Tuesday, February 24, 2026

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ ಕರೆದಿದ್ದು ನಿಜ, ಆದ್ರೆ ಸೇರಲ್ಲ, ಬಿಜೆಪಿಯಲ್ಲೇ ಆರಾಮಾಗಿದ್ದೇನೆ: ಶಾಸಕ ದಿನಕರ ಶೆಟ್ಟಿ ಸ್ಪಷ್ಟನೆ

ಕುಮಟಾ: ಬಿಜೆಪಿ ಶಾಸಕ ದಿನಕರ ಶೆಟ್ಟಿ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದು, ತಾವು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕುಮಟಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜವಾದರೂ, ಬಿಜೆಪಿಯಲ್ಲೇ ಮುಂದುವರಿಯುವುದಾಗಿ ತಿಳಿಸಿದ್ದಾರೆ.

ಈ ಹಿಂದೆ ಜೆಡಿಎಸ್‌ನಲ್ಲಿ ಶಾಸಕನಾಗಿದ್ದಾಗಲೂ ಬಿಜೆಪಿಯಿಂದ ಆಹ್ವಾನ ಬಂದಿತ್ತು, ಆದರೆ ಆಗ ನಾನು ಪಕ್ಷ ಬಿಡಲಿಲ್ಲ. ಈಗ ಬಿಜೆಪಿಯಲ್ಲಿ ನಾನು ಆರಾಮವಾಗಿದ್ದೇನೆ, ಹೀಗಿರುವಾಗ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. ಸರ್ಕಾರದಿಂದ ತಮ್ಮ ಕ್ಷೇತ್ರಕ್ಕೆ ಅನುದಾನ ಕಡಿಮೆ ಬಂದರೂ ಪರವಾಗಿಲ್ಲ, ಆದರೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗುವಂತೆ ನಡೆದುಕೊಳ್ಳುವುದಿಲ್ಲ ಎಂದು ದಿನಕರ ಶೆಟ್ಟಿ ಗುಡುಗಿದ್ದಾರೆ.

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಂಕೋಲಾ ತಾಲೂಕಿನ ಮಂಜುಗುಣಿಗೆ ಭೇಟಿ ನೀಡಿದ್ದಾಗ ದಿನಕರ ಶೆಟ್ಟಿ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ನೀಡಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಅಷ್ಟೇ ಅಲ್ಲದೆ, ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಅವರು ಹಾಸ್ಯಮಯವಾಗಿ ‘ಕಾಂಗ್ರೆಸ್‌ಗೆ ಬರಬೇಡಿ, ಅಲ್ಲೇ ಇರಿ’ ಎಂದು ಹೇಳಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ದಿನಕರ ಶೆಟ್ಟಿ ಅವರು ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸುವ ಮೂಲಕ ಪಕ್ಷಾಂತರದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ತಾವು ಸದಾ ಬಿಜೆಪಿಯ ಸಿದ್ಧಾಂತಕ್ಕೆ ಬದ್ಧರಾಗಿರುವುದಾಗಿ ಅವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page