ನವದೆಹಲಿ: ಬಿಜೆಪಿ ಮುಸಲ್ಮಾನರ ವಿರುದ್ಧ ದ್ವೇಷದಿಂದ ಗೆಲ್ಲುತ್ತಾ ಬಂದಿದ್ದರೆ ಕಾಂಗ್ರೆಸ್ ಮುಸಲ್ಮಾನರನ್ನು ಓಲೈಸಿ ಅವರ ಮತಗಳಿಂದ ಗೆಲ್ಲುತ್ತಿದೆ. ಆದರೆ, ಕಾಂಗ್ರೆಸ್ ಸಹ ಮುಸಲ್ಮಾನರಿಗಾಗಿ ಏನು ಮಾಡುತ್ತಿಲ್ಲ ಎಂದು ಹೈದರಾಬಾದ್ ಸಂಸದ ಅಸದುದ್ದೀನ್ ಓವೈಸಿ ಹರಿಹಾಯ್ದಿದ್ದಾರೆ.
ಉವೈಸಿ ಮತ್ತೊಮ್ಮೆ ಸಂಸತ್ತಿನಲ್ಲಿ ತಮ್ಮ ಶಕ್ತಿಯುತ ಮತ್ತು ಪ್ರಭಾವಶಾಲಿ ಭಾಷಣದಿಂದ ಸುದ್ದಿಯಾಗಿದ್ದಾರೆ. ಈ ಸಲ ಆಡಳಿತರೂಢ ಪಕ್ಷ ಮತ್ತು ವಿಪಕ್ಷ ಒಕ್ಕೂಟ ಎರಡನ್ನೂ ಒಟ್ಟೊಟ್ಟಿಗೆ ತರಾಟೆಗೆ ತೆಗೆದುಕೊಂಡಿರುವುದು ವಿಶೇಷ.
ರಾಷ್ಟ್ರಪತಿಗಳ ಭಾಷಣದ ವಂದನ ನಿರ್ಣಯದ ಬಗ್ಗೆ ಮಂಗಳವಾರ ಮಾತಾಡಲು ಎದ್ದು ನಿಂತ ಓವೈಸಿ, “ಮುಸ್ಲಿಮರನ್ನು ಎಲ್ಲರೂ ಗಮನಿಸುತ್ತಾರೆ, ಮುಸ್ಲಿಮರ ಕುರಿತಾಗಿ ಎಲ್ಲರೂ ಮಾತಾಡ್ತಾರೆ, ಆದರೆ ಮುಸ್ಲಿಮರು ಹೇಳ್ತಾರೆ ಅಂತ ಯಾರೂ ಕೇಳಲ್ಲ ಎಂದರು.
ಓವೈಸಿ ಭಾಷಣದ ಸಾರ ರೂಪ: ಯಾರ ಕುರಿತಾಗಿ ಪ್ರಧಾನಿ ಮೋದಿ ನುಸುಳುಕೋರ ಎಂದಿದ್ದರೊ, ಇವರು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಾರೆ ಎಂದು ಆರೋಪ ಎದುರಿಸುತ್ತಿರುವರೋ, ಯಾರು ಗುಂಪು ಹತ್ಯೆಯಿಂದ ಕೊಲ್ಲಲ್ಪಡುವ ಯುವಕರಿರುವರೋ, ಆಡಳಿತದ ಕಠೋರ ಕಾನೂನುಗಳ ಕಾರಣದಿಂದಾಗಿ ಯಾರ ಮಕ್ಕಳು ಜೈಲಿನಲ್ಲಿದ್ದಾರೋ ಅಂಥವರ ಪರವಾಗಿ ನಾನು ಮಾತಾಡುತ್ತೇನೆ ಎಂದು ಓವೈಸಿ ತಮ್ಮ ಮಾತುಗಳನ್ನು ಪ್ರಾರಂಭಿಸಿದರು.
ಎನ್‌ಡಿಎ ಸರಕಾರದತ್ತ ತಮ್ಮ ವಾಗ್ದಾಳಿಯನ್ನು ಮುಂದುವರೆಸುತ್ತಲೇ ಅವರು ವಿಪಕ್ಷದ ಕಡೆಗೆ ವಾಗ್ದಾಳಿ ಪ್ರಾರಂಭಿಸಿದರು. ಕಾಂಗ್ರೆಸ್ಸಿನವರು ಮುಸಲ್ಮಾನರ ಮತ ಪಡೆದು ಗೆಲ್ಲುತ್ತಾರೆ, ಆದರೆ ಅವರಿಗಾಗಿ ಲೋಕಸಭೆಯ ಟಿಕೆಟ್ ಕೊಡಲ್ಲ. ಕೇವಲ ನಾಲ್ಕು ಶೇಕಡದಷ್ಟು ಮುಸಲ್ಮಾನರು ಮಾತ್ರ ಗೆದ್ದು ಬಂದಿದ್ದಾರೆ ಎಂದು ವಿಪಕ್ಷವನ್ನೂ ಉವೈಸಿ ತರಾಟೆಗೆ ತೆಗೆದುಕೊಂಡರು .
ಸಂವಿಧಾನ ಕೇವಲ ಚುಂಬಿಸುವ ಪುಸ್ತಕ ಅಲ್ಲ ಎಂದ ಉವೈಸಿ, ಸಂವಿಧಾನ ನಮ್ಮ ದೇಶದ ನಿರ್ಮಾತೃಗಳ ಕನಸಾಗಿತ್ತು ಎಂದರು. ನಮ್ಮ ದೇಶದ ಪ್ರಜಾಪ್ರಭುತ್ವ ಯಾವ ರೀತಿಯಲ್ಲಿ ನಡೆಯಬೇಕು ಎಂಬುದಕ್ಕೆ ರೂಪುರೇಷೆ ಅದು ಎಂದೂ ನೆನಪಿಸಿದರು. ದೇಶವನ್ನು ನಡೆಸುವಲ್ಲಿ ಎಲ್ಲಾ ಸಮುದಾಯಗಳ ಪಾತ್ರವಿರಬೇಕು ಎಂಬ ಕನಸು ಹೊತ್ತಿಗೆಯೇ ಸಂವಿಧಾನ. ಆದರೆ, ಲೋಕಸಭೆಯಲ್ಲಿ ಕೇವಲ ನಾಲ್ಕು ಶೇಖಡಾ ಮುಸಲ್ಮಾನರು ಚುನಾಯಿತರಾಗಿ ಬರುತ್ತಾರೆ ಎಂದು ಓವೈಸಿ ಬೇಸರ ವ್ಯಕ್ತಪಡಿಸಿದರು.
ದೇಶಪ್ರೇಮದ ಬಗ್ಗೆ ಮಾತನಾಡುವವರು ದೇಶದ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಸಂವಾದಗಳನ್ನು ಓದಿನೋಡಬೇಕಿದೆ. ಜಾತ್ಯತೀತತೆ ಕುರಿತಾಗಿ ಸರ್ದಾರ್ ಹುಕುಂ ಸಿಂಗ್, ಪಂಡಿತ್ ನೆಹರೂ, ಎಚ್ ಸಿ ಮುಖರ್ಜಿ ಯಂತಹ ನಾಯಕರು ಏನು ಹೇಳಿದ್ದರು ಎಂಬುದನ್ನು ಒಮ್ಮೆ ಓದಿ ನೋಡಿ ಎಂದು ಹೇಳಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದರು.
ಬಿಜೆಪಿಯು ನನ್ನನ್ನು ಮಾಯ ಮಾಡಿಬಿಡಲು ಪ್ರಯತ್ನಿಸುತ್ತಿದೆ. ಇನ್ನೂ ಕೆಲವು ಪಕ್ಷಗಳಿಗೆ ನನ್ನ ಅಸ್ತಿತ್ವ ಕೇವಲ ಮತ ಚಲಾಯಿಸುವಷ್ಟಕ್ಕೆ ಮಾತ್ರ. ಇದೇನಾ ಸಾಮಾಜಿಕ ನ್ಯಾಯ ಎಂದು ಪ್ರಶ್ನಿಸಿದ ಉವೈಸಿ, ಲೋಕಸಭೆಯಲ್ಲಿ ಈಗ ಓಬಿಸಿ ಸಂಸದರು ಮೇಲ್ಜಾತಿಯ ಸಂಸದರಷ್ಟೇ ಇದ್ದಾರೆ. ಆದರೆ 14% ಇರುವ ಮುಸಲ್ಮಾನರು ಕೇವಲ ನಾಲ್ಕು ಮಾತ್ರ ಇದ್ದಾರೆ. ಇದನ್ನು ಎಲ್ಲರೂ ಗಮನಿಸಬೇಕು ಎಂದರು.
ಗುಂಪು ಹತ್ಯೆ ಮತ್ತು ಮಧ್ಯಪ್ರದೇಶದಲ್ಲಿ ಯಾವ ರೀತಿಯಲ್ಲಿ ಮುಸಲ್ಮಾನರ ಮನೆಗಳನ್ನು ಬುಲ್ಡೋಸ್ ಮಾಡಲಾಯಿತು ಎಂಬುದರ ಬಗ್ಗೆ ಎಲ್ಲರಿಗೂ ಗೊತ್ತು. ನರೇಂದ್ರ ಮೋದಿಯವರಿಗೆ ಸಿಕ್ಕಿರುವಂತಹ ಜನಾದೇಶ ಕೇವಲ ಮುಸಲ್ಮಾನರ ಮೇಲಿರುವ ದ್ವೇಷದ ಕಾರಣದಿಂದ ಮಾತ್ರ ಸಿಕ್ಕಿರುವಂಥದ್ದು ಎಂದು ಓವೈಸಿ ದೂರಿದರು.
ಮೋದಿ ಸರಕಾರದ ಆಡಳಿತದಲ್ಲಿ 75 ಲಕ್ಷ ವಿದ್ಯಾರ್ಥಿಗಳ ಜೀವನ ನಾಶವಾಗಿದೆ. ನಿರುದ್ಯೋಗದ ಕಾರಣದಿಂದಾಗಿ ಯುದ್ಧಗ್ರಸ್ತ ರಷ್ಯಾಕ್ಕೆ ಹೋಗಿ ನಮ್ಮ ಯುವಕರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಗೆ ಹೋಗಿ ಉದ್ಯೋಗ ಪಡೆಯುವುದಕ್ಕೆ ಭಾರತದಲ್ಲಿ ಕ್ಯಾಂಪ್ ಗಳನ್ನು ನಡೆಸಲಾಗುತ್ತಿದೆ ಎಂದು ಅವರು ದೂರಿದರು.