Monday, July 1, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಪಾಳೆಯವನ್ನು ತಬ್ಬಿಬ್ಬುಗೊಳಿಸಿದ I-N-D-I-A

ಇಂಡಿಯಾ ಎಂಬ ಹೆಸರಿನೊಂದಿಗೆ ಮೈತ್ರಿಕೂಟವು ಭಾವತಂತುವೊಂದನ್ನು ಮೀಟಿದೆ. ಬಿಜೆಪಿಯ ಸೊತ್ತೇ ಆಗಿಬಿಟ್ಟಿರುವ ನೇಶನಲಿಸಂ ಅನ್ನು ಅದರಿಂದ ಕಸಿದು ಕೊಂಡಿದೆ.  ಈಗ ಇಂಡಿಯಾ ಎಂಬ ಮೈತ್ರಿಕೂಟವನ್ನು ನಿಂದಿಸಿದರೆ ಅದು ಇಂಡಿಯಾ ಎಂಬ ದೇಶವನ್ನು ನಿಂದಿಸಿದಂತೆ ಅನಿಸುವ ಸಾಧ್ಯತೆಯೂ ಇದೆ – ಶ್ರೀನಿವಾಸ ಕಾರ್ಕಳ

ನಮ್ಮಲ್ಲಿ ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ ಎಂಬ ಅರ್ಥಪೂರ್ಣ ಗಾದೆ ಮಾತೊಂದಿದೆ. ಕಾಲಚಕ್ರ ಉರುಳುತ್ತಲೇ ಇರುತ್ತದೆ. ಇಂದು ಮೇಲೆ ಇದ್ದವರು ನಾಳೆ ಕೆಳಗೆ. ಇಂದು ಗೆದ್ದವರಿಗೆ ನಾಳೆ ಇದ್ದೇ ಇರುತ್ತದೆ ಸೋಲಿನ ಕಹಿರುಚಿ.

ನಿಮಗೆ ನೆನಪಿರಬಹುದು, ಕಳೆದ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಕಾಲದಲ್ಲಿ ಕಾಂಗ್ರೆಸ್ ನ ಸೋಶಿಯಲ್ ಮೀಡಿಯಾ ವಿಭಾಗವು ಬೆರಗುಗೊಳಿಸುವ ರೀತಿಯಲ್ಲಿ, ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿತು. ಅದು ಸೃಷ್ಟಿಸಿದ ಸ್ಲೋಗನ್ ಗಳು, ಪೋಸ್ಟರ್ ಗಳು, ಜಾರಿಗೊಳಿಸಿದ ಕಾರ್ಯಕ್ರಮಗಳು, ಈ ಕ್ಷೇತ್ರದಲ್ಲಿ ಚಾಣಕ್ಯ ಅಂದುಕೊಂಡಿದ್ದ ಬಿಜೆಪಿಯನ್ನು ಕಕ್ಕಾಬಿಕ್ಕಿ ಮಾಡಿದ್ದವು.

ಪೇಸಿಎಂ ಅಭಿಯಾನ

ವಿಶೇಷವಾಗಿ ‘ಪೇಸಿಎಂ’ ಮತ್ತು ‘ಫಾರ್ಟಿ ಪರ್ಸೆಂಟ್ ಸರಕಾರ’ ದಂತಹ ಅಭಿಯಾನಗಳು ಅತ್ಯಂತ ವಿನೂತನವಾಗಿದ್ದವಲ್ಲದೇ (ಇನ್ನೋವೇಟಿವ್) ಅವು ಕಾಂಗ್ರೆಸ್ ನ ಪ್ರಚಾರ ಅಭಿಯಾನಕ್ಕೆ ಎಲ್ಲಿಲ್ಲದ ಮೊನಚು ನೀಡಿದವು, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದವು, ಎದುರಾಳಿ ಎದೆಗುಂದುವಂತೆ ಮಾಡಿದವು. ಈ ವಿನೂತನ ಪ್ರಚಾರಾಭಿಯಾನದ ಹೊಡೆತದಿಂದ ಬಿಜೆಪಿಗೆ ಸಾವರಿಸಿಕೊಳ್ಳಲು ಕೊನೆಯ ತನಕವೂ ಸಾಧ್ಯವಾಗಲಿಲ್ಲ.

ಈ ಅಭಿಯಾನದಿಂದಲೇ ಕಾಂಗ್ರೆಸ್ ಗೆದ್ದಿತು ಎನ್ನಬಹುದೇ? ಉಹುಂ. ಆದರೆ ಚುನಾವಣೆ ಎಂಬ ಕದನದಲ್ಲಿ ಈ Perception Battle ಎನ್ನುವುದಿದೆಯಲ್ಲ, ಅದೂ ಮುಖ್ಯವಾಗುತ್ತದೆ. ಅದಕ್ಕೂ ಒಂದು ಪಾತ್ರವಿರುತ್ತದೆ. ಅಲ್ಲಿ ಕಾರ್ಯತಂತ್ರಗಳ ಮೂಲಕ ಮೇಲುಗೈ ಸಾಧಿಸಿ ಮತದಾರರಲ್ಲಿ ನಿಮ್ಮ ಬಗ್ಗೆ ಕುತೂಹಲ ಮತ್ತು ಆಸಕ್ತಿ ಮೂಡುವಂತೆ ಮಾಡುವುದು ಸಾಧ್ಯವಿದೆ.

ಈ ಕೆಲಸವನ್ನು ಮೊದಲು ಮಾಡಿದ್ದು ಬಿಜೆಪಿ (2014 ರ ಅದರ ಚುನಾವಣಾ ಪ್ರಚಾರಾಭಿಯಾನ ನೆನಪಿಸಿಕೊಳ್ಳಿ). ಆಗ ಬಿಜೆಪಿಯೇತರ ಪಕ್ಷಗಳು ಇದು ಏನೆಂದೇ ಅರಿಯಲಾಗದೆ ಕಕ್ಕಾಬಿಕ್ಕಿಯಾಗಿದ್ದವು. ಮೋದಿಯವರ ವಿಜಯದಲ್ಲಿ ಈ ಸೋಶಿಯಲ್ ಮೀಡಿಯಾ ಅಭಿಯಾನದ ಪಾತ್ರ ಬಹುದೊಡ್ಡದಿತ್ತು. ‘ಮೋದಿಯವರ ನಾಯಕತ್ವ ಈ ದೇಶಕ್ಕೆ ಅನಿವಾರ್ಯ’ ಎಂಬ ಭಾವನೆಯನ್ನು ವಿಶೇಷವಾಗಿ ಹೊಸ ಮತದಾರರಲ್ಲಿ ಮೂಡಿಸುವಲ್ಲಿ ಅದು ಯಶಸ್ವಿಯಾಗಿತ್ತು.

ಈಗ ಇತರ ಪಕ್ಷಗಳೂ ಈ ಕಲೆಯನ್ನು, ತಡವಾಗಿಯಾದರೂ ಕರಗತ ಮಾಡಿಕೊಂಡಿವೆ. ಬಿಜೆಪಿಯ ಪಠ್ಯಪುಸ್ತಕಗಳಿಂದಲೇ ಆಯ್ದು ಈಗ ಅದರಲ್ಲೇ ಇತರ ಪಕ್ಷಗಳು ಬಿಜೆಪಿಗೆ ಮರಳಿ ನೀಡುತ್ತಿವೆ. ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ‘ಟೆನ್ ಪರ್ಸೆಂಟ್ ಕಮಿಷನ್ ಸರಕಾರ’ ಎಂದುದು ಮೋದಿಯವರೇ ಅಲ್ಲವೇ? ಮೊನ್ನೆಯ ಚುನಾವಣೆಯಲ್ಲಿ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ‘ಫಾರ್ಟಿ ಪರ್ಸೆಂಟ್ ಕಮಿಷನ್ ಸರಕಾರ’ ಎಂಬ ಬಹುದೊಡ್ಡ ಅಭಿಯಾನವನ್ನು ಚಲಾಯಿಸಿತು ಮತ್ತು ಈ ಕಳಂಕದ ಕೆಸರು ಬಿಜೆಪಿಗೆ ಗಟ್ಟಿಯಾಗಿ ಅಂಟಿಕೊಂಡಿತು. ಇದೂ ಬಿಜೆಪಿಯ ಸೋಲಿನಲ್ಲಿ ಪಾತ್ರ ವಹಿಸಲಿಲ್ಲ ಎಂದು ಹೇಗೆ ಹೇಳೋಣ?

ಇಂಡಿಯಾ ಮೈತ್ರಿಕೂಟ

2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಬಿಜೆಪಿಯ ವಿರುದ್ಧ ಈಗ ಪ್ರಮುಖ ವಿಪಕ್ಷಗಳು ಒಗ್ಗೂಡುತ್ತಿವೆ. ಈ ವಿಪಕ್ಷಗಳ ಮೊದಲ ಸಭೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಎರಡನೆ ಸಭೆ ಮೊನ್ನೆಯಷ್ಟೇ (ಜುಲೈ 17-18, 2023) ಬೆಂಗಳೂರಿನಲ್ಲಿ ಮುಗಿದಿದೆ. 26 ದೊಡ್ಡ ರಾಜಕೀಯ ಪಕ್ಷಗಳಿದ್ದ ಈ ಸಭೆಯ ಒಳಗಡೆ ಏನು ಚರ್ಚೆಯಾಯಿತೋ, ಅವು ಮುಂದೆ ಏನು ಸಾಧಿಸಲಿವೆಯೋ ಸರಿಯಾಗಿ ಗೊತ್ತಿಲ್ಲ. ಆದರೆ ನಿನ್ನೆಯ ಮಟ್ಟಿಗೆ ಆ ಸಭೆಯಿಂದ ಹೊರಬಿದ್ದ ಒಂದು ಸಂಗತಿ ಇಡೀ ದೇಶದಲ್ಲಿ ಸುದ್ದಿ ಮಾಡಿತು; Perception Battle ನಲ್ಲಿ ಅಭೂತಪೂರ್ವ ಮೇಲುಗೈ ಸಾಧಿಸಿತು. ಅದೆಂದರೆ, ಈ ಮೈತ್ರಿಕೂಟಕ್ಕೆ ಇಟ್ಟ I-N-D-I-A (Indian National Developmental Inclusive Alliance) ಎಂಬ ಹೆಸರು. ಈ ಹೆಸರು ಹೊರಬೀಳುತ್ತಿದ್ದಂತೆ ಅದು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿತು. ಗಂಟೆಗಳ ಕಾಲ ಟ್ರೆಂಡ್ ಆಯಿತು; ಈಗಲೂ ಆಗುತ್ತಿದೆ. ಎಲ್ಲೆಲ್ಲೂ ಅದರದ್ದೇ ಚರ್ಚೆ.

ಬಿಜೆಪಿಯ ಪಾಲಿಗೆ ಇದು ಎಂತಹ ಅನಿರೀಕ್ಷಿತ ಆಘಾತ ನೀಡಿತೆಂದರೆ, ಯಾವ ರೀತಿಯಲ್ಲಿ ಪ್ರತಿಕ್ರಿಯಿಸುವುದೆಂದೇ  ಅದಕ್ಕೆ ತಿಳಿಯಲಿಲ್ಲ. ‘ಇಂಡಿಯಾ ಅಲ್ಲ ಈಸ್ಟ್ ಇಂಡಿಯಾ ಕಂಪೆನಿ’, ‘ನಮ್ಮದು ಇಂಡಿಯಾ ಅಲ್ಲ ಭಾರತ’, ‘ಹೆಸರು ಬದಲಾಯಿಸಿದಾಕ್ಷಣ ಇಮೇಜ್ ಬದಲಾಗುವುದಿಲ್ಲ’, ‘ಇಂಡಿಯಾ ಎಂದು ಹೆಸರು ಇಡುವಂತಿಲ್ಲ ಅದು ಕಾನೂನು ನಿಯಮಕ್ಕೆ ವಿರುದ್ಧ’ ಹೀಗೆ ಅದರ ಹಾಸ್ಯಾಸ್ಪದ ವಾದಗಳು ಒಂದೆರಡಲ್ಲ.

ಒಂದರ್ಥದಲ್ಲಿ ಇದು ಚೆಕ್ ಮೇಟ್ ಅಥವಾ ಮಾಸ್ಟರ್ ಸ್ಟ್ರೋಕ್. ಯಾಕೆಂದರೆ, ಇಂಡಿಯಾ ಎಂಬ ಪದದೊಂದಿಗೆ ಭಾರತ ಎಂಬ ನಮ್ಮ ಪ್ರೀತಿಯ ದೇಶ ತಳುಕು ಹಾಕಿಕೊಂಡಿದೆ. ‘ವಿ ದ ಪೀಪಲ್ ಆಫ್ ಇಂಡಿಯಾ’ ಎಂದು ಭಾರತ ಸಂವಿಧಾನದ ಮೊದಲ ಪುಟದಲ್ಲಿಯೇ ಇದೆ. ಭಾರತ ಸಂವಿಧಾನದ ಒಂದನೇ ಪರಿಚ್ಛೇದ India, that is Bharat shall be a Union of States ಎನ್ನುತ್ತದೆ. ನಮ್ಮಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಎಲ್ಲವೂ ಇವೆ. ಇಂಡಿಯಾ ಎನ್ನುವುದೊಂದು ಭಾವನಾತ್ಮಕ ವಿಚಾರ.

ತಬ್ಬಿಬ್ಬಾದ ಬಿಜೆಪಿ

ಇಂಡಿಯಾ ಎಂಬ ಹೆಸರಿನೊಂದಿಗೆ ಮೈತ್ರಿಕೂಟವು ಭಾವತಂತುವೊಂದನ್ನು ಮೀಟಿದೆ. ಬಿಜೆಪಿಯ ಸೊತ್ತೇ ಆಗಿಬಿಟ್ಟಿರುವ ನೇಶನಲಿಸಂ ಅನ್ನು ಅದರಿಂದ ಕಸಿದು ಕೊಂಡಿದೆ.  ಈಗ ಇಂಡಿಯಾ ಎಂಬ ಮೈತ್ರಿಕೂಟವನ್ನು ನಿಂದಿಸಿದರೆ ಅದು ಇಂಡಿಯಾ ಎಂಬ ದೇಶವನ್ನು ನಿಂದಿಸಿದಂತೆ ಅನಿಸುವ ಸಾಧ್ಯತೆಯೂ ಇದೆ. ಬಿಜೆಪಿಗರು ಹೇಗಿದ್ದರೂ ಮಹಾ ದೇಶಪ್ರೇಮಿಗಳೂ ರಾಷ್ಟ್ರೀಯತಾವಾದಿಗಳೂ ಅಲ್ಲವೇ? ಅವರು ಇಂಡಿಯಾವನ್ನು ವಿರೋಧಿಸುವುದಾದರೂ ಹೇಗೆ? ಇದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿರುವುದಂತೂ ಖಂಡಿತಾ. ಇದು ಮೊನ್ನೆಯಿಂದ ಅವರ ಮತ್ತು ಅವರ ಭಕ್ತಮಂಡಳಿಯ ಹತಾಶ ಪ್ರತಿಕ್ರಿಯೆಯಿಂದಲೇ ಸ್ಪಷ್ಟವಾಗುತ್ತದೆ.

I.N.D.I.A ಎಂಬ ಹೆಸರು ಅನೇಕ ಕಾರಣಕ್ಕೆ ಅರ್ಥಪೂರ್ಣವಾಗಿದೆ. ಅದರಲ್ಲಿ NDA ಯಲ್ಲಿ ಇಲ್ಲದ ಎರಡು I (ಐ) ಗಳು ಇವೆ. ಅವನ್ನು ‘ಇಂಡಿಯನ್ ನೆಸ್’ ಮತ್ತು ‘ಇನ್ ಕ್ಲೂಸಿವ್ ನೆಸ್’ ಎನ್ನಬಹುದು ಎನ್ನುತ್ತಾರೆ ಲೇಖಕ ಟೋನಿ ಜೋಸೆಫ್. ‘Perception Battle ನಲ್ಲಿ I.N.D.I.A ಈಗಾಗಲೇ ಗೆದ್ದಿದೆ. ಒಂದೇ ಒಂದು ಹೊಡೆತದಲ್ಲಿ ವಿಪಕ್ಷವು NDA/Modi ಯ ಅತಿದೊಡ್ಡ ರಾಜಕೀಯ ತಳಹದಿಯಾದ ನೇಶನಲಿಸಂ ಮೇಲಿನ ಅದರ ಕ್ಲೇಮ್ ಅನ್ನು ವಶಕ್ಕೆ ತೆಗೆದುಕೊಂಡಿದೆ’ ಎನ್ನುತ್ತಾರೆ ಖ್ಯಾತ ಪತ್ರಕರ್ತೆ ಆರ್ಫಾ ಖಾನುಂ ಶೇರ್ವಾನಿ.

ಇದು ಗೊತ್ತಿದ್ದೇ ಈ ಹೆಸರನ್ನು ರಾಹುಲ್ ಗಾಂಧಿ ಸಲಹೆ ಮಾಡಿದ್ದಂತೆ. INDIA vs NDA ಎಂಬ ನೆರೇಟಿವ್ ಸುಲಭದಲ್ಲಿ ಕಟ್ಟಬಹುದು,  ಇದು ‘ನರೇಂದ್ರಮೋದಿಯವರು ಇಂಡಿಯಾದ ವಿರುದ್ಧ ಇದ್ದಾರೆ’ ಮತ್ತು ಬಿಜೆಪಿಯ ವಿರುದ್ಧ ಇರುವವರೆಲ್ಲರೂ ‘ಇಂಡಿಯಾ’ದ ಜೊತೆಗಿದ್ದಾರೆ ಎಂಬ ನೆರೇಟಿವ್ ಕಟ್ಟಲು ಸಹಾಯ ಮಾಡುತ್ತದೆ ಎಂದು ಅವರೇ ಪ್ರತಿಪಾದಿಸಿದರಂತೆ.

ಈಗಾಗಲೇ ಹೇಳಿದಂತೆ, ಇಂತಹ ಕೆಲಸಗಳು ಚುನಾವಣೆಯಲ್ಲಿ ಗೆಲುವು ತಂದುಕೊಡಬೇಕಾಗಿಲ್ಲ. ಆದರೆ ಚುನಾವಣೆ ಎಂಬ ಕದನದಲ್ಲಿ ಇಂತಹ ಸಣ್ಣ ಸಣ್ಣ ತಂತ್ರಗಳಿಗೂ ಒಂದು ಪಾತ್ರವಿರುತ್ತದೆ. ಅಲ್ಲಿ ಪರ್ಸೆಪ್ಶನ್ ಬ್ಯಾಟಲ್ ಅಥವಾ  ಗ್ರಹಿಕಾ ಕದನವೂ ಮುಖ್ಯವಾಗುತ್ತದೆ. ಆ ಮಟ್ಟಿಗೆ ಈ ‘ಇಂಡಿಯಾ’ ಹೆಸರಿನಿಂದ ಬಿಜೆಪಿ ಗಲಿಬಿಲಿಗೊಂಡಿದೆ ಮತ್ತು  ‘ಇಂಡಿಯಾ ಮೈತ್ರಿಕೂಟ’ ತಕ್ಷಣದ ಜಯವನ್ನು ದಾಖಲಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಶ್ರೀನಿವಾಸ ಕಾರ್ಕಳ

ಲೇಖಕರು

ಇದನ್ನೂ ಓದಿ-ಎರಡು ಬ್ಯಾನರ್‌ಗಳ ಕಥೆ

Related Articles

ಇತ್ತೀಚಿನ ಸುದ್ದಿಗಳು