ನಿತಿನ್ ಗಡ್ಕರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ಅಭ್ಯರ್ಥಿಯಾಗಿ ಮುಂದೆ ಬರುವಂತೆ ವಿರೋಧ ಪಕ್ಷಗಳಿಂದ ಪ್ರಸ್ತಾವನೆಗಳು ಬಂದಿದ್ದವು ಎಂದು ಗಡ್ಕರಿ ಹೇಳಿದ್ದಾರೆ.
ಅವರು ಪ್ರಧಾನಿ ಅಭ್ಯರ್ಥಿಯಾಗುವುದಾದರೆ ಬೆಂಬಲ ನೀಡುವುದಾಗಿ ವಿರೋಧ ಪಕ್ಷಗಳು ತಿಳಿಸಿವೆ ಎಂದು ಬಹಿರಂಗಪಡಿಸಿದರು.
ಮುಂಬೈಯಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ‘2024ರ ಲೋಕಸಭೆ ಚುನಾವಣೆಗೂ ಮುನ್ನ ಮತ್ತು ನಂತರ ನನಗೆ ಹಲವು ಬಾರಿ ಇದೇ ರೀತಿಯ ಆಫರ್‌ಗಳು ಬಂದಿವೆ. ಪ್ರಧಾನಿ ಮೋದಿ ಬದಲಿಗೆ ನನ್ನನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಪ್ರತಿಪಕ್ಷಗಳು ಪ್ರಸ್ತಾವನೆ ಸಲ್ಲಿಸಿವೆ. ಆದರೆ, ನಾನು ಪ್ರಸ್ತಾಪವನ್ನು ನಿರಾಕರಿಸಿದೆ. ಮೋದಿ ಬದಲಿಗೆ ನನ್ನನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದು ಬಿಜೆಪಿಯಲ್ಲಿ ಒಡಕು ಮೂಡಿಸುವ ವಿಪಕ್ಷಗಳ ಯೋಜನೆಯಾಗಿದೆ’ ಎಂದು ಅವರು ಹೇಳಿದರು.
‘ನನ್ನ ಸಿದ್ಧಾಂತದೊಂದಿಗೆ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಧಾನಿ ಸ್ಥಾನದ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಪ್ರಧಾನಿಯಾಗುವುದು ನನ್ನ ಗುರಿಯಲ್ಲ. ಆ ಹುದ್ದೆಯಲ್ಲಿ ನನಗೆ ವಿಶೇಷ ಆಸಕ್ತಿ ಇಲ್ಲ. ಮೋದಿ ಆಡಳಿತದಲ್ಲಿ ನನ್ನ ಜವಾಬ್ದಾರಿಯಿಂದ ನಾನು ತೃಪ್ತನಾಗಿದ್ದೇನೆ. ನಾನು ಮೊದಲು ಆರ್‌ಎಸ್‌ಎಸ್‌ನ ಸದಸ್ಯ. ಅದರ ನಂತರ ನಾನು ಬಿಜೆಪಿ ಕಾರ್ಯಕರ್ತನಾಗಿರಲಿ ಅಥವಾ ಇಲ್ಲದಿರಲಿ, ಬದ್ಧತೆಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಗಡ್ಕರಿ ಹೇಳಿದರು. ಸದ್ಯ ಕೇಂದ್ರ ಸಚಿವರ ಹೇಳಿಕೆ ವೈರಲ್ ಆಗಿದೆ.
ಈ ಹಿಂದೆಯೂ ಈ ಕುರಿತಾದ ಅವರ ಹೇಳಿಕೆ ವೈರಲ್ ಆಗಿತ್ತು.