Sunday, June 30, 2024

ಸತ್ಯ | ನ್ಯಾಯ |ಧರ್ಮ

ರಾಜ್ಯ ಕಾರ್ಯಾಕಾರಿಣಿಯನ್ನು ವಿಸರ್ಜಿಸಿ ಕುಮಾರಸ್ವಾಮಿಯವರನ್ನು ರಾಜ್ಯಾಧ್ಯಕ್ಷನನ್ನಾಗಿ ಘೋಷಿಸಿದ ಜೆಡಿಎಸ್

ಬೆಂಗಳೂರು: ಇತ್ತೀಚಿನ ರಾಜಕೀಯ ಬೆಳವಣಿಗೆಯ ಭಾಗವಾಗಿ ಜೆಡಿಎಸ್ ಪಕ್ಷದ ರಾಜ್ಯ ಕಾರ್ಯಕರಿಣಿ ಸಮಿತಿಯನ್ನು ಬರಖಾಸ್ತುಗೊಳಿಸಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ ಎಂ ಇಬ್ರಾಹಿಂ ಅವರನ್ನು ಕೆಳಗಿಳಿಸಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಕ್ಷದ ಹಿರಿಯ ನಾಯಕ ಎಚ್ ಡಿ ದೇವೇಗೌಡರು ತಮ್ಮ ಮಗ ಕುಮಾರಸ್ವಾಮಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಘೋಷಿಸಿದ್ದಾರೆ.

ಬಿಜೆಪಿ ಜೊತೆಗಿನ ಮೈತ್ರಿಯ ನಂತರ ಪಕ್ಷದೊಳಗಿದ್ದ ಭಿನ್ನಮತ ಇದರೊಂದಿಗೆ ಪೂರ್ತಿಯಾಗಿ ಹೊರಬಂದಂತಾಗಿದೆ. ಪಕ್ಷದ ಕಾರ್ಯ ಚಟುವಟಿಕೆಗಳನ್ನು ಸುಸೂತ್ರವಾಗಿ ನಡೆಸುವ ಸಲುವಾಗಿ ಅಧ್ಯಕ್ಷರನ್ನು ಬದಲಾಯಿಸಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಮೊನ್ನೆಯಷ್ಟೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಿ ಎಮ್ ಇಬ್ರಾಹಿಂ ಅವರು ತಾನೇ ಪಕ್ಷದ ಅಧ್ಯಕ್ಷನಾಗಿದ್ದು ನಾನು ಘೋಷಿಸಿದೆ ಬಿಜೆಪಿಯ ಜೊತೆಗಿನ ಮೈತ್ರಿ ಅಧಿಕೃತವಲ್ಲ. ತಾನು ಸಮಾನ ಮನಸ್ಕ ಶಾಸಕರು ಮತ್ತು ನಾಯಕರೊಡನೆ ಚರ್ಚಿಸಿ ಈ ಕುರಿತು ತೀರ್ಮಾನಕ್ಕೆ ಬರುವುದಾಗಿ ಘೋಷಿಸಿದ್ದರು.

ಈ ನಡುವೆ ಸಿ ಎಮ್ ಇಬ್ರಾಹಿಮ್ ಕುಮಾರಸ್ವಾಮಿಯವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿದ್ದಾರೆ ಎನ್ನುವ ಗುಸುಗುಸು ಕೂಡಾ ಹರಡಿತ್ತು. ಈಗ ಅವರನ್ನೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದರೊಂದಿಗೆ ಗುಸುಗುಸುಗಳಿಗೆ ತೆರೆಬಿದ್ದಂತಾಗಿದೆ.

ಇನ್ನು ಸಿ ಎಮ್ ಇಬ್ರಾಹಿಂ ಅವರ ಮುಂದಿನ ನಡೆ ಏನಿರಬಹುದೆನ್ನುವ ಕುತೂಹಲವಷ್ಟೇ ರಾಜಕೀಯ ಪಡಸಾಲೆಗಳಲ್ಲಿ ಉಳಿದಿದೆ.

ಸಣ್ಣ ಪಕ್ಷಗಳನ್ನು ಒಡೆದು ನುಂಗಿ ನೀರು ಕುಡಿಯುವದರಲ್ಲಿ ಹೆಸರುವಾಸಿಯಾಗಿರುವ ಬಿಜೆಪಿ ಎಐಎಡಿಎಮ್‌ಕೆ, ಶಿವಸೇನಾ, ಎನ್‌ಸಿಪಿ ನಂತರ ಜೆಡಿಎಸ್ ಪಕ್ಷವನ್ನು ಚಪ್ಪಾನುಚೂರು ಮಾಡುವುದರಲ್ಲಿ ಯಶಸ್ವಿಯಾಗಿದದೆ. ಮುಸ್ಲಿಂ ಮತ್ತು ಒಕ್ಕಲಿಗ ಮತಗಳ ಕಾಂಬಿನೇಷನ್ ಮೂಲಕ ಕೆಲವು ಸೀಟುಗಳನ್ನು ಗೆಲ್ಲುತ್ತಿದ್ದ ಜೆಡಿಎಸ್ ಇನ್ನು ಮುಂದೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಬೇಕಾಗುತ್ತದೆ ಎನ್ನುವುದು ಸದ್ಯದ ರಾಜಕೀಯ ಪರಿಣಿತರ ಅಭಿಪ್ರಾಯ.

Related Articles

ಇತ್ತೀಚಿನ ಸುದ್ದಿಗಳು