Thursday, June 20, 2024

ಸತ್ಯ | ನ್ಯಾಯ |ಧರ್ಮ

ಅತ್ಯಾಚಾರಿ ಉಮೇಶ್‌ ರೆಡ್ಡಿಗೆ ಗಲ್ಲು ಶಿಕ್ಷೆ ತಪ್ಪಿದ್ದು ಹೇಗೆ?

ಹೊಸದಿಲ್ಲಿ: ಕರ್ನಾಟಕದಲ್ಲಿ ಒಂಟಿ ಹೆಂಗಸರ ಮನೆಗೆ ನುಗ್ಗಿ ಭೀಕರವಾಗಿ ಅತ್ಯಾಚಾರವೆಸಗಿ ಕೊಲೆಗೈಯುತ್ತಿದ್ದ ಉಮೇಶ್‌ ರೆಡ್ಡಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿ, ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಲಾಗಿದೆ.

ಗಲ್ಲು ಶಿಕ್ಷೆಗೆ ಒಳಗಾಗಬೇಕಿದ್ದ ಉಮೇಶ್‌ ರೆಡ್ಡಿ ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿ, ತನಗೆ ವಿಧಿಸಲಾದ ಗಲ್ಲು ಶಿಕ್ಷೆಯನ್ನು ರದ್ದುಪಡಿಸಲು ಕೋರಿದ್ದ.

ಶುಕ್ರವಾರ ಈ ಅರ್ಜಿ ವಿಚಾರಣೆಯ ನಂತರ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ, ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠ, ತೀರ್ಪು ನೀಡಿದ್ದು, ಅತ್ಯಾಚಾರಿ ಉಮೇಶ್‌ ರೆಡ್ಡಿಯ ಗಲ್ಲು ಶಿಕ್ಷೆ ರದ್ದು ಮಾಡಿದೆ.

ಸುಪ್ರೀಂ ಕೋರ್ಟ್‌

ಗಲ್ಲು ಶಿಕ್ಷೆ ತಪ್ಪಲು ಕಾರಣಗಳೇನು?
ಹೀನಾತಿಹೀತ ಅಪರಾಧಗಳನ್ನು ಎಸಗಿರುವ ಉಮೇಶ್‌ ರೆಡ್ಡಿ ಗಲ್ಲು ಶಿಕ್ಷೆಯಿಂದ ಬಚಾವಾಗಿದ್ದು ಹೇಗೆ ಗೊತ್ತೇ? ಉಮೇಶ್‌ ರೆಡ್ಡಿ ಜೈಲಿನಲ್ಲಿದ್ದ ಅವಧಿಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಆತನನ್ನು ಏಕಾಂತದಲ್ಲಿ ಇರಿಸಲಾಗಿತ್ತು. ಉಮೇಶ್‌ ರೆಡ್ಡಿ ಪೈಶಾಚಿಕ ವರ್ತನೆಯ ಅರಿವಿದ್ದ ಜೈಲು ಅಧಿಕಾರಿಗಳು ಆತನಿಗೆ ಸಹಖೈದಿಗಳಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಆತನನ್ನು ಏಕಾಂತದಲ್ಲಿ ಇರಿಸಿದ್ದರು. ಉಮೇಶ್‌ ರೆಡ್ಡಿಯ ಕುಖ್ಯಾತಿ ಎಲ್ಲ ಕಡೆ ಹರಡಿದ್ದರಿಂದಾಗಿ ಸಹಖೈದಿಗಳೂ ಸಹ ಆತನ ಮೇಲೆ ದೈಹಿಕ ಹಲ್ಲೆ ನಡೆಸುವ ಅಪಾಯವಿತ್ತು. ಹೀಗಾಗಿ ಜೈಲು ಅಧಿಕಾರಿಗಳು ಆತನನ್ನು ಹತ್ತು ವರ್ಷಗಳ ಕಾಲ ಒಂಟಿ ಸೆಲ್‌ನಲ್ಲಿ ಬಂಧಿಯಾಗಿ ಇಟ್ಟಿದ್ದರು.

ಇದೇ ವಿಷಯದ ಆಧಾರದ ಮೇಲೆ ಸುಪ್ರೀಂ ಕೋರ್ಟ್‌ ಉಮೇಶ್‌ ರೆಡ್ಡಿಯ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಿಸಿದೆ. ಆತನನ್ನು ಏಕಾಂತ ಸೆರೆಮನೆಯಲ್ಲಿ ಬಂಧಿಸಲಾಯಿತು, ಇದು ಅವನ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರಿದೆ. ಹೀಗಾಗಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗದು ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ.

ʻʻ10 ವರ್ಷಗಳ ಕಾಲ ಬೆಳಗಾವಿ ಜೈಲಿನಲ್ಲಿ ಉಮೇಶ್ ರೆಡ್ಡಿಯನ್ನು ಏಕಾಂತವಾಸದಲ್ಲಿ ಇರಿಸಲಾಗಿತ್ತು. ಇದರಿಂದಾಗಿ ಆತನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳಾಗಿವೆ. ಈ ಹಿನ್ನೆಲೆಯಲ್ಲಿ, ನಮ್ಮ ದೃಷ್ಟಿಯಲ್ಲಿ, ಮೇಲ್ಮನವಿದಾರನು ಮರಣದಂಡನೆ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಲು ಅರ್ಹನಾಗಿರುತ್ತಾನೆ” ಎಂದು ತ್ರಿಸದಸ್ಯ ಪೀಠ ಹೇಳಿದೆ.

ʻʻಆದಾಗ್ಯೂ, ಆತನ ಪರವಾಗಿ ಯಾವುದೇ ಪರಿಹಾರ ಅರ್ಜಿಯನ್ನು ಪರಿಗಣಿಸುವ ಮೊದಲು ಆತ ಕನಿಷ್ಠ 30 ವರ್ಷಗಳ ಶಿಕ್ಷೆಯನ್ನು ಅನುಭವಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 30 ವರ್ಷಗಳ ನಿಜವಾದ ಶಿಕ್ಷೆಗೆ ಒಳಗಾದ ನಂತರವೇ ಯಾವುದೇ ಪರಿಹಾರ ಅರ್ಜಿಯನ್ನು ಅರ್ಹತೆಯ ಮೇಲೆ ಪರಿಗಣಿಸಲಾಗುತ್ತದೆ”ಎಂದು ಪೀಠ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು