ಲಕ್ನೋ: ಬಿಜೆಪಿಯಲ್ಲಿ ಅತೃಪ್ತಿ ಹೆಚ್ಚುತ್ತಿದೆ ಎಂಬ ವರದಿಗಳ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿರಾಶಾದಾಯಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ಇದು ನಾನು ಪ್ರತಿಷ್ಠೆಗಾಗಿ ನಡೆಸುತ್ತಿರುವ ಹೋರಾಟವಲ್ಲ, ನನಗೆ ನನ್ನ ಮಠದಲ್ಲಿ ಇದಕ್ಕಿಂತಲೂ ಹೆಚ್ಚಿನ ಗೌರವ ಸಿಗುತ್ತದೆ’ ಎಂದು ಹೇಳಿದರು.
ಬುಲ್ಡೋಜರ್ ನೀತಿಯಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಾನಿಯಾಗಿದೆ ಎನ್ನುವ ಸಚಿವ ಸಂಜಯ್ ನಿಶಾದ್ ಹೇಳಿಕೆಗೆ ಆದಿತ್ಯನಾಥ್ ಪರೋಕ್ಷವಾಗಿ ಪ್ರತಿಕ್ರಿಯಿಸಿದರು.
ಬುಲ್ಡೋಜರ್ ನೀತಿ ಅಮಾಯಕರಿಗೆ ತೊಂದರೆ ಕೊಡುವ ಉದ್ದೇಶದಿಂದ ತಂದಿದ್ದಲ್ಲ ಎಂದರು. ಯುವಕರು, ವ್ಯಾಪಾರಿಗಳು, ಹೆಣ್ಣುಮಕ್ಕಳು, ಮಹಿಳೆಯರ ಸುರಕ್ಷತೆಯೊಂದಿಗೆ ಆಟವಾಡುವ, ಅರಾಜಕತೆ ಹರಡುವ ಮತ್ತು ಜನಸಾಮಾನ್ಯರ ಬದುಕನ್ನು ಹದಗೆಡಿಸುವ ಕ್ರಿಮಿನಲ್‌ಗಳು ಅದರ ಪರಿಣಾಮವನ್ನು ಅನುಭವಿಸಲಾಗದೆ ಹೋರಾಡುತ್ತಿದ್ದಾರೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಯೋಗಿ ಅವರ ಸ್ವಂತ ಪಕ್ಷದ ನಾಯಕರೇ ಯೋಗಿ ಅವರನ್ನು ಟೀಕಿಲಾರಂಭಿಸಿದ್ದಾರೆ.