Monday, June 17, 2024

ಸತ್ಯ | ನ್ಯಾಯ |ಧರ್ಮ

ಬೆನ್ನಿಗೆ ಹಗರಣ, ಬಾಯ್ತುಂಬ ಬೈಗುಳ | ಅಬ್ಬರಿಸುವ ಬಿಜೆಪಿ ನಾಯಕರ ಮುಂದೆ ಬಾಯ್ದೆರೆದು ಕೂತಿದೆ ಹೆಬ್ಬುಲಿ!

ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷ ಹುದ್ದೆಗಳಿಗೆ ಬಿಜೆಪಿ ಹೈಕಮಾಂಡ್‌ನ ಹುಡುಕಾಟದ ಮಾನದಂಡಗಳು ಸ್ಪಷ್ಟವಿವೆ. ಹೊಣೆಗಾರಿಕೆ, ನೈತಿಕತೆ, ರಚನಾತ್ಮಕತೆ ಇವುಗಳನ್ನೆಲ್ಲ ಸಾರಾಸಗಟು ಗಾಳಿಗೆ ತೂರಿ, ಯಾವ ತಳ ಮಟ್ಟಕ್ಕಾದರೂ ಇಳಿದು ಕಾಂಗ್ರೆಸ್ ಸರ್ಕಾರಕ್ಕೆ ಅಡ್ಡಗಾಲು ಹಾಕಬೇಕು. ಇದಿಷ್ಟೇ ಹೊಸ ಹುದ್ದೆಗಳಿಗೆ ಬಿಜೆಪಿ ಹೈಕಮಾಂಡ್ ನಿಗದಿಗೊಳಿಸಿರುವ ಮಾನದಂಡ – ಮಾಚಯ್ಯ ಎಂ ಹಿಪ್ಪರಗಿ.

ಬಿಜೆಪಿ ಸೋತಿದೆ. ಕಾಂಗ್ರೆಸ್ ಸರ್ಕಾರ ರಚನೆ ಮಾಡಿದೆ. ಇಲ್ಲಿಗೆ ಚುನಾವಣೆಯ ಕಾವು ಇಳಿಯಬೇಕಿತ್ತು. ಗೆದ್ದವರು ತಮ್ಮ ಗೆಲುವನ್ನು ಸಮರ್ಥಿಸಿಕೊಳ್ಳುವಂತಹ ಕೆಲಸ ಮಾಡಲು ಮುಂದಾಗುವುದು; ಸೋತವರು, ತಮ್ಮ ಸೋಲಿನ ವಿಮರ್ಶೆ ಮಾಡಿಕೊಳ್ಳಲು ಮುಂದಾಗುವುದು ವಾಡಿಕೆ. ಇಂತಹ ನಡೆಗಳು ಆಯಾ ಪಕ್ಷದ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಒಳ್ಳೆಯದು, ಜನರ ಹಿತದೃಷ್ಟಿಯಿಂದಲೂ ಒಳ್ಳೆಯದು. ಆದರೆ ಕರ್ನಾಟಕದಲ್ಲಿ ಚುನಾವಣೋತ್ತರದ ಈ ಸಹಜ ಬೆಳವಣಿಗೆ ಕಾಣಿಸುತ್ತಿಲ್ಲ. ಗೆದ್ದ ಕಾಂಗ್ರೆಸ್ ಪಕ್ಷವೇನೋ ತಾನು ಜನರಿಗೆ ಕೊಟ್ಟ ಗ್ಯಾರಂಟಿ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಶೀಲವಾಗಿದೆ. ಆದರೆ, ಸೋತ ಬಿಜೆಪಿ ತನ್ನ ಆತ್ಮವಿಮರ್ಶೆ ಮಾಡಿಕೊಳ್ಳುವ ಬದಲು, ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಕ್ಕೆ ಅಡ್ಡಗಾಲು ಹಾಕುವ ಚುನಾವಣಾಪೂರ್ವ ನಡವಳಿಕೆಗಳನ್ನೇ ಪ್ರದರ್ಶಿಸುತ್ತಿದೆ. ಬಿಜೆಪಿಯ ಆಕ್ರಮಣಶೀಲತೆಯನ್ನು ನೋಡುತ್ತಿದ್ದರೆ, ಕರ್ನಾಟಕದಲ್ಲಿ ಈಗಷ್ಟೆ ಚುನಾವಣೆ ಮುಗಿದಿದೆಯೋ ಅಥವಾ ಸದ್ಯದಲ್ಲಿ ನಡೆಯಲಿದೆಯೋ ಎಂಬ ಅನುಮಾನ ಮೂಡುತ್ತೆ. ಒಂದುಕಡೆ, ರಾಜ್ಯ ಬಿಜೆಪಿ ನಾಯಕರ ಸಡಿಲ ಹೇಳಿಕೆಗಳು; ಮತ್ತೊಂದು ಕಡೆ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯಿಂದ ಅಸಹಕಾರ ಧೋರಣೆ. ಇವು, ಯಾವ ಕಾರಣಕ್ಕೂ ಬಿಜೆಪಿ ಈಗ ರಾಜ್ಯದಲ್ಲಿ ತಲುಪಿರುವ ದುಸ್ಥಿತಿಯನ್ನು ಸುಧಾರಿಸಲಾರವು, ಬದಲಿಗೆ ಅದನ್ನು ಇನ್ನಷ್ಟು ಆಳಕ್ಕೆ ಮುಳುಗಿಸಲಿವೆ. ಇದರ ಪರಿವೆಯೇ ಇಲ್ಲದೆ ವರ್ತಿಸುತ್ತಿರುವ ಬಿಜೆಪಿಯ ಅಸಲೀ ಸಮಸ್ಯೆ ಎಂದರೆ, ಪ್ರಬುದ್ಧ ನಾಯಕತ್ವದ ಕೊರತೆ!

‘ಒನ್ ನೇಷನ್, ಒನ್ ಲೀಡರ್ʼ ಇದು ಬಿಜೆಪಿಯ ಸದ್ಯದ ಸಿದ್ಧಾಂತ; ಜೊತೆಗೆ, ಆ ಪಕ್ಷದ ದುರಂತವೂ ಹೌದು. ಪ್ರಾದೇಶಿಕ ನಾಯಕತ್ವವನ್ನು ನಿಸ್ಸಾರಗೊಳಿಸಿ, ಜೈವಿಕ ಭಾಗೀದಾರಿಕೆಯೇ ಇಲ್ಲದ ಹೊರಗಿನ ನಿರ್ಧಾರಗಳನ್ನು ಹೇರಲು ಮುಂದಾದಾಗ ಅದು ಯಾವುದೇ ಪಕ್ಷವಿರಲಿ, ಸಂಘಟನೆಯಿರಲಿ, ಅಥವಾ ಚಳವಳಿಯಿರಲಿ ತನ್ನ ಕಾವನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಕರ್ನಾಟಕದ ವಿಚಾರದಲ್ಲೇ, ಕಾಂಗ್ರೆಸ್ ಈ ಹಿಂದೆ ಮಾಡಿದ ತಪ್ಪಿನಿಂದ ಬಿಜೆಪಿ ಕೂಡಾ ಪಾಠ ಕಲಿತಿಲ್ಲ ಎನ್ನುವುದು ಇದರಿಂದ ಸಾಬೀತಾಗುತ್ತೆ. ಹಾಗಾಗಿಯೇ ಇಲ್ಲಿ ನಳಿನ್ ಕುಮಾರ್ ಕಟೀಲ್ ತರಹದ ಮಾಸ್ ಲೀಡರ್‌ಶಿಪ್‌ನ ಲವಲೇಶವೂ ಇಲ್ಲದ ವ್ಯಕ್ತಿ ರಾಜ್ಯಾಧ್ಯಕ್ಷರಾಗುತ್ತಾರೆ, ಯಡಿಯೂರಪ್ಪನಂತಹ ಲೀಡರ್ ಮೂಲೆಗುಂಪಾಗುತ್ತಾರೆ. ಈಗಲೂ ಸಹಾ, ರಾಜ್ಯ ಸರ್ಕಾರದ ಮೇಲೆ ತನ್ನ ಅಧಿಕೃತ ದಾಳಿಯನ್ನು ಶುರು ಮಾಡಿರುವ ಬಿಜೆಪಿಗೆ ತನಗಾಗಿ ಒಬ್ಬ ವಿರೋಧಪಕ್ಷದ ನಾಯಕನನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೊಸ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಒಂದು ಹೆಸರನ್ನು ಅಖೈರುಗೊಳಿಸಲು ಪರದಾಡುತ್ತಿದೆ. 

ಈಗ ಸರ್ಕಾರದ ಮೇಲೆ ಮುಗಿಬಿದ್ದಂತೆ, ಹೆಜ್ಜೆಹೆಜ್ಜೆಗೂ ಪ್ರಶ್ನಿಸುತ್ತಾ, ಟೀಕಿಸುತ್ತಾ, ಸವಾಲು ಎಸೆಯುತ್ತಾ, ಲೇವಡಿ ಮಾಡುತ್ತಾ ವಿಜೃಂಭಿಸುತ್ತಿರುವ ಬಿಜೆಪಿಯ ರಾಜ್ಯ ನಾಯಕರು ಸಹಾ ಈ ಎರಡು ಹುದ್ದೆಗಳಲ್ಲಿ ತಮಗ್ಯಾವುದಾದರು ಒಂದು ಹುದ್ದೆ ಸಿಗಬಹುದೇನೊ ಎಂಬ ಪ್ರಯತ್ನದ ಭಾಗವಾಗಿಯೇ ತಮ್ಮ ದಾಳವನ್ನು ಎಸೆದು ಹೈಕಮಾಂಡ್‌ನ ಗಮನ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಅಸ್ತಿತ್ವಕ್ಕೆ ಬಂದಿರುವ ಸರ್ಕಾರಕ್ಕೆ ಸುಗಮವಾಗಿ ಆಡಳಿತ ನಡೆಸಲು ಅವಕಾಶ ಕೊಡಬಾರದು, ಹೆಜ್ಜೆಹೆಜ್ಜೆಗೂ ತೊಡರುಗಾಲು ಕೊಟ್ಟು ಇಕ್ಕಟ್ಟಿಗೆ ಸಿಲುಕಿಸಬೇಕೆನ್ನುವುದು, ಸೋಲಿನ ತೀವ್ರ ಮುಖಭಂಗಕ್ಕೆ ತುತ್ತಾಗಿರುವ ಬಿಜೆಪಿ ಹೈಕಮಾಂಡ್‌ನ ಅಭಿಲಾಷೆ. ಶುದ್ಧ ರಾಜಕಾರಣದ ಯಾವ ಅಧ್ಯಾಯವೂ, ಯಾವ ಅಡಿಟಿಪ್ಪಣಿಯು ಕೂಡಾ ಇಂತದ್ದೊಂದು ಜಿದ್ದಿನ ಪಾಠವನ್ನು ಹೇಳಿಕೊಡುವುದಿಲ್ಲ. ಚುನಾವಣೆಯ ಸೋಲು-ಗೆಲುವುಗಳನ್ನು ಪಕ್ಕಕ್ಕಿಟ್ಟು ನಾಡಿನ, ದೇಶದ ಮತ್ತು ನಾಗರೀಕರ ಕಲ್ಯಾಣಕ್ಕಾಗಿ ರಚನಾತ್ಮಕವಾಗಿ ಕೆಲಸ ಮಾಡಬೇಕೆನ್ನುವುದು ರಾಜಕಾರಣ ಬೋಧಿಸುವ ಮೂಲ ಪಾಠ. ಈ ರಚನಾತ್ಮಕ ಕೆಲಸದಲ್ಲಿ ಗೆದ್ದು ಗದ್ದುಗೆಯೇರಿದ ಪಕ್ಷಕ್ಕಿರುವಷ್ಟೇ ಪ್ರಧಾನ ಕೆಲಸಗಳು, ಸೋತು ವಿರೋಧ ಪಕ್ಷದಲ್ಲಿ ಕೂತವರಿಗೂ ಇರುತ್ತವೆ. ಅದಕ್ಕೆಂದೇ ನಮ್ಮ ಸಂವಿಧಾನ, ಮುಖ್ಯಮಂತ್ರಿಗೆ (ಸಂಸತ್ತಿನಲ್ಲಿ ಪ್ರಧಾನಿಗೆ) ಪ್ರತಿಯಾದ ವಿರೋಧಪಕ್ಷ ನಾಯಕನ ಹುದ್ದೆಯನ್ನೂ ಸೋತ ಆ ಪಕ್ಷಕ್ಕೆ ಕಲ್ಪಿಸಿಕೊಟ್ಟಿದೆ. ಆದರೆ ಬಿಜೆಪಿ, ವಿರೋಧಪಕ್ಷಕ್ಕಿರುವ ಈ ಹೊಣೆಗಾರಿಕೆಯನ್ನು ಮರೆತು, ತೀರಾ ಸೇಡಿನ ರಾಜಕಾರಣಕ್ಕೆ ಕೈಹಾಕಿರುವುದು ಈಗಾಗಲೇ ಹಲವು ನಿದರ್ಶನಗಳಿಂದ ಸ್ಪಷ್ಟವಾಗಿ ಸಾಬೀತಾಗಿದೆ. ಅನ್ನಭಾಗ್ಯದ ಅಕ್ಕಿ ನಿರಾಕರಣೆಯೂ ಅದರಲ್ಲಿ ಒಂದು.

ಯಾವಾಗ ಬಿಜೆಪಿ ಹೈಕಮಾಂಡ್, ತನಗಾದ ಸೋಲಿನ ಮುಖಭಂಗವನ್ನೇ ಮುಖ್ಯವಾಗಿಸಿಕೊಂಡು ಜಿದ್ದಿಗೆ ಬಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಅನಗತ್ಯ ಅಡ್ಡಗಾಲು ಹಾಕಬೇಕೆಂದು ನಿರ್ಧರಿಸಿತೋ, ಆಗ ಅದಕ್ಕೆ ರಾಜ್ಯದಲ್ಲಿ ಆ ಕೆಲಸ ಮಾಡಬಲ್ಲ ನಾಯಕರ ಜರೂರತ್ತು ಕಾಣಿಸಿಕೊಂಡಿತು. ಅರ್ಥಾತ್, ಪ್ರಬುದ್ಧವಲ್ಲದ ಕೆಲಸವನ್ನು ಮಾಡಲು ಅಪ್ರಬುದ್ಧ ನಾಯಕರುಗಳು ಬಿಜೆಪಿ ಹೈಕಮಾಂಡ್‌ಗೆ ಬೇಕಾಗಿದೆ. ಬಹುಶಃ ಬಿಜೆಪಿಗೆ, ಮಾಜಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡಾ ತನ್ನ ನಿರೀಕ್ಷೆಗೆ ತಕ್ಕಂತೆ below the low standardsಗೆ ಇಳಿದು ಕೆಲಸ ಮಾಡಲಾರರು ಅನ್ನಿಸಿರಬೇಕು. ಹಾಗಾಗಿ ಅವರನ್ನು ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನ ರೇಸಿನಿಂದಲೇ ದೂರವಿಡಲು ‘ಹೊಂದಾಣಿಕೆ ರಾಜಕಾರಣ’ದ ಅಸ್ತ್ರವನ್ನು ಪ್ರಯೋಗಿಸಲಾಯ್ತು. ಬಿಜೆಪಿ ಹೈಕಮಾಂಡ್‌ನ ಹುಡುಕಾಟದ ಮಾನದಂಡಗಳು ಸ್ಪಷ್ಟವಿವೆ. ಹೊಣೆಗಾರಿಕೆ, ನೈತಿಕತೆ, ರಚನಾತ್ಮಕತೆ ಇವುಗಳನ್ನೆಲ್ಲ ಸಾರಾಸಗಟು ಗಾಳಿಗೆ ತೂರಿ, ಯಾವ ತಳ ಮಟ್ಟಕ್ಕಾದರೂ ಇಳಿದು ಕಾಂಗ್ರೆಸ್ ಸರ್ಕಾರಕ್ಕೆ ಅಡ್ಡಗಾಲು ಹಾಕಬೇಕು. ಇದಿಷ್ಟೇ ಹೊಸ ಹುದ್ದೆಗಳಿಗೆ ಬಿಜೆಪಿ ಹೈಕಮಾಂಡ್ ನಿಗದಿಗೊಳಿಸಿರುವ ಮಾನದಂಡ. ಆ ಕಾರಣಕ್ಕೇ ನಳಿನ್ ಕುಮಾರ್ ಕಟೀಲ್ ಬಾಯಿಂದ “ನೀವು ಕೇಳಿದ ತಕ್ಷಣ ಕೊಡುವುದಕ್ಕೆ ಕೇಂದ್ರಕ್ಕೆ  ಕರ್ನಾಟಕ ಒಂದೇ ಅಲ್ಲ. ಇನ್ನು ಅನೇಕ ರಾಜ್ಯಗಳಿವೆ” ಎಂದು; ಸಿ.ಟಿ.ರವಿ  ಬಾಯಿಂದ “ಇವ್ರು ಕೇಳ್ ಕೇಳಿದ್ನೆಲ್ಲ ಕೊಡೋಕೆ ಕೇಂದ್ರ ಸರ್ಕಾರ ಏನು ಇವ್ರ್ ಅತ್ತೆ ಮನೆ ಅಂದ್ಕೊಂಡಿದಾರಾ?” ಎಂದು; ಶೋಭಾ ಕರಂದ್ಲಾಜೆ ಬಾಯಿಂದ “ಇವ್ರೆಲ್ಲ ಏನ್ ತಿಳ್ಕೊಂಡಿದಾರೆ? ಘೋಷಣೆ ಮಾಡುವಾಗ ಇವರ ಬುದ್ದಿ ಎಲ್ಲಿ ಹೋಗಿತ್ತು. ಕೇಂದ್ರ ರಾಜಕೀಯ ಮಾಡ್ತಿದೆ ಅಂತ ಹೇಳೊಕೆ ನಾಚಿಕೆ ಆಗೊಲ್ವ” ಎಂದು; ಪ್ರಹ್ಲಾದ್ ಜೋಷಿ ಬಾಯಿಂದ “ಇವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಅಕ್ಕಿ ಘೋಷಣೆ ಮಾಡಿದ್ರ? ಕೇಂದ್ರ ಯಾಕ್ ಕೊಡಬೇಕು? ಘೋಷಣೆ ಮಾಡ್ದೋರು ಕೊಡ್ಲಿ” ಎಂದು; ಆರ್. ಅಶೋಕ್ ಬಾಯಿಂದ “ಯಾರನ್ನ ಗ್ಯಾರಂಟಿ ಕೇಳಿ ಘೋಷಣೆ ಮಾಡಿದ್ರಿ. ಮೋದಿ ಮೇಲೇಕೆ ಗೂಬೆ ಕೂರಿಸುತ್ತೀರಿ?” ಎಂದು; ಸದಾನಂದಗೌಡ ಬಾಯಿಂದ “ಹದಿಮೂರು ಬಾರಿ ಬಜೆಟ್ ಮಂಡಿಸಿದ್ರೆ ಅಕ್ಕಿ ಬರುತ್ತಾ? ರೈತ ಬೆಳೆದ್ರೆ ಅಕ್ಕಿ ಬರೋದು. ಆರ್ಥಿಕ ತಜ್ಞರೆನಿಸಿಕೊಂಡವರಿಗೆ ಈ ಪ್ರಜ್ಞೆ ಬೇಡ್ವ ಎಂದು ಅಣಿಮುತ್ತುಗಳು ಉದುರುತ್ತಿವೆ. ಇವರೆಲ್ಲ ಯಾರೂ, ಆ ಪಕ್ಷದ ಕೆಳಹಂತದ ಕಾರ್ಯಕರ್ತರಲ್ಲ. ಅವರಲ್ಲಿ ಕೆಲವರು ಮುಖ್ಯಮಂತ್ರಿಯಾಗಿದ್ದವರು, ಉಪಮುಖ್ಯಮಂತ್ರಿ ಹುದ್ದೆ ಅನುಭವಿಸಿದವರು, ಮಂತ್ರಿಗಳಾಗಿದ್ದವರು, ಈಗಲೂ ಕೇಂದ್ರ ಮಂತ್ರಿಗಳಾಗಿರುವಂತಹ ದೊಡ್ಡದೊಡ್ಡ ನಾಯಕ-ನಾಯಕಿಯರು.

ಈ ಯಾವ ಮಾತುಗಳಲ್ಲೂ ವಿರೋಧಪಕ್ಷದ ಪ್ರಬುದ್ಧತೆಯಾಗಲಿ, ಹೊಣೆಗಾರಿಕೆಯಾಗಲಿ, ನೈತಿಕತೆಯಾಗಲಿ ಕಾಣುವುದಿಲ್ಲ. ಅದು ಅವರಿಗೂ ಗೊತ್ತು. ಆದರೆ ತಮ್ಮ ಹೈಕಮಾಂಡ್, ಸದ್ಯದ ರಾಜ್ಯ ರಾಜಕಾರಣದಲ್ಲಿ ಏನನ್ನು ನಿರೀಕ್ಷಿಸುತ್ತಿದೆ ಅನ್ನೋದನ್ನು ಅರ್ಥ ಮಾಡಿಕೊಂಡಿರುವ ಅವರು ಹೀಗೆ ತಮ್ಮ ವ್ಯಕ್ತಿತ್ವವನ್ನೂ ಲೆಕ್ಕಿಸದೆ, ಸ್ಥಾನದ ಘನತೆಯನ್ನೂ ಪರಿಗಣಿಸದೆ ಅಸಂಬದ್ಧವಾಗಿ ಮಾತಾಡುತ್ತಿದ್ದಾರೆ. ಅದರಲ್ಲಿ ಕೆಲವರಿಗೆ ಖಾಲಿಯಿರುವ ಹುದ್ದೆಯ ಮೇಲೆ ಕಣ್ಣಿರಬಹುದು, ಇನ್ನು ಕೆಲವರಿಗೆ ಹೈಕಮಾಂಡ್‌ನ ಕೆಂಗಣ್ಣಿಗೆ ಗುರಿಯಾಗಿ ಈಗಿರುವ ತನ್ನ ಹುದ್ದೆ ಕೈತಪ್ಪಿ ಹೋಗದಿರಲಿ ಎಂಬ ಮುನ್ನೆಚ್ಚರಿಕೆ ಇರಬಹುದು. ಇವರಷ್ಟೇ ಅಲ್ಲ, ಬಿಜೆಪಿಯ ಇನ್ನೂ ಹಲವರ ಸಡಿಲ ಹೇಳಿಕೆಗಳಿರುವ ಪ್ರಧಾನ ಪ್ರೇರಣೆ ಇದುವೆ. ಅಷ್ಟೇ ಯಾಕೆ, ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಿದ ನಂತರ ಅವರು ತಟಸ್ಥವಾಗಿರುವುದು, ಬಿಜೆಪಿಯ ಸೋಲಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವುದೂ ನಗ್ನ ಸತ್ಯ. ಸಿದ್ದರಾಮಯ್ಯನವರ ಬಗ್ಗೆ ಯಡಿಯೂರಪ್ಪನವರಾಗಲಿ, ಅವರ ಮಕ್ಕಳಾಗಲಿ ಇಡೀ ಚುನಾವಣೆಯ ಅವಧಿಯುದ್ದಕ್ಕು ಒಂದೇ ಒಂದು ಮಾತಾಡಲಿಲ್ಲ. ಅಂತದ್ದರಲ್ಲಿ ಅವರ ಮಗ ವಿಜಯೇಂದ್ರ ಇತ್ತೀಚೆಗೆ, ಅನ್ನಭಾಗ್ಯದ ಅಕ್ಕಿಯ ಕುರಿತಂತೆ “ರಾಜ್ಯದಲ್ಲೇ ಸಾಕಷ್ಟು ಅಕ್ಕಿ ಇದ್ದರೂ, ಹಗರಣ ಮಾಡಿ ದುಡ್ಡು ಹೊಡೆಯುವ ಸಲುವಾಗಿ ಹೊರ ರಾಜ್ಯದ ಅಕ್ಕಿಗಾಗಿ ಓಡಾಡುತ್ತಿದ್ದಾರೆ” ಎನ್ನುವ ಸಲ್ಲದ ಹೇಳಿಕೆ ಕೊಟ್ಟರು. ಅದರರ್ಥ, ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಯಡಿಯೂರಪ್ಪನವರು ಕೂಡಾ ಹೈಕಮಾಂಡಿನ ಆಸಕ್ತಿಗೆ ತಕ್ಕಂತೆ ತಮ್ಮ ಮಗನಿಂದ ಒಂದು ಕಲ್ಲು ಬೀಸಿಸಿರುವಂತೆ ಕಾಣುತ್ತೆ.

ರಾಜ್ಯ ಬಿಜೆಪಿ ನಾಯಕರ ಇಂತಹ ಹೇಳಿಕೆ ಮತ್ತು ವರ್ತನೆಯಲ್ಲಿ ಸೋಲಿನ ಹತಾಶೆ ಹಾಗೂ ಮುಂಬರುವ ಲೋಕಸಭಾ ಚುನಾವಣೆಯ ತಯಾರಿಯ ಛಾಯೆಯಗಳೂ ಇವೆ. ಆದರೆ ಅವುಗಳಿಗಿಂತಲೂ ಸದ್ಯದ ತುರ್ತೆಂದರೆ, ಹೈಕಮಾಂಡ್ ನಿರೀಕ್ಷೆಗಳನ್ನು ಪ್ಲೀಸ್ ಮಾಡಿ, ರಾಜ್ಯ ಬಿಜೆಪಿ ಪಾಳೆಯದ ದೊಡ್ಡ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವುದು. ವಾಸ್ತವದಲ್ಲಿ ಸೋಲಿನ ಹತಾಶೆ ಅಥವಾ ಲೋಕಸಭಾ ಚುನಾವಣೆಯ ತರಾತುರಿಗಳು ರಾಜ್ಯ ಬಿಜೆಪಿ ನಾಯಕರಿಗಿಂತ ಹೆಚ್ಚಾಗಿ ಕಾಣುತ್ತಿರುವುದು ಮೀಡಿಯಾಗಳಲ್ಲಿ!

ಅಂದಹಾಗೆ, ಹೀಗೆ ತಮ್ಮ ಹೊಣೆಗಾರಿಕೆ ಮರೆತು, ಕೇವಲ ಸೇಡಿನ ರಾಜಕಾರಣದ ಕಾರಣಕ್ಕೆ ಸರ್ಕಾರವನ್ನು ಗೋಳುಹೊಯ್ದುಕೊಳ್ಳುತ್ತಿರುವ ಬಿಜೆಪಿ ನಾಯಕರನ್ನು ತೆಪ್ಪಗಾಗಿಸುವುದು ಕಾಂಗ್ರೆಸ್‌ಗೇನೂ ದೊಡ್ಡ ಸಂಗತಿಯಲ್ಲ. ಯಾಕೆಂದರೆ ಈಗಷ್ಟೇ ಅಧಿಕಾರ ಮುಗಿಸಿ ಕೆಳಗಿಳಿದಿರುವ ಬಿಜೆಪಿ ಸ್ವಚ್ಛ ಆಡಳಿತವನ್ನೇನೂ ನೀಡಿ ಬಂದಿಲ್ಲ. ಭರಪೂರ ಭ್ರಷ್ಟಾಚಾರ, ಕಮೀಷನ್ ಹಾವಳಿಯ ಹಗರಣಗಳನ್ನು ಮೈಮೇಲೆ ಹೇರಿಕೊಂಡೇ ಏದುಸಿರು ಬಿಡುತ್ತಿದೆ. ಅಂತಹ ಒಂದೆರಡು ಹಗರಣಗಳನ್ನು ರಾಜ್ಯ ಸರ್ಕಾರ ಗಂಭೀರ ತನಿಖೆಗೊಪ್ಪಿಸಿದರೆ, ಇವರೆಲ್ಲ ಅಖಾಡದಿಂದ ಸ್ವಯಂನಿವೃತ್ತರಾಗುವುದರಲ್ಲಿ ಸಂಶಯವಿಲ್ಲ. ತಮ್ಮನ್ನು ನುಂಗಲಿರುವ ತನಿಖೆಗಳ ಬಗ್ಗೆ ಕಿಂಚಿತ್ತೂ ಅಂದಾಜಿಲ್ಲದೆ ಕೇವಲ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಸ್ಥಾನಕ್ಕೆ ಇವರೆಲ್ಲ ಈ ಪರಿ ಮೈ ಪರಚಿಕೊಳ್ಳುತ್ತಿರುವುದು ನೋಡಿದರೆ, ನಿಜಕ್ಕೂ ತಮಾಷೆಯೆನಿಸುತ್ತಿದೆ. ಸರ್ಕಾರ ಆದಷ್ಟು ಬೇಗ ಆ ಕೆಲಸ ಮಾಡಿದರೆ, ತನ್ನ ಕರ್ತವ್ಯಗಳತ್ತ ಗಮನಹರಿಸಲು ತಾನೇ ಅವಕಾಶ ಮಾಡಿಕೊಂಡಂತಾಗುತ್ತದೆ.

ಮಾಚಯ್ಯ ಎಂ ಹಿಪ್ಪರಗಿ

ಬರಹಗಾರರು

ಇದನ್ನೂ ಓದಿ-‘ಹಲ್ಕಟ್ ಗಿರಿ ಮಾಡೋರು’, ‘ಸಗಣಿ ತಿನ್ನೋರು’ ; ಪಕ್ಷದ ವೇದಿಕೆಯಲ್ಲೇ ನಿರಾಣಿ, ಯತ್ನಾಳ್ ವಾಗ್ಯುದ್ಧ

Related Articles

ಇತ್ತೀಚಿನ ಸುದ್ದಿಗಳು