Wednesday, June 19, 2024

ಸತ್ಯ | ನ್ಯಾಯ |ಧರ್ಮ

ಅವಿವೇಕಿಗಳ‌ ಗದ್ದಲದಲ್ಲಿ ವಿವೇಕಿ ವಿವೇಕಾನಂದರನ್ನು ಸ್ಮರಿಸುತ್ತಾ…..

“ಮೊದಲು ನಿಮ್ಮ‌ಮೇಲೆ ನಂಬಿಕೆಯಿರಲಿ. ಅನಂತರ ದೇವರ ಮೇಲೆ. ಬೆರಳೆಣಿಕೆಯಷ್ಟು  ಶಕ್ತಿಶಾಲಿ  ಜನರು ಜಗತ್ತನ್ನೇ ಅಲುಗಾಡಿಸಬಲ್ಲರು. ನಮಗೆ  ಪರಿಭಾವಿಸುವ, ಆಲೋಚಿಸುವ ಜೀವಂತ ಮೆದುಳು ಬೇಕಿದೆ.  ಕೆಲಸ ಮಾಡುವ  ಬಲಿಷ್ಠ ಕೈಗಳು ಬೇಕಾಗಿವೆ”.

   “ತ್ಯಾಗ ಮಾಡಿ! ತ್ಯಾಗ ಮಾಡಿ! ನಿಮ್ಮ ದಿವ್ಯ ಸ್ವರೂಪವನ್ನು ತಿಳಿಯಿರಿ! ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ!”

ಈ ಮೇಲಿನ‌    ಮಾತುಗಳನ್ನು ವಿವೇಕಾನಂದರ ವಾಣಿ ಎಂದೇ  ಕರೆಯಲಾಗುತ್ತದೆ.  ವಿಶ್ವಮಾನವ ಎಂದೇ  ಕರೆಸಿಕೊಂಡ ವಿವೇಕಾನಂದ  ಭಾರತದ  ಅಧ್ಯಾತ್ಮಿಕತೆ, ಧರ್ಮ,  ಸಂಸ್ಕೃತಿಗಳ  ನಡೆ ನುಡಿಯನ್ನು ಬಲ್ಲವರು. ವಿವೇಕಾನಂದರ  ಚಿಂತನೆಗಳನ್ನು ಕೇವಲ ಭಾರತದ ದಾರ್ಶನಿಕತೆಯಲ್ಲಿ  ಮಾತ್ರ ನೋಡುವಂತಿಲ್ಲ. ಅವರು ಪಾಶ್ಚಿಮಾತ್ಯರ ಧರ್ಮ ಹಾಗೂ ಧರ್ಮದ ಕಾಣಿಕೆಗಳನ್ನು ಸಹ ಬಲ್ಲವರಾಗಿದ್ದರು.

ಭಾರತದಲ್ಲಿ  ದೇವರು, ಧರ್ಮ, ಜಾತಿ ವ್ಯವಸ್ಥೆ  ಉಂಟು ಮಾಡಿರುವ  ಗುಲಾಮೀತನವನ್ನು ಕುರಿತು ಅಪಾರವಾದ ಅಧ್ಯಯನದಿಂದ  ಮಾತನಾಡಬಲ್ಲ ನಮ್ಮ ದೇಶದ ಇಬ್ಬರೇ ಇಬ್ಬರು ವಿದ್ವಾಂಸರೆಂದರೆ  ವೀವೇಕಾನಂದ  ಮತ್ತು  ಡಾ. ಬಿ. ಆರ್. ಅಂಬೇಡ್ಕರ್ ಮಾತ್ರ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ವಿವೇಕಾನಂದ ಜನ್ಮ‌ತಳೆಯುವ ಸಂದರ್ಭದಲ್ಲಿ ಬಂಗಾಳ ಸತತವಾಗಿ  ಹಲವು ಅವಸ್ಥಾಂತರಗಳಿಗೆ ಒಳಗಾಗುತ್ತಿತ್ತು. ಮೊಗಲ್  ಸಾಮ್ರಾಜ್ಯ ಅವನತಿಗೊಂಡು ಬ್ರಿಟಿಷ್ ಆಳ್ವಿಕೆಯ   ಕಾಲಘಟ್ಟದಲ್ಲಿ  ಬಿಡುಗಡೆ ಹಾಗೂ ಸರ್ವಾಂಗೀಣ ಪ್ರಗತಿಗಾಗಿ  ಬಯಸುತ್ತಿದ್ದ ಕಾಲಘಟ್ಟವದು. ಈ ಬಿಡುಗಡೆಯ,  ಪುನರುತ್ಥಾನದ   ಹೊಸಭಾವಗಳು ಮೊದಲು ಕಾಣಿಸಿಕೊಂಡಿದ್ದು ಬಂಗಾಳದಲ್ಲಿ. ಈ ಕಾಲಘಟ್ಟವನ್ನು ‘ಬಂಗಾಳದ ಪುನರುತ್ಥಾನ’  ಕಾಲ ಎಂದು ಕರೆಯಲಾಗಿದೆ.

ಇದೇ   ಸಂದರ್ಭದಲ್ಲಿ ಆರಂಭವಾದ  ‘ಏಷ್ಯಾಟಿಕ್ ಸೊಸೈಟಿ’ ಭಾರತದ  ಪ್ರಾಚೀನತೆ  ಹಾಗೂ ಅದರ ಭವ್ಯ ಸಂಸ್ಕ್ರತಿಯ ಬಗ್ಗೆ ಸಂಶೋಧನೆ ಹಾಗೂ ಪ್ರಕಟಣೆಗಳನ್ನು ಆರಂಭಿಸಿತು.  ಜನರ ಬದುಕನ್ನು ಅಧೋಗತಿಗಿಳಿಸಿದ್ದ  ಸಾಮಾಜಿಕ, ಧಾರ್ಮಿಕ  ಆಚರಣೆಗಳು  ಹಾಗೂ ಬ್ರಿಟಿಷರ  ಜೊತೆಯಲ್ಲಿಯೇ  ಕಾಲಿಟ್ಟ  ಕ್ರೈಸ್ತ ಮಿಷನರಿಗಳ ದರ್ಮಪ್ರಚಾರಕ್ಕೆ ಪರಿಹಾರವೆಂಬಂತೆ ರಾಜಾರಾಮಮೋಹನರಾಯರಿಂದ   ಬ್ರಹ್ಮಸಮಾಜ ಹುಟ್ಟಿತು. ಬಂಗಾಳದ   ಸನಾತನವಾದಿಗಳು  ಕ್ರೈಸ್ತ ಮಿಷನರಿಗಳು, ಹಾಗೂ ಬ್ರಹ್ಮಸಮಾಜದ ವಿರುದ್ಧ ಸಿಡಿದೆದ್ದು ತೀವ್ರಗಾಮಿಗಳಾಗಿ  ‘ಯುವ ಬಂಗಾಳ’ದವರೆಂದು ಪ್ರಸಿದ್ಧರಾದರು.

ರಾಜಾರಾಮ್ ಮೋಹನರಾಯ್ ಅವರ  ಮರಣದ ನಂತರ ದೇವೇಂದ್ರನಾಥ್ ಟಾಗೋರರು ಬ್ರಹ್ಮ ಸಮಾಜದ ನೇತೃತ್ವ ವಹಿಸಿದರು.   ದೇವೇಂದ್ರನಾಥರ  ವಿಚಾರಗಳು ಒಪ್ಪಿಗೆಯಾಗದಿದ್ದಾಗ  ಕೇಶವಚಂದ್ರಸೇನ್ ನೇತೃತ್ವದಲ್ಲಿ ‘ಬ್ರಹ್ಮಸಮಾಜ- ಇಂಡಿಯಾ’  ಎಂಬ ಸಂಸ್ಥೆ ಹುಟ್ಟಿಕೊಂಡಿತು. ಜಾತಿ  ಮತ್ತು ಸಾಮಾಜಿಕ  ಸಮಸ್ಯೆಗಳ ಬಗೆಗಿನ ಇವರ ಅಭಿಪ್ರಾಯಗಳನ್ನು ಇಷ್ಟಪಡದ  ಯುವಕರ ಗುಂಪು ಇವರ ನಾಯಕತ್ವವನ್ನು ಪ್ರಶ್ನಿಸಿ ಹೊರಬಂದು ‘ಸಾಧಾರಣ ಬ್ರಹ್ಮ ಸಮಾಜ’ವನ್ನು  ಸ್ಥಾಪಿಸಿದರು. ಇದೇ ಸಂದರ್ಭದಲ್ಲಿ   ಕೇಶವಚಂದ್ರಸೇನ್ ಅವರಿಂದ  ಪ್ರಾರ್ಥನಾ ಸಮಾಜ ಸ್ಥಾಪಿಸಲ್ಪಟ್ಟಿತು.   ಈ ಸಮಾಜ ಜನರಲ್ಲಿ  ನವಪ್ರಜ್ಞೆಯೊಂದು ಉದಯಿಸುವ ಹಿನ್ನೆಲೆಯಲ್ಲಿ ಕೆಲಸ ಮಾಡಿತು.  ಪಾಶ್ಚಿಮಾತ್ಯ ವಿಚಾರವಾದವನ್ನು  ಗಮನವಿಟ್ಟು  ನೋಡುತ್ತಲೇ ವಿದ್ಯಾಪ್ರಸಾರಕ್ಕೆ ಹೆಚ್ಚು ಒತ್ತು ಕೊಟ್ಟಿತು.  ಈ ಹಿನ್ನೆಲೆಯಲ್ಲಿಯೇ   ಮಹಾದೇವ ಗೋವಿಂದ ರಾನಡೆ, ಸ್ವಾಮಿ ದಯಾನಂದ ಸರಸ್ವತಿ ಮುಂತಾದವರು ಸೇರಿ ಆರ್ಯಸಮಾಜವನ್ನು ಸ್ಥಾಪಿಸಿದರು.

  1875 ರಲ್ಲಿ ಸ್ಥಾಪಿಸಿದ   ಥಿಯಾಸಾಫಿಕಲ್ ಸೊಸೈಟಿ  ಪೂರ್ವ ದೇಶಗಳ  ಸಮಾನ  ಧಾರ್ಮಿಕ ಸಿದ್ಧಾಂತಗಳನ್ನು ಹೊರದೇಶದಲ್ಲಿ  ಪ್ರಚಾರ ಮಾಡುವ ಉದ್ದೇಶ ಹೊಂದಿತ್ತು. ಈ ಚಳವಳಿಯ  ಮುಂಚೂಣಿಯಲ್ಲಿ   ಶ್ರೀಮತಿ ಅನಿಬೆಸೆಂಟ್  ಹಾಗೂ  ಬಾರತ  ಹಾಗೂ  ಅಖಿಲ ಭಾರತ ರಾಷ್ಟ್ರೀಯ ಚಳವಳಿಗಾರರು ಇದ್ದರು. ಈ  ತತ್ವಜ್ಞಾನಿಗಳು  ಸಮಸ್ಯೆಗಳನ್ನು ಹಿಂದೂ ಧಾರ್ಮಿಕ ಸಿದ್ಧಾಂತ ಹಾಗೂ ಧಾರ್ಮಿಕ ಸಂಸ್ಥೆಗಳ ಪುನರುತ್ಥಾನದಿಂದ  ಚರ್ಚಿಸಬಹುದೆಂದು  ನಂಬಿದ್ದರು. ಈ ಸೊಸೈಟಿ  ವಿದ್ಯಾಭ್ಯಾಸ ಮತ್ತು ಮಹಿಳೆಯರ ಬಗ್ಗೆ ಹೆಚ್ಚು ಗಮನ ವಹಿಸಿತು.ಸಾಹಿತ್ಯದಲ್ಲೂ  ಕೂಡ ಈ ರೀತಿಯ ಜಾಗೃತಿ ಮತ್ತು   ಪುನರುತ್ಥಾನದ  ಚಿಂತನೆಗಳು  ತಲೆಯೆತ್ತಿದವು. ಪಾಶ್ಚಿಮಾತ್ಯ  ವಿದ್ಯಾಭ್ಯಾಸ  ಕ್ರಮದಿಂದ ಹುಟ್ಟಿದ ಹೊಸ ಆಲೋಚನೆಗಳ ಯುವಜನಾಂಗವೊಂದು  ಈ  ಸಂಘರ್ಷ ಹಾಗೂ ವೈಚಾರಿಕಾ ದ್ವಂದ್ವವನ್ನು ಸಮರ್ಥವಾಗಿ ಎದುರಿಸಬಲ್ಲಂತೆ  ಮೂಡಿತು. ಇಂತಹ  ಕಾಲಘಟ್ಟದಲ್ಲಿಯೇ ನಾವು ವಿವೇಕಾನಂದರು ವಿಶ್ವಮಾನವರಾಗಿ ಗುರುತಿಸಿಕೊಂಡ ಚಾರಿತ್ರಿಕ ಅಗತ್ಯವನ್ನು ಗುರುತಿಸಬೇಕಾಗುತ್ತದೆ.

ಜನವರಿ 12, 1863 ರಂದು ಭುವನೇಶ್ವರಿ ಮತ್ತು ವಿಶ್ವನಾಥದತ್ತರ ಮಗನಾಗಿ ನರೇಂದ್ರನಾಥ ಜನಿಸಿದರು. ನರೇಂದ್ರನಾಥರ  ತಂದೆ   ಹೈಕೋಟ್೯ ವಕೀಲರಾಗಿದ್ದು ಬೈಬಲ್,ಇಸ್ಮಾಮಿಕ್, ಪರ್ಷಿಯನ್ ಹಾಗೂ ಇಂಗ್ಲೀಷ್ ಸಾಹಿತ್ಯದ  ಬಗ್ಗೆ  ಪಾಂಡಿತ್ಯವುಳ್ಳವರಾಗಿದ್ದರು. ನಾಸ್ತಿಕರಾಗಿದ್ದ  ಇವರು ಹಿಂದಿನ  ಮೂಢನಂಬಿಕೆಯ   ವಿಚಾರಗಳನ್ನು  ಖಂಡಿಸುವವರಾಗಿದ್ದರು. ನರೇಂದ್ರರ. ತಾತ ದುರ್ಗಾಚರಣರು  ಪ್ರಾಪಂಚಿಕ ವ್ಯಾಮೋಹಗಳನ್ನು ತ್ಯಜಿಸಿ ಸಂನ್ಯಾಸಿಯಾಗಿ ಜೀವಿಸಲಾರಂಭಿಸಿದ್ದರು.  ಇವರ  ತಾಯಿ ತಮ್ಮ ಮಗನಿಗೆ ಹೇಳುತ್ತಿದ್ದ  ರಾಮಾಯಣ,  ಮಹಾಭಾರತ, ಪುರಾಣ ಪ್ರಪಂಚದ ಕಥೆಗಳು ಪರಂಪರೆಯ ಬಗ್ಗೆ ಕುತೂಹಲ  ಹುಟ್ಟಿಸಿದ್ದವು.  ಹಿಂದೂ ದೇವತೆಗಳ, ಸಂನ್ಯಾಸಿಗಳ ಬಗ್ಗೆ ಆಕರ್ಷಣೆ  ಹುಟ್ಟಿದ್ದು ಈ ಕಾಲಘಟ್ಟದಲ್ಲಿಯೇ.

ಪಾರಮಾರ್ಥಿಕ  ಅನುಭವವನ್ನು ಪಡೆಯಲು  ತವಕಿಸುತ್ತಿದ್ದ ಅವರ ಮನಸ್ಸು  ಮತಧರ್ಮಗಳ  ಅಂತಿಮ ಗುರಿಯೇನು ಎಂದು ಪ್ರಶ್ನಿಸುತ್ತಿತ್ತು. ಉತ್ತರ  ನೀಡುವ ವ್ಯಕ್ತಿಗಳಿಗಾಗಿ ತವಕಿಸುತ್ತಿದ್ದ  ಅವರು  ಬ್ರಹ್ಮಸಮಾಜದ ಹಿರಿಯರಾದ  ದೇವೇಂದ್ರನಾಥ ಟಾಗೋರರನ್ನು ಕಂಡು “ಸರ್, ನೀವು ದೇವರನ್ನು ಕಂಡಿದ್ದೀರಾ” ಎಂದು ಪ್ರಶ್ನಿಸಿದರು.  ಗಲಿಬಿಲಿಗೊಂಡ  ದೇವೇಂದ್ರನಾಥ್ ಅವರು “ಪ್ರೀತಿಯ ತರುಣನೇ  ನಿನ್ನಲ್ಲಿ ಯೋಗಿಯ ಕಣ್ಣುಗಳಿವೆ, ನೀನು  ಯೋಗವನ್ನು ಅಭ್ಯಾಸ ಮಾಡು “ಎನ್ನುತ್ತಾರೆ.

ನರೇಂದ್ರರಿಗೆ  ಹಿರಿಯರೊಬ್ಬರಿಂದ ಹಾಗೂ ಗುರುಗಳಾದ ಹಾಸ್ಟ್ ಅವರಿಂದ  ಇಂತಹ  ಪ್ರಶ್ನೆಗಳಿಗೆ ಉತ್ತರ ಸಿಗುವುದು  ಕಾಳಿ  ದೇವಾಲಯದ ಪೂಜಾರಿ  ರಾಮಕೃಷ್ಣ ಪರಮಹಂಸರಿಂದ ಮಾತ್ರ ಎಂಬ ಸಲಹೆ ಸಿಗುತ್ತದೆ.

ಅವರ ಯುವ ಮನಸ್ಸು ರಾಮಕೃಷ್ಣರನ್ನು  ಕೇವಲ ಒಬ್ಬ ಪೂಜಾರಿಯಾಗಿ ಕಂಡಿತ್ತು. ಆಕಸ್ಮಿಕವಾಗಿ ಮಿತ್ರರೊಬ್ಬರ  ಮನೆಯಲ್ಲಿ  ರಾಮಕೃಷ್ಣರ  ಸಮ್ಮುಖದಲ್ಲಿ  ದೇವರನಾಮವನ್ನು   ನರೇಂದ್ರ  ಹಾಡಬೇಕಾಗುತ್ತದೆ.  ಈ   ಭೇಟಿ  ಅವರಿಗೆ  ವಿಶೇಷವೆನಿಸದಿದ್ದರೂ  ರಾಮಕೃಷ್ಣರಿಗೆ ಮಾತ್ರ ತಾವು ಬಹುಕಾಲದಿಂದ  ಹುಡುಕುತ್ತಿದ್ದ  ವ್ಯಕ್ತಿ  ಈತನೇ ಎಂಬ ಅರಿವಾಗುತ್ತದೆ. ತಮ್ಮ  ಸಿದ್ದಾಂತಗಳನ್ನು ಈತ  ಮಾತ್ರ ಹೊರಜಗತ್ತಿಗೆ  ತಲುಪಿಸಬಲ್ಲ ಎಂಬ  ವಿಶ್ವಾಸ ಮೂಡುತ್ತದೆ. ಅವರು ಸರ್ವಸಂಗ  ಪರಿತ್ಯಾಗಿಯಾದ,  ವಿಷಯಾಸಕ್ತಿಗಳಿಂದ  ದೂರವಾದ, ದೇವರನ್ನು ಅರಿಯುವ ಕುತೂಹಲವಿರುವ,  ದೀನದಲಿತರ  ಬಗ್ಗೆ  ಕಾಳಜಿಯುಳ್ಳ  ಶಿಷ್ಯನೊಬ್ಬನನ್ನು  ಕಂಡುಕೊಳ್ಳುವ  ನಿರೀಕ್ಷೆಯಲ್ಲಿದ್ದರು.

ಆಗ ರಾಮಕೃಷ್ಣ  ಪರಮಹಂಸರು ಕಲ್ಕತ್ತಾದ ರಾಣಿ ರಾಸಮಣಿ  ನಿರ್ಮಿಸಿದ  ಕಾಳಿ ದೇಗುಲದಲ್ಲಿ ಕಾಳಿಯನ್ನು ‘ಭವತಾರಿಣಿ’  ರೂಪದಲ್ಲಿ ಆರಾಧಿಸುತ್ತಿದ್ದರು. ರಾಮಕೃಷ್ಣರ  ಆಹ್ವಾನಕ್ಕೆ  ಅಷ್ಟಾಗಿ ಸ್ಪಂದಿಸಿದೇ ಇದ್ದರೂ ಮುಂದೊಂದು ದಿನ  ಅವರನ್ನು ಕಾಳಿಮಂದಿರದಲ್ಲಿ ಭೇಟಿಯಾಗುತ್ತಾರೆ. ತಕ್ಷಣದ  ಅವರ  ಪ್ರಶ್ನೆಯೆಂದರೆ  “ಸರ್,  ನೀವು ದೇವರನ್ನು ಕಂಡಿದ್ದೀರಾ” ಎಂಬುದಾಗಿತ್ತು.  “ಹೌದು, ನಿನ್ನನ್ನು ಕಂಡಿರುವಂತೆಯೇ ದೇವರನ್ನೂ ಕಂಡಿದ್ದೇನೆ. ಉತ್ಕಟವಾದ  ಅಂತಃ ಶಕ್ತಿ ಬೆಳೆದಾಗ  ಮಾತ್ರ ಇದು ಅನುಭವ  ಸಾಧ್ಯ.  ಆಗ ಯಾರು ಬೇಕಾದರೂ ಅವನೊಂದಿಗೆ  ನಾನು, ನೀನು ಮಾತನಾಡುತ್ತಿರುವಂತೆ ಮಾತನಾಡಬಹುದು” ಎನ್ನುತ್ತಾರೆ.  ಈ  ಗೊಂದಲಗಳಿಲ್ಲದ ಉತ್ತರ   ಪರಸ್ಪರ ಪರೀಕ್ಷಕರಾದ  ಈ ಗುರು  ಶಿಷ್ಯರ  ಸಂಬಂಧ  ಬದುಕನ್ನು ಬದಲಿಸುತ್ತದೆ.

ಸರ್ವರನ್ನು ಪ್ರೀತಿಸುವ , ವಿರೋಧಿಗಳನ್ನು,  ತನ್ನನ್ನು ವಿಮರ್ಶಿಸುವರನ್ನು  ಸಹ   ದ್ವೇಷಿಸದ  ರಾಮಕೃಷ್ಣರು  ಒಂದೆಡೆಯಾದರೆ ಅನ್ಯಾಯದ  ವಿರುದ್ದ ಸಿಡಿಯುವ, ವಿಮರ್ಶೆ  ಸಣ್ಣತನಗಳನ್ನು  ಸಹಿಸದ ಮೊಂಡು, ದುಡುಕುತನದ   ನರೇಂದ್ರನಾಥರದು  ಇನ್ನೊಂದೆಡೆ ಇದ್ದು ಇದು  ಪರಸ್ಪರ ವಿರುದ್ದ  ಸ್ವಭಾವಗಳ  ಸಾಂಗತ್ಯವಾಗಿತ್ತು. ಐದು ವರ್ಷಗಳ ಶಿಷ್ಯತ್ವದಲ್ಲಿ ರಾಮಕೃಷ್ಣರು ಏನನ್ನೂ  ಹೇಳದೆ,  ಪ್ರಶ್ನಿಸದೆ, ವಿಮರ್ಶಿಸದೆ  ತಮ್ಮ ಪಡಿಯಚ್ಚಾಗಿ  ಮಾರ್ಪಡಿಸಲು ಯತ್ನಿಸದೆ  ಉಕ್ಕನ್ನು ನಿಧಾನವಾಗಿ  ಹದಗೊಳಿಸುವಂತೆ ತಮ್ಮ ಶಿಷ್ಯನನ್ನು ರೂಪಿಸಿದರು.

ರಾಮಕೃಷ್ಣ ಪರಮಹಂಸರು ನಿರ್ವಾಣ ಹೊಂದುವ ಗಳಿಗೆಯಲ್ಲಿ  ತಮ್ಮ ಬಳಿ ನರೇಂದ್ರರನ್ನು ಕರೆದು ಧ್ಯಾನಾಸಕ್ತರಾಗುತ್ತಾರೆ. ನರೇಂದ್ರರಿಗೆ ತಮ್ಮ ಮೈಯೊಳಗೆ ಸೂಕ್ಷ್ಮವಾದ ವಿದ್ಯುತ್ ಪ್ರವಾಹದ  ಶಕ್ತಿಯೊಂದು  ಹೊಕ್ಕಂತೆ  ಮೈ ಜುಂ ಎನಿಸಿತು. “ನನ್ನಲ್ಲಿ ಇದ್ದುದ್ದನೆಲ್ಲಾ  ಇಂದು ನಿನಗೆ ನೀಡಿದ್ದೇನೆ. ಈಗ ನಾನೊಬ್ಬ ಫಕೀರ, ಭಿಕ್ಷುಕ. ನಾನು ಹರಿಸಿದ  ಶಕ್ತಿಯಿಂದ ನೀನು ಅದ್ಬುತ  ಕೆಲಸಗಳನ್ನು ಮಾಡಲು ಶಕ್ತನಾಗುತ್ತಿ. ಆದರೆ ನಾನು  ಬದುಕಿರುವವರೆಗೂ  ನೀನು  ಎಲ್ಲಿಂದ  ಬಂದೆಯೋ  ಅಲ್ಲಿಗೆ  ಹೋಗಿರು” ಎಂಬುದು ಅವರ ಕೊನೆಯ  ಮಾತುಗಳಾಗಿದ್ದವು.  ವಿಶ್ವಸಂಚಾರ  ಹಾಗೂ  ಭಾರತದರ್ಶನದಲ್ಲಿ  ತಮ್ಮನ್ನು ತೊಡಗಿಸಿ ಕೊಂಡು ಮತಧರ್ಮಗಳ   ಮೌಡ್ಯತೆಯಲ್ಲಿ  ಮುಳುಗಿದವರನ್ನು ಎಚ್ಚರಿಸುವ  ಕೆಲಸವನ್ನು  ಸಮರ್ಥವಾಗಿ ನಿರ್ವಹಿಸಿದರು.

1893 ರಲ್ಲಿ  ಚಿಕಾಗೋದಲ್ಲಿ  ನಡೆದ  ಸರ್ವಧರ್ಮ ಸಮ್ಮೇಳನದಲ್ಲಿನ   ಭಾಗವಹಿಸುವಿಕೆ  ಮತ್ತು ಅದರಲ್ಲಿ ಅವರು ಭಾರಿಸಿದ  ಜಯಭೇರಿ ಕೇವಲ ಭಾರತೀಯನನ್ನಾಗಿಸದೆ  ವಿಶ್ವಮಾನವನನ್ನಾಗಿ   ರೂಪಿಸಿತು. ಜಗತ್ತಿನ  ಎಲ್ಲಾ  ದೇವರು, ಧರ್ಮಕ್ಕಿಂತಲೂ ಮಿಗಿಲಾದದ್ದು  ಮಾನವಧರ್ಮ ಎಂದು ವಿಶ್ವದಾದ್ಯಂತ  ಸಾರಿದ  ಕೀರ್ತಿ  ಬಂಗಾಳದ ವಿವೇಕಶಾಲಿ    ವಿವೇಕಾನಂದ ಅವರಿಗೆ ಮಾತ್ರ  ಸಲ್ಲುತ್ತದೆ. ಹೀಗಾಗಿಯೇ ವಿವೇಕಾನಂದರ  ವಿಚಾರಧಾರೆಗಳು  ಜಡಗೊಂಡ ಸನಾತನವಾದಿಗಳ  ಕೈಗೆ ನಿಲುಕದೆ  ಜಾತಿ, ಮತಪಂಥಗಳಿಂದಾಚೆ  ನಿಂತ  ವಿಶ್ವಮಾನವನ ಅನ್ವೇಷಣೆಗೆ ತೊಡಗುತ್ತವೆ.

Related Articles

ಇತ್ತೀಚಿನ ಸುದ್ದಿಗಳು