ಮುಂಬಯಿ: ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಹತ್ತಿರವಾಗುತ್ತಿರುವ ಹಾಗೆ ರಾಜಕೀಯ ಕೆಸರೆರಚಾಟವೂ ಆರಂಭಗೊಂಡಿದೆ. ಇಂದಿನ ಬೆಳವಣಿಗೆಯಲ್ಲಿ ಶರದ್ ಪವಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಅವರಿಗೆ 2010ರಲ್ಲಿ ಗಡಿಪಾರಾಗಿದ್ದನ್ನು ಮತ್ತೆ ನೆನಪಿಸಿದ್ದಾರೆ.
ಮಹಾರಾಷ್ಟ್ರದ ಎನ್‌ಸಿಪಿ (ಎಸ್‌ಪಿ) ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಉದ್ದೇಶಿಸಿ “ನಡೆಸಿದ್ದರು. ಅವರು ನನ್ನನ್ನು ‘ದೇಶದ ಎಲ್ಲಾ ಭ್ರಷ್ಟರ ಕಮಾಂಡರ್’ ಎಂದು ಕರೆದಿದ್ದರು. ಆದರೆ ವಿಚಿತ್ರವೆಂದರೆ ಗುಜರಾತ್ ರಾಜ್ಯದಲ್ಲಿ ಕಾಯ್ದೆಯನ್ನು ದುರುಪಯೋಗ ಮಾಡಿಕೊಂಡವರು ಇಂದು ಗೃಹಮಂತ್ರಿಯಾಗಿದ್ದಾರೆ” ಎಂದು ಕುಟುಕಿದ್ದಾರೆ.
“ಸ್ವಂತ ರಾಜ್ಯದಿಂದ ಗಡಿಪಾರಾಗಿದ್ದ ವ್ಯಕ್ತಿ ಇಂದು ಕೇಂದ್ರ ಗ್ರಹಮಂತ್ರಿಯಾಗಿದ್ದಾರೆ. ಅಂತಹ ವ್ಯಕ್ತಿಯಿಂದ ನನಗೆ ಸರ್ಟಿಫಿಕೇಟ್ ಬೇಕಿಲ್ಲ. ನನಗೆ ಸರ್ಟಿಫಿಕೇಟ್ ಕೊಡುವ ಯೋಗ್ಯತೆ ಅವರಿಗಿಲ್ಲ” ಎಂದು ಹಿರಿಯ ರಾಜಕಾರಣಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಜನರು ಇಂದು ಎಂತಹ ಜನರ ಕೈಯಲ್ಲಿ ದೇಶವಿದೆ, ಅವರು ಯಾವ ದಿಕ್ಕಿನತ್ತ ದೇಶವನ್ನು ಕರೆದೊಯ್ಯುತ್ತಿದ್ದಾರೆ ಎನ್ನುವುದನ್ನು ಈಗಲೇ ಯೋಚಿಸಬೇಕಿದೆ. ಇಲ್ಲದೇ ಹೋದಲ್ಲಿ ಈ ಜನರು ಈ ದೇಶವನ್ನು ದಿಕ್ಕು ತಪ್ಪಿಸುವುದರಲ್ಲಿ ನನಗೆ ಅನುಮಾನವಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಈಗ್ಗೆ ಎರಡು ದಿನಗಳ ಹಿಂದಷ್ಟೇ ಕೇರಳ ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಅಮಿತ್ ಗಡಿಪಾರಾದ ದಿನ ಹದಿನಾಲ್ಕನೆ ವಾರ್ಷಿಕೋತ್ಸವ ಇಂದು ಎಂದು ಪೋಸ್ಟರ್ ಶೇರ್ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಅಮಿತ್ ಶಾರನ್ನು ಪೊಲೀಸ್ ಅಧಿಕಾರಿಗಳು ಹಿಡಿದುಕೊಂಡಿರುವ ಫೋಟೊ ವೈರಲ್ ಆಗಿತ್ತು.
ಕಳೆದ ಬಾರಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಶಿವಸೇನೆ ಹಾಗೂ ಬಿಜೆಪಿ ಜೊತೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿಬಂದ ಕಾರಣ ಶಿವಸೇನೆ ಕಾಂಗ್ರೆಸ್ ಹಾಗೂ ಎನ್‌ಸಿಪಿ ಜೊತೆ ಕೈ ಜೋಡಿಸಿ ಅಧಿಕಾರದ ಗದ್ದುಗೆ ಏರಿತ್ತು.
ಆದರೆ ನಂತರದ ದಿನಗಳಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಮೊದಲಿಗೆ ಶಿವಸೇನೆ ಇಬ್ಭಾಗವಾಗಿ ಮಹಾರಾಷ್ಟ್ರದಲ್ಲಿ ಶಿಂಧೆ ನೇತ್ರತ್ವದ ಬಿಜೆಪಿ-ಶಿವಸೇನೆ (ಶಿಂಧೆ ಬಣ) ಅಧಿಕಾರಕ್ಕೆ ಬಂದಿತ್ತು. ನಂತರ ಎನ್‌ಸಿಪಿ ಪಕ್ಷವೂ ಹೋಳಾಗಿ ಅಜಿತ್ ಪವಾರ್ ಬಿಜೆಪಿಯೊಂದಿಗೆ ಕೈಜೋಡಿಸಿದ್ದರು.