Saturday, November 1, 2025

ಸತ್ಯ | ನ್ಯಾಯ |ಧರ್ಮ

ಸಂಸತ್ತಿನ ಪೂರ್ವಸೂರಿಗಳು – 13 : ಭಾರತದ ರಾಜಕಾರಣದಲ್ಲಿ ಮಾಸದ ಗುರುತು ಮೂಡಿಸಿದ ಹೆಚ್‌ಎನ್ ಬಹುಗುಣ

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹದಿಮೂರನೆಯ ಲೇಖನ

ತುರ್ತು ಪರಿಸ್ಥಿತಿಯ ದಿನಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದ ಇಂದಿರಾ ಗಾಂಧಿಯವರ ಆದೇಶಗಳನ್ನು ಧಿಕ್ಕರಿಸಿದ್ದ ಏಕೈಕ ಕಾಂಗ್ರೆಸ್‌ ರಾಜಕಾರಣಿ ಬಹುಗುಣ ಆಗಿದ್ದರು.

ಹೇಮಾವತಿ ನಂದನ್‌ ಬಹುಗುಣ ಅವರು ಹೆಚ್‌ಎನ್ ಬಹುಗುಣ ಎಂದೇ ಜನಪ್ರಿಯರು. ಹಿರಿಯ ಸಂಸದೀಯ ಪಟುವಾಗಿದ್ದ ಅವರು ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಅಚ್ಚಳಿಯದ ಗುರುತು ಮೂಡಿಸಿದವರು. 1942 ರಲ್ಲಿ ಕ್ವಿಟ್‌ ಇಂಡಿಯಾ ಹೋರಾಟದಲ್ಲಿ ಭಾಗವಹಿಸಿ ಜೈಲುಶಿಕ್ಷೆ ಅನುಭವಿಸಿದ್ದ ಬಹುಗುಣ ಅವರು ನಂತರ ಕೇಂದ್ರ ಸಚಿವ ಮತ್ತು ದೇಶದ ಅತಿ ಹೆಚ್ಚು ಜನಸಂಖ್ಯೆಯಿರುವ ರಾಜ್ಯವಾದ ಉತ್ತರಪ್ರದೇಶದ ಮುಖ್ಯಮಂತ್ರಿಯೂ ಆಗುತ್ತಾರೆ. ಬಹುಷ ತುರ್ತು ಪರಿಸ್ಥಿತಿಯ ದಿನಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದ ಇಂದಿರಾ ಗಾಂಧಿಯವರ ಆದೇಶಗಳನ್ನು ಧಿಕ್ಕರಿಸಿದ್ದ ಏಕೈಕ ಕಾಂಗ್ರೆಸ್‌ ರಾಜಕಾರಣಿ ಕೂಡ ಅವರೇ ಆಗಿದ್ದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಿಡಿದು ಕಾಂಗ್ರೆಸ್‌ ಸರಕಾರ ಕೇಂದ್ರ ಸಚಿವರಾಗಿ ನೇಮಿಸುವ ತನಕ ಅವರು ಆ ಪಕ್ಷದಲ್ಲಿ ಪ್ರಭಾವಶಾಲಿಯಾಗಿದ್ದರು. ಆದರೆ, ಅಂತಹ ಬೃಹತ್ ಪಕ್ಷದಿಂದ ಹೊರಬಂದು ನಂತರ ಹೊಸ ಜನತಾ ಮೈತ್ರಿಕೂಟವನ್ನು ಸೇರಿಕೊಳ್ಳುತ್ತಾರೆ. ಆದರೆ, ಎರಡು ವರ್ಷಗಳ ನಂತರ ಮತ್ತೆ ಅದೇ ಕಾಂಗ್ರೆಸ್‌ ತೆಕ್ಕೆಗೆ ಸೇರಿಕೊಳ್ಳುತ್ತಾರೆ. ಅವರ ರಾಜಕೀಯ ಎದುರಾಳಿಗಳು ಅವರನ್ನು “ಭಾರತದ ರಾಜಕಾರಣದ ನಟವರ್‌ಲಾಲ್‌” ಎಂದೇ ಕರೆಯುತ್ತಿದ್ದರು.

1919 ಏಪ್ರಿಲ್ 25 ರಂದು ಪೌರಿ ಗರ್ವಾಲ್ (ಈಗಿನ ಉತ್ತರಾಖಂಡದಲ್ಲಿದೆ) ಎಂಬಲ್ಲಿನ ಬುಘಾನಿಯಲ್ಲಿ ಅವರ ಜನನ. ಗರ್ವಾಲ್ ಪ್ರದೇಶದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸುತ್ತಾರೆ. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಾರೆ. ಆ ಕಾಲ ಅವರ ಶೈಕ್ಷಣಿಕ ಮತ್ತು ರಾಜಕೀಯ ವೃತ್ತಿಜೀವನವನ್ನು ರೂಪಿಸುತ್ತದೆ.

ಬಹುಗುಣ ರಾಜಕಾರಣದ ಅತ್ಯಂತ ಕೆಳಸ್ತರದಿಂದ ಬೆಳೆದು ಬಂದವರು. ದೇಶಪ್ರೇಮ, ನಿಸ್ವಾರ್ಥತೆ, ಮೂಲಭೂತ ತತ್ವಗಳು ಮತ್ತು ಪ್ರಾದೇಶಿಕತೆಯೊಂದಿಗೆ ರಾಜಿಯಾಗದಿರುವಿಕೆ, ಅವುಗಳೆಡೆಗೆ ಬದ್ಧತೆ, ಜಾತ್ಯಾತೀತತೆ ಮೊದಲಾದ ತತ್ವಗಳ ಮೂಲಕ ತಮ್ಮ ರಾಜಕೀಯ ಬದುಕಿನಲ್ಲಿ ಉತ್ತುಂಗಕ್ಕೆ ಏರಿದವರು.

ತನ್ನ 11 ನೇ ವಯಸ್ಸಿನಲ್ಲಿ ಗರ್ವಾಲ್ ಪ್ರದೇಶದ ಜಿಲ್ಲಾಧಿಕಾರಿಯೊಂದಿಗೆ ನಡೆದ ಮುಖಾಮುಖಿಯಲ್ಲಿ ಅವರು ಬ್ರಿಟಿಷ್‌ ಸಾಮ್ರಾಜ್ಯದ ಉನ್ನತ ಅಧಿಕಾರಶಾಹಿ ಶ್ರೇಣಿಯಾದ ನಾಗರಿಕ ಸೇವೆಯ ಕಡೆಗೆ ಆಕರ್ಷಿತರಾಗುತ್ತಾರೆ. ಹನ್ನೊಂದರ ಬಾಲಕನಾಗಿದ್ದ ಅವರು ಭಾರತೀಯ ನಾಗರಿಕ ಸೇವೆಗೆ ಸೇರಬೇಕೆಂದು ದೃಢನಿಶ್ಚಯ ಮಾಡಿಕೊಂಡು ಅದಕ್ಕೆ ಬೇಕಾದ ಇಂಗ್ಲಿಷ್‌ ಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತಾರೆ.

1937 ರಲ್ಲಿ ಅವರು ಶಿಕ್ಷಣಕ್ಕಾಗಿ ಅಹಬಾದ್‌ ತಲುಪುತ್ತಾರೆ. ಅಲ್ಲಿ ಸರಕಾರಿ ಇಂಟರ್‌ಮೀಡಿಯೇಟ್‌ ಕಾಲೇಜಿಗೆ ಸೇರುತ್ತಾರೆ. ಕಾಲೇಜಿನಲ್ಲಿ ಅವರು ಸ್ಥಾಪಿಸಿದ ಮೊಟ್ಟ ಮೊದಲ “ವಿದ್ಯಾರ್ಥಿ ಸಂಸತ್ತಿಗೆ” ಅವರು “ಪ್ರಧಾನ ಮಂತ್ರಿ”ಯಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಬದುಕು ಮೊಳಕೆಯೊಡಯಲು ಆರಂಭಿಸುತ್ತದೆ.

1939-40 ರಲ್ಲಿ ಅವರು ಅಲಹಾಬಾದ್‌ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಕೋರ್ಸಿಗೆ ಸೇರಿಕೊಳ್ಳುತ್ತಾರೆ. ಪೂರ್ವದ ಆಕ್ಸ್‌ಫರ್ಡ್‌ ಎಂದೇ ಖ್ಯಾತವಾಗಿದ್ದ ಈ ವಿಶ್ವವಿದ್ಯಾಲಯವು ಸ್ವಾತಂತ್ರ್ಯ ಚಳವಳಿಯ ಕೇಂದ್ರವೂ ಆಗಿತ್ತು. 1940 ರ ಹೊತ್ತಿಗೆ ಸ್ವಾತಂತ್ರ್ಯ ಚಳುವಳಿಗೆ ಧುಮುಕುವಂತೆ ಮಹಾತ್ಮಾ ಗಾಂಧಿಯವರು ಯುವಕರಿಗೆ ಕರೆ ನೀಡಿದ್ದರು. 1941 ರಲ್ಲಿ ಅಲಹಾಬಾದ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ತಲೆಮರೆಸಿಕೊಂಡಿದ್ದಾರೆಂದು ಘೋಷಣೆಯಾದಾಗ, ಬಹುಗುಣರನ್ನು ಹಂಗಾಮಿಯಾಗಿ ಆಯ್ಕೆ ಮಾಡಲಾಗುತ್ತದೆ.

ಅವರು ಸ್ವಾತಂತ್ರ್ಯ ಚಳುವಳಿಗೆ ಧುಮುಕುವುದು ಸಾಹಸವೇ ಆಗಿತ್ತು. ಬ್ರಿಟಿಷರು ಅವರನ್ನು ಬಂಡಾಯಗಾರ ಎಂದು ಘೋಷಿಸಿದರು. ಹಾಗಾಗಿ ಬಹುಗುಣ ಭೂಗತರಾಗುತ್ತಾರೆ. ಅವರ ಬಂಧನಕ್ಕೆ ಸಹಾಯ ಮಾಡುವವರಿಗೆ ಐದು ಸಾವಿರ ರೂಪಾಯಿಗಳ ಇನಾಮನ್ನು ಬ್ರಿಟಿಷರು ಘೋಷಿಸಿದ್ದರು.‌ ಅಲಹಾಬಾದ್ ಮತ್ತು ಸುಲ್ತಾನ್‌ಪುರ ಜೈಲುಗಳಲ್ಲಿ ಅವರು ಹಲವು ಬಾರಿ ಬಂಧನದಲ್ಲಿದ್ದರು.

ಕೊನೆಗೆ 1942 ರಲ್ಲಿ ಅವರಿಗೆ 1946 ರವರೆಗೆ ಕಠಿಣ ಸಜೆ ವಿಧಿಸಲಾಗುತ್ತದೆ. ಸುಲ್ತಾನ್‌ಪುರದ ಅಮ್ಹತ್‌ ಜೈಲಿನಲ್ಲಿ ಅವರು ಶ್ವಾಸಕೋಶದ ಮಾರಕ ಸೋಂಕಾದ ಟ್ಯೂಬರ್ಕಲ್‌ ಬ್ಯಾಸಿಲಸ್‌ನಿಂದ ಬಳಲುತ್ತಿದ್ದರು. ಅವರ ಆರೋಗ್ಯವನ್ನು ಪರಿಗಣಿಸಿಕೊಂಡು ಬಿಡುಗಡೆ ಮಾಡುವ ಸಾಧ್ಯತೆಯನ್ನು ಬ್ರಟಿಷರು ಅವರ ಮುಂದಿಟ್ಟಿದ್ದರು. ಆದರೆ, ಅದಕ್ಕಾಗಿ ಇನ್ನು ಮುಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂಬ ಪ್ರತಿಜ್ಞೆಯನ್ನು ಸ್ವೀಕರಿಸಬೇಕೆಂಬುದು ಬ್ರಿಟಿಷರ ಷರತ್ತಾಗಿತ್ತು. ಬಹುಗುಣ ಅದನ್ನು ನಿರಾಕರಿಸುತ್ತಾರೆ. 1946 ರಲ್ಲಿ ಜೈಲು ಶಿಕ್ಷೆ ಪೂರ್ಣಗೊಳಿಸಿಯೇ ಅವರು ಬಿಡುಗಡೆ ಹೊಂದುವುದು. ಕಲಾ ವಿಭಾಗದಲ್ಲಿ ತನ್ನ ಪದವಿಯನ್ನೂ ಪೂರ್ಣಗೊಳಿಸುತ್ತಾರೆ.

1947 ಆಗಸ್ಟ್‌ 15 ರದು ಭಾರತ ಸ್ವತಂತ್ರಗೊಳ್ಳುತ್ತದೆ. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಬಹುಗುಣ ಕಾರ್ಮಿಕ ಸಂಘಟನೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅಲಹಾಬಾದ್‌ನಲ್ಲಿ ಕಾರ್ಮಿಕ ಸಂಘಗಳನ್ನು ಕಟ್ಟುವಲ್ಲಿ ಬಹಳ ದೊಡ್ಡ ಕೆಲಸ ಮಾಡುತ್ತಾರೆ. 1953 ರಲ್ಲಿ ಇಂಡಿಯನ್‌ ನ್ಯಾಷನಲ್‌ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ ಸಂಘಟನೆಯ ಸದಸ್ಯರಾಗುತ್ತಾರೆ.

ಉತ್ತರ ಪ್ರದೇಶದ ಕರ್ಚನಾ ಮತ್ತು ಚೈಲ್‌ ವಿಧಾನಸಭಾ ಕ್ಷೇತ್ರದಿಂದ 1952 ರಲ್ಲಿ ಗೆಲ್ಲುವ ಮೂಲಕ ಅವರು ಚುನಾವಣಾ ರಾಜಕಾರಣಕ್ಕೆ ಕಾಲಿಡುತ್ತಾರೆ. ಅವರ ಆ ಗೆಲುವು ಕಾಂಗ್ರೆಸ್‌ ಸರಕಾರದಲ್ಲಿ ಉನ್ನತ ಸ್ಥಾನಕ್ಕೇರುವುದಕ್ಕೂ ದಾರಿ ಮಾಡಿಕೊಡುತ್ತದೆ. ತನ್ನ ಸಂವಿಧಾನಾತ್ಮಕ ಪ್ರಕ್ರಿಯೆಗಳ ಬಗೆಗಿನ ಆಳವಾದ ತಿಳುವಳಿಕೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಶ್ರಮಜೀವಿಗಳು, ಬಡಬಗ್ಗರು ಮತ್ತು ಅಲ್ಪಸಂಖ್ಯಾತರ ಬಗ್ಗೆ ಅವರ ಕಾಳಜಿಯನ್ನು ಶಾಸನ ಸಭೆಯ ಕಾರ್ಯಕಲಾಪಗಳಲ್ಲಿ ಕಾಣಬಹುದು.

1957 ರಲ್ಲಿ ಸೀರಾಥು ಕ್ಷೇತ್ರದಿಂದ ಮತ್ತೊಮ್ಮೆ ಯೂಪಿ ವಿಧಾನಸಭೆಗೆ ಆಯ್ಕೆಯಾಗುತ್ತಾರೆ. ಆಗ ಯೂಪಿಯ ಮುಖ್ಯಮಂತ್ರಿಯಾಗಿದ್ದ ಗೋವಿಂದ್‌ ವಲ್ಲಭ್‌ ಪಂತ್‌ ಬಹುಗುಣ ಅವರ ರಾಜಕೀಯ ಚಾತುರ್ಯದಿಂದ ಪ್ರಭಾವಿತರಾಗಿ ಅವರನ್ನು ಸಂಸದೀಯ ಕಾರ್ಯದರ್ಶಿಯಾಗಿ ನೇಮಿಸುತ್ತಾರೆ. ಜೊತೆಗೆ, ಕಾರ್ಮಿಕ ಮತ್ತು ಕೈಗಾರಿಕಾ ಖಾತೆಯನ್ನೂ ಅವರಿಗೆ ವಹಿಸುತ್ತಾರೆ. 1960 ರಲ್ಲಿ ಅದೇ ಖಾತೆಯೊಂದಿಗೆ ಬಹುಗುಣ ಉಪ ಮುಖ್ಯಂತ್ರಿಯಾಗಿಯೂ ನೇಮಕಗೊಳ್ಳುತ್ತಾರೆ.

1967 ರಲ್ಲಿ ಬಹುಗುಣ ಉತ್ತರ ಪ್ರದೇಶದ ಹಣಕಾಸು ಸಚಿವರಾಗುತ್ತಾರೆ. ಅವರ ಕುಶಾಲಮತಿ ಆಡಳಿತಶೈಲಿ ನಿಧಾನಕ್ಕೆ ಪ್ರಕಟವಾಗುತ್ತಿತ್ತು. ಅವರ ಪ್ರತಿಭೆಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದರವು. 1969 ರಲ್ಲಿ ಏಐಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗುತ್ತದೆ. ಅವರ ಸಂಘಟನಾ ಕೌಶಲ್ಯದ ಕಾರಣದಿಂದಲೇ ಕಾಂಗ್ರೆಸ್‌ ಪಕ್ಷವು ಜನ ಸಾಮಾನ್ಯರ ಬಳಿಗೆ ತಲುಪಲು ಸಾಧ್ಯವಾಗುವುದು.

1969 ರಲ್ಲಿ ಕಾಂಗ್ರೆಸ್‌ ಪಕ್ಷ ವಿಭಜನೆಯಾದಾಗ ಬಹುಗುಣ ಅವರು ಇಂದಿರಾಗಾಂಧಿಯವರ ಬಣ ಸೇರಿಕೊಳ್ಳುತ್ತಾರೆ. 1971 ರಲ್ಲಿ ಇಂಧಿರಾ ಗಾಂಧಿಯವರ ಸರಕಾರದಲ್ಲಿ ಮಾಹಿತಿ ಸಂವಹನ ಖಾತೆ ರಾಜ್ಯ ಸಚಿವರಾಗುತ್ತಾರೆ. ಬಹುಗುಣ ಅವರ ಬೆಂಬಲಿಗರು ಆ ಹುದ್ದೆಯನ್ನು ಒಂದು ರೀತಿಯಲ್ಲಿ ಹಿಂಬಡ್ತಿ ಎಂದೇ ಪರಿಗಣಿಸಿದ್ದರು. ಆದರೆ ಬಹುಗುಣ ಯಾವುದೇ ಗೊಂದಲವಿಲ್ಲದೆ ಅದನ್ನು ಸ್ವೀಕರಿಸಿದ್ದರು. ಅದಲ್ಲದೆ, 1973 ರಲ್ಲಿ ಯೂಪಿಯ ಪ್ರಾಂತೀಯ ಸಶಸ್ತ್ರ ಪಡೆಯು ಕಮಲಪತಿ ತ್ರಿಪಾಠಿ ಅವರನ್ನು ಸಶಸ್ತ್ರ ದಂಗೆಯ ಮೂಲಕ ಮುಖ್ಯಮಂತ್ರಿ ಸ್ಥಾನದಿಂದ ಉಚ್ಛಾಟಿಸಿದಾಗ, ಬಹುಗುಣ ಅವರು ಯೂಪಿಯ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಲು ಆ ಹುದ್ದೆ ಅವರಿಗೆ ಸಹಕಾರಿಯೂ ಆಗಿತ್ತು. ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿದ್ದಾಗ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದ ಬಹುಗುಣ ಆ ಚುನಾವಣೆಯಲ್ಲಿ ಸಲೀಸಾಗಿ ಗೆಲ್ಲುತ್ತಾರೆ. 1975 ನವೆಂಬರ್‌ 29 ರಂದು ಅವರು ಆ ಹುದ್ದೆಗೆ ರಾಜೀನಾಮೆ ನೀಡುತ್ತಾರೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಹುಗುಣ ಅವರು ಇಂದಿರಾ ಗಾಂಧಿ ಮತ್ತು ಸಂಜಯ್‌ ಗಾಂಧಿ ಅವರುಗಳ ಜೊತೆಗೆ ಭಿನ್ನಾಭಿಪ್ರಾಯ ಬೆಳೆಸಿಕೊಂಡಿದ್ದರು. ಹಾಗಾಗಿಯೇ 1975 ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು.

ಕಾಂಗ್ರೆಸ್ ಬಗ್ಗೆ ಭ್ರಮನಿರಸನ
ಪತ್ರಕರ್ತ ಕೃಷ್ಣ ವಿ. ಅನಂತ್‌ ಅವರು ತಮ್ಮ “ಇಂಡಿಯಾ ಸಿನ್ಸ್ ಇಂಡಿಪೆಂಡೆನ್ಸ್: ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಪಾಲಿಟಿಕ್ಸ್” ಎಂಬ ಪುಸ್ತಕದಲ್ಲಿ ಬಹುಗುಣ ಅವರು 1975 ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಜಗಜೀವನ್ ರಾಮ್ ಮತ್ತು ನಂದಿನಿ ಸತ್ಪತಿಯಂತಹ ಇತರ ಅತೃಪ್ತ ಕಾಂಗ್ರೆಸ್ ನಾಯಕರೊಂದಿಗೆ ಸಿಎಫ್‌ಡಿ ಸ್ಥಾಪಿಸಿದ ನಂತರದ ಕಾಲವನ್ನು ವಿವರಿಸುತ್ತಾರೆ. ಅವರ ಬೇರ್ಪಡುವಿಕೆಯನ್ನು ಕುರಿತು “…ವಾಸ್ತವವಾಗಿ, ಇಂದಿರಾ ಅವರ ಕಾಂಗ್ರೆಸ್ ಉತ್ತರ ಪ್ರದೇಶ ಮತ್ತು ಬಿಹಾರದಿಂದ ನಾಶವಾಗಲು ಕಾರಣವಾದ ನಿರ್ಣಾಯಕ ಅಂಶವಾಗಿತ್ತು ಅದು” ಎಂದು ಅನಂತ್ ಬರೆಯುತ್ತಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಕಾಂಗ್ರೆಸ್ ನಾಯಕತ್ವ ಮತ್ತು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಬಗ್ಗೆ ತಮಗಿದ್ದ ಭ್ರಮನಿರಸನದ ಬಗ್ಗೆ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಬಹುಗುಣ ಒಮ್ಮೆ ಮನಬಿಚ್ಚಿ ಮಾತನಾಡಿದ್ದರು.

“ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ, ಇಂದಿರಾ ಗಾಂಧಿಯವರೊಂದಿಗೆ ಮೂಲಭೂತ ವಿಷಯದ ಬಗ್ಗೆ ಜಗಳವಾಡಬೇಕಾಗಿ ಬಂದಿತ್ತು. ಪ್ರತಿಯೊಂದು ಕೆಲಸಕ್ಕೂ ನಾನು ಅವರ ಸಲಹೆ ಪಡೆಯಬೇಕೆಂಬುದು ಅವರ ಇಚ್ಛೆಯಾಗಿತ್ತು. “ಹಿಂದಿನ ಸೀಟಲ್ಲಿ ಕೂತು ಡ್ರೈವಿಂಗ್ ಮಾಡುವುದು” ನನ್ನಿಂದ ಸಾಧ್ಯವಿಲ್ಲ ಎಂಬುದು ನನ್ನ ನಿಲುವಾಗಿತ್ತು. ಇಷ್ಟು ದೊಡ್ಡ ರಾಜ್ಯವನ್ನು ಆಳುವ ಮುಖ್ಯಮಂತ್ರಿಯೊಬ್ಬ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು… ರಾಜಸ್ಥಾನ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳ ರೀತಿಯಲ್ಲಿ ನಾನು ಕೂಡ ಆಕೆಯ ಮಗನನ್ನು (ಸಂಜಯ್ ಗಾಂಧಿಯನ್ನು) ಉತ್ತರ ಪ್ರದೇಶದಾದ್ಯಂತ ಕರೆದೊಯ್ಯಬೇಕೆಂದು ಅವರು ಬಯಸಿದ್ದರು. ನಾನು ಅದನ್ನು ನಿರಾಕರಿಸಿದೆ. ಆತ ತನ್ನ ಕಾಲಿನ ಮೇಲೆ ನಡೆಯಲಿ, ಕೆಲಸ ಮಾಡಲಿ, ಮುಂದೆ ಬರಲಿ. ಆದರೆ ಅದು ನನ್ನ ಹೆಗಲ ಮೇಲೆ ಕೂತು ಆಗಬಾರದು ಎಂದು ನಾನು ಅವರಿಗೆ ಹೇಳಿದೆ.”

ಅಮೇರಿಕಾದ ವಿದ್ವಾಂಸ ಪೌಲ್‌ ಆರ್.‌ ಬ್ರಾಸ್‌ “ಆನ್ ಇಂಡಿಯನ್ ಪೊಲಿಟಿಕಲ್ ಲೈಫ್: ಚರಣ್ ಸಿಂಗ್ ಆಂಡ್ ಕಾಂಗ್ರೆಸ್ ಪಾಲಿಟಿಕ್ಸ್, 1967 ಟು 1987” ಎಂಬ ತಮ್ಮ ಪುಸ್ತಕದಲ್ಲಿ ಬಹುಗುಣ ಅವರು ಮುಖ್ಯಮಂತ್ರಿಯಾಗಿದ್ದ ದಿನಗಳ ಕುರಿತು ಬರೆಯುತ್ತಾರೆ.

ಬಹುಗುಣ ಅವರು “ಹರಿಜನರಿಗೆ ಪ್ರಯೋಜನಕಾರಿ ನೀತಿಗಳನ್ನು” ಪರಿಚಯಿಸಿದರು, “ಮುಸ್ಲಿಂ ವಿರೋಧಿ ಗಲಭೆಗಳನ್ನು” ದಿಟ್ಟವಾಗಿ ನಿಗ್ರಹಿಸುವ ಮೂಲಕ “ಮುಸ್ಲಿಮರೊಂದಿಗೆ ಬಾಂಧವ್ಯವನ್ನು” ಸ್ಥಾಪಿಸಿದರು ಮತ್ತು “ಹಳ್ಳಿಗಳ ಸಾಲವನ್ನು” ತೊಡೆದುಹಾಕಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಂಡರು ಎಂದು ಬ್ರಾಸ್ ಬರೆಯುತ್ತಾರೆ.

ಆದರೆ, “ಇಂದಿರಾ ಗಾಂಧಿಗೆ ಅಂತಹ ವಿಷಯಗಳಲ್ಲಿ ಆಸಕ್ತಿ ಇರಲಿಲ್ಲ. ಏಕೆಂದರೆ ಅವರು ತಮ್ಮ ರಾಜ್ಯಗಳಲ್ಲಿ ಅಷ್ಟೇನೂ ಜನ ಬೆಂಬಲವಿಲ್ಲದ ರಾಜಕೀಯ ದರೋಡೆಕೋರರನ್ನು ತಂದು ಕೂರಿಸುವ ಮೂಲಕ ಸಂಪೂರ್ಣ ಅಧಿಕಾರದತ್ತ ಮುನ್ನಡೆಯುತ್ತಿದ್ದರು. ಅಂದರೆ, ಉತ್ತರ ಪ್ರದೇಶಕ್ಕೆ ಸಂಬಂಧಿಸಿದಂತೆ, ಇಂದಿರಾ ಗಾಂಧಿ ಅಥವಾ ಸಂಜಯ್ ಗಾಂಧಿಯವರು ಸದಾ ಗೊಣಗುತ್ತಿದ್ದ ಬಹುಗುಣ ಅವರನ್ನು ಒಂದು ವರ್ಷದೊಳಗೆ ಅಧಿಕಾರದಿಂದ ಕೆಳಗಿಳಿಸಿ, ಎನ್‌ಡಿ ತಿವಾರಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಾಯಿತು.”

ತುರ್ತು ಪರಿಸ್ಥಿತಿ ಮತ್ತು ಅದರ ಹೇರಿಕೆಯ ವಿಷಯದಲ್ಲಿ ಬಹುತೇಕ ಮುಖ್ಯಮಂತ್ರಿಗಳನ್ನು ಹೇಗೆ ಕತ್ತಲೆಯಲ್ಲಿಡಲಾಗಿತ್ತು ಎಂಬುದನ್ನು ವಿವರಿಸುವ ಅಧ್ಯಾಯದಲ್ಲಿ ಬ್ರಾಸ್‌ ಬಹುಗುಣ ಅವರ ಬಗ್ಗೆಯೂ ಬರೆಯುತ್ತಾರೆ.

“ಉತ್ತರ ಪ್ರದೇಶದ ಮುಖ್ಯಮಂತ್ರಿ ಎಚ್.ಎನ್. ಬಹುಗುಣ ಅವರು ಕೇಂದ್ರ ಸರ್ಕಾರದ ಇಬ್ಬರು ಸಚಿವರೊಂದಿಗೆ ಬೆಳಗಿನ ಉಪಾಹಾರ ಸೇವಿಸುತ್ತಿದ್ದಾಗ “ತುರ್ತು ಪರಿಸ್ಥಿತಿ ಘೋಷಣೆಯ ಬಗ್ಗೆ ತಿಳಿದುಕೊಳ್ಳುವುದು” ಎಂದು ಅವರು ಸಾಕ್ಷ್ಯ ನುಡಿದರು. ಆ ಸಚಿವರುಗಳು ಕೂಡ ಆ ಕುರಿತು ಅಷ್ಟೇ ಆಶ್ಚರ್ಯಚಕಿತರಾಗಿದ್ದರು”.

1977 ರಲ್ಲಿ ಬಹುಗುಣ ಕಾಂಗ್ರೆಸ್‌ನಿಂದ ಬೇರ್ಪಡುತ್ತಾರೆ. ಅವರು ಜಗಜೀವನ್ ರಾಮ್ ತರದ ನಾಯಕರ ತಂಡವನ್ನು ಸೇರಿಕೊಂಡು ಕಾಂಗ್ರೆಸ್ ಫಾರ್‌ ಡೆಮಾಕ್ರಸಿ ಸ್ಥಾಪಿಸುತ್ತಾರೆ. ಬಹುಗುಣ ಸಿಎಫ್‌ಡಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾರೆ. ಮೇ 1, 1977 ರಂದು ಅದು ಜನತಾ ಪಕ್ಷದಲ್ಲಿ ವಿಲೀನವಾಗುತ್ತದೆ. 1977 ರಲ್ಲಿಯೇ ಅವರು ಲಕ್ನೋ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗುತ್ತಾರೆ. ನಂತರ ಅವರನ್ನು ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಪೆಟ್ರೋಲಿಯಂ ಮತ್ತು ರಾಸಾಯನಿಕ ಇಲಾಖೆಯ ಕ್ಯಾಬಿನೆಟ್ ಸಚಿವರನ್ನಾಗಿ ನೇಮಿಸುತ್ತಾರೆ.

1979 ರಲ್ಲಿ ಅವರು ಕೇಂದ್ರ ಸರ್ಕಾರದಲ್ಲಿ ಹಣಕಾಸು ಸಚಿವರಾಗುತ್ತಾರೆ. ಆದರೆ ಆ ಹೊತ್ತಿಗಾಗಲೇ, ಜನತಾ ಪಕ್ಷವು ಹಲವಾರು ಆಂತರಿಕ ಒತ್ತಡಗಳ ನಡುವಿನ ಘರ್ಷಣೆಗಳಿಂದ ಕೂಡಿತ್ತು. ಬಹುಗುಣ ಮತ್ತೆ ಭ್ರಮನಿರಸನಗೊಂಡರು. ಆಗಲೇ ಇಂದಿರಾ ಗಾಂಧಿಯವರು ಕಾಂಗ್ರೆಸ್ ಪಕ್ಷವು ಇನ್ನೂ ತನ್ನ ಸಮಾಜವಾದ ಮತ್ತು ಜಾತ್ಯತೀತತೆಯ ತತ್ವಗಳಿಗೆ ಬದ್ಧವಾಗಿದೆ ಎಂದು ಬಹುಗುಣ ಅವರಿಗೆ ಮನವರಿಕೆ ಮಾಡಿಕೊಡಲು ಶ್ರಮಿಸುವುದು.

ಅದರ ಫಲವಾಗಿಯೇ ಇರಬೇಕು, 1979 ರಲ್ಲಿ ಬಹುಗುಣ ಮತ್ತೆ ಕಾಂಗ್ರೆಸ್‌ಗೆ ಮರಳುತ್ತಾರೆ. 1980 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗರ್ವಾಲ್ ಸ್ಥಾನವನ್ನು ಕಾಂಗ್ರೆಸ್ ನಾಯಕರಾಗಿ ಭರ್ಜರಿ ಬಹುಮತದೊಂದಿಗೆ ಅವರು ಗೆದ್ದು ಬರುತ್ತಾರೆ. ಆದರೆ ಕಾಂಗ್ರೆಸ್‌ ಬಗ್ಗೆ ಮತ್ತೆ ಅತೃಪ್ತರಾಗುತ್ತಾರೆ. ಪುನಹ ಪಕ್ಷ ತೊರೆದು ತಮ್ಮ ಲೋಕಸಭಾ ಸ್ಥಾನಕ್ಕೂ ರಾಜೀನಾಮೆ ನೀಡುತ್ತಾರೆ.

1982 ರಲ್ಲಿ ಅವರು ಪುನಹ ಸ್ವತಂತ್ರ ಅಭ್ಯರ್ಥಿಯಾಗಿ ಸ್ಫರ್ಧಿಸಿ ಗೆಲ್ಲುತ್ತಾರೆ.

1982-84 ರ ನಡುವೆ ಅವರು ಡೆಮಾಕ್ರಟಿಕ್ ಸೋಷಿಯಲಿಸ್ಟ್ ಪಕ್ಷವನ್ನು ಕಟ್ಟುತ್ತಾರೆ. ನಂತರ ಚರಣ್ ಸಿಂಗ್ ಅವರ ಲೋಕದಳವನ್ನು ಸೇರಿ ಅದರ ಉಪಾಧ್ಯಕ್ಷರಾಗುತ್ತಾರೆ. ನಂತರದಲ್ಲಿ ಅದರ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಾರೆ. 1952 ರಿಂದ ಮೊದಲುಗೊಂಡು 1984 ರವರೆಗೆ ಬಹುಗುಣ ಅವರು, ಒಂದೋ ಯುಪಿ ವಿಧಾನಸಭೆಯ ಸದಸ್ಯರಾಗಿ ಅಥವಾ ಲೋಕಸಭಾ ಸದಸ್ಯರಾಗಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

1984 ರಲ್ಲಿ, ಬಹಗುಣ ಅವರು ತಮ್ಮ ರಾಜಕೀಯ ಪ್ರಯಾಣವನ್ನು ಆರಂಭಿಸಿದ್ದ ಅದೇ ಅಲಹಾಬಾದ್ ಕ್ಷೇತ್ರದಿಂದ ಲೋಕದಳ ಅಭ್ಯರ್ಥಿಯಾಗಿ ತಮ್ಮ ಕೊನೆಯ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದರು. ಆದರೆ, ಬಹುಗುಣ ಅವರು ಕಾಂಗ್ರೆಸ್ ಅಭ್ಯರ್ಥಿ ಮತ್ತು ಚಲನಚಿತ್ರ ನಟ ಅಮಿತಾಬ್ ಬಚ್ಚನ್ ವಿರುದ್ಧ 1,87,000 ಮತಗಳ ಭಾರಿ ಅಂತರದಿಂದ ಸೋಲುತ್ತಾರೆ.

ನಾಲ್ಕು ವರ್ಷಗಳ ನಂತರ, ಬಹುಗುಣ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಅಮೆರಿಕಾದಲ್ಲಿ ಹೃದಯ ಶಸ್ತ್ರಚಿಕಿತ್ಸೆಗೂ ಒಳಗಾಗುತ್ತಾರೆ. 1989 ಮಾರ್ಚ್ 17 ರಂದು ಹೆಚ್‌ಎನ್ ಬಹುಗುಣ ನಿಧನರಾಗುತ್ತಾರೆ.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page