Tuesday, June 18, 2024

ಸತ್ಯ | ನ್ಯಾಯ |ಧರ್ಮ

ಬಿಸಿಬಿಸಿ ಫೆಬ್ರವರಿ – ಚಳಿಗಾಲ ಪರಾರಿ

ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ ಹವಾಮಾನದ ಮಾದರಿಗಳು ಬದಲಾಗುತ್ತಿವೆ. ಬೇಸಗೆಯ ದಿನಗಳು ದೀರ್ಘವಾಗಿ ಚಳಿಗಾಲದ ದಿನಗಳು ಮರೆಯಾಗುತ್ತಿವೆ. ಭಾರತೀಯ ಹವಾಮಾನ ಇಲಾಖೆಯು 2023ರ ಫೆಬ್ರವರಿ ತಿಂಗಳು ಭಾರತದ ಮಟ್ಟಿಗೆ ಕಳೆದ 122 ವರುಷಗಳಲ್ಲೆ ಇಷ್ಟೊಂದು ತಾಪವನ್ನು ದಾಖಲಿಸಿರಲಿಲ್ಲ ಎಂದು ಫೆಬ್ರವರಿ 28ರಂದೇ ಷರಾ ಬರೆಯಿತು! ವಿಜ್ಞಾನ ಬರಹಗಾರ ಕೆ.ಎಸ್. ರವಿಕುಮಾರ್ ಈ ಹವಾಮಾನ ವೈಪರೀತ್ಯದ ಕುರಿತು ಸರಣಿ ಲೇಖನಗಳನ್ನು ಬರೆದಿದ್ದಾರೆ. ಮೊದಲ ಸರಣಿ ಇಲ್ಲಿದೆ.

ಇದೀಗ ಎರಡನೆಯ ವರುಷದಲ್ಲೂ ನಾವು ಚಳಿಗಾಲದಿಂದ ನೇರ ಕಡುಬೇಸಗೆಗೆ ಜಿಗಿಯುತ್ತಿದ್ದೇವೆ. ಮಾಗಿ ಮತ್ತು ಬೇಸಗೆಗಳ ಕೊಂಡಿಯಾದ ವಸಂತದ ಒಸಗೆಯನ್ನು ನಾವು ಕಾಣುತ್ತೇವೊ ಗೊತ್ತಿಲ್ಲ. ಕಳೆದ ವರುಷ ಕಾಣಲಿಲ್ಲ, ಈ ವರುಷವೂ ಅನುಮಾನ. ಗಿಡಮರಗಳೇನೋ ಹೊಳಪಿನ ಮುದ್ದಾದ ತಿಳಿಹಸಿರು ಚಿಗುರೆಲೆಗಳನ್ನು ತಳೆದು ತೊನೆದಾಡುತ್ತಿವೆ. ಆದರೆ ವಸಂತದ ಹಿತವಾದ ಹವೆಗೆ ಮೈಯೊಡ್ಡುವ ಬದಲು ಧಗೆಗೆ ಬೆವರು ಬಸಿದು ಹೈರಾಣಾಗುತ್ತಿದ್ದೇವೆ. ಕಳೆದ ಜನವರಿಯ ಕೊನೆಕೊನೆಯಲ್ಲೆ ನಾವು ಮಾತನಾಡಿಕೊಂಡೆವು ‘ಏನಪ್ಪ ಇದು, ಈಗಲೇ, ಜನವರಿಯಲ್ಲೆ ದಿನದ ಅತಿಹೆಚ್ಚಿನ ತಾಪ 30 ಡಿಗ್ರಿ ಸೆಲ್ಸಿಯಸ್ ದಾಟಿ ಹೋಗುತ್ತಿದೆಯಲ್ಲ, ಯಾಕೋ 2023ರ ಬೇಸಗೆಯನ್ನೂ ಗಾಳಿಯ ಬಿಸಿಯಲೆಗಳು ಹುರಿದು ಮುಕ್ಕಬಹುದು’ ಎಂದು. ಹಾಗೇ ಆಗುವಂತಿದೆ.

ನಾವಿರುವ ಹಾಸನ ನಗರದಲ್ಲಿ ಕಳೆದ ವರುಷದ ಡಿಸೆಂಬರ್‌ನಲ್ಲಿ ದಿನದ ಅತಿಹೆಚ್ಚಿನ ತಾಪ (day time maximum temperature) 26ನೇ ತಾರೀಕಿನಂದು 35 ಡಿಗ್ರಿ ಸೆಲ್ಸಿಯಸ್ಸಿಗೆ ತಲುಪಿತ್ತು. ನಂತರ ಜನವರಿಯಲ್ಲಿ 4ನೇ ತಾರೀಕಿನಂದು 34ರಲ್ಲಿತ್ತು. ಫೆಬ್ರವರಿಯಲ್ಲಿ 26ನೇ ತಾರೀಕಿನಂದು 36ಕ್ಕೆ ನೆಗೆಯಿತು. ಈ ನೆಗೆತ ಹಾಸನದಲ್ಲಿ ಮಾತ್ರವಲ್ಲ, ಬಹುಪಾಲು ದೇಶದ ಎಲ್ಲೆಡೆ ಕಂಡುಬಂತು. ಭಾರತೀಯ ಹವಾಮಾನ ಇಲಾಖೆ(IMD)ಯು 2023ರ ಫೆಬ್ರವರಿ ತಿಂಗಳು ಭಾರತದ ಮಟ್ಟಿಗೆ ಕಳೆದ 122 ವರುಷಗಳಲ್ಲೆ ಇಷ್ಟೊಂದು ತಾಪವನ್ನು ದಾಖಲಿಸಿರಲಿಲ್ಲ ಎಂದು ಫೆಬ್ರವರಿ 28ರಂದೇ ಷರಾ ಬರೆಯಿತು. ಆಮೇಲೆ ಇನ್ನೊಂದು ತಿದ್ದುಪಡಿ ಹೇಳಿಕೆಯನ್ನು ಬಿಡುಗಡೆ ಮಾಡಿ ಫೆಬ್ರವರಿ ತಿಂಗಳು 1877ರಿಂದಲೇ ಇಷ್ಟೊಂದು ಬಿಸಿ ಎನಿಸಿರಲಿಲ್ಲ ಎಂದಿತು (ನೋಡಿ ಮಾರ್ಚ್1 ರ The Economic Times). ಸರಾಸರಿ ಲೆಕ್ಕದಲ್ಲಿ ಹೇಳುವುದಾದರೆ ಭಾರತದಲ್ಲಿ 2023ರ ಫೆಬ್ರವರಿ ತಿಂಗಳು 29.54 (30 ಎಂದಿಟ್ಟುಕೊಳ್ಳಿ) ಡಿಗ್ರಿ ಸೆಲ್ಸಿಯಸ್ ತಾಪವನ್ನು ದಾಖಲಿಸಿತು. ಹಿಂದೆಂದೂ ಇಂತಹ ದಾಖಲೆ ಹವಾಮಾನದ ದಸ್ತಾವೇಜಿಗೆ ಸೇರಿರಲಿಲ್ಲ. ಉತ್ತರ ಭಾರತದ ನೂರಾರು ಕಡೆ ಆಗಲೆ ದಿನದ ಅತಿ ಹೆಚ್ಚಿನ ತಾಪ 40 ಡಿಗ್ರಿ ದಾಟಿಹೋಗಿ ಜನ ತತ್ತರಿಸಿದ್ದಾರೆ. ಹಿಂದೆಲ್ಲ ಸಾಮಾನ್ಯವಾಗಿ ಮೇ ತಿಂಗಳಲ್ಲಿ ಕಾಣುವ ಈ ತಾಪ ಕಳೆದ ವರುಷ ಮಾರ್ಚಿಯಲ್ಲಿ ಕಂಡುಬಂತು, ಈ ವರುಷ ಫೆಬ್ರವರಿಯಲ್ಲೆ ಕಂಡುಬಂದಿದೆ. ಹೆಚ್ಚುಕಡಿಮೆ ಒಂದು ತಿಂಗಳ ಮುಂಚೆಯೆ. ಅಂದಮೇಲೆ ಮಾರ್ಚ್, ಏಪ್ರಿಲ್, ಮೇ, ಜೂನ್‍ಗಳ ದಿನಗಳು ನಮ್ಮೆಲ್ಲರ ಪಾಲಿಗೆ ಹೇಗಿರಬಹುದು!

ಬಯಲು ನಾಡಿನಲ್ಲಿ ಸಾಮಾನ್ಯ ತಾಪ 40 ಡಿಗ್ರಿ ಸೆಲ್ಸಿಯಸ್ ದಾಟಿದರೆ ಬಿಸಿಯಲೆಗಳು ಜರುಗಬಹುದು. ಕರಾವಳಿ ಭಾಗದಲ್ಲಿ 37 ಡಿಗ್ರಿ ಸೆಲ್ಸಿಯಸ್ ದಾಟಿದರೆ ಬಿಸಿಯಲೆಗಳು ಎರಗುತ್ತವೆ. ಬೆಟ್ಟಗುಡ್ಡಗಳ ಮಲೆಸೀಮೆಯಲ್ಲಿ 30 ಡಿಗ್ರಿ ಸೆಲಿಯಸ್ ದಾಟಿದರೆ ಅಲ್ಲಿನವರಿಗೆ ಬಿಸಿಯಲೆಗಳ ಅನುಭವವಾಗಬಹುದು.

ಉತ್ತರದಲ್ಲಿ ಅತಿ ಹೆಚ್ಚಿನ ತಾಪ 45 ಡಿಗ್ರಿ ಸೆಲ್ಸಿಯಸ್‍ಗೆ ತಲುಪಿದರೆ ದಕ್ಷಿಣದ ನಮ್ಮ ಭಾಗದಲ್ಲಿ 39-40ಕ್ಕಾದರೂ ತಲುಪಬೇಡವೆ. ಸಾಮಾನ್ಯವಾಗಿ ದಕ್ಷಿಣದಲ್ಲಿ ತಾಪ 40ರ ಹತ್ತಿರಕ್ಕೆ ಬಂತೆಂದರೆ ಮೂರು ದಿಕ್ಕುಗಳಲ್ಲಿ ನಮ್ಮನ್ನು ಸುತ್ತುವರಿದಿರುವ ಅರಬಿ ಕಡಲು, ಇಂಡಿಯನ್ ಹೆಗ್ಗಡಲು ಮತ್ತು ಬಂಗಾಳ ಕೊಲ್ಲಿಗಳು ಸೈಕ್ಲೋನುಗಳನ್ನು ಕಳಿಸಿಕೊಟ್ಟು ಅಥವಾ ಬರಿಯ ಮೋಡಗಳ ಹಿಂಡನ್ನಾದರೂ ಕಳಿಸಿಕೊಟ್ಟು ಸೂರ್ಯನ ಶಾಖ ನೇರ ನಮ್ಮನ್ನು ತಟ್ಟದಂತೆ ನೋಡಿಕೊಳ್ಳುತ್ತವೆ. ಮಳೆ ಇಲ್ಲವೆ ಸೈಕ್ಲೋನಿನ ಗಾಳಿ ತಂದ ನೀರಾವಿ ಒಟ್ಟು ವಾತಾವರಣವನ್ನು ಸಹಿಸುವ ಮಟ್ಟದಲ್ಲಿ ಇರಿಸುತ್ತವೆ. ಇದು ಈವರೆಗಿನ ನಮ್ಮ ಅನುಭವ ಮತ್ತು ತಿಳುವಳಿಕೆ. ಆದರೆ ನಿಸರ್ಗವನ್ನು ನಂಬುವಂತಿಲ್ಲ. ಮಿಟಕಲಾಡಿಯಂತೆ ಅದೀಗ ಗುಟ್ಟು ಬಿಟ್ಟುಕೊಡುತ್ತಿಲ್ಲ. ನಾವೊಂದು ಬಗೆದರೆ ಅದು ಬೇರೊಂದು ಬಗೆಯುತ್ತಿದೆ. ಯಾಕೆಂದರೆ ನಾವೀಗ ತಬ್ಬಿಬ್ಬುಗೊಳಿಸಬಲ್ಲ ದಿಡೀರ್ ಹವಾಮಾನ ಬದಲಾವಣೆಗಳ ನಡುವೆ ಹಾದುಹೋಗುತ್ತಿದ್ದೇವೆ.

ಅಂತೂ ಫೆಬ್ರವರಿಯಲ್ಲಿ ರಾತ್ರಿಯೆಲ್ಲ ವಿದ್ಯುತ್ ಪಂಖ ಉರಿಸಿ ನಿದ್ದೆಹೋದ ದಿನಗಳನ್ನು ಕಳೆದಿದ್ದಾಯಿತು. ನಡುಹಗಲಿನ ಬಿಸಿಲಂತೂ ಕಲ್ಪನೆಗೂ ಮೀರಿ ಬಿರುಸಾಗಿದೆ. ಎರಡು ನಿಮಿಷ ಹೊರ ನಿಂತರೆ ಕಣ್ಣು ಕತ್ತಲೆ ಬಂದು ಬವಳಿ ಬೀಳುವಂತಾಗುತ್ತದೆ. ಭಾರತೀಯ ಹವಾಮಾನ ಪರಿಣಿತರಾದ ರಾಜೇಶ್ ಕಪಾಡಿಯಾ ಅವರ ಪ್ರಕಾರ ‘ಫೆಬ್ರವರಿಯಲ್ಲಿ ತಾಪ ಈ ಮಟ್ಟಕ್ಕೆ ಬಂದಿರುವುದು ಭಾರತವಷ್ಟೆ ಅಲ್ಲ ಇಡೀ ಏಷ್ಯಾಖಂಡದಲ್ಲೆ ಮೊದಲ ಬಾರಿ ಎನಿಸಿದೆ. ಇದು ಚಾರಿತ್ರಿಕವೇ ಸರಿ. ಭಾರತವಷ್ಟೆ ಅಲ್ಲ, ಪಕ್ಕದ ಪಾಕಿಸ್ತಾನದಲ್ಲೂ ನಿಸರ್ಗ ಬೇರೆ ಕತೆ ಬರೆಯುತ್ತಿಲ್ಲ. ಅಲ್ಲಿನ ಮಿಥಿ ಎಂಬಲ್ಲಿ ಫೆಬ್ರವರಿಯಲ್ಲಿ ದಿನದ ಅತಿಹೆಚ್ಚಿನ ತಾಪ 40 ಡಿಗ್ರಿ ದಾಟಿತು. ಹಿಂದಿನ ದಾಖಲೆ 1953ರಲ್ಲಿ ಉಮರ್‍ಕೋಟ್ ಎಂಬಲ್ಲಿ ಒಟ್ಟಾರೆ ಬೇಸಗೆಯಲ್ಲಿ 39.4 ಡಿಗ್ರಿ ದಾಖಲಾಗಿದ್ದುದಾಗಿತ್ತು!

 ಭಾರತೀಯ ಹವಾಮಾನ ಇಲಾಖೆಯ ಚರಿತ್ರೆಯಲ್ಲೆ ಫೆಬ್ರವರಿ ತಿಂಗಳಲ್ಲಿ ಬಿಸಿಯಲೆಗಳು ಬರಬಹುದೆಂದು ಮುನ್ಸೂಚನೆ ನೀಡಿದ್ದು ಇದೇ ಮೊದಲ ಬಾರಿಯಾಗಿದೆ. ‘ಕೊಂಕಣ ಮತ್ತು ಗುಜರಾತಿನ ಕಛ್ ಪ್ರದೇಶದಲ್ಲಿ ಬಿಸಿಯಲೆಗಳು ಕಾಣಿಸಿಕೊಳ್ಳುತ್ತವೆ’ ಎಂಬ ಅದರ ಮುನ್ಸೂಚನೆಯೆ ಈ ವರುಷದ ಮೊದಲ ಅಧಿಕೃತ ಮುನ್ಸೂಚನೆಯಾಗಿದೆ.

ಬಿಸಿಯಲೆಗಳೂ, ಬಿಸಿಯಪ್ಪುಗೆಯೂ

ನಮ್ಮನ್ನು ಆಳುವವರಿಗೆ ಎಂತೆಂತಹ ‘ಗುರುತರ’ ಆದ್ಯತೆಯ ಆಲೋಚನೆಗಳು ಬರುತ್ತವೆಂದರೆ Animal Welfare Board of India ಸೂಚನೆಯ ಮೇರೆಗೆ ಒಕ್ಕೂಟ ಸರ್ಕಾರವು ಫೆಬ್ರವರಿ 14ನೇ ತಾರೀಕಿನ ‘ಪ್ರೇಮಿಗಳ ದಿನ’ ವನ್ನು ‘ದನ ತಬ್ಬುವ ದಿನ (Cow Hug Day)’ ಎಂದು ಆಚರಿಸಲು ಅಧಿಕೃತ ಇಸ್ತಿಹಾರನ್ನೇ ಹೊರಡಿಸಿತು (ಆಮೇಲೆ ಎಲ್ಲೆಡೆಯಿಂದ ತಾನು ಊಹಿಸದ ತೀವ್ರ ಸೃಜನಶೀಲ ಗೇಲಿಗಳು ಬಂದ ಕಾರಣ ಕರೆಯನ್ನು ವಾಪಾಸು ಪಡೆಯಿತು). ಈ ಹುಚ್ಚಾಟದ ನಡುವೆ ದಿನದ ಅತಿಹೆಚ್ಚಿನ ತಾಪ ಗುಜರಾತಿನ ಭುಜ್‍ನಲ್ಲಿ ಫೆಬ್ರವರಿ ಮೊದಲ ವಾರದಲ್ಲಿ 33 ಡಿಗ್ರಿ ಸೆಲ್ಸಿಯಸ್ ಇದ್ದದ್ದು ಪ್ರೇಮಿಗಳ ದಿನದಂದು 34 ಡಿಗ್ರಿ ಮುಟ್ಟಿ ತಾರೀಕು 15ರಂದು 37ನ್ನು ತಲುಪಿ 16ರಂದು 40.3ಕ್ಕೇರಿ ಬಿಟ್ಟಿತ್ತು. ಈ ವರುಷ ಭಾರತದಲ್ಲಿ 40ರ ಮಿತಿಯನ್ನು ದಾಟಿದ ಮೊದಲ ತಾಣ ಎಂಬ ಹೆಸರು ಭುಜ್ ಮೇಲೆ ಅಗತುಕೊಂಡಿತು  (ಇದೇ ಭುಜ್‍ನಲ್ಲಿ 2022ರಲ್ಲಿ ದಿನದ ಅತಿ ಹೆಚ್ಚಿನ ತಾಪ ಮೊದಲಬಾರಿಗೆ ಮಾರ್ಚ್ 15ರಂದು 40 ಡಿಗ್ರಿ ದಾಟಿತ್ತು. ಅಲ್ಲಿಗೆ ಈ ವರುಷ 27 ದಿನಗಳ ಮುಂಚೆಯೆ 40 ತಲುಪಿದ್ದುದಕ್ಕೆ ಭುಜ್ ಮಂದಿ ಅಚ್ಚರಿ ಗೊಳ್ಳಬೇಕೊ, ಅಂಜಿಕೆ ಪಡಬೇಕೊ ಗೊತ್ತಿಲ್ಲ). ಭುಜ್ ಅಲ್ಲದೆ ಉತ್ತರ ಭಾರತದ ನೂರಾರು ತಾಣಗಳು 40 ಡಿಗ್ರಿಗೂ ಹೆಚ್ಚಿನ ತಾಪವನ್ನು ದಾಖಲಿಸಿದವು. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮಾತ್ರ ತಲೆಕೆಡಿಸಿ ಕೊಂಡಂತ್ತಿತ್ತು. ಸರ್ಕಾರಗಳ ಮಟ್ಟದಲ್ಲಿ ಮತ್ತು ಮಾಧ್ಯಮಗಳಲ್ಲಿ ಎಂದಿನಂತೆ ‘ದನ ತಬ್ಬುವ’ ಅವಕಾಶ ತಪ್ಪಿಹೋದದ್ದರ ಬಗ್ಗೆ ಗುಸುಗುಸು, ನಿರಾಸೆಯ ಗೊಣಗಾಟಗಳು ಜರುಗುತ್ತಿದ್ದವು. ಈಪಾಟಿ ತಾಪದಲ್ಲಿ ತಬ್ಬಿಕೊಳ್ಳಲು ಪ್ರೇಮಿಗಳೇ ಹಿಂದುಮುಂದು ನೋಡುವಾಗ ಬಿಸಿನೆತ್ತರಿನ ಜೀವಿಗಳನ್ನು ತಬ್ಬಿಕೊಳ್ಳಿ ಎನ್ನುವುದು ಜಾಣ್ಮೆಯೆ? ಪಾಪ, ಮೊದಲೇ ಧಗೆಯಿಂದ ವಿಪರೀತ ನೀರಡಿಸಿ ದಣಿದಿರುವ ದನಗಳಿಗೇಕೆ ಕಸಿವಿಸಿ ಮಾಡುವುದು?

ಕೆ.ಎಸ್.ರವಿಕುಮಾರ್, ಹಾಸನ

ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

ಮೊ : 9964604297

Related Articles

ಇತ್ತೀಚಿನ ಸುದ್ದಿಗಳು