Monday, June 17, 2024

ಸತ್ಯ | ನ್ಯಾಯ |ಧರ್ಮ

ಹೊನ್ನಾಳಿಯಲ್ಲಿ ನಡೆಯಿತು ಜಲಿಯನ್ ವಾಲಾಬಾಗ್ ಮಾದರಿ ಹತ್ಯಾಕಾಂಡ…

(ಕೆಚ್ಚೆದೆಯ ಹೋರಾಟಗಾರ, ಕೆಳದಿ ಸಂಸ್ಥಾನದ ಕುಡಿ ; ಬೂದಿ ಬಸಪ್ಪ ನಾಯಕ -ಭಾಗ 2)

ಬ್ರಿಟಿಷರ ವಿರುದ್ಧ ಅತ್ಯಂತ ವ್ಯವಸ್ಥಿತವಾಗಿ ಯುದ್ಧ ಮಾಡಿ ಮೈಸೂರು ಅರಸನ ಅರಸೊತ್ತಿಗೆಯೆ ಕಿತ್ತುಕೊಳ್ಳುವಂತೆ ಮಾಡಿದ ಮಹಾನ್ ರೈತ ಹೋರಾಟ, ರೈತರ ಸ್ವಾತಂತ್ರ್ಯ ಹೋರಾಟ, ರೈತರ ಕರ ನಿರಾಕರಣೆಯ ಹೋರಾಟ ಇತಿಹಾಸದ ಪುಟಗಳಲ್ಲಿ ದಾಖಲಾಗದೇ ಹೋದದ್ದು ದುರಂತವೇ ಸರಿ.

ಇದರ ಮಧ್ಯೆ ಹೊನ್ನಾಳಿಯ ಮಾರಿಕೊಪ್ಪದ ಹಳದಮ್ಮ ದೇವಸ್ತಾನದ‌ ಕಾರ್ಯಕ್ರಮ ಒಂದಕ್ಕೆ ನೂರಾರು ಜನ ಸೇರಿರುತ್ತಾರೆ. ಅದನ್ನೇ ಶಿವಕೂಟಮ್ ಅಥವಾ ಶಿವಕೂಟ ರೈತರ ಸಂಘಟನೆಗೆ ಬಳಸಿಕೊಂಡು ರಹಸ್ಯವಾಗಿ ಸ್ವಾತಂತ್ರ್ಯದ ಹೋರಾಟಕ್ಕಾಗಿ ಸಭೆ ನಡೆಸಲು ಯೋಜನೆ ರೂಪಿಸುತ್ತದೆ.‌ ಇದನ್ನು ಅರಿತ ಮರಾಠಿ ಅಧಿಕಾರಿಯೊಬ್ಬ ಬ್ರಿಟಿಷ್ ಅಧಿಕಾರಿ ರಾಷ್ ಫೋರ್ಟ್ ಗೆ ಮಾಹಿತಿ ತಲುಪಿಸುತ್ತಾನೆ. ಆಗ ಬಿದನೂರು ಫೌಜದಾರ( ಜಿಲ್ಲಾಧಿಕಾರಿ) ನಾಗಿದ್ದ ಕ್ರೂರಿ ಅಣ್ಣಪ್ಪ, ಮೈಸೂರು ಸೇನೆಯ ಕಮಾಂಡರ್ ಸಯ್ಯದ್ ಸಲಾರ್, ದಿವಾನ್ ವೆಂಕಟ್ ರಾಜ್ ಅರಸ್ ಹಾಗೂ ಲೆಫ್ಟಿನೆಂಟ್ ರಾಷ್ ಫೋರ್ಟ್ ನೇತೃತ್ವದಲ್ಲಿ ದಾಳಿ ನಡೆಸಲಾಗುತ್ತದೆ. ಈ ಮಾಹಿತಿ ಅರಿತು ಬೂದಿ ಬಸಪ್ಪ ಮತ್ತು ಇತರರು ಅಲ್ಲಿಂದ ತಪ್ಪಿಸಿಕೊಳ್ಳುತ್ತಾರಾದರೂ ಫೌಜದಾರ್ ಅಣ್ಣಪ್ಪ ಅಕ್ಷರಶಃ ಕ್ರೌರ್ಯಕ್ಕೆ ಇಳಿದುಬಿಡುತ್ತಾನೆ. ಮನಬಂದಂತೆ ದೇವಸ್ಥಾನದ ಒಳಗೆ ಗುಂಡು ಹಾರಿಸಲಾಗುತ್ತದೆ. ಮಕ್ಕಳು ಮಹಿಳೆಯರು ಸಮೇತ ನಲವತ್ತು ಮಂಧಿ ಕುಸಿದು ಬೀಳುತ್ತಾರೆ. ಮೈಸೂರು ಸಂಸ್ಥಾನದ ಹೇಳಿಕೆಯ ಪ್ರಕಾರವೇ ಇನ್ನೂರಕ್ಕೂ ಹೆಚ್ಚು ಜನರನ್ನು ಬಂಧಿಸಿ ನೂರಕ್ಕೂ ಹೆಚ್ಚು ಜನರನ್ನು ಹೊನ್ನಾಳಿಯ ಶಿಕಾರಿಪುರ ರಸ್ತೆಯಲ್ಲಿರುವ ಮಾರಿಕೊಪ್ಪದ ಹಳದಮ್ಮ ದೇವಸ್ಥಾನದಿಂದ ಶಿಕಾರಿಪುರದ ವರೆಗೂ ಪ್ರತೀ ಸಾಲು ಮರಕ್ಕೂ ನೇಣಿಗೇರಿಸಿ‌ ಹಾಗೇ ಬಿಡಲಾಗುತ್ತದೆ. ಅಕ್ಷರಶಃ ದೇವಸ್ಥಾನದ ಎದುರಿನ ಮರಗಳಿಂದ ಹಿಡಿದು ಶಿಕಾರಿಪುರ ರಸ್ತೆಯ ಹಲವು ಕಿ.ಮಿ ನವರೆಗೆ ಸ್ಮಶಾನ ಸದೃಶ ವಾತಾವರಣ‌ ಸೃಷ್ಟಿಯಾಗಿ ಬಿಡುತ್ತದೆ. ಜನರಲ್ಲಿ ಬ್ರಿಟಿಷರ ಹಾಗು ಮೈಸೂರು ಮಹಾರಾಜರ ಮೇಲೆ ಹೆದರಿಕೆ ಹುಟ್ಟಿಸಲು ಈ ದುಷ್ಕೃತ್ಯವೆಸಗಲಾಗುತ್ತದೆ. ಜಲಿಯನ್ ವಾಲಾಬಾಗ್ ಘಟನೆಗೂ ಎಂಬತ್ತು ವರ್ಷ ಹಿಂದೆಯೇ ಈ ಘಟನೆ ನಡೆದು ಇನ್ನೂರಕ್ಕೂ ಹೆಚ್ಚು ಜನ ಜೀವ ಕಳೆದು ಕೊಂಡರೂ ಈ ಘಟನೆಗೆ ಕಾರಣವಾದ ಹೋರಾಟ, ಬ್ರಿಟಿಷರ ಕ್ರೌರ್ಯದ ಪರಮಾವಧಿ, ಸರಣಿ ಕೊಲೆ ಇವೆಲ್ಲವು ಇತಿಹಾಸದ ಪುಟಗಳಲ್ಲಿ ತ್ಯಾಗದ ಅಧ್ಯಾಯವಾಗಿ ದಾಖಲಾಗಬೇಕಿತ್ತಾದರೂ ಅದೇಕೊ ಇತಿಹಾಸದ ಪುಟದಲ್ಲಿ ಅಲ್ಲೋ ಇಲ್ಲೋ ಎರಡಕ್ಷರದಲ್ಲಷ್ಟೇ ದಾಖಲಾಯಿತು.

ಇಂತಹ ಭೀಭತ್ಸ ಘಟನೆ ಸಾಮಾನ್ಯ ಜನರಲ್ಲಿ ತೀವ್ರ ತರಹದ ಆಕ್ರೋಶ ಹುಟ್ಟು ಹಾಕಿತು. ಜನ ಬೂದಿ ಬಸಪ್ಪನಾಯಕರ ನಾಯಕತ್ವ ಒಪ್ಪಿ ಜೈಕಾರ ಹಾಕತೊಡಗಿದರು. ರೈತರ ಪ್ರತಿಭಟನೆ ಅಕ್ಷರಶಃ ಯುದ್ಧವೇ ಆಗಿ ಬದಲಾಯಿತು. ಅಷ್ಟೊತ್ತಿಗಾಗಲೇ ಒಂದಿಷ್ಟು ಸೈನ್ಯವನ್ನು ಸೃಷ್ಟಿ ಮಾಡಿಕೊಳ್ಳಲು ಯಶಸ್ವಿಯಾದ ಬೂದಿ ಬಸಪ್ಪನಾಯಕರು ಕವಲೇದುರ್ಗ, ಕಮಾನು ದುರ್ಗ, ಬಿದನೂರು ಕೋಟೆ, ಚಂದ್ರಗುತ್ತಿಯ ಕೋಟೆಯನ್ನು ಮುತ್ತಿಗೆ ಹಾಕಿ ವಶಪಡಿಸಿಕೊಳ್ಳಲು ಯಶಸ್ವಿಯಾಗುತ್ತಾರೆ. ಮೈಸೂರು ಅರಸ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ದಾರಿ ತಪ್ಪಿಸಿ ನೇಮಿಸಲ್ಪಟ್ಟ ಕೆಲ ಧೂರ್ತ ಮರಾಠ ಅಧಿಕಾರಿಗಳು ಈ ಯುದ್ಧದಲ್ಲಿ ಹತರಾಗುತ್ತಾರೆ. ಆದರೆ ಇದು ಬ್ರಿಟಿಷರಿಗೆ ಮತ್ತು ಮೈಸೂರು ಅರಸರಿಗೆ ಅಕ್ಷರಶಃ ಸೋಲಿನ ಮುನ್ಸೂಚನೆಯಾಗಿ ಕಾಣಿಸುತ್ತದೆ. ಅಪಾಯದ ತೀವ್ರತೆ ತಗ್ಗಿಸಲು ಇನ್ನೂ ನಾಲ್ಕೈದು ಚೆನ್ನೈ ರೆಜಿಮೆಂಟ್ ಸೈನ್ಯವನ್ನು ಕರೆಸಿಕೊಳ್ಳಲಾಗುತ್ತದೆ. ಮಾರ್ಚ್ 1, 1832ರಂದು ಲೆಫ್ಟಿನೆಂಟ್ ರಾಷ್ ಫೋರ್ಟ್ ನೇತೃತ್ವದಲ್ಲಿ‌ ಬಿದನೂರು ಕೋಟೆಯ‌ ಮೇಲೆ ದಾಳಿ ಮಾಡಲಾಯಿತು. ಆದರೆ ಬೂದಿ ಬಸಪ್ಪ ನಾಯಕರು ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಶಿವಕೂಟದ ಅಷ್ಟೂ ಸದಸ್ಯರೊಂದಿಗೆ ಚಂದ್ರಗುತ್ತಿಯ ಕೋಟೆಗೆ ತಲುಪಿದ್ದರು. ಮಳೆಗಾಲ ಮುಗಿಯುವುದರೊಳಗೇ ಬ್ರಿಟಿಷರಿಗೆ ಯುದ್ಧ ಮುಗಿಸುವ ಅನಿವಾರ್ಯತೆ, ಮಳೆಗಾಲದಲ್ಲಿ ಜಂಗಮವಾಡಿಯ ಶಿವಕೂಟವನ್ನು ಸೋಲಿಸಿದ ಇತಿಹಾಸ ನಾನೂರು ವರ್ಷಗಳಲ್ಲೇ ಇರಲಿಲ್ಲ. ಚಂದ್ರಗುತ್ತಿಯ ಕೋಟೆಗೆ ದಾಳಿ ಇಡುವಾಗ ಮತ್ತಷ್ಟು ಸೈನ್ಯದೊಂದಿಗೆ 6 ಏಪ್ರಿಲ್, 1831ರಂದು ದಾಳಿ ಇಟ್ಟರಾದರೂ ಬೂದಿ ಬಸಪ್ಪ ನಾಯಕರನ್ನು ಹಿಡಿಯಲಾಗಲೇ ಇಲ್ಲಾ. ಇದರ ನಡುವೆ ದುರಂತವೊಂದು ನಡೆದು ಹೋಯಿತು ದಂಗೆಗೆ ಬೆಂಬಲ ಘೋಷಿಸಿದರೆಂಬ ಕಾರಣಕ್ಕೆ ಬ್ರಿಟೀಷರು ಕೆಳದಿ ವಂಶಸ್ಥ ತರೀಕೆರೆಯ ರಂಗಪ್ಪ ನಾಯಕರನ್ನು ಮೈಸೂರಿನ ಸೈನ್ಯದ ಕೈಯಲ್ಲಿ ಹತ್ಯೆ ಮಾಡಿಸಿಬಿಡುತ್ತಾರೆ. ಇದು ತರೀಕೆರೆ ಭಾಗದ ರೈತರ ಹೋರಾಟಕ್ಕೆ ನಾಯಕತ್ವದ ಕೊರತೆ ಸೃಷ್ಟಿಸಿಬಿಡುತ್ತದೆ. ಬಿದನೂರು ಭಾಗದ ಹೋರಾಟವಷ್ಟೇ ಗಟ್ಟಿಯಾಗುತ್ತಾ ಸಾಗುತ್ತದೆ.
ನಾಲ್ಕು ಬಾರಿ ಬಿದನೂರು ಕೋಟೆ ,ಮೂರು ಬಾರಿ ಕವಲೆದುರ್ಗ, ಮೂರು ಬಾರಿ ಕಮಾನುದುರ್ಗ ಕೋಟೆ, ಮೂರು ಬಾರಿ ಚಂದ್ರಗುತ್ತಿ ಕೋಟೆ ಶಿವಕೂಟದ ವಶವಾಗಿದ್ದ ಕೋಟೆಗಳ ಮೇಲೆ ದಾಳಿ‌ ನಡೆಯಿತು. ದಾಳಿಯ ವೇಳೆಗೆ ಭೂಗತರಾಗುತ್ತಿದ್ದ ಶಿವಕೂಟದ ಜನ , ಸೈನ್ಯ ಮರಳಿದ ಮೇಲೆ ಕೋಟೆ ವಾಪಾಸು ಪಡೆಯುವುದು ಬ್ರಿಟಿಷರಿಗೆ ಭೇದಿಸಲು ಅಸಾಧ್ಯ ವಿಷಯವಾಗಿ ಪರಿಣಮಿಸಿತು.
ಬ್ರಿಟಿಷರ ಸೈನ್ಯ ಬೂದಿ ಬಸಪ್ಪನಾಯಕರನ್ನು ಹಿಡಿಯುವ ಕೊನೆಯ ಪ್ರಯತ್ನವಾಗಿ ಕವಲೇ ದುರ್ಗ ಕೋಟೆಗೆ ದಾಳಿ ಇಟ್ಟಿತರಾದರೂ ಬೂದಿ ಬಸಪ್ಪನಾಯಕರು ಅಲ್ಲಿಂದಲೂ ತಪ್ಪಿಸಿಕೊಂಡು ಭೂಗತರಾದರು.

ಹೋರಾಟ -ಪ್ರತಿ ಹೋರಾಟಗಳು ತೀವ್ರತೆ ಪಡೆದು ಎರಡೂ ಕಡೆ ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಕೊನೆಗೂ ಯುದ್ಧ ತೀವ್ರಗತಿ ಪಡೆದಾಗ ಬ್ರಿಟಿಷ್ ಸೈನ್ಯಕ್ಕೆ ಇದು ಇಡೀ ಮೈಸೂರು ಸಾಮ್ರಾಜ್ಯಕ್ಕೆ ಹಬ್ಬುವ ಆತಂಕ ಎದುರಾಯಿತು. ಇದರಿಂದ ಮೈಸೂರಿನ‌ ರಾಜರನ್ನು‌ ನಂಬಿ ಕೂರಲು ಸಿದ್ಧರಿಲ್ಲದ ಬ್ರಿಟಿಷ್ ಸರ್ಕಾರ ಮೈಸೂರು ಅರಸ ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರಿಂದ ಅರಸೊತ್ತಿಗೆಯನ್ನು ಕಿತ್ತುಕೊಂಡು ತಾನೇ ಕಾರ್ಯಾಚರಣೆಗಿಳಿಯಿತು. ದಿವಾನರನ್ನು ಬದಲಿಸುವ ನಿರ್ಧಾರಕ್ಕೆ ಬಂದಿತು. ಇದೇ ಸುಸಂದರ್ಭವೆಂದೆಣಿಸಿದ ಫೌಜದಾರ್ ರಾಮರಾವ್ ಮೈಸೂರು ದಿವಾನರಾಗಿದ್ದ ವೆಂಕಟರಾಜೇ ಅರಸ್ ಸ್ಥಾನದಲ್ಲಿ ಬೋಲೋಜಿ ರಾವ್ ಭಕ್ಷಿ ಎಂಬ ನೆಂಟನನ್ನೇ ನೇಮಿಸಿಕೊಳ್ಳಲು ಯಶಸ್ವಿಯಾದ. ಇದರಿಂದ ರಾಮ ರಾವ್, ಕೃಷ್ಣ ರಾವ್ ಮತ್ತು ಬೊಲೋಜಿ ರಾವ್ ಭಕ್ಷಿ ಅಕ್ಷರಶಃ ಕ್ರೌರ್ಯಕ್ಕಿಳಿದು ಬಿಟ್ಟರು. ಊರೂರುಗಳಲ್ಲಿ ಕಮಾಂಡರ್ ಅಪ್ಪಣ್ಣನ ನೇತೃತ್ವದಲ್ಲಿ‌ ಜನಸಾಮಾನ್ಯರನ್ನು ಹಿಡಿದು ಹಿಂಸಿಸಿ ಕೊಲ್ಲಲಾಯಿತು. ಊರು ಊರುಗಳು ಶವಾಗಾರವಾಗಿ ಬದಲಾದವು. ಸಾವಿರಾರು ನಾಗರೀಕರು ಜೀವ ಕಳೆದುಕೊಂಡು ಶಿವಪ್ಪನಾಯಕರು ಬೆಳೆಸಿದ ರಸ್ತೆ ಬದಿಯ ಸಾಲು ಧೂಪದ ಮರಗಳ ಮೇಲೆ ಹೆಣ ನೇತಾಡುತ್ತಲೇ ಇರುವಂತೆ ಮಾಡಲಾಯಿತು. ಇದರಿಂದ ಶಿವಕೂಟದ ಬಲ ಕುಸಿಯತೊಡಗಿತು. ಕೊನೆಗೂ ಕ್ರೌರ್ಯದ ಎಲ್ಲೆ ಮಿತಿಮೀರಿ ಹೋಗುತ್ತಿದ್ದಂತೆ ಜಂಗಮವಾಡಿಯ ಶಿವಕೂಟ ಯುದ್ಧ ನಿಲ್ಲಿಸಿ ಭೂಗತವಾಯಿತು. ಬೂದಿ ಬಸಪ್ಪ ನಾಯಕರನ್ನು ಮೂವತ್ತಾರು ಬಾರಿ ಹಿಡಿಯುವ ಪ್ರಯತ್ನವಾಯಿತಾದರೂ ವಿಫಲವಾಯಿತು. ಬೂದಿ ಬಸಪ್ಪ ನಾಯಕರು ಭೂಗತರಾಗಿಯೇ ಕಾರ್ಯಾಚರಣೆ ನಡೆಸತೊಡಗಿದರಾದರೂ ಬ್ರಿಟಿಷ್ ಸೈನ್ಯದ ಬೃಹತ್ ಬಲದ ಮುಂದೆ ಶಿವಕೂಟದ ಬಲ ದಿನದಿಂದ ದಿನಕ್ಕೆ ಕುಸಿಯುತ್ತಾ ಹೋಯಿತು. ಇಡೀ ಮಲೆನಾಡ ರೈತರನ್ನೇ , ಕೃಷಿಕರನ್ನೇ ಸೈನಿಕರಾಗಿ ಎಬ್ಬಿಸಿ ನಿಲ್ಲಿಸಿ ಹೋರಾಟಕ್ಕಿಳಿದ ಬೂದಿ ಬಸಪ್ಪ ನಾಯಕರು ಮತ್ತು ಶಿವಭಕ್ತರ ಕೂಟ ಕ್ರೌರ್ಯದ ಪರಮಾವಧಿ ನೋಡಿ ಸಹಿಸಲಾರದೇ ಯುದ್ದ ನಿಲ್ಲಿಸುವ ನಿರ್ಧಾರಕ್ಕೆ ಬಂದರು. ಇದೇ ಸಮಯಕ್ಕೆ ಸರಿಯಾಗಿ ಬ್ರಿಟಿಷ್ ಜನರಲ್ ಜಾರ್ಜ್ ರವರಿಗೆ ಬ್ರಿಟಿಷ್ ರ ಸೈನ್ಯ ಜನಸಾಮಾನ್ಯರ ಮೇಲೆ ಮೆರೆದ ಕ್ರೌರ್ಯದ ವರದಿ ತಲುಪಿ ಒಂದು ಕಮಿಷನ್ ನೇಮಿಸಲ್ಪಟ್ಟು ಹಲವು ಸುತ್ತಿನ ವಿಚಾರಣೆಗಳು ಆರಂಭವಾದವು. ಕೊನೆಗೆ ಬ್ರೀಟಿಷರ ಕಮಿಷನ್ ಮತ್ತೆ ಸ್ವಾತಂತ್ರ್ಯದ ಹೋರಾಟ ಬಲಗೊಳ್ಳದಂತೆ ಮಾಡಲು ಕಂದಾಯ ತಗ್ಗಿಸಿ ಜನರ ವಿಶ್ವಾಸಗಳಿಸಲು ನಿರ್ಧರಿಸುತ್ತದೆ. ಜಂಗಮವಾಡಿಗಳ ಶಿವಕೂಟದ ಆಗ್ರಹವೂ ಕಂದಾಯವನ್ನು ಕಡಿಮೆಗೊಳಿಸುವುದೇ ಆಗಿದ್ದರಿಂದ ಬೂದಿ ಬಸಪ್ಪ ನಾಯಕರ ಹೋರಾಟ ಭಾಗಶಃ ಯಶಸ್ವಿಯಾಗುತ್ತದೆ. ಮೈಸೂರು ಅರಸರ ಪದವಿಯೇ ಬಲಿ‌ಪಡೆಯುವಷ್ಟು ಪ್ರಭಾವಿಯಾಗಿ ಯುದ್ದ ಸಂಘಟಿಸಿದ ಬೂದಿ ಬಸಪ್ಪನಾಯಕರು ಬ್ರಿಟೀಷರಿಂದ ಹೇರಲ್ಪಟ್ಟಿದ್ದ ಭರಿಸಲಾಗದ ಕಂದಾಯ ತಗ್ಗಿಸುವ ಮೂಲಕ ಇಡೀ ಮಲೆನಾಡನ್ನು ಆ ಕಾಲಕ್ಕೆ ರಕ್ಷಿಸುವಲ್ಲಿ ಯಶಸ್ವಿಯಗುತ್ತಾರೆ. ಅದರೊಂದಿಗೆ ಸ್ವಾತಂತ್ರ್ಯ ಹೋರಾಟದ ತೀವ್ರತೆ ಕಡಿಮೆಯಾಗಿ ದಿನದಿಂದ ದಿನಕ್ಕೆ ದಂಗೆಯ ವಾತಾವರಣ ತಿಳಿಗೊಂಡು ಬೂದಿ ಬಸಪ್ಪನಾಯಕರ ಆದಿಯಾಗಿ ಹಲವರು ಬ್ರಿಟಿಷ್ ಸರ್ಕಾರದ ವಿಚಾರಣೆಯನ್ನು ನಿರಾಕರಿಸಿ ಭೂಗತರಾಗುತ್ತಾರೆ. ಆನಂತರ ನಡೆದ ಅಮರ ಸುಳ್ಯ ಹೋರಾಟದ ರೂವಾರಿ ಕಲ್ಯಾಣಪ್ಪ ಮತ್ತು ಅಪರಂಪರಾ ಸ್ವಾಮಿ ಎಂಬ ಈರ್ವರ ವೇಷ ತೊಟ್ಟು ಹೋರಾಡಿದ್ದು ಬೂದಿ ಬಸಪ್ಪನಾಯಕರೇ ಎಂಬ ನಂಬಿಕೆ ಹಲವರಲ್ಲಿದೆ ಆದರೆ ನಿಖರ ಆಧಾರಗಳಿಗೆ ಹೆಚ್ಚಿನ ಅನ್ವೇಷಣೆಯ ಅಗತ್ಯವಿದೆ.

ಬ್ರಿಟಿಷರ ವಿರುದ್ಧ ಅತ್ಯಂತ ವ್ಯವಸ್ಥಿತವಾಗಿ ಯುದ್ಧ ಮಾಡಿ ಮೈಸೂರು ಅರಸನ ಅರಸೊತ್ತಿಗೆಯೆ ಕಿತ್ತುಕೊಳ್ಳುವಂತೆ ಮಾಡಿದ ಮಹಾನ್ ರೈತ ಹೋರಾಟ, ರೈತರ ಸ್ವಾತಂತ್ರ್ಯ ಹೋರಾಟ, ರೈತರ ಕರ ನಿರಾಕರಣೆಯ ಹೋರಾಟ ಇತಿಹಾಸದ ಪುಟಗಳಲ್ಲಿ ದಾಖಲಾಗದೇ ಹೋದದ್ದು ದುರಂತವೇ ಸರಿ. ಜಾರ್ಖಂಡ್ ಬುಡಕಟ್ಟು ನಾಯಕ ಬಿರ್ಸಾಮುಂಡಾನಂತೇ ಬೂದಿ ಬಸಪ್ಪ ನಾಯಕರ ನೇತೃತ್ವದಲ್ಲಿ ನಡೆದ ಈ ನೆಲದ ರೈತರ ಸ್ವಾತಂತ್ರ್ಯದ‌ ಹೋರಾಟ, ಶಿವಭಕ್ತ ಕೂಟಗಳ ದುಷ್ಟ ಬ್ರಿಟಿಷ್ ಪ್ರಭುತ್ವದ ಮೇಲಿನ ಯುದ್ಧ ಮಲೆನಾಡಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾಗಿತ್ತು. ಈ ಹೋರಾಟದಲ್ಲಿ ಜೀವತೆತ್ತವರು ಒಬ್ಬಿಬ್ಬರಲ್ಲ , ಕಮಾಂಡರ್ ಅಣ್ಣಪ್ಪನ ಅಫಿಷಿಯಲ್ ಹೇಳಿಕೆಯ ಪ್ರಕಾರವೇ ಜೀವ ಕಳೆದುಕೊಂಡ ರೈತರ ಸಂಖ್ಯೆ ಸಾವಿರಕ್ಕೂ ಹೆಚ್ಚು. ಆದರೆ ಈ ಹೋರಾಟದ ವಿರುದ್ಧ ನಿಂತು ಹೊಸಕಿ ಹಾಕಿದ ಬ್ರಿಟಿಷರಿಗೆ ಸಾಥ್ ಕೊಟ್ಟವರು ನಮ್ಮದೇ ಮೈಸೂರು ಅರಸರು. ಅಧಿಕಾರದಲ್ಲಿದ್ದ ಮೈಸೂರು ಅರಸರು ನಂತರದ ದಿನಗಳಲ್ಲಿ ಈ ಎಲ್ಲಾ ಧೀರೋದಾತ್ತ ಹೋರಾಟದ ಸಣ್ಣ ಕುರುಹೂ ಸಿಗದಂತೆ ಮಾಡಿ ನಮ್ಮ ಮಲೆನಾಡಿನ ನೆಲದ ಮೊದಲ ಸ್ವಾತಂತ್ರ್ಯದ ಕಿಚ್ಚು ಜಗಕೆ ಅರಿವಾಗದಂತೆ ಹೊಸಕಿ ಹಾಕಿತು. ನಮ್ಮಲ್ಲೇ ಇದ್ದ ರಾಮ ರಾವ್, ಭೋಲೋಜಿ ರಾವ್ ಭಕ್ಷಿ, ಕೃಷ್ಣ ರಾವ್, ಸೈಯ್ಯದ್ ಸಲಾರ್ ಅಂತಹ ಮೀರ್ ಸಾದಿಕ್ ಗಳ ಪಾತ್ರವೂ ದೊಡ್ಡದು. ಮಲೆನಾಡು ಮರೆತ ಜಂಗಮವಾಡಿ, ಶಿವಕೂಟ, ಶಿವಭಕ್ತರು, ಬೇವಿನ ಎಲೆಗಳು, ದೊಡ್ಡದೊಂದು ಮೂಳೆ, ಮೈಯೆಲ್ಲಾ ಭಂಡಾರದಂತೆ ಹಚ್ಚಿಕೊಳ್ಳುತ್ತಿದ್ದ ಬೂದಿ , ಸಾವಿರಾರು ರಹಸ್ಯ ಸಂಕೇತಗಳೊಂದಿಗೆ, ರಹಸ್ಯ ಜೀವನ ನಡೆಸುತ್ತಿದ್ದ ಜಂಗಮವಾಡಿಯ ಜನರ ಬದುಕು ನಂತರ ನೂರಾರು ವರ್ಷವೂ ರಹಸ್ಯವಾಗಿಯೇ ಉಳಿಯಿತು. ಆ ನಂತರವೂ ಅಲ್ಲಲ್ಲಿ ಅವರ ಹೋರಾಟಗಳು ಕಣ್ಣಿಗೆ ಬಿದ್ದವಾದರೂ ಇತಿಹಾಸದ ಪುಟಗಳಲ್ಲಿ ಮಹತ್ವದ ಘಟನೆಯಾಗಿ ದಾಖಲಾಗಲೇ ಇಲ್ಲಾ. ಮಲೆನಾಡಿಗರನ್ನು ಸಂಕಷ್ಟದಲ್ಲಿ‌ ಪ್ರಾಣ ಒತ್ತೆ ಇಟ್ಟು ರಕ್ಷಿಸಿದ ಈ ನೆಲದ ಪುತ್ರನನ್ನು ಮಲೆನಾಡು ಮರೆತದ್ದು ಅಕ್ಷಮ್ಯವೇ ಸರಿ. ಮಲೆನಾಡ ಧೀರೋದಾತ್ತ ಪುತ್ರನಿಗೊಂದು ನುಡಿ ನಮನ…

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಆದರ್ಶ್ ಹುಂಚದಕಟ್ಟೆ
ಯುವ ಚಿಂತಕರು, ವಾಗ್ಮಿ

Related Articles

ಇತ್ತೀಚಿನ ಸುದ್ದಿಗಳು