Sunday, July 27, 2025

ಸತ್ಯ | ನ್ಯಾಯ |ಧರ್ಮ

ಸರ್ವಾಧಿಕಾರಿ ಬಿಜೆಪಿ: ದೇಶಾದ್ಯಂತ ಎಎಪಿಯಿಂದ ಉಪವಾಸ ಸತ್ಯಾಗ್ರಹ

ಬೆಂಗಳೂರು: ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಿ ಏಪ್ರಿಲ್ 7ರಂದು ದೇಶಾದ್ಯಂತ ಆಮ್ ಆದ್ಮಿ ಪಾರ್ಟಿ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕದ ಎಎಪಿ ನಾಯಕರು, ಕಾರ್ಯಕರ್ತರು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ರವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಇವರು, ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಕೂಡ ಆಮ್ ಆದ್ಮಿ ಪಾರ್ಟಿಯ ನಾಯಕರು, ಕಾರ್ಯಕರ್ತರು ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದಾರೆ, ನರೇಂದ್ರ ಮೋದಿ ಸರ್ಕಾರವನ್ನು ನಮ್ಮ ರಾಷ್ಟ್ರದಿಂದ ತೊಲಗಿಸುವ ಸಲುವಾಗಿ ಎಲ್ಲಾ ಭಾರತೀಯರು ಒಂದಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ತೆರಿಗೆದಾರರ ಹಣವನ್ನು ಖರ್ಚು ಮಾಡುವ ವಿಚಾರದಲ್ಲಿ ಎಎಪಿ ಸರ್ಕಾರ ದೇಶಕ್ಕೆ ಮಾದರಿಯಾಗಿದೆ. ಉಚಿತ ನೀರು, ವಿದ್ಯುತ್, ಶಿಕ್ಷಣ, ಆರೋಗ್ಯ ಸೇವೆ ನೀಡುವ ಮೂಲಕ ದೆಹಲಿ ಮತ್ತು ಪಂಜಾಬ್‌ನಲ್ಲಿ ಕ್ರಾಂತಿ ಮಾಡಲಾಗುತ್ತಿದೆ. ಇದನ್ನು ಸಹಿಸದ ಬಿಜೆಪಿ ಸರ್ಕಾರ ಆಮ್ ಆದ್ಮಿ ಪಾರ್ಟಿ ನಾಯಕರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಜಗದೀಶಿ ಸದಂ ಕಿಡಿಕಾರಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದ, ದೇಶಾದ್ಯಂತ ಲೋಕಪಾಲ ಬಿಲ್ ಜಾರಿಗೆ ತರಲು ಹೋರಾಡುತ್ತಿರುವ ಅರವಿಂದ್ ಕೇಜ್ರಿವಾಲ್ ಅವರನ್ನೇ ಭ್ರಷ್ಟಾಚಾರಿ ಎಂದು ಬಿಂಬಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಅವರ ಪತ್ನಿ ಸುನೀತಾ ಅವರು ಕೂಡ ಆದಾಯ ತೆರಿಗೆ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಅವರನ್ನು ಭ್ರಷ್ಟಾಚಾರಿಗಳು ಎಂದು ಬಿಂಬಿಸಲು ಹೊರಟ ಬಿಜೆಪಿಗೆ ಜನತಾ ನ್ಯಾಯಾಲಯದಲ್ಲಿ ಪಾಠ ಕಲಿಸಬೇಕಿದೆ. ಅರವಿಂದ ಕೇಜ್ರಿವಾಲ್ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಿ ಬಂಧಿಸಲಾಗಿದೆ. ಅರಬಿಂದೋ ಫಾರ್ಮಾ ಸಂಸ್ಥೆಯ ಮಾಲಿಕ ಶರತ್‌ ಚಂದ್ರ ತಾವೇ ₹56 ಕೋಟಿಗಳನ್ನು ಚುನಾವಣಾ ಬಾಂಡ್ ಮೂಲಕ ಬಿಜೆಪಿ ಪಕ್ಷಕ್ಕೆ ನೀಡಿರುವುದು ಜಗಜ್ಜಾಹೀರಾಗಿದೆ. ಬಿಜೆಪಿ ವಸೂಲಿ ಪಕ್ಷ ಎಂದು ಇದರಿಂದಲೇ ಗೊತ್ತಾಗುತ್ತದೆ ಎಂದರು.

ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಹನುಮಾಪುರ ಮಾತನಾಡಿ, ಸಂಜಯ್ ಸಿಂಗ್ ಬಿಡುಗಡೆಯಾಗಿರುವುದು ಸತ್ಯಕ್ಕೆ ಬೆಲೆ ಇದೆ ಎನ್ನುವ ಸಂದೇಶವನ್ನು ನೀಡಿದೆ. ಭಾನುವಾರ ದೇಶಾದ್ಯಂತ ಬೃಹತ್ ಪ್ರತಿಭಟನೆಯಾದ ಬಳಿಕ ಸಂಜಯ್ ಸಿಂಗ್ ಬಿಡುಗಡೆಯಾಗಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಮಾಧ್ಯಮ ಗೋಷ್ಠಿಯಲ್ಲಿ ಎಎಪಿ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಹಿರೇಮಠ, ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page