‘ನಾನು ಏನು ಹೇಳಿದ್ದೇನೋ ಅದನ್ನು ಪ್ರೀತಿ ಕಾರಣದಿಂದಾಗಿಯೇ ಹೇಳಿದ್ದೇನೆ ಎಂಬುದು ನನ್ನ ಭಾವನೆ. ಇತಿಹಾಸಕಾರರು ನನಗೆ ಭಾಷೆಯ ಬಗ್ಗೆ ಅಧ್ಯಯನ ಮಾಡಿ ತಿಳಿಸಿದ್ದಾರೆ. ಬೇರೆ ಯಾವುದೇ ಧ್ವೇಷದ ಉದ್ದೇಶದಿಂದ ನಾನು ಕನ್ನಡದ ಬಗ್ಗೆ ಮಾತನಾಡಿಲ್ಲ’ ಎಂದು ನಟ ಕಮಲ್ ಹಾಸನ್ ಭಾಷಾ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ನಂತಹ ಎಲ್ಲಾ ದ್ರಾವಿಡ ಭಾಷೆಗಳ ಮೂಲ ಇರುವುದು ತಮಿಳಿನಲ್ಲಿ. ಇದರ ಬಗ್ಗೆ ನನಗೆ ಅರಿವಿದೆ. ಕನ್ನಡದ ಮೇಲೆ ನನಗಿರುವುದು ಪ್ರೀತಿಯೇ ಹೊರತು ಧ್ವೇಷವಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ. ತಿರುವನಂತಪುರದಲ್ಲಿ ತಮ್ಮ ಮುಂದಿನ ಚಿತ್ರ ಥಗ್ ಲೈಫ್ ಪ್ರಚಾರಕ್ಕೆ ಬಂದ ಕಮಲ್ ಹಾಸನ್ ಹೀಗೆಂದು ಸ್ಪಷ್ಟನೆ ನೀಡಿದ್ದಾರೆ.
‘ತಮಿಳುನಾಡು ಅಪರೂಪವಾದ ರಾಜ್ಯ. ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುತ್ತದೆ. ಹಾಗಂತ ಇಂತಹ ರಾಜ್ಯ ಬೇರೆ ಇಲ್ಲ ಎಂದು ನಾನು ಹೇಳುವುದಿಲ್ಲ’ ಎಂದರು. ‘ಒಬ್ಬ ಮೆನನ್(ಎಂ.ಜಿ.ರಾಮಚಂದ್ರನ್) ಒಬ್ಬ ರೆಡ್ಡಿ (ಒಮಂದೂರ್ ರಾಮಸ್ವಾಮಿ ರೆಡ್ಡಿಯಾರ್) ನಮ್ಮ ಮುಖ್ಯಮಂತ್ರಿಯಾಗಿದ್ದರು. ತಮಿಳು ವ್ಯಕ್ತಿ ಎಂ.ಕರುಣಾನಿಧಿ ಹಾಗೂ ಮಂಡ್ಯ ಮೂಲದ ಕನ್ನಡ ಅಯ್ಯಂಗಾರ್ ಮಹಿಳೆ (ಜೆ.ಜಯಲಲಿತಾ) ಕೂಡ ನಮ್ಮ ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ತಮಿಳು ಯಾರನ್ನೂ ದೂರ ಇಡುವುದಿಲ್ಲ’ ಎಂದು ಕಮಲ್ ಹಾಸನ್ ಹೇಳಿದರು.
ಅಷ್ಟೇ ಅಲ್ಲದೆ ಅಂದಿನ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಡೆಯಿಂದ ನನಗೆ ತೊಂದರೆಯಾದಾಗ ಕನ್ನಡಿಗರೇ ನನ್ನ ಬೆಂಬಲಕ್ಕೆ ನಿಂತಿದ್ದರು. ಕರ್ನಾಟಕಕ್ಕೆ ಬನ್ನಿ ನಿಮಗೆ ಮನೆ ಕೊಡುತ್ತೇವೆ ಎಲ್ಲಿಗೂ ಹೋಗಬೇಡಿ ಎಂದಿದ್ದರು. ಹೀಗಾಗಿ ಕನ್ನಡದ ಜನರು ಥಗ್ ಲೈಫ್ ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.