Friday, October 11, 2024

ಸತ್ಯ | ನ್ಯಾಯ |ಧರ್ಮ

ರತನ್ ಟಾಟಾ ಅವರ ಪಾರ್ಸಿ ಸಮುದಾಯದ ಶವಸಂಸ್ಕಾರ ಪದ್ದತಿ “ದಖ್ಮಾ” ಬಗ್ಗೆ ನಿಮಗೆಷ್ಟು ಗೊತ್ತು?

ಬಹು ಸಂಸ್ಕೃತಿ ಮತ್ತು ಸಂಪ್ರದಾಯ ಹೊಂದಿರುವ ಭಾರತದಲ್ಲಿ ಒಂದೊಂದು ಜಾತಿ ಮತ್ತು ಧರ್ಮಗಳದ್ದೂ ವಿಶೇಷ ಆಚರಣೆ ಮತ್ತು ವಿಶಿಷ್ಟ ರೀತಿಯ ಸಂಪ್ರದಾಯಗಳನ್ನು ಅಳವಡಿಸಿಕೊಂಡು ಬರಲಾಗಿದೆ. ಇಂತಹ ಹಲವು ಸಂಸ್ಕೃತಿಗಳ ಕಾರಣಕ್ಕಾಗಿಯೇ ಭಾರತ ಬಹುತ್ವವನ್ನು ಪ್ರತಿನಿಧಿಸುವ ವಿಶೇಷ ದೇಶವಾಗಿ ಜಗತ್ತಿನ ಗಮನ ಸೆಳೆಯುತ್ತಿದೆ.

ಎರಡು ದಿನಗಳ ಹಿಂದೆ ನಿಧನರಾದ ಭಾರತದ ಬಹುದೊಡ್ಡ ಉದ್ಯಮಿ ರತನ್ ಟಾಟಾ ಪಾರ್ಸಿ ಸಮುದಾಯಕ್ಕೆ ಸೇರಿದವರು. ಭಾರತದಲ್ಲಿರುವ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಇನ್ನಾವುದೇ ಧರ್ಮದ ಜನಸಂಖ್ಯೆಗೆ ಹೋಲಿಸಿದರೆ ಪಾರ್ಸಿ ಸಮುದಾಯದ ಜನಸಂಖ್ಯೆ ತೀರಾ ಕಡಿಮೆ. ಹಾಗೆಂದ ಮಾತ್ರಕ್ಕೆ ಅವರು ಮೂಲ ಭಾರತದವರಲ್ಲ ಎಂದು ಪರಿಗಣಿಸಲಾಗುವುದಿಲ್ಲ. ಹಾಗೆ ನೋಡಲು ಹೋದರೆ ಇವತ್ತು ಭಾರತ, ದೇಶ, ದೇಶಪ್ರೇಮದ ಪಾಠ ಮಾಡುವ ಹೆಚ್ಚಿನ ಮಂದಿಯ ಮೂಲ ಕೂಡ ಈ ದೇಶದ್ದಲ್ಲ ಎಂಬುದು ಗಮನಾರ್ಹ ವಿಚಾರ.

ಸರಿ. ಪಾರ್ಸಿಗಳ ವಿಶಿಷ್ಟ ಆಚರಣೆಯಲ್ಲಿ ಈ ದಿನದಲ್ಲಿ ಗಮನ ಸೆಳೆದ ಒಂದು ಪ್ರಮುಖ ಆಚರಣೆಯೆಂದರೆ “ದಖ್ಮಾ”. ಶ್ರೀಯುತ ರತನ್ ಟಾಟಾ ನಿಧನದ ನಂತರ ಅವರ ಅಂತ್ಯಸಂಸ್ಕಾರದ ವಿಚಾರವಾಗಿ ಕೆಲವು ಕಡೆ ಸಣ್ಣಪುಟ್ಟ ಚರ್ಚೆ ಏರ್ಪಟ್ಟಿತ್ತು. ಏಕೆಂದರೆ ಪಾರ್ಸಿಗಳು ತಮ್ಮ ಸಮುದಾಯದ ಶವಗಳನ್ನು ಇತರೆ ಜನಾಂಗಗಳಂತೆ ಹೂಳುವುದಿಲ್ಲ, ಸುಡುವುದೂ ಇಲ್ಲ. ಬದಲಾಗಿ ಮನುಷ್ಯ ಕೂಡ ಪ್ರಕೃತಿಯ ಕೊಡುಗೆ ಎಂದೇ ಪರಿಗಣಿಸುವ ಪಾರ್ಸಿಗಳು ಮೃತರಾದ ಮನುಷ್ಯನ (ಪಾರ್ಸಿಗಳ) ದೇಹವನ್ನು ಮರಳಿ ಪ್ರಕೃತಿಗೆ ನೀಡುವ ಸಂಪ್ರದಾಯವಿದೆ. ಹೀಗಾಗಿ ರತನ್ ಟಾಟಾ ನಿಧನದ ಬಳಿಕ ಇಂತದ್ದೊಂದು ಸಣ್ಣ ಚರ್ಚೆ ಏರ್ಪಟ್ಟಿತ್ತು.

ಜೊರಾಸ್ಟ್ರಿಯನ್ ನಂಬಿಕೆಗಳ ಪ್ರಕಾರ, ಶವಸಂಸ್ಕಾರ ಅಥವಾ ಹೂಳುವುದು ಪ್ರಕೃತಿಯ ಅಂಶಗಳಾದ ನೀರು, ಗಾಳಿ ಹಾಗೂ ಬೆಂಕಿಯನ್ನು ಕಲುಷಿತಗೊಳಿಸುತ್ತದೆ. ಆ ಕಾರಣದಿಂದಾಗಿ ಅವರು ಶವವನ್ನು ಹೂಳುವುದಿಲ್ಲ ಅಥವಾ ಬೆಂಕಿಯಲ್ಲಿ ಬೂದಿ ಮಾಡುವುದಿಲ್ಲ. ದಖ್ಮಾ ಎಂದೇ ಕರೆಯಲ್ಪಡುವ ಪಾರ್ಸಿಗಳ ಶವಸಂಸ್ಕಾರ ಪದ್ದತಿ ಅಡಿಯಲ್ಲಿ ಅಂತ್ಯಸಂಸ್ಕಾರದ ಮುಂಜಾನೆ, ಅಂತ್ಯಕ್ರಿಯೆಯ ವಿಧಿವಿಧಾನಗಳಿಗೆ ಮೃತದೇಹವನ್ನು ಸಿದ್ಧಪಡಿಸಲಾಗುತ್ತದೆ.ಮೃತದೇಹಗಳನ್ನು ನಿರ್ವಹಿಸುವ ಜವಾಬ್ದಾರರಾಗಿರುವ ವಿಶೇಷ ಪಾಲಕರು, ನಸ್ಸೆಲಾರ್‌ಗಳು ದೇಹವನ್ನು ತೊಳೆದು ಸಾಂಪ್ರದಾಯಿಕ ಪಾರ್ಸಿ ಉಡುಗೆಯನ್ನು ಮೃತದೇಹಕ್ಕೆ ಉಡಿಸುತ್ತಾರೆ. ನಂತರ ದೇಹವನ್ನು ಬಿಳಿಯ ಹೊದಿಕೆಯಲ್ಲಿ ಸುತ್ತಿಡಲಾಗುತ್ತದೆ, ಇದನ್ನು ‘ಸುದ್ರೆ’ (ಹತ್ತಿಯ ಉಡುಪನ್ನು) ಮತ್ತು ‘ಕುಸ್ತಿ’ ಎಂದು ಕರೆಯಲಾಗುತ್ತದೆ, ಇದು ಸೊಂಟದ ಸುತ್ತ ಧರಿಸಿರುವ ಪವಿತ್ರ ಬಳ್ಳಿಯಾಗಿದೆ.

ಬಳಿಕ ಅಂತ್ಯಸಂಸ್ಕಾರದ ಸ್ಥಳಕ್ಕೆ ಕರೆದೊಯ್ಯುವ ಮುನ್ನ ಕುಟುಂಬದವರು ಮತ್ತು ಹತ್ತಿರದ ಸಂಬಂಧಿಕರು ಅಂತಿಮ ನಮನ ಸಲ್ಲಿಸಲು ಮತ್ತು ಈ ಪ್ರಾರ್ಥನೆಯಲ್ಲಿ ಭಾಗವಹಿಸಲು ಸೇರುತ್ತಾರೆ. ಸಾಂಪ್ರದಾಯಿಕವಾಗಿ, ಪಾರ್ಸಿ ಅಂತ್ಯಕ್ರಿಯೆಗಳಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ರಚನೆಯಾದ ‘ದಖ್ಮಾ’ ಅಥವಾ ಮೌನ ಗೋಪುರಕ್ಕೆ ದೇಹವನ್ನು ಕೊಂಡೊಯ್ಯಲಾಗುತ್ತದೆ. ಮೃತದೇಹವನ್ನು ದಖ್ಮಾದ ಮೇಲೆ ಇರಿಸಿದ ನಂತರ ರಣಹದ್ದುಗಳು, ಕ್ರಿಮಿ ಕೀಟಗಳು ತಿನ್ನುತ್ತವೆ. ಆ ನಂತರ ಉಳಿದ ಮೂಳೆಗಳೂ ಸಹ ಅಂತಿಮವಾಗಿ ದಖ್ಮಾ ನಡೆಸಿದ ಜಾಗದ ಭಾಗಗಳಲ್ಲಿ ಉಳಿದುಕೊಳ್ಳುತ್ತವೆ. ಅಲ್ಲಿ ಅವು ಮತ್ತಷ್ಟು ಕೊಳೆಯುತ್ತವೆ. ಈ ಪ್ರಕ್ರಿಯೆಗೆ ಹಲವು ದಿನಗಳೇ ಕಳೆಯುವ ಕಾರಣಕ್ಕೆ ಶವವನ್ನು ಸಂಸ್ಕಾರದ ಜಾಗಕ್ಕೆ ತಗೆದುಕೊಂದು ಹೋದ ನಂತರದ ದಿನಗಳಿಂದಲೇ ಆ ವ್ಯಕ್ತಿ ಭೌತಿಕವಾಗಿ ನಮ್ಮನ್ನು ಅಗಲಿದ ದಿನ ಎಂದು ಪರಿಗಣಿಸಲಾಗುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಪಾರ್ಸಿಗಳು ತಮ್ಮ ದಖ್ಮಾಗೆ ಕೆಲವು ಮಾರ್ಪಾಡುಗಳನ್ನು ತಂದಿದ್ದಾರೆ. ಪರಿಸರ ಹಾಗೂ ಪ್ರಾಯೋಗಿಕತೆಯ ಸವಾಲು ಮಾತ್ರವಲ್ಲದೆ ರಣಹದ್ದುಗಳ ಸಂಖ್ಯೆಯಲ್ಲಿ ಕುಸಿತವನ್ನು ಕಂಡ ಹಿನ್ನೆಲೆಯಲ್ಲಿ ಸೌರ ಪದ್ದತಿ ಮತ್ತು ವಿದ್ಯುತ್ ಚಿತಾಗಾರಗಳ ಮೊರೆ ಹೋಗಿದ್ದಾರೆ ಈ ಪಾರ್ಸಿ ಸಮುದಾಯದವರು.

ವಿದ್ಯುತ್ ಚಿತಾಗಾರಗಳು ಪ್ರಾಯೋಗಿಕ ಮತ್ತು ಪರಿಸರ ಸ್ನೇಹಿ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಪಾರ್ಸಿಗಳು ತಮ್ಮ ಆಚರಣೆ ಬದಲಿಸಿಕೊಂಡಿರುವುದು ಗಮನಾರ್ಹ. ‘ದಖ್ಮಾ’ ವಿಧಾನವು ಅಸಾಧ್ಯ ಎಂಬುದಾದರೆ ದೇಹವನ್ನು ವಿದ್ಯುತ್ ಚಿತಾಗಾರಕ್ಕೆ ಶವವನ್ನು ಕೊಂಡೊಯ್ಯಲಾಗುತ್ತದೆ.

ಹೀಗಾಗಿ ರತನ್ ಟಾಟಾ ಅವರ ಮೃತದೇಹವನ್ನೂ ಸಹ ಭೂಮಿ, ಬೆಂಕಿ ಅಥವಾ ನೀರನ್ನು ಕಲುಷಿತಗೊಳಿಸದಿರುವ ಜೊರಾಸ್ಟ್ರಿಯನ್ ತತ್ವಗಳನ್ನು ಗೌರವಿಸುವ ರೀತಿಯಲ್ಲಿ ವಿದ್ಯುತ್ ಚಿತಾಗಾರದಲ್ಲಿ ನಡೆಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮುಂಬೈನಲ್ಲಿರುವ ಸಾರ್ವಜನಿಕ ಚಿತಾಗಾರ ಟವರ್‌ ಆಫ್‌ ಸೈಲೆನ್ಸ್‌ ಇರುವ ವೊರ್ಲಿ ಚಿತಾಗಾರದಲ್ಲಿ ನಡೆದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page