Friday, June 14, 2024

ಸತ್ಯ | ನ್ಯಾಯ |ಧರ್ಮ

“ಹೊಲೆಮಾದಿಗರು” ಮತ್ತು”ಭಾರತದ ಪ್ರಜೆಗಳಾದ ನಾವು”

ಭಾರತೀಯ ಚಿತ್ರರಂಗದ ಮನುವಾದಿ ಮನದ ನಿರ್ದೇಶಕರ ಕಪಾಲಕ್ಕೆ ಬಾರಿಸುವಂತಹ ವ್ಯತಿರಿಕ್ತವಾದ ಚಿತ್ರಕತೆ “ಭಾರತದ ಪ್ರಜೆಗಳಾದ ನಾವು” ಚಿತ್ರದ್ದು.ಈ ಚಿತ್ರ ಆರಂಭವಾಗುವುದೇ ಅಂಬೇಡ್ಕರ್ ಪಟ ಮತ್ತು ಸಂವಿಧಾನ ಪೀಠಿಕೆಯಿಂದ…!ಈ ಚಿತ್ರ ಜನಮನಕ್ಕೆ ತಲುಪಿಸುವ ಬಗೆ ಹೇಗೆ? ಡಾ. ಚಂದ್ರಶೇಖರ
ಮೈಸೂರು.

ಭಾರತದ ನನ್ನ ಸಹೋದರ ಸಹೋದರಿಯರೇ, ಕೆಲವು ದಿನಗಳ ಹಿಂದೆ ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ಉಪೇಂದ್ರ “ಊರಿದ್ದ ಕಡೆ ಹೊಲೆಯರು ಇರುತ್ತಾರೆ” ಎಂಬ ಆಡುಮಾತಿನಿಂದ ಅಭ್ಯಾಸವಾಗಿರುವ ಮಾತನ್ನು ಕಿಡಿಗೇಡಿಗಳಿಗೆ ಹೋಲಿಸಿ ಮಾತನಾಡಿದ್ದು ಬಹಳ ವಿವಾದವಾಗಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಈಗ ಪರ ವಿರೋಧಗಳೂ ಸೃಷ್ಟಿಯಾಗಿವೆ.

ಈ ಮಾತುಗಳನ್ನು ಉಪೇಂದ್ರನೇ ಮೊದಲು ಮಾತಾಡಿಲ್ಲ. ಅನೇಕ ಸಿನಿಮಾಗಳಲ್ಲಿ ಬಳಸಿದ್ದಾರೆ. ಅನೇಕರು ಹೀಗೆ ಆಡುಮಾತಿನಲ್ಲಿ ಕೆಟ್ಟದ್ದಕ್ಕೆ ಉದಾಹರಣೆಯಾಗಿ ಸಹ ಬಳಸಿದ್ದಾರೆ. ಆದರೂ ಏಕೆ ಉಪೇಂದ್ರನ ಮಾತುಗಳು ಮಾತ್ರವೇ ವಿವಾದವಾದವು?
ಅಷ್ಟಕ್ಕೂ ಹೊಲೆಯ ಎಂದು ಮಾತಾಡಿದರೆ ಈ ಜನ ಯಾಕೆ ಉರಿದುಬೀಳುತ್ತಿದ್ದಾರೆ? ಬಸವಣ್ಣನವರ ವಚನವೇ ಹೊಲಸು ತಿಂಬುವನೇ ಹೊಲೆಯ? ಎಂಬ ಮಾತಿಲ್ಲವೇ? ಅದೊಂದು ನುಡಿಗಟ್ಟು, ಗಾದೆ, ನಾಣ್ಣುಡಿ ಎಂದೆಲ್ಲಾ ಉಪೇಂದ್ರ ಪರ ಬ್ಯಾಟಿಂಗ್ ಆಡುತ್ತಿರುವವರು ಹೊಲೆಯರನ್ನು ಕೆರಳಿಸುತ್ತಿದ್ದಾರೆ.

ಉಪೇಂದ್ರ ತಕ್ಷಣ ಕ್ಷಮೆ ಕೇಳಿದರಲ್ಲವೇ? ಅಂದರೆ ಅದು ತಪ್ಪು ಎಂದು ಅವರಿಗೆ ಅನ್ನಿಸಿತಲ್ಲವೇ? ಆದರೆ, ಅವರ ಕ್ಷಮೆಯಲ್ಲಿ ಹೃದಯವಂತಿಕೆ ಮತ್ತು ಮಾನವತೆ ಕಾಣಲಿಲ್ಲ. ಅದು ಉಡಾಫೆಯಾಗಿತ್ತು ಉದ್ಧಟತನವಾಗಿತ್ತು.

ಹಿಂದೆ ಈ ಮಾತು ಚಾಲ್ತಿಯಲ್ಲಿದ್ದಾಗ ಈ ರೀತಿಯ ಸೋಷಿಯಲ್ ಮೀಡಿಯ ಇರಲಿಲ್ಲ. ಅದಲ್ಲದೆ ಹೊಲೆಮಾದಿಗರಲ್ಲಿ ಅದನ್ನು ದಕ್ಷತ್ತಿನಿಂದ ಕೇಳುವ ಧ್ವನಿಯೂ ಇರಲಿಲ್ಲ. ಹಿಂದೆ ಕೇಳಲಿಲ್ಲ ಅಂದ ಮಾತ್ರಕ್ಕೆ ಈಗಿನ ಯುವಜನಾಂಗವೂ ಕೇಳಬಾರದು ಅಂತೇನಾದರು ಇದೆಯೇ?

ಹೊಲೆಯ ಎಂಬುದೊಂದು ಜಾತಿಯ ಹೆಸರು. ಆ ಜಾತಿಯ ಜನ ದೇಶದಾದ್ಯಂತ ಬಹುಸಂಖ್ಯೆಯಲ್ಲಿದ್ದಾರೆ. ಅವರನ್ನು ಕೊಳಕಿಗೆ ಹೋಲಿಸುವ ಮಾತುಗಳು ಆ ಜನಾಂಗಕ್ಕೆ ನೋವುಂಟು ಮಾಡುತ್ತದೆ ಎನ್ನುವಷ್ಟು ಪರಿಜ್ಞಾನ ಇರಬೇಕಿತ್ತಲ್ಲವೇ?

ಇವರೆಲ್ಲರ ದೃಷ್ಟಿಯಲ್ಲಿ ಹೊಲೆಯರೆಂದರೆ ಕೀಳೇ? ಅದೊಂದು ನಾಣ್ಣುಡಿಯೇ? ಗಾದೆಯೇ? ಖಂಡಿತವಾಗಿಯೂ ಇಲ್ಲ. ಅದನ್ನು ಹೊಲೆಯರನ್ನು ಕೀಳಾಗಿ ಹಂಗಿಸುವುದಕ್ಕೇ ಬಳಸಿರುವುದಾಗಿದೆ.

ಉಪೇಂದ್ರನಂತಹ ಒಬ್ಬ ಜವಾಬ್ದಾರಿಯುತ ಚಲನಚಿತ್ರ ನಿರ್ದೇಶಕನಿಗೆ ಇಷ್ಟು ಪರಿಜ್ಞಾನ ಇಲ್ಲದಿದ್ದರೆ ಈತ ಯಾವ ರೀತಿಯ ರಾಜಕೀಯ ಮಾಡಬಲ್ಲ? ಇವನಿಗಿರುವ ಅಭಿಮಾನಿಗಳ ವರ್ಗದಲ್ಲಿ ಬಹುತೇಕರು ದಲಿತರೇ ಇರುತ್ತಾರೆ ಅಥವಾ ಇತರೆ ಶೂದ್ರರಿರುತ್ತಾರೆ. ಇವರೆಲ್ಲರಿಗೂ ಉಪೇಂದ್ರ ಹೇಳಿದ ಮಾತು ಬಹಳ ಸಾಧಾರಣ ಎನಿಸುತ್ತದೆ. ಆದ್ದರಿಂದ ಉಪೇಂದ್ರನ ಮಾತಿಗೆ ಈ ಪ್ರಮಾಣದ ವಿರೋಧದ ಅಲೆ ಎದ್ದಿರುವುದು. ಇದರ ಮೂಲಕ ಈ ಪದಗಳನ್ನು ಕೀಳು ಎಂಬುದಕ್ಕೆ ಉದಾಹರಣೆಯಾಗಿ ಬಳಸುವುದನ್ನು ನಿಷೇಧಿಸಬೇಕು.

ಸಾಮಾಜಿಕ ಸ್ಥಿತಿಗತಿಗಳನ್ನೇ ಅರಿಯದಿರುವ ಉಪೇಂದ್ರನ ಸಿನಿಮಾಗಳಿಂದ ಪ್ರೇಕ್ಷಕರು ಕಲಿಯುವುದು ಏನೂ ಇಲ್ಲ. ಹೆಚ್ಚೆಂದರೆ ಅವನು ಯುವಜನರನ್ನು ಮನರಂಜನೆ ರೂಪದಲ್ಲಿ ಹುಚ್ಚೆಬ್ಬಿಸಬಹುದು ಅಷ್ಟೆ. ಕನ್ನಡ ಚಿತ್ರಗಳ ಬಂಡವಾಳವೇ ಇಷ್ಟು.ಇಲ್ಲಿ ಒಂದೇ ಸೂತ್ರ.

ಈ ಹೊಲೆಯ ಪದದ ವಿವಾದದ ಸಂದರ್ಭದಲ್ಲಿ ನಾನು ನಮ್ಮ ಆತ್ಮೀಯ ಗೆಳೆಯರಾದ ಲೇಖಕ, ಸಾಮಾಜಿಕ ಚಿಂತಕ ಡಾ.ಕೃಷ್ಣಮೂರ್ತಿ ಚಮರಂ ಅವರ ನಿರ್ದೇಶನದ “ಭಾರತದ ಪ್ರಜೆಗಳಾದ ನಾವು” ಚಿತ್ರವನ್ನು ನೆನೆಪಿಸಿಕೊಳ್ಳುತ್ತಾ ಕೆಲವು ವಿಷಯಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು. ಚಮರಂ ಅವರ ಈ ಚಿತ್ರವಿನ್ನೂ ಬಿಡುಗಡೆಯಾಗಿಲ್ಲ. ಅದು ಅವರಿಗೆ ಕಷ್ಟವಾಗಿದೆ. ಆದರೆ ಅವರ “ಭಾರತದ ಪ್ರಜೆಗಳಾದ ನಾವು” ಎಂಬ ಈ ವಿಭಿನ್ನ ಟೈಟಲ್ ಮತ್ತು ವಿಭಿನ್ನ ಕಾನ್ಸೆಪ್ಟ್ ಇರುವ ಚಿತ್ರವನ್ನು ಮೈಸೂರಿನ ಕಲಾಮಂದಿರದಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಕಲಾಮಂದಿರ ತುಂಬಿತ್ತು.
ಚಿತ್ರ ಮುಗಿದ ಮೇಲೆ ಒಂದು ಸಂವಾದ ಏರ್ಪಡಿಸುವ ಆಸೆ ಇತ್ತು ಅವರಿಗೆ ಆದರೆ ಕಾಲಾವಕಾಶದ ಕಾರಣಕ್ಕೆ ಆಗಲಿಲ್ಲ.

ಆದರೆ ಬಹುತೇಕರು ಚಿತ್ರವನ್ನೇನೋ ಮೆಚ್ಚಿದರು. ಆದರೆ ಅದರಲ್ಲಿ ಅದ್ದೂರಿತನ ಇರಲಿಲ್ಲ ಎಂಬ ಕೊರಗನ್ನು ಹೇಳಿದರು. ಅವರ ಮಾತುಗಳು ನಿಜ.
ಆದರೆ ಚಮರಂ ಅವರು ಈ ಸಿನಿಮಾ ಮಾಡಿದ್ದರ ಉದ್ದೇಶ ತಾವೇನೋ ಭಿನ್ನವಾದುದನ್ನು ಹೇಳಬೇಕು ಎಂಬ ತುಡಿತದಲ್ಲಿ ಈ ಚಿತ್ರವನ್ನು ಸ್ವಯಂ ನಿರ್ಮಾಣ ಮಾಡಿದ್ದಾರೆ. ಹೊಸಬರ ತಂಡ, ಮನರಂಜಿಸುವ ಅಂಶಗಳು ಮತ್ತು ಅದ್ದೂರಿತನ ಇಲ್ಲದಿದ್ದರೆ ಚಿತ್ರ ಹಣಗಳಿಸುವುದು ಕಷ್ಟ ಎಂಬ ಸತ್ಯವನ್ನು ಅವರು ತಿಳಿದೂ ಈ ಸಿನಿಮಾ ಮಾಡಿದ್ದಾರೆ ಎಂದರೆ ಅದು ನಮ್ಮ ಜನಸಮುದಾಯಕ್ಕೆ ಒಂದು ಉತ್ತಮ ಸಂದೇಶ ನೀಡುವುದೇ ಆಗಿದೆ. ಅದನ್ನವರು ಬಹಳ ಧೈರ್ಯವಾಗಿ ಮತ್ತು ಸೂಕ್ಷ್ಮವಾಗಿ ಸಿನಿಮಾದಲ್ಲಿ ಹೇಳಿದ್ದಾರೆ. ಅದು ನನಗೆ ಬಹಳವೇ ಹಿಡಿಸಿದ ಅಂಶ. ಇದನ್ನು ಸಿನಿಮಾ ನೋಡಿದಾಗಲೇ ಹೇಳಬೇಕೆಂದಿದ್ದೆ. ಆದರೆ ಸಮಯವೇ ಆಗಲಿಲ್ಲ.

ಈ ಹೊಲೆಯ ವಿವಾದದ ಹಿನ್ನೆಲೆಯಲ್ಲಿ ಇದನ್ನು ಹೇಳವಂತೆ ಮನಸು ಒತ್ತಡ ತಂದಿತು.

ಭಾರತದ ಸಿನಿಮಾ ಗ್ರಾಮರ್ ಎಂದರೆ ಅದು ನಿಸ್ಸಂಶಯವಾಗಿ ಮೇಲುಜಾತಿ ಮತ್ತು ಮೇಲು ವರ್ಗದ ಮೇಲರಿಮೆಯನ್ನೇ ನಮ್ಮ ತಲೆಗೆ ತುಂಬುವುದೇ ಆಗಿದೆ. ಇಲ್ಲಿನ ಚಿತ್ರಗಳಲ್ಲಿ ಆಯಾಯ ಜಾತಿಗೆ ಆಯಾಯ ಕುಲಕಸುಬು, ಕಟ್ಟಳೆಗಳನ್ನೇ ಆಪಾದಿಸಲಾಗಿದೆ. ಮುಸಲ್ಮಾನರು ಭಯೋತ್ಪಾದಕರು, ದಲಿತರು ಕೂಲಿಗಳು, ಕೀಳು ಕೆಲಸಗಳನ್ನು ಮಾಡುವವರು, ಹೆಣ್ಣು ಗಂಡಿಗೆ ಗುಲಾಮಳು, ಕ್ರೈಸ್ತರು ಬಿಚ್ಚೋಲೆ ರೀತಿಯವರು…ಹೀಗೆ ತಾನೆ ನಾವು ನೋಡಿದ್ದೇವೆ!?

ಭಾರತೀಯ ಚಿತ್ರರಂಗದ ಈ ರೀತಿಯ ಮನುವಾದಿ ಮನದ ನಿರ್ದೇಶಕರ ಕಪಾಲಕ್ಕೆ ಬಾರಿಸುವಂತಹ ವ್ಯತಿರಿಕ್ತವಾದ ಚಿತ್ರಕತೆ “ಭಾರತದ ಪ್ರಜೆಗಳಾದ ನಾವು” ಚಿತ್ರದ್ದು.

ಹೌದು. ಇಲ್ಲಿ ಸಿನಿಮಾ ನೋಡುವಾಗ ನಾವು ಗಮನಿಸಬೇಕಾದ ಪ್ರಮುಖವಾದ ಅಂಶವೆಂದರೆ ಚಿತ್ರದ ನಾಯಕ ಶಂಕರ್ ದಲಿತ ಸಮುದಾಯದವನು ಎಂಬುದನ್ನು ಚಿತ್ರದಲ್ಲಿ ನೇರವಾಗಿಯೇ ಪ್ರತಿಪಾದಿಸಲಾಗಿದೆ. ಆತ ಬಹಳ ಬುದ್ದಿವಂತ, ಹೃದಯವಂತ, ಶಕ್ತಿವಂತ ಮತ್ತು ಸಂಭಾವಿತನಾದವನು. ಅಂತೆಯೇ ಅವನ ಗೆಳೆಯರು ಹೆಚ್ಚು ವಿದ್ಯಾವಂತರಲ್ಲದಿದ್ದರೂ ಯಾವುದೇ ದುಶ್ಚಟಗಳಿಲ್ಲದ ಸುಗುಣರು. ನಾಯಕನ ತಂದೆ ತಾಯಿ ಜೀತದವರಾದರೂ ಬಹಳ ವಿಶಾಲ ಮನದ ಮುಗ್ದರು.

ಅದೇ ಕಾಲಕ್ಕೆ ಮೇಲ್ಜಾತಿ/ಮೇಲ್ವರ್ಗ(ಯಾವ ಜಾತಿ ಎಂದು ನಿರ್ದೇಶಕ ಚಮರಂ ಅವರನ್ನು ಹೇಳುವುದಿಲ್ಲ. ಆದರೆ ಅವರುಗಳ ಹೆಸರಿನಿಂದ ನಾವು ಗುರ್ತಿಸಬಹುದು!) ಈ ಜಾತಿಯಲ್ಲಿ ಸಹ ಕುಯುಕ್ತಿಯವರು, ಪುಡಾರಿಗಳು, ದುಶ್ಚಟಗಳೇ ತುಂಬಿದ ಕಿಡಿಗೇಡಿಗಳು, ಆಸೆಬುರುಕರು ಇದ್ದಾರೆ. ಅವರೇ ಇಲ್ಲಿ ಖಳರು!

ಆದರೆ ಅವರೊಳಗೊಬ್ಬ ಆದರ್ಶದ ವ್ಯಕ್ತಿ ಶಿವಪ್ಪನ ಪಾತ್ರದ ಮೂಲಕ ಮೇಲುಜಾತಿಯವರು ಯಾವ ರೀತಿಯಲ್ಲಿ ತಮ್ಮನ್ನು ತಾವು ಮಾರ್ಪಡಿಸಿಕೊಳ್ಳಬೇಕು ಎಂಬುದನ್ನು ಸೂಚ್ಯವಾಗಿ ಕಟ್ಟಿಕೊಡುವ ಮೂಲಕ ಇಡೀ ಇಷ್ಟು ಕಾಲದ ಚಿತ್ರರಂಗದ ಆಲೋಚನೆಯನ್ನೇ ತಿರುಗು ಮುರುಗು ಮಾಡುವ ಕತೆ ಈ ಚಿತ್ರದ ಆಂತರ್ಯದಲ್ಲಿದೆ. ಈ ವಿಷಯ ನನ್ನನ್ನು ಬಹಳವೇ ಕಾಡಿತು. ಇದನ್ನೇ ನಾವೀಗ ಪ್ರಬಲವಾಗಿ ಪ್ರತಿಪಾದಿಸಬೇಕಾಗಿದೆ.

ಈ ಚಿತ್ರದಲ್ಲೂ ಈ ಹೊಲೆಯರ ಕುರಿತ ಎರಡು ಜನಮನದಲ್ಲಿನ ಮಾತುಗಳನ್ನು ಉದ್ದೇಶಪೂರ್ವಕವಾಗಿ ಬಳಸಿದ್ದಾರೆ. ಇದನ್ನು ನೋಡಿದರೆ ಈ ಮೇಲು ಎಂಬ ಅಹಮ್ಮಿನ ಜನರ ಮನೋಧೋರಣೆ ತಿಳಿಯುತ್ತದೆ. ಇದರ ಟ್ರೈಲರ್ ಯೂಟ್ಯೂಬ್ ನಲ್ಲಿದೆ ನೀವು ವೀಕ್ಷಿಸಬಹುದು.

ಇದನ್ನು ಹೇಳುವುದಕ್ಕೆ ಅಪಾರವಾದ ಓದು ಬೇಕು. ಚಮರಂ ಬಹುಜನ ಚಳವಳಿಯಲ್ಲಿ ಹಲವು ವರ್ಷ ಕಲಿತವರಾಗಿ ಬಹಳ ಸ್ಪಷ್ಟವಾಗಿ ಈ ವಿಷಯವನ್ನು ಈ ಸಿನಿಮಾದಲ್ಲಿ ಪ್ರಕಟಿಸಿದ್ದಾರೆ. ಇದನ್ನು ನಾವು ಗುರ್ತಿಸಬೇಕು. ಬೇರೆ ಚಿತ್ರಗಳಲ್ಲಿರುವ ಡಬಲ್ ಮೀನಿಂಗ್, ಕೀಳು ಹಾಸ್ಯ, ಅರ್ಥವಿಲ್ಲದ ಹೊಡೆದಾಟ, ಡಿಸ್ಕೋ ಇವುಗಳನ್ನು ಇನ್ನೂ ಎಷ್ಟು ದಿನ ನಾವು ನೋಡಿ ಈ ಉಪೇಂದ್ರನ ತರದವರನ್ನು ಸ್ಟಾರ್ ಮಾಡುತ್ತಾ ಹೋಗೋದು? ಅವರಿಂದಲೇ ಈತರ ಅವಮಾನಕ್ಕೆ ಒಳಗಾಗೋದು ಹೇಳಿ?

ಚಮರಂ ಅವರಿಗಿದ್ದ ಹಣಕಾಸಿನ ಮಿತಿಯಲ್ಲಿಯೂ ಬಹಳ ಅರ್ಥಪೂರ್ಣವಾದ ಚಿತ್ರವನ್ನು ಮಾಡಿರುವುದೇ ಒಂದು ದೊಡ್ಡ ಸಾಹಸ. ಈ ಚಿತ್ರ ಆರಂಭವಾಗುವುದೇ ಅಂಬೇಡ್ಕರ್ ಪಟ ಮತ್ತು ಸಂವಿಧಾನ ಪೀಠಿಕೆಯಿಂದ…!

ಅದರಲ್ಲೂ “ಜೈಭೀಮ್” ಎಂಬ ಲಾಂಚನದಲ್ಲಿ ಈ ಚಿತ್ರದ ಟೈಟಲನ್ನೇ “ಭಾರತದ ಪ್ರಜೆಗಳಾದ ನಾವು” ಎಂದು ಇಟ್ಟಿದ್ದಾರೆ! ಎಂಥಾ ಟೈಟಲ್ಲು. ಇದನ್ನು ಇಡಲು ಗುಂಡಿಗೆ ಬೇಕು. ಈ ಟೈಟಲ್ ಅಟ್ರಾಕ್ಟಿವ್ ಆಗಿಲ್ಲ ಎಂದು ನಮ್ಮವರೇ ಹಲವರು ಜರಿದರು ಎಂದು ಚಮರಂ ಬರೆದುಕೊಂಡಿದ್ದರು. ನಮಗೀಗ ನಮ್ಮ ಕತೆಗಳು ಬೇಕಿವೆ. ಅವರ ಕತೆಗಳನ್ನು ಅದ್ದೂರಿಯಾಗಿ ಹೇಳಿ ನಮ್ಮ ತಲೆಗೆ ತುಂಬಬಲ್ಲ ಶಕ್ತಿ ಅವರಿಗಿದೆ. ಆದರೆ ಅದನ್ನು ತಿರಸ್ಕರಿಸಿ ನಮ್ಮವರ ಸರಳ ಕತೆಗಳನ್ನೇ ಪ್ರೋತ್ಸಾಹಿಸುತ್ತಾ ನಮ್ಮ ಹೆಜ್ಜೆಗುರುತು ಮೂಡಿಸಬೇಕಲ್ಲವೇ?

ನಾವೀಗ ಹೊಲೆಮಾದಿಗರು ಎನ್ನುವುದಕ್ಕಿಂತ ಬಹಳ ಹೆಮ್ಮೆಯಿಂದ “ವಿ ದ ಪೀಪಲ್ ಆಫ್ ಇಂಡಿಯಾ” ಎಂದು ಅಸರ್ಟೈನ್ ಮಾಡಿಕೊಳ್ಳಬೇಕು. ನಾವೆಲ್ಲಾ ಒಂದೇ…ನಾವೆಲ್ಲಾ ಭಾರತೀಯರು ಎಂಬ ನಾವು ವಾಸ್ತವದಲ್ಲಿ ಎಷ್ಟರಮಟ್ಟಿಗೆ ನಮ್ಮ ನಮ್ಮ ಜಾತಿಧರ್ಮಗಳಿಗೆ ಅಂಟಿಕೊಂಡು ಆಷಾಡಭೂತಿಗಳಾಗುತ್ತೇವೆ. ನಾವು ನಿಜಕ್ಕೂ ಸಾಗಬೇಕಾದ ಹಾದಿ ಯಾವುದು ಎಂಬುದನ್ನು ಒಂದು ಸಾಮಾಜಿಕ ಕತೆಯೊಡನೆ, ಹನಸೋಗೆ ಸೋಮಶೇಖರ್ ಅವರ ಚಳವಳಿಯ ಹಾಡುಗಳನ್ನು ಸಾಂದರ್ಭಿಕವಾಗಿ ಬಳಸಿ ಚಮರಂ ಬಹಳ ಉತ್ತಮವಾದ ಚಿತ್ರವನ್ನು ನಿರ್ಮಿಸಿದ್ದಾರೆ. ಈ ರೀತಿಯಲ್ಲಿ ನಾವು ಉಪೇಂದ್ರನಂತಹವರಿಗೆ ಪಾಠ ಕಲಿಸಬೇಕು. ಈ ರೀತಿಯಾಗಿ ನಾವು ನಮ್ಮ ಬದುಕನ್ನು ಜಗತ್ತಿಗೆ ಸಾರಬೇಕು. ಹೀಗೆ ನಾವು ಎದ್ದು ನಿಂತು ಜಗತ್ತಿಗೆ ನಮ್ಮತನ ತೋರಬೇಕು.

ಬಹುಶಃ ಚಿತ್ರದ ಒಳಗಿರುವ ಈ ಮಹತ್ವವೇ ಈ ಚಿತ್ರವು ಹಲವು ಪ್ರಶಸ್ತಿಗಳಿಗೆ ಭಾಜನವಾಗಲು ಕಾರಣವಾಗಿರಬೇಕು ಎಂದು ನಾನಾದರೂ ಭಾವಿಸುತ್ತೇನೆ.

ಇದು ನನಗೆ ದಕ್ಕಿದ ಅರ್ಥ. ಈ ಚಿತ್ರ ಜನಮನಕ್ಕೆ ತಲುಪಿಸುವ ಬಗೆ ಹೇಗೆ? ಅದನ್ನು ಚಮರಂ ಅವರೇ ಹೇಳಬೇಕು. ಅಥವಾ ಅವರ ಚಳವಳಿಯ ಒಡನಾಡಿಗಳು ಹೇಳಬೇಕು.

ಇದನ್ನೂ ಓದಿ-ಉಪೇಂದ್ರನ ಅಸೂಕ್ಷ್ಮ ಮಾತು ಮತ್ತು ಪೊಗರು ಸಿನಿಮಾದ ವಿವಾದ

Related Articles

ಇತ್ತೀಚಿನ ಸುದ್ದಿಗಳು