Saturday, November 8, 2025

ಸತ್ಯ | ನ್ಯಾಯ |ಧರ್ಮ

​ಬೊಗಸೆಗೆ ದಕ್ಕಿದ್ದು-58 : “ಹಿಂದೂ” ಶಿವಾಜಿಯ ಮುಸ್ಲಿಂ ಬಂಧುಗಳು!

“..ಶಿವಾಜಿಯು ಕುರಾನ್‌ಗೆ ಕೊಡುತ್ತಿದ್ದ ಗೌರವದ ಕುರಿತ ಪುರಾವೆಯು ಸಾಮಾನ್ಯವಾಗಿ ಶಿವಾಜಿಯ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಮತ್ತು ಆತನನ್ನು “ನರಕದ ನಾಯಿ” ಎಂದು ಕರೆಯುತ್ತಿದ್ದ ಮೊಘಲ್ ಆಸ್ಥಾನದ ಇತಿಹಾಸಕಾರ ಖಾಫಿ ಖಾನನೇ ಒದಗಿಸಿದ್ದಾನೆ!” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಐದು ದಶಕಗಳ ಹಿಂದೆ ನಾನು ಶಾಲೆಗೆ ಹೋಗುತ್ತಿದ್ದಾಗ, ಶಿವಾಜಿಯು ನಮ್ಮ ದೇಶವನ್ನು ಆಳಿದ ಉತ್ತಮ ರಾಜರ ಪಟ್ಟಿಯಲ್ಲಿ ಒಬ್ಬ ರಾಜ ಮಾತ್ರವೇ ಆಗಿದ್ದ. ಶಿವಾಜಿ, ಅವನ ತಂದೆ ಶಹಾಜಿ, ತಾಯಿ ಜೀಜಾಬಾಯಿ, ಆತ ವ್ಯಾಘ್ರನಖದಿಂದ ಅಫ್ಜಲ್ ಖಾನ್ ಎಂಬವನನ್ನು ಕೊಂದದ್ದು, ಔರಂಗಜೇಬನ ಸೆರೆಯಿಂದ ಮಿಠಾಯಿ ಬುಟ್ಟಿಯಲ್ಲಿ  ಕುಳಿತು ತಪ್ಪಿಸಿಕೊಂಡಿದ್ದು ಇತ್ಯಾದಿ ಕಥಾನಕಗಳು ಚುಟುಕಾಗಿ ಇದ್ದವು. ಆರೆಸ್ಸೆಸ್ಸಿನ ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ “ಭಾರತ-ಭಾರತಿ ಪುಸ್ತಕ ಸಂಪದ” ಎಂಬ ಹೆಸರಿನಲ್ಲಿ ಚಿಕ್ಕ ಚಿಕ್ಕ ಪುಸ್ತಕಗಳ ಮೂಲಕ ದೇಶದ ಮಕ್ಕಳ ತಲೆಗೂ ಇಂತಾ ಕತೆಗಳನ್ನು ತುಂಬಿಸಲಾಗುತ್ತಿತ್ತು. ಆಗ ಮಕ್ಕಳಿಗೆ ಓದಲು ಏನಾದರೂ ಸಿಗುವುದೇ ಅಪರೂಪವಾಗಿತ್ತಾದುದರಿಂದ ಒಂದು ತಲೆಮಾರು ಇದರಿಂದಲೇ ಪ್ರಭಾವಿತವಾಗಿತ್ತು. ಆದರೆ, ನಾಲ್ಕನೇ ತರಗತಿಯಲ್ಲಿ ಇದ್ದಾಗ ಮುಂಬಯಿಯ ಹೊರವಲಯದ ಬದ್ಲಾಪುರ್ ಎಂಬ ಕೈಗಾರಿಕಾ ಹಳ್ಳಿಯಲ್ಲಿ ಕರ್ನಾಟಕ- ಮಹಾರಾಷ್ಟ್ರ ಗಡಿಗಲಾಟೆ ತಾರಕಕ್ಕೇರಿದ ಕಾರಣ ವಾಹನ ಸಂಪರ್ಕವೇ ಇಲ್ಲವಾಗಿ, ಎರಡು ತಿಂಗಳು ಉಳಿಯಬೇಕಾಯಿತು. ಈ ಗಲಾಟೆಯ ಹಿಂದೆ ಇದ್ದುದು ಶಿವಾಜಿಯ ಹೆಸರಲ್ಲೇ ಹುಟ್ಟಿದ ಹಿಂದೂ ಕೋಮುವಾದಿ, ಮರಾಠ ತೀವ್ರವಾದಿ ಶಿವಸೇನೆ.

ಅದಕ್ಕಾಗಿ ಅವರು ಬಳಸಿಕೊಂಡದ್ದು ಶಿವಾಜಿಯ ಹೆಸರನ್ನು. ಶಿವಾಜಿಯನ್ನು “ಮುಸ್ಲಿಂ” ದೊರೆ ಔರಂಗಜೇಬನ ವಿರುದ್ಧ ಹೋರಾಡಿದ “ಮರಾಠ” ರಾಜ ಎಂದು ಬಿಂಬಿಸುವ ಕಥಾನಕ ಬಹುಶಃ ಆರಂಭಿಸಿದ್ದು ಅವರೇ. ವಾಸ್ತವದಲ್ಲಿ ದಿಲ್ಲಿಯಲ್ಲಿ ಹಿಂದೂ ರಾಜ ಇದ್ದಿದ್ದರೂ ಶಿವಾಜಿ ಮತ್ತು ರಾಜರ ನಡುವಿನ ತಿಕ್ಕಾಟಗಳು ನಡೆಯುತ್ತಿದ್ದವು. ಹಿಂದೆ ಇಂತಾ ಸಾವಿರಾರು ಯುದ್ಧಗಳು ನಡೆದಿವೆ. ಶಿವಾಜಿಯು ಶೂದ್ರರಾದ “ಮರಾಠ” ಸಮುದಾಯದ ಆತ್ಮಗೌರವವನ್ನು ಎತ್ತಿಹಿಡಿದವನೆಂದು ಆಗಲೇ ಮಹಾರಾಷ್ಟ್ರದಲ್ಲಿ ಅವನನ್ನು ಆರಾಧಿಸಲಾಗುತ್ತಿತ್ತು. (ಮರಾಠ ಮತ್ತು ಮರಾಠಿ ನಡುವಿನ ವ್ಯತ್ಯಾಸ ಮರೆಯದಿರಿ). ಆ ಹೊತ್ತಿಗೆ ಹೋದಲ್ಲೆಲ್ಲಾ ಅಂಗಡಿ, ಕಾಂಪೌಂಡ್ ಗೋಡೆಗಳಲ್ಲಿ ಮರಾಠಿಯಲ್ಲಿ ಶಿವಸೇನಾ ಎಂಬ ಹೆಸರೂ, ಶಾಖೆಯ ಹೆಸರೂ, ಒಂದು ಕೇಸರಿ ಬಾವುಟ ಮತ್ತು ಶಿವಾಜಿಯ ಸುಂದರ ಬಣ್ಣದ ರೇಖಾ ಚಿತ್ರಗಳು ಹಾದಿ ಬೀದಿಗಳಲ್ಲಿ ಹೆಜ್ಜೆಗೊಂದರಂತೆ ಕಂಡುಬರುತ್ತಿದ್ದವು. ಇದನ್ನು ಸುಂದರವಾಗಿ ವಿನ್ಯಾಸಗೊಳಿಸಿದ್ದು, ಸ್ವತಃ ಉತ್ತಮ ವ್ಯಂಗ್ಯಚಿತ್ರಕಾರನಾಗಿದ್ದ, ಶಿವಸೇನಾ ಸ್ಥಾಪಕ ಬಾಳ ಠಾಕ್ರೆ.

ಈ ಚಿತ್ರಗಳನ್ನು ಬಾಲಕನಾದ ನಾನು ಬೆರಗಿನಂದ ನೋಡಿದ್ದೆ. ಶಿವಾಜಿಯನ್ನು ಬಳಸಿಕೊಳ್ಳಲಾಗಿತ್ತು. ಆರಂಭದಲ್ಲಿ ಶಿವಸೇನೆಯ ಅಜೆಂಡಾ “ಮರಾಠ” ಮತ್ತು “ಮರಾಠಿ” ಆಗಿತ್ತು. ಹೊರಗಿನವರನ್ನು ಕಂಡರೆ ದ್ವೇಷ ಕಾರುತ್ತಿದ್ದ ಇವರು,  ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತೀಯರೂ ಹಿಂದೂಗಳೆಂಬುದನ್ನು ಮರೆತು “ಮದ್ರಾಸಿಗಳು” ಎಂದು ಸಂಘಟಿತ ದಾಳಿ ನಡೆಸಿದ್ದರು. ಶಿವಸೇನೆಯು ಹಿಂದೂ ಅಜೆಂಡಾಕ್ಕೆ ತನ್ನ ಬಣ್ಣಬದಲಾಯಿಸಿದಾಗ ಶಿವಾಜಿಯು “ಮರಾಠ” ಎಂಬುಕ್ಕಿಂತ ಹೆಚ್ಚಾಗಿ “ಹಿಂದೂ” ಎಂದು ಬಿಂಬಿಸುವ ಪರಿಪಾಠ ಆರಂಭವಾಗಿ, ಈಗ ಬಿಜೆಪಿಯ ಕಾಲದಲ್ಲಿ ಅತಿರೇಕಕ್ಕೆ ಹೋಗಿ, ಶಿವಾಜಿಯ ಬಗ್ಗೆ ತಲೆಬುಡವಿಲ್ಲದ ಕಾಗೆಗೂಬೆ ಕತೆಗಳನ್ನು ಬಿಜೆಪಿ ಮತ್ತು ಸಂಘಪರಿವಾರ ವಾಟ್ಸಪ್ ಮತ್ತಿತರ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಡು ಅವುಗಳನ್ನೇ ನಿಜವೆಂದು ನಂಬಿಸುತ್ತಿವೆ.

ಇದೀಗ ಇವು ಎಂತಾ ಹಸಿಹಸಿ ಸುಳ್ಳುಗಳನ್ನು ಬಿತ್ತುತ್ತಿವೆ ಎಂದರೆ, ಶಿವಾಜಿಯನ್ನು “ಹಿಂದೂ ಹೃದಯ ಸಾಮ್ರಾಟ” ಎಂದು ಬಿಂಬಿಸಲಾಗಿದೆ. ಆತ ಮೊಘಲ್ ದೊರೆ ಔರಂಗಜೇಬನ ಎದುರು ಹೋರಾಡಿದನೆಂಬ ಕಾರಣಕ್ಕೆ, ಆತ ಈಗಿನ ಮತಿಹೀನ ಹಿಂದೂತ್ವವಾದಿ ದ್ವೇಷಪ್ರೇಮಿಗಳಂತೆ ಮುಸ್ಲಿಮರನ್ನು ಅಡಿಯಿಂದ ಮುಡಿಯ ವರೆಗೆ ದ್ವೇಷಿಸುತ್ತಿದ್ದ ಎಂದು ನಂಬಿಸಲಾಗಿದೆ. ಶಿವಾಜಿಯು ಈಗಿನ ಕರ್ನಾಟಕದ ನೆಲದ ಮೇಲೂ ದಾಳಿ ಮಾಡಿದ್ದನ್ನೂ ಮರೆತು, ಆತನನ್ನು ಆರಾಧಿಸುವ ಬಿಜೆಪಿಗಳು ಊರುಗಳಿಗೆ, ರಸ್ತೆಗಳಿಗೆ ಅನಧಿಕೃತವಾಗಿ ಆತನ ಹೆಸರಿಡುವ ಮೂಲಕ, ಕನ್ನಡ ನೆಲ ಮತ್ತು ಭಾಷೆಯ ಸ್ವಾಭಿಮಾನವನ್ನೂ ಮರೆತು ಹಿಂದೂತ್ವದ ಹೆಸರಿನಲ್ಲಿ ಮರಾಠಾ ಮತ್ತು ಪೇಶ್ವೆ ಸಂತಾನಗಳ ಗುಲಾಮಗಿರಿ ನಡೆಸುತ್ತಿದ್ದಾರೆ.

ರಾಜರೂ ಸೇರಿದಂತೆ ಯಾವುದೇ ಐತಿಹಾಸಿಕ ವ್ಯಕ್ತಿಗಳನ್ನು ಅವರ ಕಾಲದಿಂದ ಹೊರತೆಗೆದು ಆಧುನಿಕ ಮಾನದಂಡದಿಂದ ಅಳೆಯುವುದು ಮತ್ತು ಅವರನ್ನು ಈಗಿನ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳಿಂದ ವಿಮರ್ಶಿಸುವುದು ಸರಿಯಲ್ಲ. ಆದುದರಿಂದ, ಸಮಚಿತ್ತದಿಂದ ನೋಡಿದರೆ, ಶಿವಾಜಿಯು ದಕ್ಷ ಆಡಳಿತಗಾರನೂ, ಅತ್ಯುತ್ತಮ ಸೇನಾನಿಯೂ, ಆಗಿನ ಕಾಲದ ನ್ಯಾಯಾನ್ಯಾಯ ಪ್ರಜ್ಞೆಯಿಂದ ನೋಡಿದರೆ ನ್ಯಾಯನಿಷ್ಟನೂ ಆಗಿದ್ದು, ಅಕ್ಬರನಂತೆ, ಕೃಷ್ಣದೇವರಾಯನಂತೆ, ಟಿಪ್ಪು ಸುಲ್ತಾನನಂತೆ ಭಾರತದ ಉತ್ತಮ ಅರಸರ ಸಾಲಿನಲ್ಲಿ ನಿಲ್ಲುತ್ತಾನೆ. ವಾಸ್ತವದಲ್ಲಿ ಆತನ ಕುರಿತು ಕಪಟ ಹಿಂದೂತ್ವದವರು ಹರಡಿರುವ ಹಸಿಹಸಿ ಸುಳ್ಳುಗಳಿಂದ ಹಾನಿಯಾಗಿರುವುದು ಸ್ವತಃ ಶಿವಾಜಿಗೇ! ಯಾಕೆಂದರೆ, ಅವರ ಮೇಲಿನ ಕೋಪದಿಂದ ಮುಸ್ಲಿಮರು ಮಾತ್ರವಲ್ಲ; ಕಪಟ ಹಿಂದೂತ್ವವಾದಿಗಳಲ್ಲದ ಹಿಂದೂಗಳೂ ಶಿವಾಜಿಯನ್ನು ಎಲ್ಲೆ ಮೀರಿ ದ್ವೇಷಿಸಲಾರಂಭಿಸಿದ್ದಾರೆ! ನನ್ನ ಮಟ್ಟಿಗೆ ಯಾವುದೇ ರಾಜರಿಗೆ ಇತಿಹಾಸದಲ್ಲಿ ಅವರು ವಹಿಸಿದ ಪಾತ್ರಕ್ಕಿಂತ ಹೆಚ್ಚಿನ ಮಹತ್ವವು- ಅವರು ಎಷ್ಟೇ ಒಳ್ಳೆಯವರೆಂದು ಹೇಳಲಾದರೂ ಕೂಡ- ಈಗಿನ ಪ್ರಜಾಪ್ರಭುತ್ವದಲ್ಲಿ ಇಲ್ಲ. ರಾಜಪ್ರಭುತ್ವವು ಇತಿಹಾಸದ ಒಂದು ಅನಿವಾರ್ಯತೆ ಆಗಿತ್ತು. ಎಷ್ಟೆಂದರೂ ಆದು ವ್ಯಕ್ತಿ ನಿಷ್ಟೆಯ, ಪಾಳೆಯಗಾರಿಯ, ಜಾತಿ ತಾರತಮ್ಯದ ಗುಲಾಮಗಿರಿಯೇ ಆಗಿದೆ. ಈಗಿನ ಬ್ರಾಹ್ಮಣ್ಯದ ನಾಯಕತ್ವದ ಹಿಂದೂತ್ವವಾದಿಗಳೂ ಉಳಿಸಬಯಸುವುದು ಮತ್ತು ಹಿಂತಿರುಗಿ ಹೋಗಲು ಬಯಸುವುದು ಇಂತಾ ಗುಲಾಮಿ ವ್ಯವಸ್ಥೆಗೇ!

ನಿನ್ನೆ ಮೊನ್ನೆ ಫೇಸ್‌ಬುಕ್‌ನಲ್ಲಿ ಒಂದು ಹಾಸ್ಯಾಸ್ಪದ ಸುಳ್ಳನ್ನು ಶಿವಾಜಿಯ ಕುರಿತು ನೋಡಿದೆ. ಕೊನೆಯ ಬ್ರಿಟಿಷ್ ವೈಸರಾಯ್ ಮೌಂಟ್‌ಬ್ಯಾಟನ್ ಅವರು, “ಶಿವಾಜಿಯು ಇಂಗ್ಲೆಂಡಿನಲ್ಲಿ ಹುಟ್ಟಿದ್ದರೆ, ನಾವು ಜಗತ್ತನ್ನೇ ಅಲ್ಲ; ವಿಶ್ವವನ್ನೇ ಆಳುತ್ತಿದ್ದವು” ಎಂದು ಹೇಳಿದ್ದರಂತೆ. ಇಲ್ಲಿ ಜಗತ್ತು ಯಾವುದು, ವಿಶ್ವ ಯಾವುದು ಎಂದು ನನಗೆ ಅರ್ಥವಾಗಲಿಲ್ಲ! ಜೊತೆಗೆ ಯುರೋಪ್, ದಕ್ಷಿಣ ಅಮೇರಿಕಾ, ಚೀನಾ, ರಷ್ಯಾ, ಆಫ್ರಿಕಾದ ಬಹುದೊಡ್ಡ ಭೂಭಾಗಗಳು ಬ್ರಿಟಿಷರ ಅಡಿಯಲ್ಲಿ ಎಂದೂ ಇಲ್ಲದೇ ಸ್ಪಾನಿಷ್, ಡಚ್, ಪೋರ್ಚುಗೀಸ್, ಜರ್ಮನ್, ಬೆಲ್ಜಿಯನ್, ಜರ್ಮನ್, ಪ್ರೆಂಚ್ ಬಂಡವಾಳಶಾಹಿಗಳ ಅಧೀನದಲ್ಲಿ ಇದ್ದವು. ಅವರು ಇಡೀ ಜಗತ್ತನ್ನು ಯಾವಾಗ ಆಳಿದರು ಅವರಿಗೇ ಗೊತ್ತು. ಮೌಂಟ್‌ಬ್ಯಾಟನ್ ಅವರಿಗೂ ಗೊತ್ತಿರಲಾರದು. ಯಾಕೆಂದರೆ, ಅವರು ಹೀಗೆ ಹೇಳುವಷ್ಟು ಮೂರ್ಖರಾಗಿರಲಿಲ್ಲ. ಜೊತೆಗೆ ಶಿವಾಜಿಯಂತಾ ಸಾವಿರಾರು ರಾಜರು, ಯುದ್ಧವೀರರು ಇಂಗ್ಲೆಂಡ್ ಸೇರಿದಂತೆ ವಿಶಾಲ ವಿಶ್ವದಾದ್ಯಂತ, ಬೇರೆಬೇರೆ ಕಾಲಘಟ್ಟಗಳಲ್ಲಿ ಆಗಿಹೋಗಿದ್ದಾರೆ. ಎಷ್ಟೇ ದೊಡ್ಡವನಾದರೂ ಶಿವಾಜಿಯು ವಿಶಾಲ ವಿಶ್ವದ ಮಟ್ಟಕ್ಕೇರಿಸಬಹುದಾದ ರಾಜನೇನೂ ಅಲ್ಲ! ಹೋಲಿಕೆಯಲ್ಲಿ ಚಿಕ್ಕ ಪ್ರದೇಶದ ರಾಜ.

ಇದನ್ನು ಓದಿ, “ಶಿವಾಜಿಯು ಇಂಗ್ಲೆಂಡಿನಲ್ಲಿ ಹುಟ್ಟುತ್ತಿದ್ದರೆ, ಕ್ರಿಶ್ಚಿಯನ್ ಆಗಿರುತ್ತಿದ್ದ! ಈ ಹಿಂದೂತ್ವವಾದಿಗಳಿಗೆ ಗತಿ ಇರುತ್ತಿರಲಿಲ್ಲ!” ಎಂಬ ವಿಚಾರಕ್ಕೆ ನಕ್ಕೆ. ಜೊತೆಗೆ ಶಿವಾಜಿಯ ದಾಖಲಾದ ಇತಿಹಾಸದ ಬಗ್ಗೆ  ಸ್ವಲ್ಪ ಬರೆಯೋಣ ಎನಿಸಿತು. ನಾನು ಇತಿಹಾಸದ ಕುತೂಹಲಿಯಾಗಿ, ಇತಿಹಾಸಕ್ಕೆ ಆಧಾರ ಮತ್ತು ಉಲ್ಲೇಖಗಳು ಅಗತ್ಯ ಎಂಬುದನ್ನು ತಿಳಿದಿದ್ದೇನೆ. ಹಾಗಾಗಿ, ಶಿವಾಜಿಯ ಬಗ್ಗೆ ಆಧಾರ ಸಹಿತವಾಗಿ ಇತಿಹಾಸಕಾರರು ನೀಡಿರುವ  ಕೆಲವೊಂದು ಐತಿಹಾಸಿಕ ವಾಸ್ತವಾಂಶಗಳನ್ನು ಇಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.

“ಹಿಂದೂ ಹೃದಯ ಸಾಮ್ರಾಟ” ಶಿವಾಜಿಯ ಮನೆಯ ಅಡಿಪಾಯ ನಿಂತಿರುವುದೇ ಆತ ರಾಜಕೀಯವಾಗಿ ಸವಾಲು ಹಾಕಿದ ಮುಸ್ಲಿಂ ಶಕ್ತಿಗಳಾದ ದಖ್ಖಣದ ಸುಲ್ತಾನರೊಂದಿಗೆ ಆಳವಾಗಿ ಹೆಣೆದುಕೊಂಡಿದೆ. ಶಿವಾಜಿಯ ತಂದೆ, ಸಾಕಷ್ಟು ಹೆಸರು ಮಾಡಿದ್ದ ಸೇನಾ ಸರದಾರನಾಗಿದ್ದ ಶಹಾಜಿ ಭೋಂಸ್ಲೆ, ತನ್ನ ಇಡೀ ವೃತ್ತಿಜೀವನವನ್ನು  ಕಳೆದದ್ದು ಅಹ್ಮದ್‌ನಗರ ಸುಲ್ತಾನರ (ನಿಜಾಂಶಾಹಿ) ಮತ್ತು ನಂತರ ಬಿಜಾಪುರ ಸುಲ್ತಾನರ (ಆದಿಲ್‌ಶಾಹಿ) ಸೇವೆಯಲ್ಲಿ. ಐತಿಹಾಸಿಕ ದಾಖಲೆಗಳು ದೃಢಪಡಿಸುವಂತೆ, ಶಹಾಜಿ ಒಬ್ಬ ಪ್ರಭಾವಿ ವ್ಯಕ್ತಿಯಾಗಿದ್ದು, ಅತನ ಸೇವಾ ನಿಷ್ಟೆಯು ಈ ಎರಡು ಮುಸ್ಲಿಂ ಆಳ್ವಿಕೆಯ ರಾಜ್ಯಗಳ ನಡುವೆ ಹೆಚ್ಚಾಗಿ ಆಚೆ ಈಚೆ ಬದಲಾಗುತ್ತಿತ್ತು. ಇದರಲ್ಲಿ ಯಾವುದೇ ಧಾರ್ಮಿಕ ಕಾರಣಗಳ ಬದಲು ಆ ಕಾಲದ ವೃತ್ತಿಪರತೆ ಮಾತ್ರವೇ ಇತ್ತು. (ಆಧಾರ: ಶಹಾಜಿಯ ಆಸ್ಥಾನ ದಾಖಲೆಗಳು ಮತ್ತು ಪತ್ರಗಳು, ಜಾದುನಾಥ್ ಸರ್ಕಾರ್‌ ಮತ್ತಿತರ ಇತಿಹಾಸಕಾರರು ದಾಖಲಿಸಿದಂತೆ).

​ಈ ಅಂತರ್ಗತ ಸಂಪ್ರದಾಯವು ಶಿವಾಜಿಯ ವೈಯಕ್ತಿಕ ಜೀವನದಲ್ಲಿಯೂ ಮುಂದುವರಿಯಿತು. 1666ರಲ್ಲಿ ಆಗ್ರಾದಲ್ಲಿ ಔರಂಗಜೇಬನ ಸೆರೆಯಿಂದ ಬಹಳ ಬಣ್ಣಿಸಲಾಗುತ್ತಿರುವ “ಹಣ್ಣಿನ ಬುಟ್ಟಿ” ಘಟನೆಯಲ್ಲಿ ತಪ್ಪಿಸಿಕೊಳ್ಳಲು ಆತನಿಗೆ ನೆರವಾದದ್ದು ಶಿವಾಜಿಯ ಮದಾರಿ ಮೆಹ್ತಾರ್ ಎಂಬ ನಂಬಿಕಸ್ಥ ಮುಸ್ಲಿಂ ಸೇವಕ. (ಆಧಾರ: ಮರಾಠಿ ಬಖರ್‌ಗಳು ಅಂದರೆ, ನಾಮಾ ರೀತಿಯ ಜೀವನಚರಿತ್ರೆಗಳು ಮತ್ತು ಐತಿಹಾಸಿಕ ವೃತ್ತಾಂತಗಳು).

ಪರಧರ್ಮ ಸಹಿಷ್ಣುತೆ
​ವಾಸ್ತವಿಕತೆ ಮತ್ತು ಬಹುತ್ವದ ಅನುಸರಣೆ ಮಾಡುತ್ತಿದ ರಾಜನಾಗಿದ್ದ ಶಿವಾಜಿ, ಆ ಕಾಲದ ಹಿಂದೂ ಧರ್ಮ, ಸಂಪ್ರದಾಯಗಳಿಗೆ ನಿಷ್ಟನಾಗಿದ್ದರೂ, ಆತನ ಪರಧರ್ಮ ಸಹಿಷ್ಣುತೆಯ ರುಜುವಾತುಗಳು- ಮುಸ್ಲಿಂ ರಾಜರು ಮತ್ತು ನವಾಬರ ಜೊತೆಗೆ ಸಂಘರ್ಷದ ಹೊರತಾಗಿಯೂ- ಬಹಳಷ್ಟು ಸಿಗುತ್ತವೆ.

​ಶಿವಾಜಿಯು ಕುರಾನ್‌ಗೆ ಕೊಡುತ್ತಿದ್ದ ಗೌರವದ ಕುರಿತ ಪುರಾವೆಯು ಸಾಮಾನ್ಯವಾಗಿ ಶಿವಾಜಿಯ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಮತ್ತು ಆತನನ್ನು “ನರಕದ ನಾಯಿ” ಎಂದು ಕರೆಯುತ್ತಿದ್ದ ಮೊಘಲ್ ಆಸ್ಥಾನದ ಇತಿಹಾಸಕಾರ ಖಾಫಿ ಖಾನನೇ ಒದಗಿಸಿದ್ದಾನೆ! ದಾಳಿಯ ಸಮಯದಲ್ಲಿ ತನ್ನ ಸೈನಿಕರು ಕುರಾನ್‌ನ ಪ್ರತಿ ಸಿಕ್ಕಿದರೆ, ಅದನ್ನು ಅತ್ಯಂತ ಗೌರವದಿಂದ ಪರಿಗಣಿಸಬೇಕು ಮತ್ತು ಅದನ್ನು ತನ್ನ ಸೈನ್ಯದ ಮುಸ್ಲಿಂ ಅನುಯಾಯಿಗಳಿಗೆ ಹಸ್ತಾಂತರಿಸಬೇಕು ಎಂಬ ಕಟ್ಟುನಿಟ್ಟಿನ ಆದೇಶವನ್ನು ಶಿವಾಜಿ ನೀಡಿದ್ದ ಎಂದು ಸ್ವತಃ ಖಾಫಿ ಖಾನ್ ಸ್ಪಷ್ಟವಾಗಿ ದಾಖಲಿಸಿದ್ದಾನೆ. (ಆಧಾರ: ಖಾಫಿ ಖಾನ್‌ನ ‘ಮುಂತಾಖಾಬ್-ಉಲ್-ಲುಬಾಬ್’).

ಶತ್ರುವನ್ನು ಗೌರವಿಸುವುದನ್ನು ಕೂಡಾ ಶಿವಾಜಿ ಒಂದು ಮೌಲ್ಯವನ್ನಾಗಿ ಮಾಡಿದ್ದ. ಪ್ರತಾಪ್‌ಗಢದಲ್ಲಿ ಬಿಜಾಪುರದ ಪ್ರಬಲ ಸೇನಾಧಿಪತಿ ಅಫ್ಜಲ್ ಖಾನ್‌ನೊಂದಿಗಿನ ಪ್ರಸಿದ್ಧ ಮುಖಾಮುಖಿಯಲ್ಲಿ ಆತನನ್ನು ಕೊಂದ ನಂತರ ಆತನ ಶವವನ್ನು ಸಂಪೂರ್ಣ ಇಸ್ಲಾಮಿಕ್ ವಿಧಿಗಳೊಂದಿಗೆ ಮತ್ತು ಸೇನಾಗೌರವಗಳೊಂದಿಗೆ ಸಮಾಧಿ ಮಾಡುವಂತೆ ಶಿವಾಜಿ ನೋಡಿಕೊಂಡ. ಅವನ ಸಮಾಧಿಯಾದ ಅಫ್ಜಲ್ ಖಾನ್ ದರ್ಗಾ, ಇಂದಿಗೂ ಪ್ರತಾಪ್‌ಗಢ ಕೋಟೆಯ ತಳದಲ್ಲಿ ನಿಂತಿದೆ – ಶಿವಾಜಿಯ ಸಹಿಷ್ಣುತೆ ಮತ್ತು ಮೃತ “ಮುಸ್ಲಿಂ” ಶತ್ರುವಿಗೆ ಆತ ನೀಡಿದ ಗೌರವಕ್ಕೆ ಶಾಶ್ವತ ಸ್ಮಾರಕವಾಗಿದೆ (ಮೂಲ: ಸ್ಥಳೀಯ ಐತಿಹ್ಯಗಳು ಮತ್ತು ಬಖರ್‌ಗಳು).

ಸೂಫಿ ಸಂತರಿಗೆ ನೆರವು ನೀಡುತ್ತಿದ್ದ ಶಿವಾಜಿ, ಹಿಂದೂ ದೇವಾಲಯಗಳು ಮತ್ತು ವಿದ್ವಾಂಸರಿಗೆ ಮಾತ್ರವಲ್ಲದೆ, ಮುಸ್ಲಿಂ ಸಂತರಿಗೂ ಜಾಗೀರು ಮತ್ತು ಆರ್ಥಿಕ ನೆರವನ್ನು ವಿಸ್ತರಿಸಿದ್ದ ಮತ್ತು ಜೀವನಾಧಾರವನ್ನು ಒದಗಿಸಿದ್ದ. ಪ್ರಸಿದ್ಧ ಇತಿಹಾಸಕಾರ ಜಾದುನಾಥ್ ಸರ್ಕಾರ್ ಅವರ ಪ್ರಕಾರ, ಶಿವಾಜಿ ಸೂಫಿ ಮುಸ್ಲಿಂ ಸಂತರಿಗೆ, ವಿಶೇಷವಾಗಿ ಕೆಲ್ಶಿಯ ಬಾಬಾ ಯಾಕುತ್‌ರಿಗೆ ಹೆಚ್ಚಿನ ಗೌರವವನ್ನು ತೋರಿಸಿದ್ದ. (ಮೂಲ: ಸರ್ಕಾರ್ ಅವರ ‘ಶಿವಾಜಿ ಎಂಡ್ ಹಿಸ್ ಟೈಮ್’). ಇದಲ್ಲದೆ, ರಾಯಗಢದ ತನ್ನ ರಾಜಧಾನಿಯಲ್ಲಿ ಜಗದೀಶ್ವರ ದೇವಾಲಯದ ಪಕ್ಕದಲ್ಲಿಯೇ ಮಸೀದಿಯೊಂದನ್ನು ನಿರ್ಮಿಸಿದ್ದ ಎಂಬುದು ಬಹುತ್ವಕ್ಕೆ ಆತನ ಬದ್ಧತೆಗೊಂದು ಭೌತಿಕ ಸಾಕ್ಷಿಯಾಗಿದೆ.

ಸೇನೆ ಮತ್ತು ಆಡಳಿತದಲ್ಲಿ ಮುಸ್ಲಿಮರು

ಶಿವಾಜಿಯ ಬಲ ಸಾಮರ್ಥ್ಯಗಳು- ಆಡಳಿತ ಮತ್ತು ಸೈನ್ಯದಲ್ಲಿ ಮುಸ್ಲಿಮರೂ ಸೇರಿದಂತೆ ಎಲ್ಲರ ಒಳಗೊಳ್ಳುವಿಕೆಯಲ್ಲಿ ಇದ್ದದ್ದನ್ನು  ಕಾಣಬಹುದು. ಆತನ ಆಡಳಿತವು ಸಮರ್ಥ ಮುಸ್ಲಿಂ ಅಧಿಕಾರಿಗಳು ಮತ್ತು ಸೈನಿಕರಿಂದ ತುಂಬಿದ್ದವು. ಕೆಲವು ಅಂದಾಜಿನ ಪ್ರಕಾರ ಅವನ ಸೈನ್ಯವು ಒಂದು ಹಂತದಲ್ಲಿ 60,000ಕ್ಕೂ ಹೆಚ್ಚು ಮುಸ್ಲಿಂ ಸೈನಿಕರನ್ನು ಹೊಂದಿತ್ತು. ಇದು ಇಡೀ ಸೇನೆಯ ಅಂದಾಜು 30-35 ಶೇಕಡಾ ಆಗುತ್ತದೆ (ಆಧಾರ: ಸೇನಾ ಹಾಜರಿಪಟ್ಟಿಗಳ ಆಧಾರದ ಮೇಲೆ ಇತಿಹಾಸಕಾರರ ಒಮ್ಮತ). ಅತ್ಯಂತ ನಿರ್ಣಾಯಕ ಮಿಲಿಟರಿ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ಈ ಅಧಿಕಾರಿಗಳಿಗೆ ವಹಿಸಲಾಗಿತ್ತು. ಅವರಲ್ಲಿ ಮುಖ್ಯರಾದವರನ್ನು ಮಾತ್ರವೇ ಇಲ್ಲಿ ನೋಡೋಣ.

​ದೌಲತ್ ಖಾನ್ ಎಂಬಾತನನ್ನು ಮರಾಠಾ ನೌಕಾಪಡೆಯ ಸೇನಾಪತಿ (ದರಿಯಾ ಸಾರಂಗ್- ದರಿಯಾ ಎಂದರೆ ತೀರ) ಆಗಿ ನೇಮಿಸಲಾಗಿತ್ತು. ಆತನೇ ಶಿವಾಜಿಯ ನೌಕಾಪಡೆಯ ದೊಡ್ಡ ಭಾಗದ ನೇತೃತ್ವ ವಹಿಸಿದ್ದ. ಆತನ ಮೇಲೆ ಶಿವಾಜಿ ಇರಿಸಿದ್ದ ಉನ್ನತ ಮಟ್ಟದ ನಂಬಿಕೆಯನ್ನು ಇದು ತೋರಿಸುತ್ತದೆ. (ಆಧಾರ: ಸಭಾಸದ್ ಬಖರ್, ಇಂಗ್ಲಿಷ್ ಫ್ಯಾಕ್ಟರಿ ರೆಕಾರ್ಡ್ಸ್).

​ಮರಾಠಾ ಅಶ್ವದಳದಲ್ಲಿ ಸರ್ದಾರ್ ಆಗಿದ್ದ ಸಿದ್ದಿ ಹಿಲಾಲ್, ಸೈನ್ಯದ ಪ್ರಮುಖ ವಿಭಾಗವನ್ನು ಮುನ್ನಡೆಸಿದ ಅತ್ಯಂತ ವಿಶ್ವಾಸಾರ್ಹ ಸೇನಾಪತಿ ಆಗಿದ್ದ. (ಮೂಲ: ಮರಾಠಿ ಕ್ರಾನಿಕಲ್ಸ್ ಮತ್ತು ಡಾಕ್ಯುಮೆಂಟ್ಸ್ ).​ ಶಿವಾಜಿಯ ಸೇನೆಯ ಪ್ರಮುಖ ತಾಂತ್ರಿಕ ವಿಭಾಗವಾದ ನಿರ್ಣಾಯಕ ಫಿರಂಗಿದಳದ ಮುಖ್ಯಸ್ಥ ಇಬ್ರಾಹಿಂ ಖಾನ್ ಎಂಬಾತನಾಗಿದ್ದ. (ಮೂಲ: ವಿವಿಧ ಮರಾಠಿ ದಾಖಲೆಗಳು).

ಪರ್ಷಿಯನ್ ವಿದ್ವಾಂಸ ಖಾಜಿ ಹೈದರ್, ಶಿವಾಜಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮತ್ತು ರಾಯಭಾರಿಯಾಗಿ ಬೇರೆ ರಾಜಾಡಳಿತಗಳ ಜೊತೆಗಿನ ವ್ಯವಹಾರಗಳು ಮತ್ತು ಸಂಕೀರ್ಣ ಸಂವಹನಗಳನ್ನು ನಿರ್ವಹಿಸುತ್ತಿದ್ದ. (ಮೂಲ: ಆಡಳಿತ ದಾಖಲೆಗಳು, ಇತಿಹಾಸಕಾರ ಎಸ್.ಎಂ. ಪಗಡಿ).

ಸಿದ್ದಿ ಇಬ್ರಾಹಿಂ ಶಿವಾಜಿಯ ಅತ್ಯಂತ ವಿಶ್ವಾಸಾರ್ಹ ವೈಯಕ್ತಿಕ ಅಂಗರಕ್ಷಕರಲ್ಲಿ ಒಬ್ಬನಾಗಿದ್ದ ಮಾತ್ರವಲ್ಲದೆ, ನಂತರ ಅತನನ್ನು ವ್ಯೂಹಾತ್ಮಕವಾಗಿದ್ದ ಪ್ರಮುಖ ಫೋಂಡಾ ಕೋಟೆಯ ಮುಖ್ಯಸ್ಥನಾಗಿ (ಹವಾಲ್ದಾರ್) ನೇಮಿಸಲಾಯಿತು (ಮೂಲ: ಬಖರ್‌ಗಳು ಮತ್ತು  ಕೋಟೆದಾಖಲೆಗಳು). ಇದಲ್ಲದೇ, ಶಿವಾಜಿಯ ವೈಯಕ್ತಿಕ ಅಂಗರಕ್ಷಕರಾಗಿ, ಸೇನಾಧಿಕಾರಿಗಳು, ಸುಬೇದಾರರು, ಪ್ರತಿನಿಧಿಗಳಾಗಿ ಇದ್ದ ಹಲವರನ್ನು ಉಲ್ಲೇಖಿಸಬಹುದು.

ನೌಕಾಪಡೆಯ ಮುಖ್ಯಸ್ಥ ಮತ್ತು ಫಿರಂಗಿದಳದ ಮುಖ್ಯಸ್ಥ ಎಂಬ ಎರಡು ಅತ್ಯಂತ ನಿರ್ಣಾಯಕ ಮಿಲಿಟರಿ ಪಾತ್ರಗಳನ್ನು ಶಿವಾಜಿಯ ಆಡಳಿತದಲ್ಲಿ ಮುಸ್ಲಿಮರು ನಿರ್ವಹಿಸಿದ್ದರು ಎಂಬ ಅಂಶವು ಶಿವಾಜಿಯ ಹೋರಾಟವು ಮರಾಠಾ ಆಡಳಿತದ ಸ್ಥಾಪನೆಗಾಗಿ ನಡೆಸಿದ್ದ ಪಕ್ಕಾ ರಾಜಕೀಯ ಉದ್ದೇಶದ್ದಾಗಿತ್ತೇ ಹೊರತು, ಧಾರ್ಮಿಕ ಯುದ್ಧವಾಗಿರಲಿಲ್ಲ ಎಂದು ದೃಢಪಡಿಸುತ್ತದೆ. ಆತನ ಎದುರಾಳಿಗಳು ಮುಸ್ಲಿಮರಾಗಿದ್ದುದು ಕೇವಲ ಕಾಕತಾಳೀಯ. ಆತನ ಮಾದಂಡವು ಅರ್ಹತೆ ಮತ್ತು ನಿಷ್ಠೆಯಾಗಿತ್ತೇ ಹೊರತು, ಧಾರ್ಮಿಕ ನಂಬಿಕೆಯಲ್ಲ ಎಂಬುದು ಇತಿಹಾಸವು ಸಾಬೀತುಪಡಿಸಿರುವ ವಿಷಯ.

ಹೀಗಿದ್ದೂ, ಬಿಜೆಪಿಯ ರಾಜಕೀಯ ಲಾಭಕ್ಕಾಗಿ ಮತ್ತು ಅದರ ಯಜಮಾನ ಬ್ರಾಹ್ಮಣ್ಯದ ನಾಯಕತ್ವದ ಆರೆಸ್ಸೆಸ್ಸಿನ- ರಾಜಸತ್ತಾತ್ಮಕ, ವರ್ಣಾಶ್ರಮ ಧರ್ಮದ, ಮನುವ್ಯಾದಿ ಮೌಲ್ಯಗಳನ್ನು ಉಳಿಸುವ ಮತ್ತು ಇತಿಹಾಸದ ಕಸದಬುಟ್ಟಿಗೆ ಸೇರಿರುವ ರಾಜಾಡಳಿತ ಹಾಗೂ ಬ್ರಾಹ್ಮಣ ಪೌರೋಹಿತ್ಯದ ಅಧಿಕಾರ ಸ್ಥಾಪಿಸುವ ದುಷ್ಟ ಯೋಜನೆಗಾಗಿ ಇತಿಹಾಸವನ್ನು ತಿರುಚಿ, ಸುಳ್ಳು ಕತೆಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಿಷವನ್ನು ಹರಿಯಬಿಡಲಾಗುತ್ತಿದೆ ಮತ್ತು ಶತಮೂರ್ಖರು ಹಾಗೂ ಏನೂ ತಿಳಿಯದ ಎಳೆಯರು ಒಂದಿಷ್ಟೂ ಯೋಚಿಸದೇ ಆ ವಿಷವನ್ನು ಕುಡಿಯುತ್ತಿದ್ದಾರೆ!

Related Articles

ಇತ್ತೀಚಿನ ಸುದ್ದಿಗಳು

You cannot copy content of this page