Saturday, March 15, 2025

ಸತ್ಯ | ನ್ಯಾಯ |ಧರ್ಮ

ಮಾ. 01 ರಂದು ಚಿತ್ರದುರ್ಗದಲ್ಲಿ ಬೃಹತ್ ಉದ್ಯೋಗ ಮೇಳ | 50 ಕ್ಕೂ ಹೆಚ್ಚು ಕಂಪನಿಗಳಲ್ಲಿ 5000 ಕ್ಕೂ ಹೆಚ್ಚು ಉದ್ಯೋಗಗಳು ಲಭ್ಯ

ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಮಾ. 01 ರಂದು ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಸುಮಾರು 50 ಕ್ಕೂ ಹೆಚ್ಚು ಕಂಪನಿಗಳಲ್ಲಿ 5000 ಕ್ಕೂ ಹೆಚ್ಚು ಉದ್ಯೋಗಗಳು ಲಭ್ಯವಿದೆ.

ಹಲವಾರು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗ ನೀಡಲು ಸಮ್ಮತಿಸಿ ನೊಂದಣಿ ಮಾಡಿಕೊಂಡಿವೆ. ಈ ಪೈಕಿ ಕಿರ್ಲೋಸ್ಕರ್, ಎಲ್ ಅಂಡ್ ಟಿ, ನಂತಹ ಬೃಹತ್ ಕಂಪನಿಗಳು ಸೇರಿದಂತೆ ಫೈನಾನ್ಸ್, ಐಟಿ ಕಂಪನಿಗಳು, ಮೊಬೈಲ್ ಕಂಪನಿಗಳು, ಫರ್ಟಿಲೈಜರ್, ಆಟೋಮೊಬೈಲ್, ಗಾರ್ಮೆಂಟ್ಸ್, ಫಾರ್ಮ ಕಂಪನಿಗಳು ಪ್ರಮುಖವಾಗಿವೆ. ಈ ಎಲ್ಲ ಕಂಪನಿಗಳಲ್ಲಿ 5000 ಕ್ಕೂ ಹೆಚ್ಚು ಉದ್ಯೋಗಗಳು ಲಭ್ಯವಿದ್ದು, ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಲು ಸುವರ್ಣಾವಕಾಶ ಒದಗಿಬಂದಿದೆ.

ಈಗಾಗಲೆ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನೊಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ನೊಂದಣಿ ಕಾರ್ಯ ಕೂಡ ಅತ್ಯಂತ ಸರಳವಾಗಿದೆ. ಮೊಬೈಲ್‌ನಲ್ಲಿ, ಕಂಪ್ಯೂಟರ್‌ನಲ್ಲಿ https://forms.gle/7pTxbGPVKAFCSYaX7 ಈ ಲಿಂಕ್ ಕ್ಲಿಕ್ ಮಾಡಿದ ಬಳಿಕ ತೆರೆಯುವ ಗೂಗಲ್ ಫಾರ್ಮ್ ನಲ್ಲಿ ಅಭ್ಯರ್ಥಿಗಳು ತಮ್ಮ ಹೆಸರು, ವಿದ್ಯಾರ್ಹತೆ, ವಿಳಾಸ ಮುಂತಾದ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ, ಸಬ್‌ಮಿಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನೊಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಯ ಅಧಿಕೃತ ಸರ್ಕಾರಿ ವೆಬ್‌ಸೈಟ್ https://chitradurga.nic.in/ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಆನ್‌ಲೈನ್‌ನಲ್ಲಿ ನೊಂದಣಿ ಮಾಡಿಕೊಳ್ಳದೆ, ನೇರವಾಗಿ ಉದ್ಯೋಗ ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳಿಗೂ ಕೂಡ ಉದ್ಯೋಗ ಮೇಳ ಜರುಗುವ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಮಾ. 01 ರಂದು ಬೆಳಿಗ್ಗೆ 09 ಗಂಟೆಯಿAದಲೇ ನೋಂದಣಿ ಮಾಡಿಕೊಳ್ಳಲು 5 ಕೌಂಟರ್ ಅನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನೇರವಾಗಿ ಪಾಲ್ಗೊಳ್ಳಲು ಆಗಮಿಸುವ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳನ್ನು ನೀಡಿ ಕೌಂಟರ್‌ಗಳಲ್ಲಿ ನೊಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಆನ್‌ಲೈನ್‌ನಲ್ಲಿ ನೊಂದಣಿ ಮಾಡಿಕೊಂಡವರಿಗೆ, ನೇರವಾಗಿ ಕಂಪನಿಗಳಲ್ಲಿ ಸಂದರ್ಶನಕ್ಕೆ ಅವಕಾಶ ದೊರೆಯಲಿದೆ. ಹೀಗಾಗಿ ಆನ್‌ಲೈನ್‌ನಲ್ಲಿ ನೊಂದಣಿ ಮಾಡಿಕೊಳ್ಳುವುದು ಸೂಕ್ತ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮೋ ಹಾಗೂ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಸೇರಿದಂತೆ ಎಲ್ಲಾ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೂ ಉದ್ಯೋಗ ಮೇಳದಲ್ಲಿ ಉದ್ಯೋಗಗಳು ಲಭ್ಯವಿದ್ದು, ಉದ್ಯೋಗ ಆಸಕ್ತ ಯುವಕ, ಯುವತಿಯರು ಭಾಗವಹಿಸಿ, ಉದ್ಯೋಗ ಪಡೆಯಬಹುದು. ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಡಿಪ್ಲೋಮಾ, ಪದವಿ ಪಡೆದಿರುವ ಸುಮಾರು 4300 ಕ್ಕೂ ಹೆಚ್ಚು ಯುವಕ, ಯುವತಿಯರು ನಿರುದ್ಯೋಗ ಭತ್ಯೆ ಪಡೆಯುತ್ತಿದ್ದು, ಎಲ್ಲ ಅಭ್ಯರ್ಥಿಗಳು ಕೂಡ ಈ ಉದ್ಯೋಗಮೇಳದಲ್ಲಿ ಪಾಲ್ಗೊಳ್ಳಲು ಜಿಲ್ಲಾಡಳಿತ ವಿಶೇಷ ಆಹ್ವಾನ ನೀಡುತ್ತಿದ್ದು, ಈ ಯೋಜನೆಯ ಅಭ್ಯರ್ಥಿಗಳು ಕೂಡಲೆ ನೊಂದಣಿ ಮಾಡಿಕೊಂಡು, ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಉದ್ಯೋಗ ಮೇಳದ ಬಗ್ಗೆ ವ್ಯಾಪಕ ಪ್ರಚಾರ ನೀಡುವ ಸಲುವಾಗಿ ಈಗಾಗಲೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಕಸ ವಿಲೇವಾರಿ ವಾಹನಗಳಲ್ಲಿನ ಧ್ವನಿವರ್ಧಕದ ಮೂಲಕ ಉದ್ಯೋಗ ಮೇಳದ ಕುರಿತು ಜಿಂಗಲ್ಸ್ ಹಾಗೂ ಸಂದೇಶ ನೀಡುವ ಮೂಲಕ ಪ್ರಚಾರವನ್ನು ಸಹ ಕೈಗೊಳ್ಳಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page