ಉತ್ತರ ಪ್ರದೇಶದಲ್ಲಿ (ಯುಪಿ) ಗಂಭೀರ ಅಪಘಾತ ಸಂಭವಿಸಿದೆ. ಲಡ್ಡು ಉತ್ಸವ ನಡೆಯುತ್ತಿದ್ದ ವೇದಿಕೆ ಕುಸಿದು ಬಿದ್ದಿದ್ದು, ಈ ಘಟನೆಯಲ್ಲಿ ಐದು ಜನರು ಸಾವಿಗೀಡಾಗಿದ್ದಾರೆ.
ಜೊತೆಗೆ 60ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಅಧಿಕಾರಿಗಳ ಪ್ರಕಾರ, ಆದಿನಾಥರ ನಿರ್ವಾಣ ಲಡ್ಡು ಉತ್ಸವವನ್ನು ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮರದ ವೇದಿಕೆ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. ಇದಲ್ಲದೆ, ಜೈನ ಶಿಷ್ಯರು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವು ಜನರು ಸಿಲುಕಿರುವ ಅನುಮಾನವಿದ್ದು, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಇದೀಗ ಈ ಅಪಘಾತದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯಿಸಿದ್ದಾರೆ. ಘಟನಾ ಸ್ಥಳದಲ್ಲಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಮತ್ತು ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.