Friday, June 14, 2024

ಸತ್ಯ | ನ್ಯಾಯ |ಧರ್ಮ

Heatstroke (ಹೀಟ್‌ಸ್ಟ್ರೋಕ್‌): ಭಯ ಬೇಡ ಎಚ್ಚರವಿರಲಿ! ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಕೆಲವು ಉಪಾಯಗಳು

ಜೀವ ಬಸವಳಿಯುವಂತೆ ಮಾಡುತ್ತಿರುವ ಈ ಬೇಸಗೆಯಲ್ಲಿ ಮನುಷ್ಯರು ಜೀವ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ವಿಪರೀತ ಬಿಸಿಲು ಮತ್ತು ಸೆಕೆಯಿಂದಾಗಿ ಜನರು ತತ್ತರಿಸುತ್ತಿದ್ದಾರೆ. ಏಷ್ಯಾ ಖಂಡದ ಹಲವು ಭಾಗ ಇಂದು ಬಿಸಿಲಿನ ಬೇಗೆಗೆ ಬಾಡುತ್ತಿದ್ದ. ಮೊನ್ನೆ ಮಹಾರಾಷ್ಟ್ರದಲ್ಲಿ ಸರಕಾರಿ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ 13 ಜನರು ಹಾರ್ಟ್ ಸ್ಟ್ರೋಕ್‌ಗೆ ಒಳಗಾಗಿ ಮೃತಪಟ್ಟು ನೂರಾರು ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಮುಖ್ಯಮಂತ್ರಿ ಶಿಂಧೆ ಹಾಗೂ ಕೇಂದ್ರ ಗೃಹಮಂತ್ರಿ ಅಮಿತ್‌ ಷಾ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ನಡೆದ ಅನಾಹುತವನ್ನು ಮೀಡಿಯಾಗಳು ಅಷ್ಟಾಗಿ ಸುದ್ದಿ ಮಾಡಿಲ್ಲ.

ಒಂದೇ ಸಮನೇ ಪ್ರಕೃತಿಯ ಮೇಲೆ ನಡೆಸಿದ ಅತ್ಯಾಚಾರ ಇಂದು ನಮ್ಮನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಹವಮಾನ ಬದಲಾವಣೆ, ಮಳೆ ಮಾದರಿಯಲ್ಲಿನ ಬದಲಾವಣೆಗಳು ಕೃಷಿಯ ಮೇಲಷ್ಟೇ ಈಗ ಪರಿಣಾಮ ಬೀರುತ್ತಿಲ್ಲ. ಇದು ಜನಜೀವನದ ಮೇಲೂ ಪರಿಣಾಮ ಬೀರತೊಡಗಿದೆ. ಸದಾ ತಣ್ಣಗಿರುತ್ತಿದ್ದ ಕೊಡಗು ಕೂಡಾ ಈಗ ಕುದಿಯುತ್ತಿದೆ. ಇತ್ತೀಚೆಗೆ ಆ ಜಿಲ್ಲೆ ಕರಾವಳಿ ಬಿಸಿಲೂರು ಉಡುಪಿಗಿಂತಲೂ ಹೆಚ್ಚಿನ ಉಷ್ಣಾಂಶವನ್ನು ದಾಖಲಿಸಿದೆ.

ಪರಿಸ್ಥಿತಿ ಹೀಗಿರುವಾಗ ಈ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವಾದರೂ, ಈ ಬಿಸಿಲು ಮತ್ತು ಸೆಕೆ ತಂದೊಡ್ಡುವ ಅಪಾಯಗಳಿಂದ ತಪ್ಪಿಸಿಕೊಳ್ಳಲು ಒಂದಷ್ಟು ಮಾರ್ಗಗಳಿವೆ. ಮೊನ್ನೆಯಷ್ಟೇ ಬೃಹನ್ಮುಂಬೈ ನಗರಪಾಲಿಕೆ ತನ್ನ ನಾಗರಿಕರಿಗೆ ಬಿಸಿಲಿನಿಂದ, ಸೆಕೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಒಂದಷ್ಟು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಬನ್ನಿ ಅವುಗಳ ಕುರಿತು ತಿಳಿದುಕೊಂಡು ನಾವೂ ಪಾಲಿಸಿ ಈ ಸೆಕೆ ಮತ್ತು ಬಿಸಿಲಿನಿಂದ ಪಾರಾಗೋಣ.

ಸೆಕೆಯಿಂದ ಪಾರಾಗಲು:

  • ಧಾರಾಳ ನೀರು ಕುಡಿದು ದೇಹ ನಿರ್ಜಲೀಕರಣಗೊಳ್ಳದ ಹಾಗೆ ನೋಡಿಕೊಳ್ಳಿ
  • ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು: ತಿಳಿ ಬಣ್ಣದ ಹಾಗೂ ಹತ್ತಿಯ ಬಟ್ಟೆಗಳನ್ನೇ ಧರಿಸಿ
  • ಹೊರಗೆ ಹೋಗುವಾಗ ಮರೆಯದೆ ಕೊಡೆ/ಟೋಪಿ, ಶೂ ಅಥವಾ ಚಪ್ಪಲಿಗಳನ್ನು ಧರಿಸಲು ಮರೆಯಬೇಡಿ.
  • ಪ್ರಯಾಣದಲ್ಲಿ ನೀರು ಮತ್ತು ಈರುಳ್ಳಿ ನಿಮ್ಮೊಡನೆ ಇರಲಿ.
  • ಈ ಸಮಯದಲ್ಲಿ ಆಲ್ಕೊಹಾಲ್‌, ಕಾಫಿ-ಟೀ ಮತ್ತು ಕಾರ್ಬೊನೇಟೆಡ್ ಡ್ರಿಂಕ್‌ಗಳನ್ನು (ತಂಪು ಪಾನೀಯಗಳು) ಆದಷ್ಟೂ ಅವಾಯ್ಡ್‌ ಮಾಡಿ ಇವು ನಿಮ್ಮ ದೇಹವನ್ನು ಡಿ ಹೈಡ್ರೇಟ್‌ ಮಾಡುತ್ತವೆ.
  • ಪ್ರೋಟೀನ್‌ ಹೆಚ್ಚಿರು ಮತ್ತು ಫ್ರೋಜನ್‌ ಆಹಾರಗಳನ್ನು ಆದಷ್ಟೂ ಕಡಿಮೆ ತಿನ್ನಿ.
  • ಹೊರಗೆ ಹೋಗುವಾಗ ಕೊಡೆ ಬಳಸಿ. ಮತ್ತು ನಿಮ್ಮ ಮುಖ ಮತ್ತು ತಲೆಯನ್ನು ಹತ್ತಿಯ ಬಟ್ಟೆಯಿಂದ ಮುಚ್ಚಿಕೊಳ್ಳಿ.
  • ಚಿಕ್ಕ ಮಕ್ಕಳು ಮತ್ತು ಸಾಕು ಪ್ರಾಣಿಗಳನ್ನು ವಾಹನಗಳಲ್ಲಿ ಗಾಜು ಏರಿಸಿ ಬಿಟ್ಟು ಹೋಗಬೇಡಿ.
  • ನಿಶಕ್ತಿ ಕಾಡಿದಲ್ಲಿ ಅಥವಾ ಅನಾರೋಗ್ಯ ಕಾಡಿದಲ್ಲಿ ತಕ್ಷಣವೇ ವೈದ್ಯರನ್ನು ಕಾಣಿ.
  • ORS, ಮನೆಯಲ್ಲಿ ತಯಾರಿಸಿದ ದ್ರವ ಪಧಾರ್ಥಗಳಾದ ಲಸ್ಸಿ, ಮಜ್ಜಿಗೆ, ಮೊಸರು, ಅನ್ನದ ಗಂಜಿ ತಿಳಿ, ನಿಂಬೆ ರಸ, ಎಳನೀರು, ಇತ್ಯಾದಿಗಳನ್ನು ನಿಯಮಿತವಾಗಿ ಸೇವಿಸುತ್ತಿರಿ. ಇವುಗಳು ದೇಹವನ್ನು ಹೈಡ್ರೇಟ್ ಮಾಡುತ್ತವೆ.
  • ಸಾಕುಪ್ರಾಣಿಗಳನ್ನು ನೆರಳಿನಲ್ಲಿ ಕಟ್ಟಿಹಾಕಿ. ಮತ್ತು ಸಾಕಷ್ಟು ನೀರು ಅವುಗಳಿಗೆ ಲಭ್ಯವಿರುವಂತೆ ನೋಡಿಕೊಳ್ಳಿ.
  • ಫ್ಯಾನ್‌ಗಳು, ಕರ್ಟನ್‌ಗಳು, ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಿ ನಿಮ್ಮ ಮನೆಯನ್ನು ತಂಪಾಗಿಡಿ ಮತ್ತು ರಾತ್ರಿಯಲ್ಲಿ ಕಿಟಕಿಗಳನ್ನು ತೆರೆದಿಡಿ.

ಹೀಟ್‌ ಸ್ಟ್ರೋಕ್‌ ಅಥವಾ ಬಿಸಿಲಿನ ಆಘಾತಕ್ಕೆ ಈಡಾದಲ್ಲಿ:

  • Heatstroke (ಹೀಟ್‌ಸ್ಟ್ರೋಕ್‌) ಗೆ ಒಳಗಾದ ವ್ಯಕ್ತಿಯನ್ನು ನೆರಳಿನಲ್ಲಿ ಅಥವಾ ತಂಪಾದ ಸ್ಥಳದಲ್ಲಿ ಮಲಗಿಸಿ. ಸ್ಪಾಂಜನ್ನು ನೀರಿನಲ್ಲಿ ಅದ್ದಿ ವ್ಯಕ್ತಿಯ ಮೈಯನ್ನು ತೊಳೆಯಿರಿ. ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ತಣ್ಣೀರನ್ನು ವ್ಯಕ್ತಿಯ ಮೈಮೇಲೆ ಸುರಿಯಿರಿ.
  • ಬಿಸಿಲಿನ ಆಘಾತಕ್ಕೆ ಸಿಲುಕಿದ ವ್ಯಕ್ತಿಗೆ ORS, ಅನ್ನದ ಗಂಜಿ ಅಥವಾ ದೇಹದ ನಿರ್ಜಲೀಕರಣವನ್ನು ತಡೆಯಬಲ್ಲ ಯಾವುದೇ ದ್ರವ ಪದಾರ್ಥವನ್ನು ಕುಡಿಸಿರಿ.
  • ಹೀಟ್‌ ಸ್ಟ್ರೋಕ್‌ ಜೀವಕ್ಕೆ ಅಪಾಯ ತರುವ ಸಾಧ್ಯತೆಯಿರುವ ಕಾರಣ ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಿರಿ.

ಕೇಂದ್ರ ಸರ್ಕಾರದ ಹವಮಾನ ಇಲಾಖೆ ಬಿಡುಗಡೆ ಮಾಡಿರುವ ಬಿಸಿಗಾಳಿ ಬರಬಹುದಾದ ರಾಜ್ಯಗಳ ಪಟ್ಟಿಯಲ್ಲಿ ದಕ್ಷಿಣ ಭಾರತ ಇಲ್ಲವಾದರೂ ನಾವು ರಿಸ್ಕ್‌ ತೆಗೆದುಕೊಳ್ಳಬಹುದಾದ ಸ್ಥಿತಿಯಲ್ಲಿ ಇಲ್ಲ. ಹೆಚ್ಚಿನ ರಾಜ್ಯಗಳು ಈಗಾಗಲೇ ಬೇಸಿಗೆಯ ಬೇಗೆಗೆ ಬಳಲತೊಡಗಿವೆ. ಸಣ್ಣ ಮಕ್ಕಳು ಮತ್ತು ಹಿರಿಯರು ಮತ್ತು ಸಾಕು ಪ್ರಾಣಿಗಳನ್ನು ಈ ಬಿಸಿಲಿನಿಂದ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ಬೇಸಿಗೆ ಜುಲೈ ತನಕವೂ ಮುಂದುವರೆಯುವ ಸಾಧ್ಯತೆಯಿದೆಯೆಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು