Thursday, September 18, 2025

ಸತ್ಯ | ನ್ಯಾಯ |ಧರ್ಮ

ಮಂಜುನಾಥಗೌಡ ಗೆದ್ದರೆ ರಾಜಕೀಯ ತ್ಯಜಿಸುತ್ತೇನೆ: ಮಾಲೂರು ಶಾಸಕ ನಂಜೇಗೌಡರ ನೇರ ಸವಾಲು

ಕೋಲಾರ: ಹೈಕೋರ್ಟ್‌ನ ನಿರ್ದೇಶನದಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ನಡೆದರೆ ಮತ್ತು ಅದರಲ್ಲಿ ತಮ್ಮ ಪ್ರತಿಸ್ಪರ್ಧಿ ಕೆ.ಎಸ್. ಮಂಜುನಾಥಗೌಡ ಅವರು ಜಯಗಳಿಸಿದರೆ, ತಾವು ರಾಜಕೀಯ ಕ್ಷೇತ್ರದಿಂದಲೇ ನಿವೃತ್ತಿ ತೆಗೆದುಕೊಳ್ಳುವುದಾಗಿ ಶಾಸಕ ಕೆ.ವೈ. ನಂಜೇಗೌಡ ಸವಾಲೆಸೆದಿದ್ದಾರೆ.

ತಾಲ್ಲೂಕಿನ ರಾಮಸಂದ್ರ ಗಡಿಭಾಗದಲ್ಲಿ ಮಾಧ್ಯಮದವರೊಂದಿಗೆ ಮಂಗಳವಾರ ಮಾತನಾಡಿದ ಅವರು, “ಅವರನ್ನು (ಮಂಜುನಾಥಗೌಡ) ನಾನೇ ಹೊಸಕೋಟೆಯಿಂದ ಕರೆತಂದು ಮಾಲೂರಿನಲ್ಲಿ ಗೆಲ್ಲುವಂತೆ ಮಾಡಿದ್ದೆ. ಅಂದು ನಾನೇ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಬಹುದಾಗಿತ್ತು. ಕೆಲವು ನಾಯಕರ ಮಾತಿಗೆ ಕಿವಿಗೊಟ್ಟು ತಪ್ಪು ಮಾಡಿದೆ. ಆದರೆ, ಈಗ ಆತ ಹುಚ್ಚು ಹಿಡಿದವರಂತೆ ವರ್ತಿಸುತ್ತಿದ್ದು, ಶಾಸಕನಾದ ಭ್ರಮೆಯಲ್ಲಿದ್ದಾನೆ. ಅವನ ಕೆಲವು ಬೆಂಬಲಿಗರು ಹಗಲುಗನಸು ಕಾಣುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ” ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸುಪ್ರೀಂ ಕೋರ್ಟ್‌ ಮೊರೆ ಹೋಗಲು ನಿರ್ಧಾರ

“ಹೈಕೋರ್ಟ್ ಮರು ಮತ ಎಣಿಕೆಗೆ ಸೂಚನೆ ನೀಡಿರುವುದರ ಜೊತೆಗೆ, ನನ್ನ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದೆ. ಈ ಕಾರಣಕ್ಕಾಗಿ, ನಾನು ಸರ್ವೋಚ್ಚ ನ್ಯಾಯಾಲಯಕ್ಕೆ (ಸುಪ್ರೀಂ ಕೋರ್ಟ್) ಮೇಲ್ಮನವಿ ಸಲ್ಲಿಸುತ್ತೇನೆ. ಕೇವಲ ಮರು ಮತ ಎಣಿಕೆಗೆ ಸೂಚಿಸಿದ್ದರೆ ನಾನು ಮೌನವಾಗಿರುತ್ತಿದ್ದೆ. ಈ ಹಿಂದೆಯೂ ಇದೇ ಮಾತನ್ನು ಹೇಳಿದ್ದೆ. ಆದರೆ, ನನ್ನ ಆಯ್ಕೆಯನ್ನು ಅಸಿಂಧುಗೊಳಿಸಿರುವ ಕಾರಣ, ಈಗ ಇಡೀ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇನೆ. ಅದಕ್ಕೆ 30 ದಿನಗಳ ಕಾಲಾವಕಾಶವಿದೆ. ನನ್ನ ಚುನಾವಣೆಯನ್ನೇ ಅಸಿಂಧುಗೊಳಿಸಿದ ಮೇಲೆ ಮರು ಮತ ಎಣಿಕೆಯ ಬದಲು ಮತ್ತೆ ಚುನಾವಣೆ ನಡೆಸಬಹುದಿತ್ತು,” ಎಂದು ನಂಜೇಗೌಡರು ಅಭಿಪ್ರಾಯಪಟ್ಟರು.

ಮತ ಕಳ್ಳತನ ಆರೋಪಕ್ಕೆ ಪ್ರತಿಕ್ರಿಯೆ

ಮಾಲೂರಿನಲ್ಲಿ ಮತ ಕಳ್ಳತನ ನಡೆದಿದೆ ಎಂಬ ಮಂಜುನಾಥಗೌಡರ ಆರೋಪಕ್ಕೆ ಅವರು ಪ್ರತ್ಯುತ್ತರ ನೀಡಿದರು: “2023ರಲ್ಲಿ ನಾನು ಶಾಸಕನಾಗಿದ್ದೆ ಎಂಬುದು ನಿಜ. ಆದರೆ, ವಿಧಾನಸಭೆ ಚುನಾವಣೆ ನಡೆದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಅವರದೇ ಮಂತ್ರಿಗಳು, ಸಂಸದರು, ಅಧಿಕಾರಿಗಳು ಮತ್ತು ಪೊಲೀಸರು ಕಾರ್ಯನಿರ್ವಹಿಸುತ್ತಿದ್ದರು. ಮತ ಎಣಿಕೆಯ ದಿನ ನಾನು ಮನೆಯಲ್ಲಿ ಟಿ.ವಿ ನೋಡುತ್ತಾ ಕುಳಿತಿದ್ದೆ. ನೀವೇ (ವಿರೋಧಿಗಳು) ಕಾವಲಿದ್ದು ಮತ ಎಣಿಕೆ ಮಾಡಿಸಿದ್ದೀರಿ. ಕೊನೆಯಲ್ಲಿ, ಅವರ ತಕರಾರಿನ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿಗಳು ವಿ.ವಿ.ಪ್ಯಾಟ್ ತಾಳೆ ಮಾಡಲು ಲಕ್ಕಿ ಡಿಪ್ ಎತ್ತಲು ಮುಂದಾದರು. ಮಂಜುನಾಥಗೌಡರ ಕೈಯಲ್ಲಿಯೇ ಲಾಟರಿ ಎತ್ತಿಸಿ, ನಂತರ ಫಲಿತಾಂಶ ಘೋಷಿಸಿದರು. ಈಗ ಆತ ಏನೇನೋ ಮಾತನಾಡುತ್ತಿದ್ದಾನೆ.”

“ನಾನು ಏಕೆ ವಿಡಿಯೋ ಅಥವಾ ಸಿ.ಸಿ.ಟಿ.ವಿ ದೃಶ್ಯಗಳನ್ನು ಕಳವು ಮಾಡಲಿ? ಆ ಚುನಾವಣೆಗೆ ಕೇಂದ್ರದಿಂದಲೂ ವೀಕ್ಷಕರು ಬಂದಿದ್ದರು. ಅವುಗಳನ್ನು ಸರಿಯಾಗಿ ಸಂರಕ್ಷಿಸಿಡುವುದು ಅಧಿಕಾರಿಗಳ ಜವಾಬ್ದಾರಿ. ಅಧಿಕಾರಿಗಳೇನು ನನ್ನ ಸಂಬಂಧಿಕರೇ?” ಎಂದು ಅವರು ಮರುಪ್ರಶ್ನಿಸಿದರು.

ಮಾಲೂರು ಕ್ಷೇತ್ರಕ್ಕೆ ಈಗ ಶಾಸಕರು ಇಲ್ಲ, ತಬ್ಬಲಿಯಾಗಿದೆ ಎಂಬ ಮಂಜುನಾಥಗೌಡರ ಹೇಳಿಕೆಗೆ ನಂಜೇಗೌಡರು ಪ್ರತಿರೋಧ ವ್ಯಕ್ತಪಡಿಸಿ, “ಹೈಕೋರ್ಟ್ ತನ್ನ ಆದೇಶಕ್ಕೆ 30 ದಿನಗಳ ತಡೆಯಾಜ್ಞೆ ನೀಡಿದೆ. ನಾನು ಈಗಲೂ ಶಾಸಕನೇ, ಅವರಂತೆ ಮಾಜಿ ಶಾಸಕನಲ್ಲ. ಮಾಲೂರು ಕ್ಷೇತ್ರವೂ ತಬ್ಬಲಿಯಲ್ಲ” ಎಂದು ತಿರುಗೇಟು ನೀಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page