Sunday, June 16, 2024

ಸತ್ಯ | ನ್ಯಾಯ |ಧರ್ಮ

ಜಲವಿದ್ಯುತ್ ಮಾರ್ಗಗಳು ಮತ್ತು ಪರಿಸರ ನಾಶ

ಅಭಿವೃದ್ಧಿಯ ಸಂಕೇತಗಳಾಗಿರುವ  ನೂರಾರು ವಿದ್ಯುತ್ ಮಾರ್ಗಗಳು ದೇಶದ ತುಂಬ ಇವೆ. ಇವುಗಳಿಂದಾಗಿ ಆಗಿರುವ ಪರಿಸರ ನಾಶ ಮತ್ತು ಪ್ರಾಣಿ ಪಕ್ಷಿಗಳ ಬದುಕಿಗೆ ಆಗಿರುವ ಅನಾಹುತ ಎಷ್ಟಿರಬಹುದು? ಹಾಗಾದರೆ ನಮಗೆ ವಿದ್ಯುತ್ ಬೇಡವೇ? ಅಭಿವೃದ್ಧಿ ಬೇಡವೇ? ಕಾಡುಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ಪ್ರಸಾದ್‌ ರಕ್ಷಿದಿ.

ನಮ್ಮ ಅಭಿವೃದ್ದಿ ಯೋಜನೆಗಳು ಯಾವ ರೀತಿಯಲ್ಲಿ ರೂಪಿಸಲ್ಪಡುತ್ತವೆ ಎನ್ನುವುದಕ್ಕೆ ನಮ್ಮ ಕರ್ನಾಟಕದ ಎರಡು ಯೋಜನೆಗಳನ್ನು ನೋಡೋಣ. ಅವುಗಳೆಂದರೆ ಶಿವಮೊಗ್ಗ ಜಿಲ್ಲೆಯ ವಾರಾಹಿ ಜಲವಿದ್ಯುತ್ ಯೋಜನೆ ಮತ್ತು ಕರಾವಳಿಯ ಉಡುಪಿ ಜಿಲ್ಲೆಯ ನಂದಿಕೂರು ಉಷ್ಣವಿದ್ಯುತ್ ಸ್ಥಾವರ.

ಇವೆರಡೂ ಯೋಜನೆಗಳು ಸುಮಾರಾಗಿ ಒಂದೇ ಕಾಲದಲ್ಲಿ ಪ್ರಾರಂಭವಾದವು. ವಾರಾಹಿ ಜಲವಿದ್ಯುತ್ ಯೋಜನೆ ಅತ್ಯಂತ “ಪರಿಸರ ಸ್ನೇಹಿ” ಯೋಜನೆಯೆಂದು ಹೆಸರು ಗಳಿಸಿತು. ಇದಕ್ಕೆ ಕಾರಣ ಯೋಜನಾ ಪ್ರದೇಶದಲ್ಲಿ ಹೆಚ್ಚು ಅರಣ್ಯ ನಾಶ ಮಾಡದೆ ಈ ಯೋಜನೆಯನ್ನು ನೆಲದಡಿಯಲ್ಲಿ ಸುರಂಗ ಕೊರೆದು ಮಾಡಿರುವುದು. ಇದು ನಮ್ಮ ಶಿರಾಡಿ ಘಟ್ಟ ಪ್ರದೇಶದ ಮಿನಿ ಹೈಡಲ್ ಯೋಜನೆಗಳಂತೆ  ಭಾಸವಾಗುತ್ತದೆ. ಆದರೆ ಇಲ್ಲೂ ಕೂಡಾ ಅರಣ್ಯ ನಾಶ ಆಗಿರುವುದು ಟ್ರಾನ್ಸ್ ಮಿಷನ್ ಲೈನುಗಳಲ್ಲಿ. ವಾರಾಹಿ ಪ್ರಾರಂಭವಾಗಿ ಕೆಲವು ವರ್ಷಗಳ ಕಾಲ  ಈ ಸಾಗಾಣಿಕಾ ಲೈನುಗಳ ಕೆಲಸವೇ ಆಗದೆ ಅದು ಪೂರ್ಣ ಪ್ರಮಾಣದಲ್ಲಿ ಬಳಕೆ ಆಗಲಿಲ್ಲ.

ವಾರಾಹಿ

ಆದರೆ ಈಗ ಸಾಗಾಣಿಕೆಗೆ ಮಾರ್ಗ ಇದೆ. ಆದರೆ ವಾರಾಹಿಯ ವಿದ್ಯುತ್ತನ್ನು ಸಾಗಾಣಿಕೆ ಮಾಡಿರುವುದು ಎಲ್ಲಿಗೆ?  ಶಿವಮೊಗ್ಗ ಜಿಲ್ಲೆಯ ಹೊಸನಗರ ಬಳಿಯ ಹುಲಿಕಲ್ಲು ಘಾಟಿಯಲ್ಲಿ ಇರುವ  ವಾರಾಹಿ ಯೋಜನೆಯ ಟ್ರಾನ್ಸ್ ಮಿಷನ್ ಲೈನುಗಳು ಅಲ್ಲೇ ಘಟ್ಟ ಇಳಿದು ಉಡುಪಿ ಜಿಲ್ಲೆಯ ಹೆಬ್ರಿ, ಕಾರ್ಕಳ, ಉಜಿರೆಗಳ ಪಕ್ಕದಲ್ಲಿ ಹಾದು ಚಾರ್ಮಾಡಿ ಘಟ್ಟದ ಮೂಲಕ  ಚಿಕ್ಕಮಗಳೂರು ಜಿಲ್ಲೆಯ ಮೂಡಿಗರೆ ತಾಲ್ಲೂಕನ್ನು ಪ್ರವೇಶಿಸಿ ಅಲ್ಲಿಂದ ಹಾಸನ ಜಿಲ್ಲೆ ಬೇಲೂರು ಸಕಲೇಶಪುರ ತಾಲ್ಲೂಕನ್ನು ದಾಟಿ ಹಾಸನದ ರಿಸೀವಿಂಗ್ ಸ್ಟೇಷನ್ ಗೆ ಬರುತ್ತದೆ. ಅಂದರೆ ಎರಡು ಘಟ್ಟ ಪ್ರದೇಶಗಳನ್ನು ಹಾದು ಬರುವುದಲ್ಲದೆ ಉಳಿದ ಪ್ರದೇಶದಲ್ಲಿ ಉದ್ದಕ್ಕೂ ದಟ್ಟ ಮಲೆನಾಡಿನ ಕೃಷಿವಲಯದಲ್ಲೇ ಬರುತ್ತದೆ. ಇದು  ಸುಮಾರು ಇನ್ನೂರೈವತ್ತು ಕಿಲೋ ಮೀಟರ್ ಉದ್ದಕ್ಕೂ  ಸಾಗಿ ಹಾಸನವನ್ನು ತಲುಪುತ್ತದೆ.

ಅಲ್ಲಿ ಕಡಿಯಲಾದ ಮರಗಳ ಸಂಖ್ಯೆ ಲಕ್ಷಾಂತರ. ಅದೂ ಹೈ ಟೆನ್ಷನ್ ಟ್ರಾನ್ಸ್ ಮಿಷನ್ ಲೈನ್ ಹಾಕಿದ ಸ್ಥಳದಲ್ಲಿ ಮತ್ತೆ ಮರಗಳನ್ನು ಬೆಳೆಯುವಂತೆಯೇ ಇಲ್ಲ. ಆ ನೆಲ ಸರ್ಕಾರದ ವಶದಲ್ಲಿ ಇರುತ್ತದೆ.  ಅಲ್ಲಿ  ಹೆಚ್ಚು ಎತ್ತರಕ್ಕೆ ಬೆಳೆಯದ  ಅಲ್ಪಾವಧಿ ಬೆಳೆಗಳನ್ನು ಅದೂ ಕೂಡಾ ಅನಧಿಕೃತವಾಗಿ ಮಾಡುತ್ತಾರೆ. ಆದರೆ ಹೈಟೆನ್ಷನ್ ವಿದ್ಯುತ್ ಸಾಗುವಲ್ಲಿ ಅದರ  ದುಷ್ಪರಿಣಾಮ ಇರುತ್ತದೆ. ಅಲ್ಲದೆ ತಂತಿಗಳು ನಿಗದಿತ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಎತ್ತರದಲ್ಲಿ ಇದ್ದರೆ ಅದರ ಕೆಳಗೆ, ಮಳೆಗಾಲ ಪ್ರಬಲವಾದ ವಿದ್ಯುತ್ ಶಾಕ್ ಬರುತ್ತದೆ. ಅಲ್ಲಿ ಮನುಷ್ಯರಿಗೂ ಪ್ರಾಣಿಗಳಿಗೂ ಅಪಾಯ ತಪ್ಪಿದ್ದಲ್ಲ. ಇಂತಹ ಹಲವಾರು ಪ್ರದೇಶಗಳಿವೆ.

ಹೆಬ್ರಿ ಕಡೆಯಿಂದ ಹಾಗೇ ಕಾರ್ಕಳವನ್ನು ದಾಟಿ ಚಾರ್ಮಾಡಿ ಘಾಟಿಯ ಮೂಲಕ ಬೇಲೂರಿನತ್ತ ಪ್ರಯಾಣ ಮಾಡುವವರೆಲ್ಲರೂ ಎತ್ತರದ ಟವರ್ ಗಳ ಮೂಲಕ ಸಾಗಿರುವ ಈ ವಿದ್ಯುತ್  ತಂತಿಗಳನ್ನು ಕಾಣಬಹುದು.

ಅಭಿವೃದ್ಧಿಯ ಸಂಕೇತಗಳಾಗಿರುವ ಇಂತಹ ನೂರಾರು ವಿದ್ಯುತ್ ಮಾರ್ಗಗಳು ದೇಶದ ತುಂಬ ಇವೆ. ಇವುಗಳಿಂದಾಗಿ ಆಗಿರುವ ಪರಿಸರ ನಾಶ ಮತ್ತು ಪ್ರಾಣಿ ಪಕ್ಷಿಗಳ ಬದುಕಿಗೆ ಆಗಿರುವ ಅನಾಹುತ ಎಷ್ಟಿರಬಹುದು? ಪ್ರಕೃತಿಯ ಸೌಂದರ್ಯ ಸವಿಯುತ್ತ ಸಾಗುವಾಗ ಇವೆಲ್ಲ ವಿಚಾರಗಳು ಮರೆಯಾಗಿಬಿಡುತ್ತವೆ.

UPCL

ಹೌದು. ಹಾಗಾದರೆ ನಮಗೆ ವಿದ್ಯುತ್ ಬೇಡವೇ? ಅಭಿವೃದ್ಧಿ ಬೇಡವೇ ? ಆಧುನಿಕ ಬದುಕಿನಲ್ಲಿ ಇವೆಲ್ಲ ಅನಿವಾರ್ಯ. ನಿಮ್ಮಂತವರು ಬರಿಯ  ನೆಗೆಟಿವ್ ವಿಚಾರಗಳನ್ನು ಹೇಳುತ್ತೀರಿ. ನಿಮ್ಮಲ್ಲಿ ಬದಲಿ ಯೋಜನೆಗಳಿಲ್ಲ, ಬರಿಯ ವಿರೋಧ ಮಾತ್ರ ಇತ್ಯಾದಿ ಮಾತುಗಳು ಮತ್ತು  ಪ್ರಶ್ನೆಗಳನ್ನು  ಪರಿಸರದ ಬಗ್ಗೆ ಮಾತನಾಡುವ ಎಲ್ಲರೂ ಎದುರಿಸ ಬೇಕಾಗುತ್ತದೆ.

ಹೌದು. ಆ ಪ್ರಶ್ನೆಗಳಲ್ಲೂ  ಸತ್ಯಾಂಶವಿದೆ. ಯಾಕೆಂದರೆ ನಾವು  ಈಗ ಸಂಪೂರ್ಣವಾಗಿ ಹಿಂದಕ್ಕೆ ಹೋಗಲಾಗದು. ಈ ಆಧುನಿಕ ತಾಂತ್ರಿಕ ಬದುಕು ಅಷ್ಟರ ಮಟ್ಟಿಗೆ ನಮ್ಮನ್ನು ಆವರಿಸಿಕೊಂಡಿದೆ. ( ನಾನು ಈ ಲೇಖನವನ್ನು ಬರೆಯುತ್ತಿರುವುದೂ ಕಂಪ್ಯೂಟರ್ ನಲ್ಲಿ ಅಲ್ಲವೇ?) ನಾವು ಖಂಡಿತ ಸಮತೋಲನದ ಬದಲಿ ಮಾರ್ಗಗಳನ್ನು ಹುಡುಕಬೇಕು.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ,

Related Articles

ಇತ್ತೀಚಿನ ಸುದ್ದಿಗಳು