Monday, July 28, 2025

ಸತ್ಯ | ನ್ಯಾಯ |ಧರ್ಮ

ಹಿಂದುತ್ವ ರಾಜಕಾರಣದ ಕಥೆ: ರಾಷ್ಟ್ರೀಯತೆಯ ಬ್ರಾಹ್ಮಣೀಕರಣ

ಅಧ್ಯಾಯ ೮: ರಾಷ್ಟ್ರೀಯತೆಯ ಬ್ರಾಹ್ಮಣೀಕರಣ

ತಿಲಕರ ಜನಪ್ರಿಯತೆ ಬೆಳೆಯುತ್ತಿದ್ದದ್ದನ್ನು ವ್ಯಾಲೆಂಟೈನ್‌ ಚಿರೋಲ್‌ ಆತಂಕದಿಂದ ವಿವರಿಸುತ್ತಾನೆ. ಜೈಲಿನಿಂದ ಹೊರಬಂದ ತಿಲಕ್‌ ಕೇಸರಿಯಲ್ಲಿ ಮತ್ತೆ ಕಾರ್ಯಪ್ರವೃತ್ತರಾಗುತ್ತಾರೆ. ತಿಲಕರ ಅನುಪಸ್ಥಿತಿಯಲ್ಲಿ ನಾವು ಈಗಾಗಲೇ ಚರ್ಚಿಸಿದ ಖಾದಿಲ್ಕರ್‌ ಮತ್ತು ಕೇಲ್ಕರ್‌ ಕೇಸರಿಯ ಜವಾಬ್ದಾರಿ ಹೊತ್ತುಕೊಂಡಿದ್ದರು. ಆದರೆ ತಿಲಕರ ಬೆಂಕಿಯುಗುಳುವ ಶೈಲಿಯನ್ನು ಪ್ರಯೋಗಿಸಲು ಅವರಿಂದ ಸಾಧ್ಯವಾಗಿರಲಿಲ್ಲ. ಶಿವಾಜಿಯ ಒಂದು ಸಾವಿರ ವರ್ಷದ ಹುಟ್ಟುಹಬ್ಬವನ್ನು ಅತಿವೈಭವದಿಂದ ಆಚರಿಸುವ ಮೂಲಕ ತಿಲಕ್‌ ತನ್ನ ಪುನರಾಗಮನವನ್ನು ಘೋಷಿಸಿಕೊಂಡಿದ್ದರು.

ಇದರ ನಡುವೆ ತಿಲಕ್‌ ಎಂಬ ವ್ಯಕ್ತಿಯ ಮೂಲಕ್ಕೆ ಎರವಾಗಬಲ್ಲಂತಹ ಪ್ರಕರಣವೊಂದು ಹುಟ್ಟಿಕೊಳ್ಳುತ್ತದೆ. ತಾಯ್‌ ಮಹಾರಾಜ್‌ ಕೇಸ್‌ ಎಂದು ಕಾನೂನು ವಲಯದಲ್ಲಿ ಗುರುತಿಸಿಕೊಂಡಿದ್ದ ಆ ಪ್ರಕರಣದ ಸಾರಾಂಶ ಹೀಗಿದೆ. ಪುಣೆಯ ಒಬ್ಬ ಸರದಾರನಾಗಿದ್ದ ಬಾಬಾ ಮಹಾರಾಜ್‌ ತಿಲಕರ ಗೆಳೆಯನಾಗಿದ್ದ. ತಿಲಕ್‌ ಜೈಲಿನಿಂದ ಹೊರ ಬಂದ ಕೆಲ ಸಮಯದ ಒಳಗೆ ಬಾಬಾ ಮಹಾರಾಜ್‌ ತೀರಿಕೊಳ್ಳುತ್ತಾನೆ. ಸಾವಿನ ಹಾಸಿಗೆಯಲ್ಲಿ ಮಲಗಿದ್ದ ಆತ ತಿಲಕ್‌ ಸಹಿತ ಐವರನ್ನು ತನ್ನ ಆಸ್ತಿಗೆ ಟ್ರಸ್ಟಿಗಳನ್ನಾಗಿ ನೇಮಿಸಿರುತ್ತಾನೆ. ಅದರಲ್ಲಿ ಒಬ್ಬ ವ್ಯಕ್ತಿ ಹಿಂದೆ ಸರಿಯುತ್ತಾರೆ. ಆಗ ಗರ್ಭಿಣಿಯಾಗಿದ್ದ ಬಾಬಾ ಮಹಾರಾಜರ ಪತ್ನಿ ತಾಯ್‌ ಮಹಾರಾಜ್‌ ನಂತರ ಒಂದು ಗಂಡು ಮಗುವಿಗೆ ಜನ್ಮ ನೀಡಿದರಾದರೂ ಬಹಳ ಬೇಗನೆ ಆ ಮಗು ತೀರಿಕೊಳ್ಳುತ್ತದೆ. ತಿಲಕ್‌ ಮತ್ತು ಸಹಚರರು ಆಕೆಯ ಬಳಿ ಒಂದು ಮಗುವನ್ನು ದತ್ತು ಪಡೆದುಕೊಳ್ಳುವಂತೆ ಪ್ರೇರೇಪಿಸುತ್ತಾರೆ. ಅದರಂತೆ ಹಳೆಯ ಕುಟುಂಬದ ಒಂದು ಕವಲು ವಾಸವಿದ್ದ ಔರಂಗಾಬಾದಿಗೆ ವಿಧವೆ ತಾಯ್‌ ಮಹಾರಾಜ್‌ ತಿಲಕರ ಜೊತೆಗೆ ಹೋಗುತ್ತಾರೆ. ಅಲ್ಲಿದ್ದ ಕುಟುಂಬವೊಂದರಿಂದ ಜಗನ್ನಾಥ್‌ ಎಂಬ ಮಗುವನ್ನು ದತ್ತು ತೆಗೆದುಕೊಳ್ಳುತ್ತಾರೆ. ಆದರೆ, ಮರಳಿ ಬಂದ ನಂತರ ತಾಯ್‌ ಮಹಾರಾಜ್‌ ತಿಲಕರ ವಿರುದ್ಧ ನಿಂತುಬಿಡುತ್ತಾರೆ. ತಿಲಕರ ಟ್ರಸ್ಟಿ ಸ್ಥಾನವನ್ನು ಹಿಡಿದುಕೊಂಡು ವಂಚನೆ ಆರೋಪಕ್ಕೆ ಕೇಸ್‌ ಹಾಕುತ್ತಾರೆ. ಭ್ರಷ್ಟಾಚಾರ ಮತ್ತು ಕಳ್ಳಸಾಕ್ಷಿ ಆರೋಪಗಳನ್ನೂ ತಾಯ್‌ ಮಹಾರಾಜ್‌ ತಿಲಕರ ಮೇಲೆ ಹೊರಿಸಿದ್ದರು. ಕೆಲ ವರ್ಷಗಳ ಮಟ್ಟಿಗೆ ಈ ಪ್ರಕರಣ ತಿಲಕರ ಹೆಸರಿಗೆ ಕಳಂಕ ತಂದಿತ್ತು. ಆದರೆ ಕೊನೆಯಲ್ಲಿ ಕೋರ್ಟ್‌ ತಿಲಕರನ್ನು ಖುಲಾಸೆಗೊಳಿಸಿತು. ಅದರೊಂದಿಗೆ ತಿಲಕರ ಯಶಸ್ಸು ಪೂರ್ವಾಧಿಕ ವರ್ಧಿಸಿತು. ಮಹಾರಾಷ್ಟ್ರ ಮತ್ತು ಡೆಕ್ಕನ್‌ ಭೌಗೋಳಿಕತೆಗೂ ಅದು ಹಬ್ಬಿತು.

ಪುಣೆ ಮತ್ತು ಡೆಕ್ಕನ್‌ ಪ್ರಾಂತ್ಯದಲ್ಲಿ ತಿಲಕ್ ಪ್ರಯೋಗಿಸಿದ ನವಬ್ರಾಹ್ಮಣಿಸಂ ಮತ್ತು ರಾಷ್ಟ್ರೀಯತೆಯ ಮಸಾಲೆಯ ಗೆಲುವಿನ ಕಥೆ ಬಂಗಾಳದ ಬಿಪಿನ್‌ ಚಂದ್ರಪಾಲ್‌ ಮತ್ತು ಅರಬಿಂದೋ ಮೊದಲಾದವರನ್ನು ಆಕರ್ಷಿಸಿತು. ಆದರೆ ಚಿತ್ಪಾವನ ಬ್ರಾಹ್ಮಣರ ಸಾಮಾಜಿಕ ಭಿನ್ನತೆಯ ಚರಿತ್ರೆಗೆ ಅವರು ಹೊರಗಿನವರಾಗಿದ್ದರಿಂದ ಅವರ ನಡುವೆ ಹಲವು ಭಿನ್ನಾಭಿಪ್ರಾಯಗಳೂ ಇದ್ದವು. ಆದರೂ ತಿಲಕರ ದಾರಿ ರಾಷ್ಟ್ರೀಯ ಹೋರಾಟಕ್ಕೆ ಶಕ್ತಿ ತುಂಬಬಹುದು ಎಂದು ಅವರೆಲ್ಲ ನಂಬಿದರು. ಬಂಗಾಳದ ಇನ್ನೊಬ್ಬ ನಾಯಕ ಸುರೇಂದ್ರನಾಥ್‌ ಬ್ಯಾನರ್ಜಿ ನಂತರದ ಕಾಲದಲ್ಲಿ ತಿಲಕರೊಂದಿಗೆ ತೀರಾ ಭಿನ್ನಾಭಿಪ್ರಾಯ ತಳೆದರಾದರೂ, ತಿಲಕರ ಸ್ವದೇಶಿ ಚಳುವಳಿ ಮತ್ತು ಶಿವಾಜಿ ಉತ್ಸವಗಳಿಂದ ಆಕರ್ಷಿತರಾದರು. ಅಂತಹದ್ದೊಂದು ಉತ್ಸವವನ್ನು ಬಂಗಾಳದಲ್ಲಿ ಅದಾಗಲೇ ಜನಪ್ರಿಯವಾಗಿದ್ದ ಕಾಳಿಪೂಜೆಯೊಂದಿಗೆ ತಳುಕು ಹಾಕಿಕೊಂಡು ಆಚರಿಸಲು ಸುರೇಂದ್ರನಾಥ್‌ ಬ್ಯಾನರ್ಜಿ ಯೋಚಿಸಿದ್ದರು. ಅದರ ಜೊತೆಗೆ ವಿದ್ಯಾರ್ಥಿ ಮತ್ತು ಯುವಜನರನ್ನು ರಾಷ್ಟ್ರೀಯತೆಗೆ ಸೆಳೆಯಲು ತಿಲಕರ ಶೈಲಿಯ ಜಿಮ್ನಾಸ್ಟಿಕ್‌ ಸೊಸೈಟಿಗಳನ್ನು ಬ್ಯಾನರ್ಜಿ ಬಂಗಾಳದಲ್ಲಿ ಆರಂಭಿಸಿದರು.

೧೯೦೫ ಮತ್ತು ೧೯೦೬ರಲ್ಲಿ ಬಂಗಾಳ ವಿಭಜನೆಯ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್‌ ಸಮ್ಮೇಳನಗಳಲ್ಲಿ ತಿಲಕರ ಪ್ರಾಬಲ್ಯ ಕೋಲಾಹಲಗಳಿಗೆ ದಾರಿ ಮಾಡಿಕೊಟ್ಟಿತ್ತು. ದೊಡ್ಡದೊಂದು ವಿಭಾಗ ತಿಲಕರ ಬೆನ್ನಿಗೆ ನಿಂತರು. ಕಾಂಗ್ರೆಸ್‌ ಸ್ವದೇಶಿ ಘೋಷಣೆಯನ್ನು ಕೈಗೆತ್ತಿಕೊಂಡಿತು. ಆದರೆ, ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಅಲಂಕರಿಸುವ ತಿಲಕರ ಬಯಕೆ ನೆರವೇರಲಿಲ್ಲ. ಫಿರೋಜ್ ಷಾ ಮೆಹ್ತಾರ ಪ್ರಯತ್ನಗಳ ಫಲವಾಗಿ ದಾದಾಬಾಯಿ ನವರೋಜಿಯವರನ್ನು ಅಧ್ಯಕ್ಷ ಸ್ಥಾನಕ್ಕೆ ಏರಿಸಲು ೧೯೦೬ರ ಕಲ್ಕತ್ತಾ ಕಾಂಗ್ರೆಸ್‌ ಸಮ್ಮೇಳನದಲ್ಲಿ ಮಂದಗಾಮಿಗಳು ಸಫಲರಾದರು. ಆದರೂ, ಸೂರತ್‌ ಸಮ್ಮೇಳನದಲ್ಲಿ ದೊಡ್ಡ ಕೋಲಾಹಲ ಸೃಷ್ಠಿಸಲು ತಿಲಕೈಟುಗಳಿಗೆ ಸಾಧ್ಯವಾಗಿತ್ತು.

ಪುಣೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ತಿಲಕ್‌ ಬಿತ್ತಿದ ನವಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮನ ಬೀಜಗಳು ಬಹಳ ಬೇಗನೆ ಮೊಳೆತು ಚಿಗುರಿದವು. ತಿಲಕರಿಗೆ ಒಬ್ಬ ರಾಷ್ಟ್ರೀಯ ನಾಯಕ ಎಂಬ ನೆಲೆಯಲ್ಲಿ ತನ್ನ ಸಾಮಾಜಿಕ ಮುಖವಾಡವನ್ನು ಗಟ್ಟಿಯಾಗಿ ನಿಲ್ಲಿಸಬೇಕಾದ ಅನಿವಾರ್ಯತೆಯಿತ್ತು. ಉದಾಹರಣೆಗೆ, ಚಾಪೇಕರ್‌ ಸಹೋದರರು ನಡೆಸಿದ ಚಟುವಟಿಕೆಗಳಿಗೆ ಬೆಂಬಲ ನೀಡಲಾಗಲೀ, ಅವರ ಮರಣದ ನಂತರ ಅವರ ಗುಣಗಾನ ಮಾಡುವುದಾಗಲೀ ತಿಲಕರಿಗೆ ಸಾಧ್ಯವಿರಲಿಲ್ಲ. ಆದ್ದರಿಂದ ರಾನ್ಡ್‌ನ ಕೊಲೆಯ ಕುರಿತು ಕೇಸರಿಯಲ್ಲಿ ಬರೆದದ್ದು ʼನಾವೆಲ್ಲ ಆತಂಕಗೊಳ್ಳಬೇಕಾದ, ಬೆಚ್ಚಿಬೀಳಿಸುವ ದುರಂತವೊಂದು ಪುಣೆಯಲ್ಲಿ ಘಟಿಸಿದೆʼ ಎಂದಾಗಿತ್ತು. ಆದರೆ ತಿಲಕ್‌ ಹಲವು ರೀತಿಯಲ್ಲಿ ಚಾಪೇಕರ್‌ ಸಹೋದರರಿಗೆ ಸಹಾಯ ಮಾಡಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿತ್ತು. ತಿಲಕ್‌ ಮತ್ತು ಕೇಸರಿಯ ಈ ಮಿತಿಗಳನ್ನು, ಅವರ ಚಟುವಟಿಕೆಗಳ ಫಲವಾಗಿ ಹುಟ್ಟಿಕೊಂಡಿದ್ದ ಬ್ರಾಹ್ಮಣಿಕ್‌ ಪತ್ರಿಕೆಗಳು ಮುರಿದವು. ಉದಾಹರಣೆಗೆ ಶಿವರಾಮ್‌ ಮಹಾದೇವ್‌ ಪರಾಂಜಪೆ (೧೮೬೪-೧೯೨೯) ಎಂಬ ಚಿತ್ಪಾವನ ಬ್ರಾಹ್ಮಣ ಆರಂಭಿಸಿದ ಕಾಲ್‌, ಪುಣೆಯಿಂದಲೇ ಆರಂಭವಾದ ಮತ್ತೊಂದು ಬ್ರಾಹ್ಮಣ ಪತ್ರಿಕೆ ರಾಷ್ಟ್ರಮತ್‌ ಮೊದಲಾದವು ಯಾವ ಮುಚ್ಚುಮರೆಯಿಲ್ಲದೆ ನೇರವಾಗಿಯೇ ನವಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಸಶಸ್ತ್ರ ಹೋರಾಟವನ್ನು ಬೆಂಬಲಿಸಿದವು. ಪರಾಂಜಪೆ ತಿಲಕರ ಮಾಜಿ ಸಹೋದ್ಯೋಗಿ ಕೂಡ ಆಗಿದ್ದವರು. ದೇವರ ನಿಯಮ ಎಂದು ಅವರು ನಂಬಿಕೊಂಡಿದ್ದ ದಾರಿಯಲ್ಲಿ ಚಾಪೇಕರ್‌ ಸಹೋದರರು ನಡೆದರು ಎಂದು ಕಾಲ್‌ ಬರೆಯಿತು. ಅದು ಮನುಷ್ಯರ ನಿಯಮಗಳಿಗಿಂತ ಮೇಲಿನದ್ದು. ಅಫ್ಸಲ್‌ ಖಾನನ್ನು ಶಿವಾಜಿ ಮೋಸದಿಂದ ಕೊಂದದ್ದನ್ನು ಸಮರ್ಥಿಸಿಕೊಳ್ಳಲು ತಿಲಕ್‌ ಇದೇ ವಾದವನ್ನು ಮುಂದಿಟ್ಟಿದ್ದರೆಂದು ನಾವು ಈಗಾಗಲೇ ನೋಡಿದೆವು. ದೇವರ ನಿಯಮ ಮತ್ತು ಅದನ್ನು ಜಾರಿಗೊಳಿಸುವ ಬ್ರಾಹ್ಮಣ ಎಂಬ ʼಹೊಸ ನಿಯಮʼವನ್ನು ಮರಾಠಾ ಪ್ರಾಂತ್ಯದ ಸಾಮಾಜಿಕ ಪ್ರಜ್ಞೆಯಾಗಿ ರೂಪಿಸಲು ಈ ಪತ್ರಿಕೆಗಳು ಶ್ರಮಿಸಿದವು.

ವ್ಯಾಲೆಂಟೈನ್‌ ಚಿರೋಲ್‌ ತಿಲಕರ ರಾಜಕಾರಣವನ್ನು ಈ ರೀತಿಯಾಗಿ ವಿವರಿಸುತ್ತಾನೆ:

‌ʼತಿಲಕ್ ಹಿಂದೂಗಳೊಂದಿಗೆ ನಡೆಸಿದ ನಿವೇದನೆಗಳಿಗೆ ಎರಡು ಆಯಾಮಗಳಿವೆ. ಒಂದು ಕಡೆ ಭಾರತ, ಅದರಲ್ಲೂ ಮರಾಠರ ರಾಜ್ಯವಾದ ಮಹಾರಾಷ್ಟ್ರ, ಹೊರಗಿನ ʼಪೈಶಾಚಿಕʼ ಆಡಳಿತಕ್ಕಿಂತ ಹಿಂದೂ ಆಡಳಿತದ ಅಡಿಯಲ್ಲಿ (ಪೇಶ್ವೆಗಳ ಕಾಲದಲ್ಲಿ) ಹೆಚ್ಚು ಸಂತುಷ್ಟವೂ, ಹೆಚ್ಚು ಒಳಿತುಳ್ಳದ್ದೂ, ಹೆಚ್ಚು ಅಭಿವೃದ್ದಿಶೀಲವೂ ಆಗಿತ್ತು ಎಂದು ಅವರಿಗೆ ಕಲಿಸಿದರು. ಬ್ರಿಟಿಷ್‌ ರಾಜ್‌ ಪಾಶ್ಚಾತ್ಯ ನಾಗರಿಕತೆಯ ವೈಜ್ಞಾನಿಕ ಮುನ್ನಡೆಯನ್ನು ಬಳಸಿಕೊಂಡು ಒಂದೊಮ್ಮೆ ಭಾರತೀಯರಿಗೆ ಸೇವೆಗಳನ್ನು ಒದಗಿಸಿದ್ದರಾದರೂ ಅದಕ್ಕಾಗಿ ಅವರು ಭೌತಿಕವೂ ಧಾರ್ಮಿಕವೂ ಆದ ದೊಡ್ಡ ಬೆಲೆಯನ್ನು ಭಾರತೀಯರಿಂದ ತೆತ್ತಿಸಿಕೊಂಡಿದ್ದಾರೆ. ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದು, ಸಾಮಾಜಿಕ ಮತ್ತು ಧಾರ್ಮಿಕ ಕೇಂದ್ರಗಳನ್ನು ನಾಶ ಪಡಿಸಿದ್ದಾರೆ. ಇನ್ನೊಂದು ಕಡೆ, ಪುನಹ ಅಧಿಕಾರ ಬ್ರಾಹ್ಮಣರ ಕೈಗೆ ಬರುವುದಾದರೆ ಬ್ರಿಟಿಷರಿಂದ ಕಲಿತುಕೊಳ್ಳಬೇಕಾದ ಒಳ್ಳೆಯ ಕಾರ್ಯಗಳನ್ನು ಈಗಾಗಲೇ ಕಲಿತುಕೊಂಡಿರುವುದರಿಂದ ಅದೊಂದು ಸುವರ್ಣಯುಗ ಆಗಿರುತ್ತದೆ ಎಂಬ ಅಭಿವೃದ್ಧಿ ಪರವಾದ ಒಂದು ಯೋಜನೆಯ ಕಡೆಗೆ ಅವರನ್ನು ಮುನ್ನಡೆಸಿದರು.ʼ

೧೯೦೮ರಲ್ಲಿ ಬಂಗಾಳದ ಅನುಶೀಲನ್‌ ಸಮಿತಿಯ ಸದಸ್ಯರಾಗಿದ್ದ ಖುದಿರಾಂ ಬೋಸ್‌ ಮತ್ತು ಪ್ರಫುಲ್ಲ ಚಕ್ರವರ್ತಿ ಎಂಬ ಪ್ರಫುಲ್ಲ ಚಕ್ಕಿ ಸೇರಿಕೊಂಡು ಬ್ರಿಟಿಷ್‌ ಮ್ಯಾಜಿಸ್ಟ್ರೇಟ್‌ ಆಗಿದ್ದ ಡಗ್ಲಾಸ್‌ ಕಿಂಗ್ಸ್‌ಫೋರ್ಡ್‌ನನ್ನು ಕೊಲ್ಲುವ ಉದ್ಧೇಶದೊಂದಿಗೆ ಮುಜಫರ್‌ಪುರದಲ್ಲಿ ಕುದುರೆಗಾಡಿಗೆಯೊಂದಕ್ಕೆ ಬಾಂಬ್‌ ಎಸೆಯುತ್ತಾರೆ. ಆದರೆ ಕಿಂಗ್ಸ್‌ಫೋರ್ಡ್‌ ಯಾತ್ರೆ ಮಾಡುತ್ತಿದ್ದ ಗಾಡಿಗೆ ಸಮಾನವಾದ ಬೇರೊಂದು ಕುದುರೆಗಾಡಿಗೆ ಅವರು ತಪ್ಪಿ ಬಾಂಬ್‌ ಎಸೆದಿದ್ದರು. ಆ ಗಾಡಿಯಲ್ಲಿದ್ದ ಇಬ್ಬರು ಯುವತಿಯರು, ಮಿಸಸ್‌ ಕೆನಡಿ ಮತ್ತು ಮಗಳು ಮಿಸ್‌ ಕೆನಡಿ ಸತ್ತರು. ಆ ಘಟನೆಯ ಕುರಿತು ಸ್ಫೋಟಕ ಲೇಖನಗಳನ್ನು ಕೇಸರಿಯಲ್ಲಿ ಪ್ರಕಟಿಸಿದರು ಎಂಬ ಆರೋಪದ ಮೇಲೆ ೧೯೦೮ ಜೂನ್‌ ೨೪ ರಂದು ತಿಲಕರನ್ನು ಬ್ರಟಿಷರು ಬಂಧಿಸುತ್ತಾರೆ.ತನ್ನ ಮೇಲಿರುವ ಆರೋಪವನ್ನು ನಿರಾಕರಿಸುತ್ತಾ ನಾಲ್ಕು ದಿನಗಳು, ಒಟ್ಟು ಇಪ್ಪತ್ತೊಂದೂವರೆ ಗಂಟೆಗಳ ಕಾಲ ತಿಲಕ್‌ ಕೋರ್ಟಿನಲ್ಲಿ ವಾದಿಸಿದರಾದರೂ, ತಿಲಕರನ್ನು ಅಪರಾಧಿ ಎಂದು ಕೋರ್ಟ್‌ ಘೋಷಿಸಿತು. ಅರುವರ್ಷಗಳ ಸಾಮಾನ್ಯ ಸಜೆ ವಿಧಿಸಿದ ಕೋರ್ಟ್‌ ಅವರನ್ನು ಬರ್ಮಾದ ಮಂಡಾಲೆ ಜೈಲಿಗೆ ಕಳುಹಿಸಿತು. ಇದರ ಭಾಗವಾಗಿ ಆರು ದಿನಗಳ ಕಾಲ ನಡೆದ ಪ್ರತಿಭಟನೆಗಳು ಪುಣೆ ಮತ್ತು ಬಾಂಬೆ ನಗರಗಳನ್ನು ನಡುಗಿಸಿತು. ಅದರ ಜೊತೆಗೆ ದೇಶವ್ಯಾಪಿ ಪ್ರತಿಭಟನೆಗಳು ಹಲವು ಕಡೆಗಳಲ್ಲಿ ನಡೆದವು. ತಿಲಕರ ಬ್ರಾಹ್ಮಣ ರಾಜಕಾರಣಕ್ಕೆ ರಾಷ್ಟ್ರೀಯ ಮುಖವೊಂದು ಆ ಮೂಲಕ ದೊರಕಿತು. ಅದೇ ಹೊತ್ತು ತಿಲಕರ ಅನುಪಸ್ಥಿತಿ ಡೆಕ್ಕನ್‌ ಪ್ರಾಂತ್ಯದ ನವಸಂಪ್ರದಾಯವಾದಿ ರಾಜಕೀಯ ಚಟುವಟಿಕೆಗಳನ್ನು ಮತ್ತು ಬ್ರಿಟಿಷ್‌ ವಿರೋಧಿ ಹೋರಾಟಗಳನ್ನು ಕುಗ್ಗಿಸಿತು. ಪುಣೆಯ ರಾಷ್ಟ್ರಮತ್ ಪತ್ರಿಕೆ ʼತಿಲಕರಂತಹ ಉನ್ನತ ವ್ಯಕ್ತಿಯ ಗಡೀಪಾರು ನಾಡನ್ನು ನಿರಾಶೆಯಲ್ಲಿ ಮುಳುಗಿಸಿತು ಮತ್ತು ಉಳಿದ ನಾಯಕರ ನರವನ್ನು ಬಲಹೀನಗೊಳಿಸಿತುʼ ಎಂದು ಬರೆಯಿತು.

ಆದರೆ ತಿಲಕ್‌ ಬಿತ್ತಿದ ಬೀಜದ ಫಲವನ್ನು ಉಣ್ಣಲಿದ್ದೇವೆ ಎಂಬುದು ಬಹಳ ಬೇಗನೇ ಸ್ಪಷ್ಟವಾಯಿತು. ಅದನ್ನು ನೋಡುವ ಮೊದಲು ಗಣೇಶೋತ್ಸವ ಮತ್ತು ಶಿವಾಜಿ ಉತ್ಸವಗಳು ಮುಗಿಲು ಮುಟ್ಟಿದ್ದ ಬಾಂಬೆ ಪ್ರೆಸಿಡೆನ್ಸಿಯಲ್ಲಿ ೧೮೮೩ ಮಾರ್ಚ್‌ ೨೮ ರಂದು ಹುಟ್ಟಿದ ಒಬ್ಬ ವ್ಯಕ್ತಿಯನ್ನು ಒಮ್ಮೆ ಭೇಟಿಯಾಗೋಣ. ನಾಸಿಕ್‌ ಜಿಲ್ಲೆಯ ಭಾಗೂರಿನಲ್ಲಿ ದಾಮೋದರ್‌ ಪಂತ್‌ ಮತ್ತು ರಾಧಾಬಾಯಿಯ ಎರಡನೇ ಮಗನಾಗಿ ಒಂದು ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ವಿನಾಯಕ್‌ ದಾಮೋದರ್‌ ಸಾವರ್ಕರ್‌ ಹುಟ್ಟಿದ.

ವಿನಾಯಕ್‌ ದಾಮೋದರ್‌ ಸಾವರ್ಕರ್‌ ಬರೆದ ತನ್ನ ಆತ್ಮಕತೆಯಲ್ಲಿ ಆತನ ಬಾಲ್ಯವನ್ನು ಪ್ರಭಾವಿಸಿದ ಘಟನೆಗಳ ಕುರಿತಾದ ವಿವರಗಳಿವೆ. ಚಿತ್ಪಾವನರ ನಡುವೆ ಪ್ರಗತಿಪರವಾದ ಪುನರುಜ್ಜೀವನವನ್ನು ಪ್ರಚುರಪಡಿಸಲು ಶ್ರಮಿಸುತ್ತಿದ್ದ ಗುಂಪನ್ನು ಎದುರಿಸಿ ಸೋಲಿಸಿ, ಸಂಪ್ರದಾಯವಾದಿ ಬ್ರಾಹ್ಮಣ್ಯವನ್ನು ಸಮಕಾಲೀನಗೊಳಿಸಿ ಸಮಾಜದಲ್ಲಿ ಮರಳಿ ತರಲು ಅವಿಶ್ರಾಂತ ಶ್ರಮಿಸಿದ ವಿಷ್ಣುಶಾಸ್ತ್ರಿ ಕೃಷ್ಣಶಾಸ್ತ್ರಿ ಚಿಪ್ಲುಂಕರ್‌ ಬರೆದ ನಿಬಂಧಮಾಲ ಬಾಲಕನಾಗಿದ್ದ ಸಾವರ್ಕರ್‌ನನ್ನು ಆಕರ್ಷಿಸಿದ ಪುಸ್ತಕಗಳಲ್ಲೊಂದಾಗಿತ್ತು. ಹನ್ನೊಂದನೇ ವಯಸ್ಸಿನಲ್ಲಿ ಲೇಖನಗಳನ್ನು ಬರೆಯಲು ಶುರುಮಾಡಿದಾಗ ಆ ಬಾಲಕ ಅನುಸರಿಸಿದ ಶೈಲಿಯೂ ಚಿಪ್ಲುಂಕರ್‌ ಶೈಲಿಯಾಗಿತ್ತು. ಆ ಕಾಲದಲ್ಲಿಯೇ ಸಾವರ್ಕರ್‌ ಕವಿತೆಗಳನ್ನೂ ಬರೆಯತೊಡಗಿದ್ದ. ತನ್ನ ಮನೆದೇವರಾಗಿದ್ದ ಅಷ್ಟಭುಜ ಭವಾನಿಯನ್ನು ಪ್ರಾರ್ಥಿಸುವುದು ಆತನ ಇಷ್ಟದ ಹವ್ಯಾಸವಾಗಿತ್ತು.

ಮನೆಯಲ್ಲಿ ದೊರೆತ ಬ್ರಾಹ್ಮಣ ಪರಂಪರೆಯನ್ನು ಮನೆಯಿಂದಾಚೆ ಪೂರ್ತಿಗೊಳಿಸಿದ್ದು ತಿಲಕರ ನವಸಂಪ್ರದಾಯವಾದಿ ಬ್ರಾಹ್ಮಣ್ಯದೊಂದಿಗೆ ಸಮೀಕರಿಸಿಕೊಂಡಾಗಿತ್ತು. ೧೮೫೭ರ ಮೊದಲನೇ ಸ್ವಾತಂತ್ರ್ಯ ಸಮರದ ನಂತರ ಬ್ರಿಟಿಷರೊಂದಿಗೆ ಯುದ್ಧದ ಮೂಲಕ ಬ್ರಾಹ್ಮಣ ಸಾಮ್ರಾಜ್ಯ ಪುನರ್‌ ಸ್ಥಾಪನೆಯ ಕನಸು ಕಟ್ಟಿದ್ದ ಫಾಡ್ಕೆ ಆಹಾರ ತ್ಯಜಿಸಿ ಸಾವಿಗೆ ಶರಣಾದದ್ದು ಸಾವರ್ಕರ್‌ ಜನನಕ್ಕಿಂತ ಸ್ವಲ್ಪವೇ ಕಾಲ ಮೊದಲಾಗಿತ್ತು. ಆರ್ಯಸಮಾಜದ ಮೂಲಕ ಹಿಂದೂ ಪುನರುಜ್ಜೀವನಕ್ಕೆ ನೇತೃತ್ವ ನೀಡಿದ್ದ ದಯಾನಂದ ಸರಸ್ವತಿ ಆ ವರ್ಷವೇ ಮರಣ ಹೊಂದಿದ್ದರು. ಕೇಸರಿ ಮತ್ತು ಪೂನಾ ವೈಭವ್‌ ತರಹದ ಪತ್ರಿಕೆಗಳು ಬಾಂಬೆ ಪ್ರೆಸಿಡೆನ್ಸಿ ಮತ್ತು ಅದರಾಚೆ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಸಂಘರ್ಷಗಳ ಹಿಂದೂಪರ ವಾದವನ್ನು ಅತಿತೀವ್ರವಾಗಿ ಪ್ರಚಾರ ಪಡಿಸುತ್ತಿದ್ದವು. ಹಿಂದೂಗಳ ಒಗ್ಗಟ್ಟಿಗಾಗಿ ಅವು ನಿರಂತರ ಆಹ್ವಾನ ನೀಡುತ್ತಿದ್ದವು.

ಬಾಲಕನಾಗಿದ್ದಾಗ ಸಾವರ್ಕರ್‌ ನಡೆಸಿದ ಮೊದಲ ರಾಜಕೀಯ ಪ್ರಯೋಗ ಚಿತ್ಪಾವನರ ನವಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಭಾಗವಾಗಿಯೇ ಆಗಿತ್ತು. ೧೮೯೩ ಜುಲೈ – ಆಗಸ್ಟ್‌ ತಿಂಗಳುಗಳಲ್ಲಿ ಮೊದಲು ಜುನಗಡ್‌ ಮತ್ತು ನಂತರ ಬಾಂಬೆಯಲ್ಲಿ ಹಿಂದೂ–ಮುಸ್ಲಿಂ ಗಲಭೆಗಳು ನಡೆದಾಗ ತಿಲಕ್‌ ಹಿಂದೂಗಳ ಪರವಾಗಿ ಗಟ್ಟಿಯಾಗಿ ನಿಂತುಕೊಂಡರು. ಹಿಂದೂಗಳ ರಕ್ಷಣೆ ದೇಶದ ರಕ್ಷಣೆ ಎಂಬ ತಿಲಕರ ನಿಲುವನ್ನು ಸಾವರ್ಕರ್ ತನ್ನದಾಗಿಸಿಕೊಂಡಿದ್ದ ಎಂಬುದನ್ನು ಈ ಘಟನೆ ಸ್ಪಷ್ಟಪಡಿಸುತ್ತದೆ. ೧೮೯೪-೯೫ರಲ್ಲಿ ಈ ಗಲಭೆ ನಾಸಿಕ್ ಜಿಲ್ಲೆಗೂ ಹಬ್ಬುತ್ತದೆ. ಆ ಸಮಯದಲ್ಲಿ ಹನ್ನೊಂದರ ಬಾಲಕ ಸಾವರ್ಕರ್ ಹತ್ತು ಹನ್ನೆರಡು ಹುಡುಗರನ್ನು ಸೇರಿಸಿಕೊಂಡು ಭಾಗೂರಿನಲ್ಲಿ ಮುಚ್ಚಿದ್ದ ಮಸೀದಿಯೊಂದರ ಮೇಲೆ ದಾಳಿ ಮಾಡುತ್ತಾನೆ. ಆ ಮೂಲಕ ಹಿಂದೂಗಳ ಮೇಲಿನ ಮುಸ್ಲಿಮರ ಆಕ್ರಮಣಕ್ಕೆ ಪ್ರತಿಕಾರ ತೀರಿಸಲು ಹಿಂದೂ ಪುಟಾಣಿ ಸೇನೆ ಪ್ರಯತ್ನಿಸಿತ್ತು. ರಾತ್ರಿ ವೇಳೆ, ಆರಾಧನೆಗಳೇನೂ ನಡೆಯದಿದ್ದ ಮಸೀದಿ ಅಂಗಳದೊಳಗೆ ನುಗ್ಗಿ ತಾನು ಮತ್ತು ಸಂಗಡಿಗರು ಆ ಕಟ್ಟಡಕ್ಕೆ ಹಾನಿ ಮಾಡಿದೆವು ಎಂದು ಸಾವರ್ಕರ್‌ ನೆನೆಯುತ್ತಾನೆ.ಸಾವರ್ಕರ್‌ ಕಲಿಯುತ್ತಿದ್ದ ಶಾಲೆಯ ಎದುರಿನಲ್ಲಿದ್ದ ಉರ್ದು ಶಾಲೆಯ ಕೆಲ ಮುಸ್ಲಿಂ ಮಕ್ಕಳು ಈ ಪುಂಡಾಟಿಕೆಯನ್ನು ಗುರುತಿಸುತ್ತಾರೆ ಮತ್ತು ಅದು ಸಾವರ್ಕರ್‌ ಮತ್ತಾತನ ಸಹಪಾಠಿಗಳು ಮಾಡಿರುವುದಾಗಿಯೂ ಕಂಡುಹಿಡಿಯುತ್ತಾರೆ. ಅದರ ಮುಂದುವರಿಕೆಯಾಗಿ ಇತ್ತಂಡಗಳ ನಡುವೆ ಹೊಡೆದಾಟವೂ ನಡೆಯುತ್ತದೆ. ಈ ʼಯುದ್ಧʼದಲ್ಲಿ ಭಾಗವಹಿಸಲು ಸಾವರ್ಕರ್‌ ತನ್ನ ಸಹಪಾಠಿಗಳಿಗೆ ದೈಹಿಕ ತರಬೇತಿಯನ್ನು ನೀಡಿದ. ಹಿಂದೂ ಮಕ್ಕಳ ತಂಡವನ್ನು ಎರಡಾಗಿ ವಿಭಜಿಸಿ ಒಂದು ತಂಡವನ್ನು ಮುಸ್ಲಿಮರಾಗಿಯೂ ಇನ್ನೊಂದು ತಂಡವನ್ನು ಹಿಂದೂಗಳಾಗಿಯೂ ಕಲ್ಪಿಸಿಕೊಂಡು ಹೊಡೆದಾಡುವುದು ಈ ತರಬೇತಿಯ ರೀತಿಯಾಗಿತ್ತು. ಹಾಗೆ ದೈಹಿಕ ಸಾಮರ್ಥ್ಯವೆಂಬುವುದು ಬ್ರಾಹ್ಮಣ ರಾಜಕಾರಣದ ಅವಿಭಾಜ್ಯ ಅಂಗವಾಗಿ ಸಾವರ್ಕರ್‌ ಕೂಡ ಮುಂದಿಟ್ಟಿದ್ದ. ಫಾಡ್ಕೆಯ ಸಂಘ ಮತ್ತು ತಿಲಕರ ಜಿಮ್ನಾಸ್ಟಿಕ್‌ ಸೊಸೈಟಿಗಳು ಮಾಡಿದ ಹಾಗೆಯೇ. ನಂತರ ಸಾವರ್ಕರನ ಹಿಂದೂ ತಂಡ ಮತ್ತು ಉರ್ದೂ ಶಾಲೆಯ ಮುಸ್ಲಿಂ ತಂಡಗಳು ಪರಸ್ಪರ ರಾಜಿಯಾಗುವುದರ ಮೂಲಕ ಘಟನೆಯನ್ನು ಅಧ್ಯಾಪಕರ ಗಮನಕ್ಕೆ ಬಾರದ ಹಾಗೆ ನೋಡಿಕೊಂಡರು. ಚಿತ್ಪಾವನ ರಾಜ್ಯನಷ್ಟದಿಂದ ಉದಿಸಿ ಬಂದ ನವಸಂಪ್ರದಾಯವಾದಿ ಬ್ರಾಹ್ಮಣ ರಾಜಕಾರಣದ ಒಂದು ಅತಿಮುಖ್ಯ ಘಟಕವಾಗಿ ಮುಸ್ಲಿಂ ವಿರೋಧಿ ನೀತಿಯನ್ನು ತನ್ನ ಎಳೆ ಪ್ರಾಯದಲ್ಲಿಯೇ ಸಾವರ್ಕರ್‌ ಮೈಗೂಡಿಸಿಕೊಂಡಿದ್ದಕ್ಕೆ ಇದು ಸಾಕ್ಷಿಯಾಗಿ ನಿಲ್ಲುತ್ತದೆ. ಅದರ ಜೊತೆಗೆ ನಂತರದ ಕಾಲದಲ್ಲಿ ವಿ.ಡಿ. ಸಾವರ್ಕರ್‌ ತುಪ್ಪ ಸುರಿದು ಉರಿಸಿದ ರಾಜಕೀಯ ಸಿದ್ಧಾಂತದ ಅತ್ಯಂತ ಪ್ರಮುಖ ಅಂಶವೂ ಮುಸ್ಲಿಂ ವಿರೋಧವೇ ಆಗಿತ್ತು.

ಮಸ್ಲಿಂ ಹುಡುಗರೊಂದಿಗಿನ ಜಗಳ ತಾತ್ಕಾಲಿಕವಾಗಿ ಮುಗಿಯಿತಾದರೂ ಹಿಂದೂ ಸಂಘಟನೆ ಎಂಬ ಆಶಯವನ್ನು ಸಾವರ್ಕರ್‌ ಮುಂದುವರಿಸಿದ. ಹಿಂದೂಗಳನ್ನು ಸಂಘಟಿಸಿ ಸಣ್ಣ ಸಣ್ಣ ಗುಂಪುಗಳನ್ನಾಗಿ ಮಾಡಿ ಮುಸ್ಲಿಮರು, ಬ್ರಿಟಿಷರು ಮತ್ತು ಹಿಂದೂಗಳೆಂದು ವೇಷ ಹಾಕಿಸಿ ದೈಹಿಕ ತಾಲೀಮನ್ನು, ಸೇನಾ ಶಿಬಿರಗಳ ಸ್ಥೂಲರೂಪವನ್ನು ಸಾವರ್ಕರ್‌ ಮುಂದುವರಿಸಿದ. ಗುಂಡುಗಳಿಗೆ ಬದಲಾಗಿ ಬೇವಿನ ಕಾಯಿಗಳನ್ನು ಬಳಸಿಕೊಂಡು ತರಬೇತಿ ನಡೆಯುತ್ತಿತ್ತು ಎಂದು ಸಾವರ್ಕರನ ನೆನಪಿನ ಪುಸ್ತಕ ಹೇಳುತ್ತದೆ. ಆಟದ ಮೈದಾನದ ನಟ್ಟನಡುವೆ ಸ್ಥಾಪಿಸಿದ್ದ ಭಗವಾದ್ವಜ, ಹಿಂದೂಗಳ ಕಾವಿ ಬಾವುಟವನ್ನು, ಬೇವಿನಕಾಯಿ ಗುಂಡುಗಳಿಗೆ ಹೆದರದೆ ಎತ್ತಿಕೊಂಡು, ಶತ್ರುಗಳ ತುಪಾಕಿಗಳನ್ನು ಕೊಳ್ಳೆ ಹೊಡೆದುಕೊಂಡು ಬರುವವರನ್ನು ವಿಜಯಿಗಳೆಂದು ಘೋಷಿಸಲಾಗುತ್ತಿತ್ತು. ʼಮುಸ್ಲಿಮರುʼ ಅಥವಾ ʼಬ್ರಿಟಿಷರುʼ ಜಯಗಳಿಸಿದರೆ ಅವರಿಗೆ ʼಬೃಹತ್ತಾದ ರಾಷ್ಟ್ರೀಯತೆʼಯ ಮಹತ್ವವನ್ನು ವಿವರಿಸಿ ಅವರಿಂದ ಸೋಲು ಒಪ್ಪಿಕೊಳ್ಳುವಂತೆ ಮಾಡಲಾಗುತ್ತಿತ್ತು. ಇದೊಂದು ಆಟದ ರೂಪದಲ್ಲಿತ್ತಾದರೂ ಬ್ರಾಹ್ಮಣ ರಾಜಕಾರಣಕ್ಕೆ ಚೂರೇ ಚೂರು ನೀರು ಬೆರೆಸಿರಲಿಲ್ಲವೆಂದು ಸಾವರ್ಕರನ ಈ ಘಟನೆಗಳ ವಿವರಣೆಯಿಂದ ನಮಗೆ ಸಿಗುವ ಚಿತ್ರ. ಭಾಗೂರಿನ ಬೀದಿಗಳಲ್ಲಿ ʼಹಿಂದೂ ವಿಜಯʼ ಆಚರಿಸಿಕೊಂಡು ಮಕ್ಕಳೆಲ್ಲ ಸೇರಿ ನಡೆಸುವ ಮೆರವಣಿಗೆಯೊಂದಿಗೆ ಈ ಆಟದ ಚಟುವಟಿಕೆಗಳು ಮುಕ್ತಾಯವಾಗುತ್ತಿದ್ದವು.

೧೮೯೬ ರಲ್ಲಿ ತಿಲಕರ ನೇತೃತ್ವದಲ್ಲಿ ಶಿವಾಜಿ ಉತ್ಸವ ಶುರು ಮಾಡಿದಾಗ ಚಿತ್ಪಾವನ ಸಮಾಜದ ಪ್ರಗತಿಪರವಾದಿಗಳಾದ ಗಣೇಶ್‌ ಅಗರ್ಕರ್‌ ಮತ್ತು ಸಂಗಡಿಗರು ಅದನ್ನು ವಿರೋಧಿಸಿದ್ದರು. ೧೮೯೫ ರಲ್ಲಿ ಅಗರ್ಕರ್ ಮರಣದ ನಂತರ ಸುಧಾರಕ್‌ ಪತ್ರಿಕೆಯ ಸಂಪಾದಕತ್ವವನ್ನು ಸೀತಾರಾಮ್‌ ಪಂತ್‌ ದೇವ್‌ಧರ್‌ ಹೊತ್ತುಕೊಂಡಿದ್ದರು. ಶಿವಾಜಿ ಉತ್ಸವವನ್ನು ಟೀಕಿಸುತ್ತಾ ಸುಧಾರಕ್‌ ಹೀಗೆ ಬರೆಯಿತು:

ʼಮುಹಮ್ಮದೀಯರಿಗೋ, ಬಂಗಾಳಿಗಳಿಗೋ ಅಥವಾ ರಜಪೂತರಿಗೋ ಶಿವಾಜಿಯನ್ನು ಸ್ಮರಿಸಬೇಕಾದ ಅನಿವಾರ್ಯತೆ ಏನಿದೆ? ಹಿಂದೂಗಳ ನಡುವೆಯೇ ರಾಷ್ಟ್ರೀಯಗೊಳಿಸಬಹುದಾದ ಏನೊಂದೂ ಇಲ್ಲ.ʼ ಮರಾಠ ಪ್ರಾಂತ್ಯದ ಒಬ್ಬ ರಾಜನನ್ನು, ಅದರಲ್ಲೂ ಜಾತಿ ಧರ್ಮಗಳಾಚೆಗೆ ರಾಷ್ಟ್ರೀಯ ಏಕತೆಯನ್ನು ಎತ್ತಿಹಿಡಿಯಬೇಕಾಗಿದ್ದ ಕಾಲದಲ್ಲಿ ಇಂತಹದ್ದೊಂದು ರಾಜಕೀಯವನ್ನು ಅಸಹಜವಾಗಿ ಸುಧಾರಕ್‌ ಕಂಡಿತು. ಆದರೆ, ಈ ವಿವಾದದಲ್ಲಿ ತಿಲಕ್‌ ಗಟ್ಟಿಯಾಗಿ ಮಧ್ಯಪ್ರವೇಶ ಮಾಡಿದಾಗ, ವಿರೋಧಿ ದನಿಗಳು ಅದೆಷ್ಟೇ ವಿವೇಕಯುತವಾಗಿದ್ದರೂ ಅದು ಅಡಗಿತು. ಸಾವರ್ಕರ್ ಗುಂಪು ಆ ಕಾಲಕ್ಕಾಗುವಾಗಲೇ ತಿಲಕರಿಂದ ಅಷ್ಟೊಂದು ಪ್ರಭಾವಿತರಾಗಿದ್ದರು. ಭಾಗೂರಿನಿಲ್ಲಿ ಸಾವರ್ಕರು ಮತ್ತು ಸಂಗಡಿಗರು ಶಿವಾಜಿ ಉತ್ಸವ ಆಚರಿಸಿದರು.

ಪ್ರೈಮರಿ ವಿದ್ಯಾಭ್ಯಾಸ ಪೂರ್ತಿಗೊಳಿಸಿದ ನಂತರ ಅಣ್ಣ ಗಣೇಶ್‌ ದಾಮೋದರ್‌ ಸಾವರ್ಕರ್‌ ಕಲಿಯುತ್ತಿದ್ದ ನಾಸಿಕ್‌ ಶಿವಾಜಿ ಸ್ಕೂಲಿಗೆ ವಿನಾಯಕ್ ಸೇರಿದ. ಅಲ್ಲಿಂದಲೇ ಆತನ ಕವಿತೆ ಮತ್ತು ಲೇಖನಗಳು ವಿಕಸನಗೊಂಡವು. ಬ್ರಾಹ್ಮಣರಿಂದ ನಡೆಸಲ್ಪಡುತ್ತಿದ್ದ ನಾಸಿಕ್‌ ವೈಭವ್‌ ಪತ್ರಿಕೆಯಲ್ಲಿ ʼಹಿಂದೂ ಸಂಸ್ಕೃತಿ ಮತ್ತು ಅದರ ವೈಭವʼವನ್ನು ಕುರಿತ, ಹೈಸ್ಕೂಲ್‌ ವಿದ್ಯಾರ್ಥಿ ವಿನಾಯಕನ ಲೇಖನ ಎರಡು ಸಂಚಿಕೆಗಳಲ್ಲಿ ಪ್ರಕಟವಾಯಿತು.೧೨ ತಿಲಕರ ನಿಲುವುಗಳ ಧ್ವನಿವರ್ಧಕವಾಗಿತ್ತೆಂದು ನಿಸ್ಸಂಶಯವಾಗಿ ಹೇಳಬಹುದಾದ ಲೋಕಸೇವಾ ಪತ್ರಿಕೆ ಮತ್ತು ಅದರ ಸಂಪಾದಕರಾಗಿದ್ದ ಅನಂತ ವಾಮನ ಬರ್ವೇ ಸಾವರ್ಕರನ್ನು ಪ್ರೋತ್ಸಾಹಿಸಿದರು. ನಾಸಿಕಲ್ಲಿ ಹೈಸ್ಕೂಲ್‌ ವಿದ್ಯಾರ್ಥಿ ಎಂಬ ನೆಲೆಯಲ್ಲಿ ವಿನಾಯಕ್‌ ದಾಮೋದರ್‌ ಸಾವರ್ಕರನ ಬದುಕು ಸಾರ್ವಜನಿಕ ಬದುಕಿನ ಮುನ್ನುಡಿಯಾಗಿತ್ತು. ತಿಲಕ್‌ ಗಡಿರೇಖೆ ಗುರುತಿಸಿದ್ದ ಸಾಂಸ್ಕೃತಿಕ ಭೂಮಿಕೆಯಲ್ಲಿ ಅದು ನಡೆದಿತ್ತು. ಅದಕ್ಕೆ ಪೌರೋಹಿತ್ಯ ವಹಿಸಿದವರು ತಿಲಕ್‌ ಅನುಯಾಯಿಗಳಾಗಿದ್ದ ಚಿತ್ಪಾವನ ಬ್ರಾಹ್ಮಣರು. ತಿಲಕರ ವಿಷಯದಲ್ಲಿ ನಾವು ಗಮನಿಸಿದ ಹಾಗೆಯೇ, ವಿನಾಯಕನ ಬರಹಗಳೂ ಬ್ರಾಹ್ಮಣರೊಂದಿಗೆ, ಅದರಲ್ಲೂ ಚಿತ್ಪಾವನ ಬ್ರಾಹ್ಮಣರೊಂದಿಗೆ ಸಂವಾದಿಸುತ್ತಿತ್ತು. ಅದೇ ಹೊತ್ತು ಅದರ ವಿಶಾಲವ್ಯಾಪ್ತಿ ಹಿಂದೂ ಧರ್ಮದ ವ್ಯಾಪ್ತಿಯೇ ಆಗಿತ್ತು.

ಈ ನಡುವೆಯೇ ಚಿತ್ಪಾವನ ಬ್ರಾಹ್ಮಣ ಕುಲವನ್ನೂ ಮತ್ತು ಅವರ ನೇತೃತ್ವದಲ್ಲಿ ಸಂಘಟಿಸಲ್ಪಟ್ಟಿದ್ದ ನವಸಂಪ್ರದಾಯವಾದಿ ಬ್ರಾಹ್ಮಣಿಸ್ಟ್‌ ಚಳುವಳಿಗಳನ್ನೂ ಹಿಡಿದು ಅಲ್ಲಾಡಿಸಿದ ರಾನ್ಡ್‌ ಮತ್ತು ಅಯರ್ಸ್ಟ್‌ ಅವರ ಕೊಲೆಗಳು ನಡೆಯುವುದು. ಮತ್ತು ಅದರ ಮುಂದುವರಿಕೆಯಾಗಿ ಚಾಪೇಕರ್‌ ಸಹೋದರರು ಗಲ್ಲಿಗೇರುವುದು. ತಿಲಕ್‌ ಅವರನ್ನೂ ಒಳಗೊಂಡಂತೆ ನವಸಂಪ್ರದಾಯವಾದಿ ಬ್ರಾಹ್ಮಣವಾದಿಗಳಿಗೆ ನೇರವಾಗಿ ಈ ಘಟನೆಯನ್ನು ಬೆಂಬಲಿಸಲು ಸಾಧ್ಯವಾಗಿರಲಿಲ್ಲವೆಂದು ನಾವು ನೋಡಿದೆವು. ಹಾಗೆಯೇ ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿ ಅಂದು ದೊಡ್ಡ ಮಟ್ಟದ ಪಾತ್ರ ವಹಿಸಿದ್ದ ಪತ್ರಿಕೆಗಳಿಗೂ ಚಾಪೇಕರ್‌ ಸಹೋದರರನ್ನು ಬೆಂಬಲಿಸಲು ಸಾಧ್ಯವಾಗದ ಪರಿಸ್ಥಿತಿಯಿತ್ತು.

ಆದರೆ ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದ ವಿನಾಯಕನಿಗೆ ಚಾಪೇಕರರು ಧೀರನಾಯಕರಾಗಿದ್ದರು. ಅವರ ದುರಂತ ಸಾವಿನ ಕಾರಣದಿಂದ ಬಹಳ ದಿನಗಳ ಕಾಲ ಆತನ ನಿದ್ದೆ ಕೆಟ್ಟಿತು. ಸಹಿಸಲಾಗದೆ ಕೊನೆಗೆ ಭಾಗೂರಿನ ತನ್ನ ಕುಟುಂಬದ ಮನೆಯ ಅಷ್ಟಭುಜ ಭವಾನಿಯ ವಿಗ್ರಹದ ಎದುರು ಒಂದು ಪ್ರತಿಜ್ಞೆ ಕೈಗೊಳ್ಳುತ್ತಾನೆ. ಮಾತೃಭೂಮಿಯನ್ನು ಸಶಸ್ತ್ರ ಹೋರಾಟದ ಮೂಲಕ ವಿಮೋಚನೆಗೊಳಿಸುತ್ತೇನೆ ಎಂಬುದು ಆ ಪ್ರತಿಜ್ಞೆಯ ಸಾರಾಂಶ. ʼಶತ್ರು ಮಾರ್ತ ಮಾರ್ತ ಮಾರೇತೋ ಜುನ್‌ಜುನ್‌ʼ (ನಾನು ಶತ್ರುವಿನ ವಿರುದ್ಧ ಹೋರಾಡುತ್ತೇನೆ, ಕೊನೆಯ ಉಸಿರಿನ ತನಕ ಅವರನ್ನು ಕತ್ತರಿಸಿ ಹಾಕುತ್ತೇನೆ) ಎಬುದು ಆ ಪ್ರತಿಜ್ಞೆಯೆಂದು ತನ್ನ ಆತ್ಮಕತೆಯಲ್ಲಿ ಸಾವರ್ಕರ್‌ ಬರೆದುಕೊಂಡಿದ್ದಾನೆ.೧೩ ಅಷ್ಟೇ ಅಲ್ಲದೆ ವೀರ್‌ಶ್ರೀಯುಕ್ತ ಎಂಬ ಹೆಸರಿನಲ್ಲಿ ಚಾಪೇಕರ್‌ ಸಹೋದರರ ಕುರಿತು ಒಂದು ನಾಟಕವನ್ನು ಮತ್ತು ಚಾಪೇಕರ್‌ ಸಹೋದರರು ಮತ್ತು ಫಾಡ್ಕೆಯನ್ನು ಸೇರಿಸಿಕೊಂಡು ಚಾಪೇಕರಂಚ ಫಾಡ್ಕೇ ಎಂಬ ಕವಿತೆಯನ್ನೂ ಸಾವರ್ಕರ್‌ ಬರೆದ.

ತಿಲಕ್‌ ಕೂಡ ತಟಸ್ತರಾಗಿದ್ದ ಕಡೆ ಕಾಲ್‌ ಎಂಬ ಮರಾಠಿ ಪತ್ರಿಕೆ ಚಾಪೇಕರ್‌ ಸಹೋದರರನ್ನು ಬೆಂಬಲಿಸಿಕೊಂಡು ರಂಗಪ್ರವೇಶ ಮಾಡುವುದನ್ನು ನಾವು ಗಮನಿಸಿದೆವು. ತಿಲಕ್‌ ಕನಸು ಕಂಡಿದ್ದ ನವಸಂಪ್ರದಾಯವಾದಿ ಬ್ರಾಹ್ಮಣ್ಯದ ನಿಜವಾದ ಮುಖವಾಣಿಯಾಗಿ ಕಾಲ್‌ ಮತ್ತು ಆರಾಧ್ಯ ವ್ಯಕ್ತಿಯಾಗಿ ಅದರ ಸಂಪಾದಕ ಪರಂಜಪೆಯನ್ನು ಸಾವರ್ಕರ್‌ ಸ್ವೀಕರಿಸಲು ತೊಡಗಿದ.

ಮೂಲ ಮಲಯಾಳಂ: ಪಿ. ಎನ್‌. ಗೋಪಿಕೃಷ್ಣನ್‌

ಕನ್ನಡಕ್ಕೆ: ಸುನೈಫ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page