Friday, December 26, 2025

ಸತ್ಯ | ನ್ಯಾಯ |ಧರ್ಮ

ಮನಮೋಹನ್ ಸಿಂಗ್ ಅವರನ್ನು ನಿಂದಿಸಿದ ಮತ್ತು ಒಂದು ದುಷ್ಟ ಆಡಳಿತ ಅಧಿಕಾರಕ್ಕೆ ಬರಲು ಸಹಕಾರಿಯಾದ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ನನಗೆ ಪಶ್ಚಾತ್ತಾಪವಿದೆ: ಪ್ರಶಾಂತ್ ಭೂಷಣ್ ಭಾವುಕ ನುಡಿ

ದೆಹಲಿ: ಯುಪಿಎ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಯ ಮುಂಚೂಣಿಯಲ್ಲಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಶುಕ್ರವಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪ್ರಥಮ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸಿದರು. “ಸಿಂಗ್ ಅವರನ್ನು ನಿಂದಿಸಿದ ಮತ್ತು ಒಂದು ದುಷ್ಟ ಆಡಳಿತ ಅಧಿಕಾರಕ್ಕೆ ಬರಲು ಸಹಕಾರಿಯಾದ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ನನಗೆ ಪಶ್ಚಾತ್ತಾಪವಿದೆ” ಎಂದು ಅವರು ಹೇಳಿದ್ದಾರೆ.

ಪ್ರಶಾಂತ್ ಭೂಷಣ್ ಅವರು ಈ ಹಿಂದೆ ‘ಇಂಡಿಯಾ ಎಗೇನ್ಸ್ಟ್ ಕರಪ್ಷನ್’ (IAC) ನ ಭಾಗವಾಗಿದ್ದರು ಮತ್ತು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಸೇರಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ವಿಚಾರದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದರು.

ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಮನಮೋಹನ್ ಸಿಂಗ್ ಅವರ ಭಾವಚಿತ್ರವನ್ನು ಹಂಚಿಕೊಂಡ ಭೂಷಣ್, “ಅವರು ಒಬ್ಬ ವಿನಮ್ರ, ಸಭ್ಯ, ಸುಶಿಕ್ಷಿತ ಮತ್ತು ಒಳ್ಳೆಯ ಉದ್ದೇಶವುಳ್ಳ ವ್ಯಕ್ತಿಯಾಗಿದ್ದರು. ಅವರ ವಿನಯ ಮತ್ತು ಸೌಜನ್ಯವನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಲಾಗಿತ್ತು. ಅವರನ್ನು ಅಪಮಾನಿಸಿದ ಮತ್ತು ಒಂದು ಕ್ರೂರ ಆಡಳಿತ ವ್ಯವಸ್ಥೆ ಅಧಿಕಾರಕ್ಕೆ ಬರಲು ದಾರಿ ಮಾಡಿಕೊಟ್ಟ ಚಳವಳಿಯಲ್ಲಿ ನಾನು ಭಾಗವಹಿಸಿದ್ದಕ್ಕಾಗಿ ವಿಷಾದಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಭೂಷಣ್ ಅವರೇ ಸಿಂಗ್ ಅವರನ್ನು ಯುಪಿಎ ಭ್ರಷ್ಟಾಚಾರದ “ರಕ್ಷಾಕವಚ” ಎಂದು ಆರೋಪಿಸಿದ್ದರು ಎಂಬುದು ಇಲ್ಲಿ ಗಮನಾರ್ಹ.

ಇದು ಮೊದಲ ಬಾರಿಯಲ್ಲ; 2025 ರಲ್ಲಿ ಸಿಂಗ್ ಅವರ ನಿಧನದ ಎರಡು ದಿನಗಳ ನಂತರವೂ ಭೂಷಣ್ ಅವರು, “ಸಿಂಗ್ ಅವರು ರಾಷ್ಟ್ರೀಯ ಹಿತಾಸಕ್ತಿಯ ದೀರ್ಘಕಾಲದ ದೃಷ್ಟಿಕೋನವನ್ನು ಹೊಂದಿದ್ದ ಸೌಮ್ಯ ಮತ್ತು ಒಳಗೊಳ್ಳುವಿಕೆಯ ಆಡಳಿತವನ್ನು ಮುನ್ನಡೆಸಿದ್ದರು. ಇಂದಿನ ಆಡಳಿತಕ್ಕೂ ಅವರಿಗೂ ಇರುವ ವ್ಯತ್ಯಾಸ ಅಜಗಜಾಂತರ” ಎಂದು ಅಭಿಪ್ರಾಯಪಟ್ಟಿದ್ದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಸಿಂಗ್ ಅವರ ಕೊಡುಗೆಗಳನ್ನು ಸ್ಮರಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರು ಸಿಂಗ್ ಅವರ ಪತ್ನಿ ಗುರ್ಶರಣ್ ಕೌರ್ ಅವರಿಗೆ ಪತ್ರ ಬರೆದು, “1991 ರ ಆರ್ಥಿಕ ಸುಧಾರಣೆಗಳ ಮೂಲಕ ಸಿಂಗ್ ಅವರು ಭಾರತವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರತಂದರು ಮತ್ತು ಬೆಳವಣಿಗೆಗೆ ಬಲವಾದ ಅಡಿಪಾಯ ಹಾಕಿದರು. ಅವರು ಸರಳತೆ, ಘನತೆ ಮತ್ತು ಪ್ರಾಮಾಣಿಕತೆಯ ಸಾಕಾರ ರೂಪವಾಗಿದ್ದರು” ಎಂದು ಶ್ಲಾಘಿಸಿದರು.

ರಾಹುಲ್ ಗಾಂಧಿ ಅವರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, “ಸಿಂಗ್ ಅವರ ದೂರದೃಷ್ಟಿಯ ನಾಯಕತ್ವವು ಭಾರತವನ್ನು ಆರ್ಥಿಕವಾಗಿ ಸಬಲಗೊಳಿಸಿತು. ಅವರ ವಿನಯ, ಶ್ರಮ ಮತ್ತು ಪ್ರಾಮಾಣಿಕತೆ ನಮಗೆಲ್ಲರಿಗೂ ಸದಾ ಸ್ಫೂರ್ತಿ” ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page