Thursday, August 7, 2025

ಸತ್ಯ | ನ್ಯಾಯ |ಧರ್ಮ

ಧರ್ಮಸ್ಥಳ ಘರ್ಷಣೆ: ತನಿಖೆ ನಡೆಸಿ ವರದಿ ನೀಡಲು ಗೃಹ ಸಚಿವ ಪರಮೇಶ್ವರ್ ಸೂಚನೆ

ಬೆಂಗಳೂರು: ಧರ್ಮಸ್ಥಳದಲ್ಲಿ ಇತ್ತೀಚೆಗೆ ನಡೆದ ಎರಡು ಗುಂಪುಗಳ ನಡುವಿನ ಘರ್ಷಣೆಯ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಘರ್ಷಣೆಗೆ ಕಾರಣಗಳು, ಕಾರಣಕರ್ತರು ಮತ್ತು ಎರಡೂ ಗುಂಪುಗಳ ಉದ್ದೇಶಗಳ ಬಗ್ಗೆ ತನಿಖೆ ನಡೆಸುವಂತೆ ಅವರು ಆದೇಶಿಸಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅಸ್ಥಿಪಂಜರ ಶೋಧ ಕಾರ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಒತ್ತಾಯದ ಮೇರೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ತಿಳಿಸಿದರು. “ಇಲ್ಲಿ ಕೊಲೆಯಾಗಿದೆ, ನಾನೇ ಅನೇಕ ಶವಗಳನ್ನು ಹೂತಿದ್ದೇನೆ” ಎಂದು ಅನಾಮಿಕ ವ್ಯಕ್ತಿಯೊಬ್ಬರು ಹೇಳಿಕೆ ನೀಡಿದ್ದರು.

ಈ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ 164 ಹೇಳಿಕೆಯಾಗಿ ದಾಖಲಿಸಿಕೊಳ್ಳಲಾಗಿದ್ದು, ಅದರ ಆಧಾರದ ಮೇಲೆ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರಿಯಲ್ ಸೂಚನೆ ಇತ್ತು. ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಸ್‌ಐಟಿ ರಚಿಸಿದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

“ಧರ್ಮಸ್ಥಳದಲ್ಲಿ 13 ಸ್ಥಳಗಳಲ್ಲಿ ಶವಗಳನ್ನು ಹೂತುಹಾಕಿದ್ದೇನೆ ಎಂದು ಹೇಳಿಕೆ ಇತ್ತು. ಅದರಂತೆ 13 ಸ್ಥಳಗಳನ್ನು ಪರಿಶೀಲಿಸಲಾಗಿದ್ದು, 6ನೇ ಸ್ಥಳದಲ್ಲಿ ಪುರುಷನ ಅಸ್ಥಿಪಂಜರ ಪತ್ತೆಯಾಗಿದೆ. ಇದರ ಹೊರತಾಗಿ ಗುಡ್ಡದಲ್ಲಿ ದೊರೆತ ಮೂಳೆಗಳನ್ನು ಎಫ್‌ಎಸ್‌ಎಲ್‌ಗೆ (FSL) ಕಳುಹಿಸಲಾಗಿದೆ” ಎಂದು ಸಚಿವರು ಮಾಹಿತಿ ನೀಡಿದರು.

ಈ ಘಟನೆಗಳ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ದೂರು ಮತ್ತು ಪ್ರತಿದೂರುಗಳನ್ನು ದಾಖಲಿಸಲಾಗಿದ್ದು, ಎಫ್‌ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ. ಎಸ್‌ಐಟಿ ಮತ್ತು ಸ್ಥಳೀಯ ಪೊಲೀಸರು ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.

ಧರ್ಮಸ್ಥಳದ ವಿಚಾರದಲ್ಲಿ ಹೊರಗಿನವರ ಹೇಳಿಕೆಗಳು ಮುಖ್ಯವಲ್ಲ ಎಂದು ಪರಮೇಶ್ವರ್ ಒತ್ತಿ ಹೇಳಿದರು. ಎಸ್‌ಐಟಿ ತಾಂತ್ರಿಕವಾಗಿ ಮತ್ತು ಆಧುನಿಕವಾಗಿ ತನಿಖೆ ನಡೆಸಿ ಸತ್ಯವನ್ನು ಹೊರತರಬೇಕು. ತನಿಖೆಯ ಬಗ್ಗೆ ಸರ್ಕಾರ ಯಾವುದೇ ನಿರ್ದೇಶನಗಳನ್ನು ನೀಡುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.

“ಎಸ್‌ಐಟಿ ಸರಿಯಾಗಿ ತನಿಖೆ ಮಾಡುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಸರಿಯಾಗಿ ತನಿಖೆ ಆಗುತ್ತಿಲ್ಲ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಇವರೆಲ್ಲರೂ ಸಲಹೆ ಕೊಡುತ್ತಾರೆ. ರೆಡಾರ್ ತರಬೇಕು ಎನ್ನುತ್ತಿದ್ದಾರೆ. ಅವರು ಹೇಳಿದ ರೀತಿ ತನಿಖೆ ಮಾಡಲು ಆಗುತ್ತದೆಯೇ? ಪೊಲೀಸರು ಸಮರ್ಥರಿದ್ದಾರೆ. ತನಿಖೆ ಮಾಡುತ್ತಾರೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮತಗಳ್ಳತನದ ವಿರುದ್ಧ ನಾಳೆ ನಡೆಯಲಿರುವ ಪ್ರತಿಭಟನೆಗೆ ಪೊಲೀಸ್ ಆಯುಕ್ತರು ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಸಚಿವರು ತಿಳಿಸಿದರು. ಕೇಂದ್ರದಿಂದ ಎಸ್‌ಪಿಜಿ (SPG) ಸಿಬ್ಬಂದಿ ಬಂದಿದ್ದು, ಅವರೊಂದಿಗೆ ನಮ್ಮ ಪೊಲೀಸರು ಸಂಪರ್ಕದಲ್ಲಿದ್ದಾರೆ. ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರಿಗೂ ಭದ್ರತೆ ಒದಗಿಸಲಾಗುವುದು ಎಂದು ಪರಮೇಶ್ವರ್ ಮಾಹಿತಿ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page