖ್ಯೆ ತನ್ನ ಬೆಳವಣಿಗೆಗೆ ಯಾವತ್ತಿಗೂ ಅಡ್ಡಿಯೆನಿಸಲೇ ಇಲ್ಲ (ಅದು ಮೊಗಲರಿರಲಿ ಅಥವಾ ಬ್ರಿಟಿಷರೇ ಆಡಳಿತದಲ್ಲಿರಲಿ).

ಪ್ರಾದೇಶಿಕವಾಗಿ, ಸಾಂಪ್ರದಾಯಿಕವಾಗಿ ಅಥವಾ ಕೊನೆಗೆ ಭಾಷೆಯ ವಿಚಾರದಲ್ಲೂ ತೀರಾ ಭಿನ್ನ ಸಂಸ್ಕೃತಿಯುಳ್ಳ ದ್ರಾವಿಡ ದೇಶಗಳಾದ ಈಗಿನ ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡುಗಳಲ್ಲೂ ವೈದಿಕ ಸಂಸ್ಕೃತಿ ತನ್ನದೇ ಆದ ಪ್ರಭಾವವನ್ನು ಪ್ರಭುತ್ವವನ್ನು ಬಳಸಿಕೊಂಡು ಬೀರಿತು. ಹಾಗೆ ನೋಡಿದರೆ, ಈ ಉತ್ತರದವರಿಗೆ ಈ ದಕ್ಷಿಣ ಭಾರತೀಯರಿಗಿಂತಲೂ ಹಿಂದೂ ಪದಕ್ಕೆ ಮೂಲವಾದ ಸಿಂಧೂ ನದಿಯ ಪರಿಸರದಲ್ಲಿ ಬರುವ ಈಗಿನ ಪಾಕಿಸ್ತಾನ, ಅಫ್ಘನ್‌, ಪರ್ಶಿಯಾ ಮೊದಲಾದ ಭಾಗಗಳ ಜನರ ಮುಖಚರ್ಯೆ, ಬಣ್ಣ, ಸಂಪ್ರದಾಯ, ಭಾಷೆಗಳ ವಿಷಯದಲ್ಲಿ ಹೆಚ್ಚು ಹಿಂದೂ/ಸಿಂಧೂತನಕ್ಕೆ ಹೋಲುತ್ತಾರೆ. ಐತಿಹಾಸಿಕವಾಗಿ ಅಲ್ಲಗಳೆಯಲಾಗದ ಹಿಂದೂ ಪದದ ಮೂಲ ಕೆದಕಲ್ಪಟ್ಟರೆ ಹಿಂದೂ ಅನ್ನೋದು ಜೀವನ ಪದ್ಧತಿ ಎಂಬ ಮೂಗಿನ ನೇರದ ವಾದವನ್ನು ಮುನ್ನೆಲೆಗೆ ತರುತ್ತಾರೆ. ಅದೇ ರಾಜಕೀಯ, ಇಲ್ಲೇ ನೆಲೆ ನಿಂತ ಅನ್ಯದೇಶೀಯ ನಾಯಕರ ವಿಚಾರ, ದೇಗುಲ ಪ್ರವೇಶ, ಸಂಪ್ರದಾಯಗಳಂತವು ಎದುರಾದಾಗ ಈ ಸರಳೀಕರಿಸಿದ ’ಜೀವನ ಪದ್ಧತಿ’ ಸಿದ್ಧಾಂತ ಲಾಗೂ ಆಗುವುದಿಲ್ಲವಂತೆ!

ಅದಕ್ಕೇ ಹೇಳೋದು ಹಿಂದೂ ಧರ್ಮ ಸುಂದರ. ಆದರೆ ಅದು ಯಾರು ಪ್ರತಿಪಾದಿಸಿದ್ದೆನ್ನುವುದರ ಮೇಲೆ ಇದು ನಿರ್ಧಾರವಾಗುತ್ತದೆ. ವಿವೇಕಾನಂದರು ಪ್ರತಿಪಾದಿಸಿದ್ದೋ.. ಇಲ್ಲಾ.. ಮೌಢ್ಯವಾದಿಗಳದ್ದೋ..

ಸೂರ್ನಳ್ಳಿ ಶಂಕ್ರ
ಲೇಖಕರು

Related Articles

ಇತ್ತೀಚಿನ ಸುದ್ದಿಗಳು