Sunday, June 16, 2024

ಸತ್ಯ | ನ್ಯಾಯ |ಧರ್ಮ

ಮಾನವ ಪ್ರಾಣಿ ಸಂಘರ್ಷ | ಕಾಡು ನಾಶದತ್ತ… ಪ್ರಾಣಿಗಳು ಊರಿನತ್ತ

ಅನೇಕರು ತಮ್ಮ ತೋಟಗಳಲ್ಲಿನ ಮರಗಳನ್ನು ಮಾರಾಟ ಮಾಡಿದರು. ಇವರೊಂದಿಗೆ  ಹಲವಾರು ಅಧಿಕಾರಿಗಳು ಶಾಮೀಲಾಗಿ ಹಿಡುವಳಿಗಳ ಜೊತೆಯಲ್ಲಿ ಸರ್ಕಾರಿ ಅರಣ್ಯವೂ ಖಾಲಿಯಾಗತೊಡಗಿತು. ಕೆಲವೇ ವರ್ಷಗಳಲ್ಲಿ ಏಲಕ್ಕಿ ಬೆಳೆಯುತ್ತಿದ್ದ ಕಾಡೆಲ್ಲ ಮಾಯವಾದವು. ಅಲ್ಲೆಲ್ಲ ಕಾಫಿ ಕೃಷಿ ಪ್ರಾರಂಭವಾಯಿತು…..ಇದು ಇಂದಿನ ಪ್ರಸಾದ್‌ ರಕ್ಷಿದಿಯವರ ಅಂಕಣ.

ಮಲೆನಾಡಿನೊಳಗೆ ಹಲವು ವಿದ್ಯಮಾನಗಳು ನಡೆದಿದ್ದವು.  ಇಲ್ಲಿ ಪ್ರಮುಖವಾಗಿ ಬೆಳೆಯುತ್ತಿದ್ದ ಏಲಕ್ಕಿ, ಕಾಫಿ ಮತ್ತು ಭತ್ತ ಈ ಮೂರೂ ಬೆಳೆಗಳಿಗೆ ತೊಂದರೆ ಪ್ರಾರಂಭವಾಗಿತ್ತು. ಮೊದಲನೆಯ ತೊಂದರೆ ಪ್ರಾಕೃತಿಕವಾಗಿ ಆದ ಬದಲಾವಣೆ. ಅದರಲ್ಲಿ ಮಳೆ ಋತುಗಳ ವ್ಯತ್ಯಾಸ, ತಾಪಮಾನದ ಏರಿಕೆ ಮುಖ್ಯವಾದವು. ಇದರಿಂದಾಗಿ  ಏಲಕ್ಕಿ ಇಳುವರಿ ಕಡಿಮೆಯಾಗತೊಡಗಿತು. ಜೊತೆಗೆ ಏಲಕ್ಕಿಗೆ ಮೊದಲಿನಿಂದ ಇದ್ದ ಕೊಳೆರೋಗ ಹಾಗೂ ಕಟ್ಟೆ ರೋಗಗಳ ಜೊತೆಯಲ್ಲಿ  ಕೊಕ್ಕೆ ಕಂದು ರೋಗವೆಂಬ ಮಹಾಮಾರಿ ಹೊಸದಾಗಿ ಹುಟ್ಟಿಕೊಂಡು ಏಲಕ್ಕಿ ಬೆಳೆಯನ್ನು ಅಕ್ಷರಶಃ ನೆಲಕಚ್ಚಿಸಿತ್ತು.

ತಾಪ ಮಾನ ಏರಿಕೆಯ ಇನ್ನೊಂದು ಪ್ರಮುಖ  ಪರಿಣಾಮವೆಂದರೆ ಪ್ರಪಂಚದಲ್ಲೇ ಅತ್ಯಂತ ಉತ್ತಮ ಗುಣಮಟ್ಟದ ನಮ್ಮ ಅರೆಬಿಕಾ ಕಾಫಿ ವಿನಾಶದತ್ತ ಸಾಗಿದ್ದು. ಕೊಳೆರೋಗ ಎಲೆಚುಕ್ಕಿ ರೋಗ ಮುಂತಾದವನ್ನು ಬೋರ್ಡೋ ದ್ರಾವಣ ಸಿಂಪಡಿಸುವ ಮೂಲಕವೇ ನಿಯಂತ್ರಣದಲ್ಲಿಟ್ಟುಕೊಂಡು ಬೆಳೆಗಾರರರು ದಶಕಗಳ ಕಾಲ ಕೃಷಿಯನ್ನು ನಿಭಾಯಿಸಿದ್ದಾರೆ. ಆದರೆ ಅರೆಬಿಕಾ ಬೆಳೆಗೆ ತಗುಲುವ ಮಹಾಮಾರಿ ಕಾಂಡಕೊರಕ ಕೀಟ (ಸ್ಟೆಮ್ ಬೋರರ್) ಇದರ ನಿಯಂತ್ರಣ ಬಹಳ ಕಷ್ಟ ಮತ್ತು ಇದು ಅತ್ಯಂತ ದುಬಾರಿ ಸಮಸ್ಯೆ. ಒಮ್ಮೆ ಗಿಡವೊಂದು ಸ್ಟೆಮ್ ಬೋರರ್ ಗೆ ತುತ್ತಾದರೆ  ಅದನ್ನು ಕಿತ್ತು ಸುಟ್ಟು ಹಾಕುವುದೊಂದೇ ದಾರಿ. ಮತ್ತೆ ಅಲ್ಲಿ ಗಿಡನೆಟ್ಟು ಫಸಲಿಗೆ ಬರಲು ಏಳೆಂಟು ವರ್ಷ ಕಾಯಬೇಕು. ಸಾಮಾನ್ಯ ಪರಿಸ್ಥಿತಿಯಲ್ಲಿ ಪ್ರತಿವರ್ಷ ಸಾವಿರ ಗಿಡಗಳಿಗೆ ಎಂಟೋ ಹತ್ತೋ ಗಿಡಗಳು ಕಾಡ ಕೊರಕಕ್ಕೆ ಬಲಿಯಾಗುತ್ತಿದ್ದರೆ, ತಾಪಮಾನ ಏರಿಕೆಯಿಂದ ಅದು ಸಾವಿರಕ್ಕೆ ಇನ್ನೂರು ಮುನ್ನೂರರ ವರೆಗೆ ಏರಿತು. ಅಂದರೆ ಸುಮಾರು ಐದು ವರ್ಷಗಳಲ್ಲಿ ಇಡೀ ತೋಟವೇ ನಾಶವಾಗುವ ಪರಿಸ್ಥಿತಿ!

ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇದ್ದರೆ ಇದು ತನ್ನಷ್ಟಕ್ಕೆ ನಿಯಂತ್ರಣವಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ತಾಪಮಾನ ಸದಾ ಮೂವತ್ತರ ಮೇಲೇರತೊಡಗಿ, ಅರೆಬಿಕಾ ಕಾಫಿ ಬೆಳೆ ವ್ಯಾಪಕವಾಗಿ ಸ್ಟೆಮ್ ಬೋರರ್ ಗೆ ತುತ್ತಾಗಿ ಬೆಳೆ ನಾಶವಾಯಿತು, ಬೆಳೆಗಾರರು ನಂಬಿದ್ದ ಯಾವ ಸಂಶೋಧನಾ ಕೇಂದ್ರದಿಂದಲೂ ಸೂಕ್ತ ಪರಿಹಾರೋಪಾಯವಾಗಲಿ, ಕೀಟ ನಿರೋಧಕ ತಳಿಯಾಗಲಿ ಸಿಗಲಿಲ್ಲ. ಸಿಕ್ಕಿ ಸಿಕ್ಕಿದ ಮಾರಕ ವಿಷಗಳನ್ನು ಬಳಸಿ ಜೀವನಾಶಕ್ಕೆ ಕಾರಣವಾದದ್ದೇ ಬಂತು. ಅನಿವಾರ್ಯವಾಗಿ ಬೆಳೆಗಾರರು ಎಲ್ಲ ಕಡೆ ರೋಬಸ್ಟ ಬೆಳೆಯತ್ತ ಗಮನಕೊಟ್ಟರು. ಇದರಿಂದ ಮತ್ತೆ ಮರಗಿಡಗಳ ಸಂಖ್ಯೆ ಕಡಿಮೆಯಾಯಿತು.

ಅದೇ ಕಾಲಕ್ಕೆ ಏಲಕ್ಕಿ ಬೆಲೆಯ ಅತಿಯಾದ ಏರಿಳಿತಗಳಿಂದ ಬೆಳೆಗಾರರು ಈ ಏಲಕ್ಕಿ ಬೆಳೆಯುವ ವಹಿವಾಟೇ ಬೇಡವೆನ್ನುವ ತೀರ್ಮಾನಕ್ಕೆ ಬಂದರು. ಇವರಲ್ಲಿ ಅನೇಕರಿಗೆ  ಬ್ಯಾಂಕುಗಳಲ್ಲಿ ಸಾಲವಿತ್ತು. ಇದು ಟಿಂಬರ್ ಮಾಫಿಯಾದವರಿಗೆ ಹೇಳಿ ಮಾಡಿಸಿದಂತಹ ಸಂದರ್ಭ. ಅನೇಕರು ತಮ್ಮ ತೋಟಗಳಲ್ಲಿನ ಮರಗಳನ್ನು ಮಾರಾಟ ಮಾಡಿದರು. ಇವರೊಂದಿಗೆ  ಹಲವಾರು ಅಧಿಕಾರಿಗಳು ಶಾಮೀಲಾಗಿ ಹಿಡುವಳಿಗಳ ಜೊತೆಯಲ್ಲಿ ಸರ್ಕಾರಿ ಅರಣ್ಯವೂ ಖಾಲಿಯಾಗತೊಡಗಿತು. ಇದರಲ್ಲಿ ದೊಡ್ಡ ದೊಡ್ಡವರೇ ಇದ್ದರು. ಕೆಲವೇ ವರ್ಷಗಳಲ್ಲಿ ಏಲಕ್ಕಿ ಬೆಳೆಯುತ್ತಿದ್ದ ಕಾಡೆಲ್ಲ ಮಾಯವಾದವು. ಅಲ್ಲೆಲ್ಲ ಕಾಫಿ ಕೃಷಿ ಪ್ರಾರಂಭವಾಯಿತು.

ಇಲ್ಲಿ ಮುಖ್ಯವಾಗಿ ಒಂದು ವಿಚಾರವನ್ನು ಗಮನಿಸಬೇಕು. ಕಾಫಿಯಲ್ಲಿ ಮುಖ್ಯವಾಗಿ ಎರಡು ಪ್ರಬೇಧಗಳು. ಅರೇಬಿಕಾ ಮತ್ತು ರೊಬಸ್ಟ.  ಅರೇಬಿಕಾ ಎಂಬತ್ತರಿಂದ ನೂರು ಇಂಚುಗಳಷ್ಟು ಮಳೆಬೀಳುವ ಪ್ರದೇಶದಲ್ಲಿ ಚೆನ್ನಾಗಿ ಬೆಳೆದರೆ, ರೊಬಸ್ಟ ತಳಿ ನೂರ ಇಪ್ಪತ್ತರಿಂದ ನೂರಾ ನಲುವತ್ತು ಇಂಚುಗಳಷ್ಟು ಮಳೆ ಅನುಕೂಲ, ಆದರೆ ಅರೆಬಿಕಾ ಕಾಫಿಗೆ ಹೆಚ್ಚು ನೆರಳು ಮರಗಳು ಬೇಕು. ರೊಬಸ್ಟ ಕಾಫಿಗೆ ಕಡಿಮೆ ನೆರಳು ಸಾಕು. ಜೊತೆಗೆ ರೋಬಸ್ಟ ಕಾಫಿಗೆ ರೋಗಗಳೂ ಕಡಿಮೆ. ಹೇಗೂ ಹೆಚ್ಚು ಮಳೆಬೀಳುತ್ತಿದ್ದ ಪರಂಪರಾಗತ ಏಲಕ್ಕಿ ಬೆಳೆಯುವ ಪ್ರದೇಶಗಳಲ್ಲಿ ಟಿಂಬರ್ ಮಾರಿದ ನಂತರ  ರೈತರು ಸಹಜವಾಗಿಯೇ ಅಲ್ಲಿಗೆ ಒಗ್ಗುವ ರೊಬಸ್ಟ ಕಾಫಿಯನ್ನೇ  ಆ ಪ್ರದೇಶದಲ್ಲಿ ಬೆಳೆದರು. ಇದರಿಂದ ಅಲ್ಲಿ ಮರಗಿಡಗಳ ಸಂಖ್ಯೆ ಶಾಶ್ವತವಾಗಿ ಕಡಿಮೆಯಾಯಿತು. ಈ ಪ್ರದೇಶದಲ್ಲಿದ್ದ  ಜೀವ ಸಂಕುಲಕ್ಕೆ ಬಹಳ ದೊಡ್ಡ ಅಡಚಣೆ ಉಂಟಾಯಿತು.

ಮಲೆನಾಡಿನಲ್ಲಿ ಏಲಕ್ಕಿ, ಕಾಫಿ, ಭತ್ತದ ಜೊತೆಯಲ್ಲಿ ಬೆಳೆಯುವ ಇತರ ಕೆಲವು  ಬೆಳೆಗಳೆಂದರೆ ಮೆಣಸು, ಜೊತೆಯಲ್ಲಿ ಒಂದಷ್ಟು ಬಾಳೆ, ಕಿತ್ತಲೆ ಮತ್ತು ಅಡಿಕೆ. ಕಿತ್ತಲೆ ಮೊದಲೇ ರೋಗದಿಂದ ನಾಶವಾಗಿತ್ತು. ಕಾಡು ನಾಶವಾದದ್ದರಿಂದ ಪ್ರಾಣಿಗಳು ಇತರ ಬೆಳೆಗಳನ್ನು ನಾಶ ಮಾಡತೊಡಗಿದವು. ಭತ್ತ, ಬಾಳೆಯನ್ನೂ ಬೆಳೆಯುವುದು ಅಸಾಧ್ಯವಾಯಿತು.

ಇದೆಲ್ಲ ವಿದ್ಯಮಾನಗಳ ಪರಿಣಾಮಗಳು ಮೊದಲು ಹೆಚ್ಚಾಗಿ ಕಂಡು ಬಂದದ್ದು ದಟ್ಟ ಮಲೆನಾಡಿನ ಪ್ರದೇಶಗಳಲ್ಲಿ, ಅಂದರೆ ಹಾಸನಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು, ಯಸಳೂರು, ಹಾನುಬಾಳು ಹೋಬಳಿಗಳು, ಆಲೂರಿನ ಮಗ್ಗೆ, ಕೆಂಚಮ್ಮನ ಹೊಸಕೋಟೆ ಪ್ರದೇಶಗಳು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿಯ ಕೆಲವು ಭಾಗಗಳು, ಹಾಗೇಯೇ ಕೊಡಗಿನ ದಕ್ಷಿಣ ಮತ್ತು ಪಶ್ಚಿಮ ಭಾಗಗಳು, ಆದರೆ ಅದು ಅಲ್ಲಿಗೇ ಸೀಮಿತವಾಗದೆ ಬಹಳ ಬೇಗ ಇಡೀ ಮಲೆನಾಡನ್ನು ವ್ಯಾಪಿಸಿತು.

ಇದು ಬರಿಯ ಮಾನವ ಪ್ರಾಣಿ ಸಂಬಂಧಗಳಲ್ಲಿ ಮಾತ್ರ ಬದಲಾವಣೆಯನ್ನು ತರಲಿಲ್ಲ, ಮಾನವ ಪ್ರಕೃತಿ ಸಂಬಂಧವನ್ನೂ ಬದಲಾಯಿಸಿತು.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ,

Related Articles

ಇತ್ತೀಚಿನ ಸುದ್ದಿಗಳು