ಹನಿಟ್ರ್ಯಾಪ್ ವಿವಾದದಲ್ಲಿ ಮೌನ
ಹಾಸನ : ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಂಬಂಧಿಸಿದ ಹನಿಟ್ರ್ಯಾಪ್ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ರೇವಣ್ಣ ನಿರಾಕರಿಸಿದರು. “ಈ ಬಗ್ಗೆ ಇವತ್ತು ಏನೂ ಮಾತನಾಡುವುದಿಲ್ಲ. ಸತೀಶ್ ಜಾರಕಿಹೋಳಿ ಏನು ಹೇಳಿದ್ದಾರೆ ಎಂಬುದನ್ನೂ ಚರ್ಚಿಸುವುದಿಲ್ಲ. ಸಮಯ ಬಂದಾಗ ಸವಿಸ್ತಾರವಾಗಿ ಎಲ್ಲವನ್ನೂ ಬಿಚ್ಚಿಡುತ್ತೇನೆ” ಎಂದು ಸಂಯಮದ ಪ್ರತಿಕ್ರಿಯೆ ನೀಡಿದರು.
ಶಾಸಕರ ಅಮಾನತು ರದ್ದುಗೊಳಿಸಿ
18 ಶಾಸಕರ ಅಮಾನತು ವಿಷಯಕ್ಕೆ ಸಂಬಂಧಿಸಿದಂತೆ, “ಸಣ್ಣಪುಟ್ಟ ಘಟನೆಗಳು ಸದನದಲ್ಲಿ ನಡೆಯುತ್ತವೆ. ಅದು ಅಂದಿನ ದಿನಕ್ಕೆ ಮುಗಿಯುತ್ತದೆ. ಸಭಾಧ್ಯಕ್ಷರು ತಕ್ಷಣ ಅಮಾನತು ಆದೇಶವನ್ನು ರದ್ದುಗೊಳಿಸಬೇಕು” ಎಂದು ರೇವಣ್ಣ ಒತ್ತಾಯಿಸಿದರು.
ಹಾಲಿನ ದರ ಏರಿಕೆ: ಸರ್ಕಾರಕ್ಕೆ ಬಿಟ್ಟಿದ್ದು:
ಹಾಲಿನ ದರ ಏರಿಕೆ ಮತ್ತು ರೈತರಿಗೆ ಸೂಕ್ತ ಬೆಲೆ ಒದಗಿಸುವ ವಿಷಯದಲ್ಲಿ ರಾಜ್ಯ ಸರ್ಕಾರದ ತೀರ್ಮಾನ ಎದುರು ನೋಡುತ್ತಿರುವುದಾಗಿ ಹಾಮೂಲ್ ಅಧ್ಯಕ್ಷ, ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.ಈ ಕುರಿತು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.”ಹಾಸನ ಹಾಲು ಒಕ್ಕೂಟಕ್ಕೆ ದಿನಕ್ಕೆ 14 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ 2.5 ಲಕ್ಷ ಲೀಟರ್ ಹಾಲನ್ನು ನಾವೇ ಮಾರಾಟ ಮಾಡುತ್ತೇವೆ. ಉಳಿದ 12 ಲಕ್ಷ ಲೀಟರ್ ಹಾಲನ್ನು ಮೌಲ್ಯ ವರ್ಧನೆಗೆ ಕಳುಹಿಸುತ್ತೇವೆ. ಆದರೆ, ಒಂದು ಲೀಟರ್ ಹಾಲನ್ನು ಪರಿವರ್ತನೆಗೆ ಕಳುಹಿಸಿದಾಗ ಸುಮಾರು 2.5 ರಿಂದ 3 ರೂಪಾಯಿ ನಷ್ಟ ಉಂಟಾಗುತ್ತಿದೆ” ಎಂದು ರೇವಣ್ಣ ವಿವರಿಸಿದರು.“ಈ ಎಲ್ಲ ವಿಷಯಗಳನ್ನು ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ. ರೈತರಿಗೆ ಎಷ್ಟು ದರ ನೀಡಬೇಕು ಎಂಬುದು ಸರ್ಕಾರಕ್ಕೆ ಬಿಟ್ಟಿದ್ದು, ಮುಖ್ಯಮಂತ್ರಿಗಳು ಏನು ನಿರ್ದೇಶನ ಕೊಡುತ್ತಾರೆ ಎಂಬುದನ್ನು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ” ಎಂದು ಅವರು ಹೇಳಿದರು.