Saturday, January 31, 2026

ಸತ್ಯ | ನ್ಯಾಯ |ಧರ್ಮ

ಹಾಸನ MLA ಟಿಕೆಟ್ ನನಗೆ ಸಿಗುವ ವಿಶ್ವಾಸವಿದೆ – ಪ್ರೀತಂಗೌಡ

ಕೊಡಗು : ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದ ವಿಬಿ ಜಿ ರಾಮ್ ಜಿ ಯೋಜನೆ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿದ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಅವರು ಬಿಜೆಪಿ–ಜೆಡಿಎಸ್ ಹೊಂದಾಣಿಕೆ ಕುರಿತು ಮಹತ್ವದ ಹೇಳಿಕೆ ನೀಡಿದರು.

ಎಲ್ಲಾ ಹಂತದ ಚುನಾವಣೆಗಳಲ್ಲಿಯೂ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಸಾಧ್ಯತೆ ಇದೆ ಎಂದು ಹೇಳಿದ ಅವರು, ಹಾಸನ ಕ್ಷೇತ್ರದಲ್ಲಿ ಮತ್ತೆ ತಮಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಮ್ಮಿಶ್ರ ರಾಜಕಾರಣದಲ್ಲಿ ವಿಭಿನ್ನ ಅಭಿಪ್ರಾಯಗಳು ಸಹಜವಾಗಿದ್ದು, ಅವನ್ನೆಲ್ಲಾ ಸಮಾಲೋಚನೆ ಮೂಲಕ ಸರಿಹೊಂದಿಸುವ ಜವಾಬ್ದಾರಿ ನಾಯಕತ್ವದದ್ದೇ ಎಂದು ಹೇಳಿದರು.

ನಮ್ಮ ಪಕ್ಷದಲ್ಲೇ ಅನೇಕ ಭಿನ್ನಾಭಿಪ್ರಾಯಗಳಿರುವಾಗ ಮೈತ್ರಿ ಪಕ್ಷದಲ್ಲೂ ಬೇರೆಬೇರೆ ಅಭಿಪ್ರಾಯಗಳು ಇರುವುದು ಅಚ್ಚರಿಯ ವಿಷಯವಲ್ಲ ಎಂದು ಪ್ರೀತಂ ಗೌಡ ಅಭಿಪ್ರಾಯಪಟ್ಟರು. ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಕೂತು ಚರ್ಚಿಸಿ, ಕಾರ್ಯಕರ್ತರಿಗೆ ಯಾವುದೇ ರೀತಿಯ ನೋವಾಗದಂತೆ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ಅಂತಿಮವಾಗಿ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಸಮತೋಲನದ ನಿರ್ಧಾರವೇ ಹೊರಬರುತ್ತದೆ ಎಂದು ಹೇಳಿದರು.

ಇದೇ ವೇಳೆ ವಿಬಿ ಜಿ ರಾಮ್ ಜಿ ಯೋಜನೆ ವಿರುದ್ಧ ಕಾಂಗ್ರೆಸ್ ನೀಡಿರುವ ಜಾಹೀರಾತು ಹಾಗೂ ಟೀಕೆಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಈ ಯೋಜನೆ ಬಗ್ಗೆ ಸಮಗ್ರ ಮಾಹಿತಿ ಇಲ್ಲ ಅಥವಾ ಜಾಣ್ಮೆಯ ಮರೆವು ಹಿಡಿದಿದೆ ಎಂದು ಆರೋಪಿಸಿದರು. ಲೋಕಸಭೆಯಲ್ಲಿ ಉತ್ತರ ನೀಡುವ ವೇಳೆ ಅದನ್ನು ಕೇಳಿಸಿಕೊಳ್ಳುವ ಸಹನೆ ಕಾಂಗ್ರೆಸ್‌ಗೆ ಇರಲಿಲ್ಲ ಎಂದೂ ಟೀಕಿಸಿದರು.

ಕಾಂಗ್ರೆಸ್ ಸರ್ಕಾರದ ಸಚಿವರಿಗೂ ಈ ಯೋಜನೆಯ ಮೂಲಭೂತ ತಿಳುವಳಿಕೆ ಇಲ್ಲದಿರುವುದರಿಂದಲೇ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಹೇಳಿದ ಅವರು, ಜಾಬ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಯೋಜನೆಯ ನಿಜವಾದ ಮಾಹಿತಿ ನೇರವಾಗಿ ತಲುಪಿಸುವ ಕಾರ್ಯವನ್ನು ಕೈಗೊಳ್ಳುವುದಾಗಿ ಹೇಳಿದರು. ಜನರಿಗೆ ವಾಸ್ತವ ಅರ್ಥವಾದ ಬಳಿಕ ಕಾಂಗ್ರೆಸ್ ಆರೋಪಗಳಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಯೋಜನೆ ಗ್ರಾಮೀಣ ಭಾರತಕ್ಕೆ ಹೊಸ ಕಾಯಕಲ್ಪ ನೀಡುವ ಪ್ರಧಾನಿಯವರ ದೂರದೃಷ್ಟಿಯ ಭಾಗವಾಗಿದ್ದು, ಗ್ರಾಮಾಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂದು ಪ್ರೀತಂ ಗೌಡ ಹೇಳಿದರು. ಮುಂದಿನ ದಿನಗಳಲ್ಲಿ ಇದರ ಮಹತ್ವ ಕಾಂಗ್ರೆಸ್‌ಗೂ ಮನವರಿಕೆ ಆಗಿ, ಈಗ ಹೇಳುತ್ತಿರುವ ಟೀಕೆಗಳನ್ನು ತಾವೇ ಹಿಂತೆಗೆದುಕೊಳ್ಳುವ ಸ್ಥಿತಿ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page