Thursday, September 11, 2025

ಸತ್ಯ | ನ್ಯಾಯ |ಧರ್ಮ

ಬರ ಹಿನ್ನೆಲೆ: ಕೆರೆ ಕಟ್ಟೆಗಳಿಗೆ ಕೆಆರ್‌ಎಸ್‌ ನೀರು ಹರಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಮಂಡ್ಯ :- ಭೀಕರ ಬರಗಾಲದ ಸಂಕಷ್ಟ ಪರಿಸ್ಥಿತಿಯಲ್ಲಿ ಜನ – ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆ ಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸುವಂತೆ ಒತ್ತಾಯಿಸಿ ತಾಲೂಕಿನ ಮರಿಲಿಂಗನ ದೊಡ್ಡಿಯಲ್ಲಿ ಗ್ರಾಮದ ಜನತೆ ಉಪವಾಸ ಸತ್ಯಾಗ್ರಹ ನಡೆಸಿದರು.
ಗ್ರಾಮದ ಮುಖ್ಯ ರಸ್ತೆಯ ಬಸ್ ನಿಲ್ದಾಣದ ಬಳಿ ಮರಿಲಿಂಗನ ದೊಡ್ಡಿ ಮತ್ತು ಸುತ್ತಮುತ್ತಲ ಗ್ರಾಮದ ಜನತೆ ಉಪವಾಸ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಕೊರತೆಯಿಂದ ನೀರಿನ ಅಭಾವ ಎದುರಾಗಿದ್ದರೆ, ಜನ – ಜಾನುವಾರಗಳಿಗೆ ಕುಡಿಯಲು ನೀರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ನೀರಿನ ಕೊರತೆ ಇರುವುದರಿಂದ ರೈತರು ಹೊಸ ಬೆಳೆ ಹಾಕಬಾರದು ಎಂದು ಆಳುವ ಸರ್ಕಾರ ನಿರ್ಬಂಧ ಹಾಕಿದ್ದರಿಂದ ಯಾವುದೇ ರೈತರು ಹೊಸ ಬೆಳೆ ಹಾಕಿರುವುದಿಲ್ಲ, ಇರುವ ನೀರನ್ನೆಲ್ಲಾ ತಮಿಳುನಾಡಿಗೆ ಹರಿಸಿದ ಪರಿಣಾಮ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ, ಬೆಳೆದು ನಿಂತಿರುವ ಬೆಳೆ ರಕ್ಷಣೆ ಹಾಗೂ ಕುಡಿಯುವ ನೀರಿಗಾಗಿ 90 ಅಡಿ ಇದ್ದಾಗ ನಾಲೆಗಳಿಗೆ ಒಂದು ಕಂತು ನೀರು ಬಿಡಬೇಕಾಗಿತ್ತು, ಆದರೆ ರಾಜ್ಯ ಸರ್ಕಾರ ನಾಲೆಗಳಿಗೆ ನೀರು ಹರಿಸದೆ ತೊಂದರೆ ಮಾಡಿದೆ ಎಂದು ಹೇಳಿದರು.
ಇದೀಗ ಜಲಾಶಯದಲ್ಲಿ 84 ಅಡಿ ನೀರಿದ್ದು, ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಗುತ್ತಿಗೆದಾರರ ಓಲೈಕೆಗಾಗಿ ನಾಲೆಗಳಿಗೆ ನೀರು ಹರಿಸುತ್ತಿಲ್ಲ,ಬೆಳೆ ರಕ್ಷಣೆಗಾಗಿ ನಾವು ನೀರು ಕೇಳುತ್ತಿಲ್ಲ, ಜನ – ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿಯಲ್ಲಿ ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲಿ ಕೆ ಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಜನತೆ ಸಮಸ್ಯೆಯನ್ನು ಅರಿತಿದ್ದರು ಸಹ ನಮಗ್ಯಾಕೆ ಎಂದು ಮೌನ ಬಯಸಿ ಕುಳಿತುಕೊಳ್ಳಬಾರದು, ಇದರಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕ ಬೇಕಾಗುತ್ತದೆ, ರಾಜ್ಯ ಸರ್ಕಾರವನ್ನು ಎಚ್ಚರಿಸಿ ನೀರು ಪಡೆಯಬೇಕಾಗಿದೆ, ನೀರಿನ ಅಭಾವ ಕಣ್ಣಾರೆ ಕಂಡರು ಸಚಿವ – ಶಾಸಕರು ಕಂಡು ಕಾಣದಂತೆ ಇದ್ದಾರೆ, ನಾಲೆಗಳಿಗೆ ನೂರು ಹರಿಸಿ ಎಂದು ಸಚಿವ – ಶಾಸಕರನ್ನು ಪ್ರಶ್ನಿಸ ಬೇಕು, ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರದೆ ಕೆರೆ ಕಟ್ಟೆಗಳ ತುಂಬಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಯೋಗೇಶ್,ರಾಜೇಶ್, ಅನಿಲ್,ಮೋಹನ್,ಬೋರಪ್ಪ, ಶಿವಲಿಂಗೇಗೌಡ,ರಾಮಲಿಂಗೇಗೌಡ,ಅನು ಕುಮಾರ್, ಕುಳ್ಳಪ್ಪ ನೇತೃತ್ವ ವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page