Friday, June 14, 2024

ಸತ್ಯ | ನ್ಯಾಯ |ಧರ್ಮ

ಮನೆಯೇ ಮೊದಲ ಪಾಠಶಾಲೆ – ಕಲಿಕೆಯಾದ್ರೂ ಎಂಥದ್ದು?!

ಅವತ್ತೊಂದ್ ಜಿನ ಕ್ಲಾಸೊಳಗ ‘ಎಲ್ರೂವಿ ಒಂದಿ ನಿಮ್ಶ ಮಾತಾಡ್ಬೇಕು’ ಅಂತ ಹೇಳ್ಬುಟ್ಟು ಕೂತ್ಗಂಡೆ. ಎಲ್ರೂವಿ ಮೊಕ ಮೊಕ ನೋಡ್ಕಂಡು ಯಾರ್ ಮೊದ್ಲ ಅಂದ್ಕಂಡು ಕೂತ್ಗಂಡಿದ್ರು. ಕೊನಗ ತಾನು ನಮ್ಮವ್ವನ ಬಗ್ಗ ಮಾತಾಡ್ತೀನಿ ಅಂದ್ಕಂಬುಟ್ಟು ಒಬ್ಬ ಎದ್ದ. ಮಾತ್ಗ ನಿಂತವ್ನು ಮಾತ್ನ ನಿಲ್ಲಿಸ್ಬುಟ್ಟು ಒಂದೇ ಸಮಗ ಅತ್ಗಂಡು ನಿಂತವ್ನ. ಅವ್ನಿಗ ಸಮಾಧಾನ ಆಗೊವಶ್ಟು ಅಳೋದಕ್ಕ ಬುಟ್ಟು ನಾವ್ಗಳು ಸುಮ್ಕ ಕೂತಿದ್ದೊ. ಸ್ಯಾನೆ ಟೇಮ ತಗಂಡ.

ಆಮ್ಯಾಕ್ಕ ಅವ್ನು ‘ನಮ್ಮವ್ವ ಅಂದ್ರ ನಂಗ ಸ್ಯಾನೆ ಇಶ್ಟ ಸಾ. ಆದ್ರ ನಮ್ಮಪ್ಪ ಜಿನ ಜಿನ ನಮ್ಮವ್ವಗ ಹೊಡಿತನ. ಆವಾಗ ನಾನು ಅತ್ಗಂಡು ಕೂತ್ಗತಿದ್ದೆ. ನಮ್ಮವ್ವ ಯಾನ್ ಮಾಡಿದ್ರೂವಿ ಅಪ್ಪಗ ತಪ್ಪು ಅನಸ್ತದ. ಅದ್ಕ ಅಪ್ಪ ಅವ್ನಿಗ ಜಿನಾ ಹೊಡಿತನ. ನೋವಿಂದ ಅಳೋ ಅವ್ವನ್ನ ನೋಡಾಕ ಆಯ್ತಿರ್ಲಿಲ್ಲ ಸಾ.’ ಅಂದ್ಕಂಡು ಅಂವ ತಿರ್ಗ ಅಳಾಕ ಸುರು ಮಾಡಿದನು.

ನಮ್ಮವ್ವನ್ನ ಊರಾಗ ಎಲ್ರೂವಿ ಪೆದ್ದಿ ಪೆದ್ದಿ ಅಂತಾರ ಅಂದ್ಕಂಡು ಇನ್ನೊಬ್ಳು ಸ್ಯಾನೆ ಅಳಾಕ ಸುರು ಮಾಡಿದ್ಳು. ಯಾಕ? ಅಂದ್ರ… ನಮ್ಮವ್ವಗ ಯಾನೂ ಗೊತ್ತಾಗ್ತಿರಲಿಲ್ಲ. ಹಟ್ಟಿಯಾಗಿದ್ದ ಸಾಮಾನೆಲ್ಲ ಎತ್ಗಂಡು ಹೋಗಿ ಯಾರಿಗಾರ ಕೊಟ್ಬಿಟ್ಟು ಬರೋಳು. ಅಪ್ಪ ಸ್ಯಾನೆ ಕುಡ್ಕಂಡು ಬಿದ್ದಿರೋನು. ನಮ್ಮಮ್ಮ (ಅಜ್ಜಿ) ನೇ ನಮ್ಮನ್ನೆಲ್ಲ ನೋಡ್ಕಳದು. ಅವ್ವನಿಗ ನಮ್ಮಮ್ಮ ಯಾವಾಗ್ಲೂ ಬೊಯ್ತಾ ಇರೊಳು. ಆವಾಗ ನಂಗ ಬೇಜಾರಾಗೋದು. ನಮ್ಮಮ್ಮನ ಜೊತ್ಗ ಜಗಳ ಮಾಡ್ತಿದ್ದೆ. ಅಂದ್ಕಂಡು ಮಾತು ನಿಲ್ಲಿಸ್ಬುಟ್ಟು ಅಳ್ತಾ ನಿಂತ್ಳು.

ನಮ್ಮವ್ವ ಏನ್ ಕೇಳಿದ್ರೂ ಕೊಡಿಸ್ತಾಳ. ಆದ್ರ ಅವಳ ಹತ್ರ ಕಾಸು ಇದ್ರ. ಅವ್ವ ಕೂಲಿ ಮಾಡಾಕ ವೊಯ್ತಳ. ಯಾವಾಗರ ಜಾತ್ರ ಬತ್ತದಲ್ಲ ಆವಾಗ ಮಾತ್ರ ನಾನು ಅವ್ವನ ಹತ್ರ ಏನಾರ ಕೊಡ್ಸು ಅಂದ್ಕ ಕೇಳ್ತಿದ್ದೆ. ಆಗ ಅವ್ವ ಕೊಡ್ಸೋಳು.

ಚಿತ್ರ ಕೃಪೆ: ಗೂಗಲ್

ಇಂತ ಅವ್ದಿರ ನೆರಳಲ್ಲಿ ಬೆಳ್ದಿರೋ ಸ್ಯಾನೆ ಐಕ್ಳನ್ನ ನೋಡಿನಿ. ಇಲ್ಲೆಲ್ಲಾವಿ ಅಪ್ಪ ಅನ್ನೋ ಪಾತ್ರ ಕುಡುಕ. ದುಡಿಯಾಕ ಹೋಗ್ದೆಯಾ ಹೆಡ್ತಿ ಗೆಯ್ದಿರೋ ಕಾಸ್ನಲ್ಲಿ ಕುಡುದ್ಬುಟ್ಟು ಅವ್ಳಿಗ ಹೊಡ್ದು ಬಡ್ದು ಬಾಳಾಟ ಮಾಡ್ತವೆ. ಮನೆಯೇ ಮೊದಲ ಪಾಠ ಶಾಲೆ ಅನ್ನೋ ನುಡಿಗಟ್ಟು ನಮ್ಮ ಐಕ್ಳಿಗ ಸ್ಯಾನೆ ಭಾರ. ಹಟ್ಟಿಯ ಸಂಕಟವ ಹೊತ್ಗಂಡು ಇಸ್ಕೂಲಿಗ ಬಂದ್ರ…

ಇವ್ನು ಏನೂ ಕಲಿಯಲ್ಲ

ಓ… ಅವ್ಳಾ ಪೆದ್ದಿ

(ಈ ಪೆದ್, ದಡ್ಡ, ಹೆಡ್ಡ ಪದವನ್ನು ನಿಷೇಧಿಸಬೇಕು ಎಂದು ನನ್ನ ವಿದ್ಯಾರ್ಥಿಗಳೆಲ್ಲರ ಪರವಾಗಿ ಒತ್ತಾಯಿಸುತ್ತೇನೆ)

ನೀನು ಪಾತ್ರೆ ಬೆಳ್ಗೋಕೆ ಸಮ

ನೀನು ಹಸು ಮೇಯಿಸ್ಗಂಡಿರು

ಇಂತಾ ಮಾತುಗಳು ಯಾರ ಬಾಯಿಂದ ಬರಬಾರದೋ ಅಂತವ್ರ ಬಾಯಿಂದ ಬಂದು ಫ್ರೆಂಡ್ಸ್ ಮುಂದ್ಕ ಮುಜುಗರ ಆಗೋದು. ಓದಾಕ ಇರ್ಲಿ ಇಸ್ಕೂಲಿಗ ಬರಾಕ ಬೇಜಾರಾಗೋದು. ಗೌರ್ಮೆಂಟಿನ ಲೆಕ್ಕದಲ್ಲಿ ಇಸ್ಕೂಲು ಬಿಟ್ಟ ಮಕ್ಕಳ ಸಂಖ್ಯೆ ಜಿನ ಜಿನ ಹೆಚ್ಗಳದು. ನನ್ನ ಒಂದೂವರೆ ದಶಕ ಸರ್ವೀಸೆಲ್ಲಾವಿ ಹಳ್ಳಿನಲ್ಲೇ ಕಳ್ದಿರೋದ್ರಿಂದ ಹಳ್ಳಿ ಬಗ್ಗೆ ಮಾತ್ರ ಹೇಳ್ತಾವ್ನಿ. ಇನ್ನು ಪ್ಯಾಟೆ ಕತಾ ಬ್ಯಾರೆ ಇರ್ಬೌದು.

ಹಳ್ಳೀಲಿ ಹೆಣ್ಮಕ್ಳ ಬ್ಯಾರೆ ತರವಾಗೆ ಇರೋದು. ತಿಂಗ್ಳ ಹಿಂದೆ ನಂಗೊಂದು ಫೋನು ಬಂತು. ಅವ್ಳು ನನ್ನ ಹಳೇ ಸ್ಟುಡೆಂಟು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉದ್ಯೋಗಿ. ಅವ ಪೋನ್ ಮಾಡ್ಬಿಟ್ಟು “ಸರ್ ನಿಮ್ಗ ಗೊತ್ತಿರೋ ಒಬ್ಬ ಸ್ಟುಡೆಂಟ್ನ ಕರ್ಕಂಡು ಬಂದೀವಿ. ಅವ್ಳುಗ ಮದ್ವ ಆಗೇದ ಅಂತ ಯಾರೋ ಕಂಪ್ಲೇಟು ಕೊಟ್ಟರ” ಅಂದ್ಳು.

ಆ ಮಗೀನ ಕತಾ ಹೀಂಗದ… ಈ ಮಗು ಒಂಬತ್ನೇ ಕ್ಲಾಸು. ಅವ್ಳುಗ ಅಪ್ನಿಗ ಹೆಣ್ಮಗ ಅಂತ ಮೊದ್ಲಿಂದ್ಲೂವಿ ಇವ್ಳುನ ಕಂಡ್ರೆ ಆಯ್ತಿರಲಿಲ್ಲ. ಗಂಡ ಹೆಡ್ತಿ ನಡುವ ಸುಮ್ನ ಸುಮ್ನ ಜಗಳ. ಒಂಜಿನ ಅವ್ವ ಈ ಮಗಿನ ಬುಟ್ಟು ಗಂಡನ್ನೂ ಬುಟ್ಟು ಇನ್ನೊಬ್ರ ಜೊತ್ಗ ಹೋಗ್ಬಿಟ್ಳು. ಅಪ್ಪ ಹೆಡ್ತಿ ಮ್ಯಾಲಿನ ಕ್ವಾಪಕ್ಕ ಈ ಮಗಿಗ ಸ್ಯಾನೆ ಹೊಡ್ದ. ಅದು ಮಗಿನ ಅವ್ವನ ಮನೆಯವ್ರಿಗ ಗೊತ್ತಾಗ್ಬಿಟ್ಟು ಮಾವ ಬಂದು ಕರ್ಕಂಡು ಹೋಗ್ತಾನ. ಆದ್ರ ಅಪ್ಪ ತನ್ ಮಗ್ಳಿಗ ಮದ್ವ ಆಗದ ಅಂದ್ಕಂಡು ಕಂಪ್ಲೇಟು ಕೊಡ್ತನ. ಆಮೇಲೆ ಪೊಲೀಸು…

ಮಕ್ಕಳಾಗಿ ಆಡಬೇಕಾದ ಟೇಮಲ್ಲಿ ಇಂತಾ ಸಂಕಟವ ಹೊತ್ಗಂಡು ಬೆಳಿಯೋ ಈ ಐಕ್ಳಿಗ ಓದು ಅಂದ್ರ…

ಸಂತೋಷ ಗುಡ್ಡಿಯಂಗಡಿ

ನಂಜನಗೂಡಿನ ಹೆಗ್ಗಡಹಳ್ಳಿ ಸರ್ಕಾರಿ ಫ್ರೌಢ ಶಾಲೆಯ ಶಿಕ್ಷಕರು

ಇದನ್ನೂ ಓದಿ-ಅಡವಿಯ ಬುಡಕಟ್ಟು ಮಕ್ಕಳ ‘ವನ ಚೇತನಾʼhttps://peepalmedia.com/vana-chetana-of-adavis-tribal-children/

Related Articles

ಇತ್ತೀಚಿನ ಸುದ್ದಿಗಳು