Tuesday, September 23, 2025

ಸತ್ಯ | ನ್ಯಾಯ |ಧರ್ಮ

ತಮಿಳಿಗೆ ಹೊಂಬಾಳೆ ಫಿಲಂಸ್ : ಕೀರ್ತಿ ಸುರೇಶ್ ಅಭಿನಯದಲ್ಲಿ ‘ರಘುತಥಾ’ ಚಿತ್ರದ ನಿರ್ಮಾಣ

ಬೆಂಗಳೂರು : ಈ ವರ್ಷ ಕನ್ನಡದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕೆಜಿಎಫ್ 2’ ಮತ್ತು ʼಕಾಂತಾರʼ ಎಂಬ ಎರಡು ಬ್ಲಾಕ್‌ ಬಸ್ಟರ್‌  ಚಿತ್ರಗಳನ್ನು ನೀಡಿರುವ ʼಹೊಂಬಾಳೆ ಫಿಲಂಸ್ʼ ಸಂಸ್ಥೆಯು ಇದೀಗ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದೆ. ಇದುವರೆಗೂ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು, ಈಗ ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ.

ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಮೊದಲ ತಮಿಳು ಚಿತ್ರದ ಹೆಸರು ʼರಘುತಥಾʼ. ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಮೊದಲ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಈ ಹಿಂದೆ, ‘ದಿ ಫ್ಯಾಮಿಲಿ ಮ್ಯಾನ್’  ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

‘ರಘುತಥಾ’ ಒಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆ.

ಈ ಚಿತ್ರದ ಕುರಿತು ಮಾತನಾಡುವ ಹೊಂಬಾಳೆ ಫಿಲಂಸ್‌ನ ವಿಜಯ್  ಕಿರಗಂದೂರು, ‘ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದ್ದು, ಸಮಾಜದ ವಿರುದ್ದ ಸವಾಲೆಸೆಯುವ ಒಬ್ಬ ಗಟ್ಟಿಗಿತ್ತಿ ಯುವತಿಯ ಸುತ್ತ ಸುತ್ತತ್ತದೆ. ತನ್ನ ಸಿದ್ಧಾಂತಗಳನ್ನು ಎತ್ತಿಹಿಡಿಯುವುದರ ಜತೆಗೆ, ಸಮಾಜದ ವಿರುದ್ಧ ಹೋರಾಡುತ್ತಲೇ, ಆಕೆ ಹೇಗೆ ಎಲ್ಲರಿಗೂ ಸ್ಫೂರ್ತಿಯಾಗುತ್ತಾಳೆ ಎಂಬುದು ಚಿತ್ರದ ಕಥೆ. ಇಂಥದ್ದೊಂದು ಕಥೆ ಮತ್ತು ಪಾತ್ರಕ್ಕೆ ಕೀರ್ತಿ ಸುರೇಶ್ ಅವರು ಅದ್ಭುತವಾದ ಆಯ್ಕೆಯಾಗಿದ್ದು, ಅವರೊಂದಿಗೆ ಕೆಲಸ ಮಾಡಲು ಹೊಂಬಾಳೆ ಫಿಲಂಸ್ ಹೆಮ್ಮೆ ಪಡುತ್ತದೆ. ಇದೊಂದು ಕಾಮಿಡಿ ಚಿತ್ರವಾಗಿದ್ದು, ಜನ ನಗುತ್ತಲೇ ತಮ್ಮ ಆತ್ಮಾವಲೋಕನ ಮಾಡಿಕೊಳ್ಳುವ ವಿಭಿನ್ನ ಪ್ರಯತ್ನ ಇದಾಗಲಿದೆ’ ಎಂದು ಹೇಳಿದ್ದಾರೆ.

ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್‌ ಸ್ವಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ಞಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ಜೈ ಭೀಮ್ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ.

‘ರಘುತಥಾ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, 2023ರ ಬೇಸಿಗೆ ರಜೆಯ ಸಂದರ್ಭದಲ್ಲಿ ಚಿತ್ರವು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page