Saturday, July 12, 2025

ಸತ್ಯ | ನ್ಯಾಯ |ಧರ್ಮ

ಎಎಪಿ ಅಧಿಕಾರಕ್ಕೆ ಬಂದರೆ ಶೀಘ್ರವೇ ಒಪಿಎಸ್‌ ಜಾರಿ: ಭಾಸ್ಕರ್‌ ರಾವ್

ಬೆಂಗಳೂರು: ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಮರುಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಆಮ್‌ ಆದ್ಮಿ ಪಾರ್ಟಿ ಬೆಂಬಲ ಸೂಚಿಸಿದ್ದು, ಪಕ್ಷದ ಮುಖಂಡರೊಂದಿಗೆ ಫ್ರೀಡಂ ಪಾರ್ಕ್‌ಗೆ ತೆರಳಿದ ರಾಜ್ಯ ಎಎಪಿ ಉಪಾಧ್ಯಕ್ಷ ಭಾಸ್ಕರ್‌ ರಾವ್‌ರವರು ರಾಜ್ಯದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಶೀಘ್ರವೇ ಎನ್‌ಪಿಎಸ್‌ ರದ್ದುಪಡಿಸಿ, ಒಪಿಎಸ್‌ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿದ ಭಾಸ್ಕರ್‌ ರಾವ್‌, ʼಅಧಿಕಾರ ಸಿಕ್ಕರೆ ಒಪಿಎಸ್‌ ಜಾರಿಗೆ ತರುವುದಾಗಿ ಪಂಜಾಬ್‌ ಚುನಾವಣೆ ವೇಳೆ ಆಮ್‌ ಆದ್ಮಿ ಪಾರ್ಟಿಯು ಗ್ಯಾರೆಂಟಿ ನೀಡಿತ್ತು. ಅದರಂತೆ ಅಲ್ಲಿನ ಸಚಿವ ಸಂಪುಟವು ಒಪಿಎಸ್‌ ಜಾರಿಗೆ ನವೆಂಬರ್‌ ತಿಂಗಳಿನಲ್ಲಿ ಅನುಮೋದನೆ ನೀಡಿ, ಸರ್ಕಾರವು ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದೆ. ಗುಜರಾತ್‌ನಲ್ಲಿ ಕೂಡ ಒಪಿಎಸ್‌ ಜಾರಿ ಕುರಿತು ಎಎಪಿ ಗ್ಯಾರೆಂಟಿ ನೀಡಿತ್ತಾದರೂ ಅಲ್ಲಿ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಕರ್ನಾಟಕದಲ್ಲಿ ನಾವು ಅಧಿಕಾರಕ್ಕೆ ಬಂದರೆ ಒಪಿಎಸ್‌ ಜಾರಿಗೆ ತರಲು ಬದ್ಧರಾಗಿದ್ದೇವೆ. ಚುನಾವಣಾ ಪ್ರಣಾಳಿಕೆ ಹಾಗೂ ಜನರಿಗೆ ನೀಡುವ ಗ್ಯಾರೆಂಟಿ ಕಾರ್ಡ್‌ನಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸುತ್ತೇವೆ. ಎಎಪಿಯು ಸರ್ಕಾರಿ ನೌಕರರ ಹಿತ ಕಾಪಾಡಲು ಸದಾ ಬದ್ಧವಾಗಿರುತ್ತದೆʼ ಎಂದು ಹೇಳಿದ್ದಾರೆ.

ಆಮ್‌ ಆದ್ಮಿ ಪಾರ್ಟಿ ಮುಖಂಡರು ಹಾಗೂ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಬ್ರಿಜೇಶ್‌ ಕಾಳಪ್ಪ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳಿಗೆ ಬಂಡವಾಳಶಾಹಿ ಉದ್ಯಮಿಗಳು ಮಾತ್ರ ಮುಖ್ಯವಾಗಿದ್ದಾರೆ. ನೌಕರರು, ಕಾರ್ಮಿಕರು, ರೈತರು, ಸಣ್ಣಪುಟ್ಟ ಉದ್ದಿಮೆದಾರರು ಸೇರಿದಂತೆ ಜನಸಾಮಾನ್ಯರ ಅಗತ್ಯಗಳು ಬಿಜೆಪಿ ಸರ್ಕಾರಗಳಿಗೆ ಲೆಕ್ಕಕ್ಕೇ ಇಲ್ಲ. ಇಷ್ಟು ದಿನ ಬೇರೆಬೇರೆ ವರ್ಗದ ಜನರು ಪ್ರತಿಭಟನೆ ನಡೆಸುತ್ತಿದ್ದು, ಈಗ ಸರ್ಕಾರಿ ನೌಕರರೇ ಬೀದಿಗಿಳಿಯುವ ಸ್ಥಿತಿ ಬಂದಿದೆ. ಸರ್ಕಾರಿ ನೌಕರರ ಬಗ್ಗೆ ಬಿಜೆಪಿ ನಾಯಕರಿಗೆ ಸ್ವಲ್ಪವಾದರೂ ಕಾಳಜಿಯಿದ್ದರೆ, ಶೀಘ್ರವೇ ಎನ್‌ಪಿಎಸ್‌ ರದ್ದುಪಡಿಸಿ ಒಪಿಎಸ್‌ ಜಾರಿಗೆ ತರಲಿ’ ಎಂದು ಆಗ್ರಹಿಸಿದ್ದಾರೆ.

ಆಮ್‌ ಆದ್ಮಿ ಪಾರ್ಟಿಯ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ರವಿಶಂಕರ್‌ ಮಾತನಾಡಿ, ʼ2006ರ ನಂತರ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಎನ್‌ಪಿಎಸ್‌ನಿಂದಾಗಿ ಅಭದ್ರತೆ ಕಾಡುತ್ತಿದೆ. ನಿವೃತ್ತಿ ನಂತರದ ಬದುಕಿನ ಬಗ್ಗೆ ಅವರು ಚಿಂತೆಗೀಡಾಗಿದ್ದಾರೆ. ಎನ್‌ಪಿಎಸ್‌ ರದ್ದುಪಡಿಸಿ ಒಪಿಎಸ್‌ ಜಾರಿಗೊಳಿಸುವುದರಿಂದ ಸರ್ಕಾರಕ್ಕೆ ಹೆಚ್ಚೇನೂ ಆರ್ಥಿಕ ಹೊರೆ ಆಗುವುದಿಲ್ಲ. ಎನ್‌ಪಿಎಸ್‌ ಟ್ರಸ್ಟ್‌ನಲ್ಲಿ ವಂತಿಗೆ ಮೊತ್ತವೇ 16 ಸಾವಿರ ಕೋಟಿಗೂ ಹೆಚ್ಚಿದ್ದು, ಒಪಿಎಸ್‌ ಜಾರಿಯಾದರೆ ವಂತಿಗೆ ಕಟ್ಟುವುದು ತಪ್ಪುತ್ತದೆ. ಎನ್‌ಪಿಎಸ್‌ ರದ್ದುಗೊಳಿಸಿದಾಗ ಬಡ್ಡಿಸಮೇತ ವಾಪಸ್‌ ಬರುವ ವಂತಿಗೆ ಹಣವನ್ನು ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದುʼ ಎಂದು ಹೇಳಿದ್ದಾರೆ.

ಈ ವೇಳೆ ಆಮ್‌ ಆದ್ಮಿ ಪಾರ್ಟಿ ಮುಖಂಡರಾದ ಸುರೇಶ್‌ ರಾಥೋಡ್‌, ಮೋಹನ್‌ ದಾಸರಿ, ಜ್ಯೋತೀಶ್‌ ಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page