Sunday, June 23, 2024

ಸತ್ಯ | ನ್ಯಾಯ |ಧರ್ಮ

ಗಂಡುಸ್ರು ಮುಟ್ಟುದ್ರೆ ಮಕ್ಳಯ್ತವೆ…

(ಈ ವರೆಗೆ…)

ಒಲ್ಲದ ಮನಸಿನಿಂದಲೇ ಗಂಗೆ ಮೋಹನನೊಂದಿಗೆ ಸಿನೆಮಾಕ್ಕೆ ಹೊರಡುತ್ತಾಳೆ. ಎಲ್ಲೂ ಮೋಹನ ತನ್ನನ್ನು ಸ್ಪರ್ಶಿಸಲು ಅವಕಾಶ ನೀಡುವುದಿಲ್ಲ. ಪೆಚ್ಚಾದ ಮೋಹನ ತನ್ನ ರಸಿಕತೆಯನ್ನು ಒಳಗೆ ಅದುಮಿಕೊಂಡೇ ಗಂಗೆಯನ್ನು ತನ್ನತ್ತ ಸೆಳೆಯುವ ಪ್ರಯತ್ನ ಮುಂದುವರೆಸಿದ. ಮೋಹನನ ಮುಂದೇನು ಮಾಡಿದ ? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಮೂವತ್ತೆಂಟನೆಯ ಕಂತು.

ಸಿನಿಮಾ ನೋಡಿ ಗಂಗೆಯೊಂದಿಗೆ ಹೊರಬಂದ ಮೋಹನ ತನ್ನ ಬಲಗೈಗೆ ಕಟ್ಟಿ ಕೊಂಡಿದ್ದ  ಗಡಿಯಾರ ನೋಡಿ “ಕೊನೆಯ ಬಸ್ ಬರೋದಕ್ಕೆ ಇನ್ನೂ ಒಂದುವರೆ ಗಂಟೆ ಇದೆ ಗಂಗು ಅವ್ರೆ ಸ್ವಲ್ಪ ಹೊತ್ತು ಪೇಟೆ ಸುತ್ತಾಡಿಕೊಂಡು ಬರೋಣ..?” ಎಂದು ಕೇಳಿದ. ಪೇಟೆ ಎಂದ ಕೂಡಲೆ ಪುಟಿದು ನಿಂತ ಗಂಗೆ  “ಹಂಗಿದ್ರೆ ನಾನ್ ಕೇಳಿದ್ನೆಲ್ಲ ಕೊಡುಸ್ತಿರ ಮತೆ” ಎಂದು ಸಣ್ಣ ಹುಡುಗಿಯಂತೆ ಕಣ್ಣರಳಿಸಿ ಕೇಳಿದಳು. ಅವಳ ಮುಗ್ಧತೆಗೆ  ಮನಸೋತ ಮೋಹನನಿಗೆ ಒಮ್ಮೆಲೆ ಅವಳನ್ನು ಗಟ್ಟಿಯಾಗಿ ತಬ್ಬಿ ಬಿಡಬೇಕಿನಿಸಿತು. ಕೂಡಲೆ ಗಂಗೆ ಹೇಳಿದ ಕಾರದಪುಡಿಯ ಕತೆ, ಕೊಡಲಿ ಕಾವುಗೋಲಿನ ಹೊಡೆತ, ಬಸ್ಸಿನಲ್ಲಿ ಕುಳಿತ ದಢೂತಿ ಹೆಂಗಸಿನ ಮೆಣಸಿನಂತಹ ಮಾತುಗಳೆಲ್ಲಾ ಕಣ್ಣ ಮುಂದೆ ಬಂದು ಹಾಗೆ ತಣ್ಣಗಾದ. ಬೆಪ್ಪನಂತೆ ಹಲ್ಲು ಕಿರಿದು “ಅದಕ್ಕೇನಂತೆ ಬನ್ನಿ ಕೊಡುಸ್ತೀನಿ” ಎಂದು ಹೇಳಿದ. 

ಗಂಗೆ ದೊಡ್ಡವಳಾದ ಹೊಸದರಲ್ಲಿ ತಾನು ಕೂಡ ತನ್ನ ವಾರಿಗೆಯ ಗೆಳತಿಯರಂತೆ ಘಮ್ಮೆನ್ನುವ ಸ್ನೋ, ಪೌಡರ್ ಹಾಕಿ ಬೆಳ್ಳಗೆ ಕಾಣಬೇಕು ಎಂದು ಬಹಳ ಆಸೆ ಪಟ್ಟಿದ್ದಳು. ಹಾಗಾಗಿ ಅವ್ವ ಮತ್ತು ಅಣ್ಣಂದಿರಲ್ಲಿ ” ನಿಮ್ಮ್ ದಮ್ಮಯ್ಯ ನನಗೂ ಒಂದು ಸ್ನೋ ಪೌಡ್ರು ತನ್ಕೊಡಿ” ಎಂದು ಕಾಡಿ ಬೇಡಿ ಸೋತಿದ್ದಳು. ಇವಳ ಯಾವ ಬೇಡಿಕೆಗೂ ಕ್ಯಾರೆಕೆತ್ತೆ ಎನ್ನದ ಅವ್ವ, ಅಣ್ಣಂದಿರು ” ಸ್ನೋ ಪೌಡ್ರು ಹಾಕ್ಕೊಂಡು ಯಾವನ್ನ ನೋಡಕ್ ಹೋಗ್ಬೇಕೋ ಕಾಣೆ, ನಡಿಣೆ ಕ್ಯಾಮೆ ನೋಡು” ಎಂದು ನಾಯಿ ಅಟ್ಟುವಂತೆ ಅಟ್ಟಿದ್ದರು. ಮನಸ್ಸಿಗೆ ಬಂದಿದ್ದನ್ನು ಮಾಡಿಯೇ ತೀರುತ್ತಿದ್ದ ಗಂಗೆ, ರೊಚ್ಚತ್ತಿದವಳಂತೆ ಹಿಂದಿನ ಮನೆಯ ರುದ್ರಿಯ ಅವ್ವನಿಗೆ ಕದ್ದು ಮುಚ್ಚಿ ನಾಕು  ಸೇರು ರಾಗಿ ಮಾರಿ ಸ್ನೋ ಪೌಡರ್ ತರಿಸಿಕೊಂಡಿದ್ದಳು. ಯಾರಿಗೂ ಗೊತ್ತಾಗದಂತೆ ಅದನ್ನು ಆಗೊಮ್ಮೆ ಈಗೊಮ್ಮೆ ಹಾಕುತ್ತಾ ವರ್ಷಾನುಗಟ್ಟಲೆ ಬಳಸಿ ಆನಂದಿಸಿದ್ದಳು. ಮದುವೆ ದಿನ ಆಚೆ ಮನೆ ಅತ್ತೆಯ ಮಗಳು ರಾಧಿಯೇ “ಇವತ್ತಾದ್ರು ಒಂದೀಟ್ ಅಚ್ಕಟ್ಟಾಗಿ ರೆಡಿಯಾಗು ಬಾ ಗಂಗೂ” ಎಂದು ಹೇಳಿ ತನ್ನದೇ ಸ್ನೋ ಪೌಡರ್ ಹಚ್ಚಿ ಬೆಳ್ಳಗೆ ಮಾಡಿ ರಿಜಿಸ್ಟರ್ ಆಫೀಸಿಗೆ  ಕಳಿಸಿದ್ದಳು‌.

ಈಗ ಕಣ್ಣಿನ ತುಂಬಾ ಅದೇ ಸ್ನೋ ಪೌಡರ್  ಹೊತ್ತು ಸೋಪಾನ ಪೇಟೆಯ ಫ್ಯಾನ್ಸಿ ಅಂಗಡಿಯೊಳಗೆ ನುಗ್ಗಿದಳು ಗಂಗೆ. ಗಾಜಿನ ಪೆಟ್ಟಿಗೆಯೊಳಗೆ ಸಾಲಾಗಿ ಜೋಡಿಸಿದ್ದ ಸ್ನೋ ಪೌಡರಿನತ್ತ ಕೈತೋರಿಸಿ “ಅದುನ್ನ್  ವಸಿ ಕೊಡಣ್ಣೋ “ಎಂದು ಕೇಳಿ ಪಡೆದಳು.  ಪೌಡರಿನ ಮುಚ್ಚಳವನ್ನು ತೆರೆದು  ಅದರ ಪರಿಮಳ ನೋಡಿ “ಆಹಾ.. ಇದ್ರು ಘಮ್ಲು ನೋಡಿಯಂತೆ ಎಷ್ಟ್ ಚನ್ನಾಗೈತೆ” ಎಂದು ಮೋಹನನ ಮೂಗಿನತ್ತ ಸರಕ್ಕನೆ ಹಿಡಿದಳು. ಇವಳು ಹಿಡಿದ ಬಿರುಸಿಗೆ ಪೌಡರ್ ಡಬ್ಬದ ಮೂತಿ ಮೋಹನನ ಮೂಗಿಗೆ ಪಚಕ್ಕನೆ ತಾಕಿ, ಮೂಗಿನ ತುದಿ ಒಮ್ಮೆಲೆ ಚುಳ್ ಎಂದು ಒಂದರ ಮೇಲೊಂದು ಸೀನುಗಳು ಸತತವಾಗಿ ಹೊರಬರತೊಡಗಿದವು. ಇದರಿಂದ ಕೋಪ ಉಕ್ಕಿ ಕೆಂಪಾದ ಮೋಹನ ” ಕಾಮನ್ ಸೆನ್ಸ್ ಇಲ್ವೇನ್ರಿ ನಿಮಗೆ, ಒಂಚೂರ್ ನೊಡ್ಕೊಳ್ಳೋಕಾಗಲ್ವ”  ಎಂದು ಗಡುಸಾಗಿ ಹೇಳಿದ. ಕೊನೆಗೆ ಅಂಗಡಿ ಯಜಮಾನನೆ “ಪಾಪ ಹೋಗ್ಲಿ ಬಿಡಿಸರ್ ಅವರಿಗೆ ಗೊತ್ತಾಗ್ಲಿಲ್ಲ” ಎಂದು ಸಮಾಧಾನಿಸ ಬೇಕಾಯಿತು. ಪಾಪಪ್ರಜ್ಞೆಯಿಂದ ಪೆಚ್ಚಾದ ಗಂಗೆ ಹಲ್ಲು ಗಿಂಜುತ್ತಾ “ಅಯ್ಯೋ… ನೋವಗ್ ಬುಡ್ತಾ…. ತಪ್ಪಾಯ್ತು ಕನಿ ನಂಗೊತ್ತಾಗ್ಲಿಲ್ಲ “ಎಂದು ಪೇಚಾಡುತ್ತಾ, ತಾನು ಹಿಡಿದ ಪೌಡರ್ ಸ್ನೋ ಡಬ್ಬಗಳನ್ನು ಅಂಗಡಿಯವನಿಗೆ ಹಿಂತಿರುಗಿಸಿ “ಇನ್ನೊಂದಪ ಬತ್ತಿವಿ ಕನಣ್ಣ ಈಗ ಬ್ಯಾಡ” ಎಂದು ಹೇಳಿ ಹೊರ ಬಂದು ನಿಂತಳು.

ಗಂಗೆ ಹೊರ ಹೋಗಿದ್ದನ್ನು ಕಂಡ ಮೋಹನ ಅವಳ ಹಿಂದೆಯೇ ಓಡಿಹೋಗಿ “ಹೋಗ್ಲಿ ಬಿಡಿ… ತುಂಬಾ ನೋವಾಗ್ಬಿಡ್ತು ಹಾಗಾಗಿ ಕೋಪ ಬಂತಷ್ಟೇ. ಬನ್ನಿ ನಿಮಗೆ ಏನೇನು ಬೇಕೊ ಎಲ್ಲವನ್ನು ತಕ್ಕೊಳ್ಳಿ ಪ್ಲೀಸ್  ಬೇಡ ಅನ್ಬೇಡಿ” ಎಂದು ವಿನಂತಿಸಿ ಅವಳನ್ನು ಒಳ ಕರೆದುಕೊಂಡು ಬಂದ. ಮೋಹನನ ಹಿಂಸೆಗೆ ಒಳ ಬಂದ ಗಂಗೆಯೊಳಗೆ ಈಗ ಮೊದಲಿನ ಉತ್ಸಾಹ ಕಾಣಲಿಲ್ಲ. ಹಾಗಾಗಿ ಮೋಹನನೆ ಅವಳು ಹಿಡಿದಿದ್ದ ಸ್ನೋ ಪೌಡರ್ ಜೊತೆಗೆ ಬಣ್ಣ ಬಣ್ಣದ ಹಣೆಯ ಬೊಟ್ಟು, ಹೇರ್ ಪಿನ್, ಬಳೆ, ಒಂದೆರಡು ನೈಲ್ ಪಾಲಿಷ್ ಬಾಟಲ್, ಕಣ್ಣುಕಪ್ಪು, ಐಬ್ರೋ ಪೆನ್ಸಿಲ್, ತಿಳಿ ಕೆಂಪಿನ ಲಿಪ್ಸ್ಟಿಕ್, ಒಂದು ಉದ್ದನೆಯ ವೈಟ್ ಮೆಟಲಿನ ಕೊರಳ ಸರವನ್ನು ಪ್ಯಾಕ್ ಮಾಡಲು ಹೇಳಿದ. ಇದನ್ನೆಲ್ಲಾ ನೋಡುತ್ತಾ ನಿಂತಿದ್ದ ಗಂಗೆ “ಅಯ್ಯೋ ಈ ಕ್ಯೂಟೆಕ್ಸ್ , ಕಣ್ಕಪ್ಪು, ಲಿಪ್ಸ್ಟಿಕ್ಕು , ಕೊಳ್ ಚೈನು ಎಲ್ಲನೂ ನಾನು ಹಾಕದಿಲ್ಲ ತಗ್ದ್ ಬುಡಿ”  ಎಂದು ಹೇಳಿದಳು. “ಗಂಗೂ ಅವ್ರೆ ನೀವು ಇದನ್ನೆಲ್ಲ ಹಾಕ್ಕೊಂಡು ರೆಡಿಯಾದ್ರೆ ಎಷ್ಟು ಚೆನ್ನಾಗಿ ಕಾಣ್ತೀರ ಗೊತ್ತಾ. ಇವೆಲ್ಲ ನಿಮ್ಮ ಬ್ಯೂಟಿನ ಇನ್ನಷ್ಟು ಹೆಚ್ಚಿಸುತ್ತೆ. ನನ್ ಫ್ರೆಂಡ್ಸ್ ತುಂಬಾ ಜನ ಹುಡುಗಿಯರಿದ್ದಾರೆ ಅವರೆಲ್ಲಾ ಹೇಗೆ ಡ್ರೆಸ್ ಮಾಡ್ಕೊತಾರೆ ಗೊತ್ತಾ. ನನ್ನ ಹೆಂಡ್ತಿಯಾಗಿ ನೀವು ಕೂಡ ಅವರ ಹಾಗೆ ಇರಬೇಕು ಅನ್ನೋದು ನನ್ನ ಆಸೆ. ಬಳಸ್ತ ಬಳಸ್ತ ರೂಢಿಯಾಗುತ್ತೆ ಬಿಡಿ” ಎಂದು ಹೇಳಿ ಎಲ್ಲವನ್ನು ಪ್ಯಾಕ್ ಮಾಡಿಸಿಕೊಂಡು ಅಂಗಡಿಯಿಂದ ಹೊರಬಂದ.

ಮೋಹನ ತಾನು ಯಾವಾಗಲೂ ಕೊಂಡುಕೊಳ್ಳುತ್ತಿದ್ದ ಮತ್ತೊಂದು ಮಗ್ಗುಲಿನಲ್ಲಿದ್ದ  ಬಟ್ಟೆ ಅಂಗಡಿಗೆ ಗಂಗೆಯನ್ನು ಕರೆದುಕೊಂಡು ಬಂದ. ಮೋಹನನನ್ನು ಚೆನ್ನಾಗಿಯೇ ಬಲ್ಲ ಆ ಅಂಗಡಿಯ ಹುಡುಗ ಹುಬ್ಬು ಹಾರಿಸಿ ಮುಗುಳು ನಗೆ ಬೀರಿದ. ಇದನ್ನು ಕಂಡೂ ಕಾಣದವನಂತೆ ತಲೆತಗ್ಗಿಸಿದ ಮೋಹನ‌, ಅನತಿ ದೂರದಲ್ಲಿ ನಿಂತು ಅರಳುಗಣ್ಣಿನಿಂದ ಅಂಗಡಿ ನೋಡುತ್ತದ್ದ ಗಂಗೆಯತ್ತ ಬೆರಳು ಮಾಡಿ “ಅವರ ಅಳತೆಯ ಪ್ಯಾಂಟ್ ಮತ್ತು ಶರ್ಟ್ ತೋರಿಸಿ” ಎಂದ. ಆ ಹುಡುಗ ತನ್ನ ಕಣ್ಣಳತೆಯಲ್ಲಿಯೇ  ಗಂಗೆಯ ಉದ್ದ ಅಗಲ ಅಳೆದು,  ಮೋಹನನ ಅಭಿರುಚಿಗೆ ತಕ್ಕುದಾದ ಬಟ್ಟೆಗಳನ್ನೇ ಹೊರತೆಗೆದು ಹಾಕಿದ. ಎರಡು ಜೊತೆ ಪ್ಯಾಂಟು ಶರಟುಗಳನ್ನು  ಆಯ್ಕೆ ಮಾಡಿಕೊಂಡ ಮೋಹನ “ಗಂಗೂ ಅವ್ರೆ ಅಳತೆ ಸರಿಯಾಗುತ್ತಾ ಒಂದ್ಸರಿ ನೋಡಿ”  ಎಂದು ಹೇಳಿದ. ಮೋಹನ ಹಿಡಿದಿದ್ದ ಶರಟು ಪ್ಯಾಂಟು ಕಂಡು ದಂಗುಬಡಿದ ಗಂಗೆ “ಹಾ….ಯಾರ್ಗಿದು ಎಂದು ರಾಗ ಎಳೆದಳು. “ನಿಮಗೆ ಗಂಗೂ” ಎಂದ, ಮೋಹನನ ಮಾತು ಕೇಳಿ ಗರ ಬಡಿದವಳಂತಾದ ಗಂಗೆ, “ನಿಮಗೇನರ ತಲೆಗಿಲೆ ಕೆಟ್ಟದ ಅಂತಿನಿ” ಹುಡ್ಗೀರು ಅದ್ರಲ್ಲೂ ಮದ್ವೆಯಾದೋರು ಈ ಪ್ಯಾಂಟು ಶರ್ಟ್ನೆಲ್ಲ ಹಾಕೊಂಡ್ರೆ ಜನ ಏನಾಂದರು ಹೇಳಿ. ನಮ್ಮಣ್ಣ ತಮ್ಮದಿರು ನನ್ನ ಸುಮ್ನೆ ಬುಟ್ಟಾರ. ಅಯ್ಯಪ್ಪ… ನನಗಂತೂ ಇಂತ ಬಟ್ಟೆ ಎಲ್ಲ ಬ್ಯಾಡ  ಹೋಗನ ಬನ್ನಿ” ಎಂದು  ದಡ್ಡನೆ  ಹೊರನಡೆದಳು . 

ತುಸು ಗಡುಸಾಗಿಯೇ ಗಂಗೆಯನ್ನು ಕೂಗಿದ ಮೋಹನ “ನೋಡಿ ಗಂಗೂ ಈಗ ನೀವು ನನ್ನ  ಹೆಂಡ್ತಿ. ಯಾರಿಗೂ ಹೆದರಬೇಕಾಗಿಲ್ಲ. ನಾನು ಹೇಳಿದ ಹಾಗೆ ಕೇಳಬೇಕು. ನೀವು ನನ್ನ ಕಣ್ಣಿಗೆ ಚೆನ್ನಾಗಿ ಕಾಣಬೇಕು, ಬೇರೆಯವರು ಏನಾದ್ರು ಅಂದ್ಕೊಳ್ಳಿ ಅದನ್ನ ಕಟ್ಕೊಂಡು ನಮ್ಗೇನಾಗ್ಬೇಕು ಹೇಳಿ. ನನ್ನ ಜೊತೆ ಪೂನದಲ್ಲೆಲ್ಲ ಹೀಗೆ ಸೀರೆ ಸುತ್ಕೊಂಡು ಓಡಾಡೋದು ನನಗೆ ಇಷ್ಟ ಆಗಲ್ಲ” ಎಂದು ನಿಷ್ಠುರವಾಗಿ  ನುಡಿದು, ತಾನು ಕೊಂಡುಕೊಂಡಿದ್ದ ಬಟ್ಟೆಯನ್ನೆಲ್ಲಾ  ಪ್ಯಾಕ್ ಮಾಡಿಸಿ ಗಂಗೆಯೊಂದಿಗೆ ಏಳು ಗಂಟೆಯ ನಾರಿಪುರದ ಬಸ್ ಹತ್ತಿದ. ಈ ಬಾರಿ ಮಾತ್ರ ತಾನೇ ಜನರ ಒಳ ನುಸುಳಿ ಸೀಟ್ ಹಿಡಿದ ಮೋಹನ, ಅನಿವಾರ್ಯವಾಗಿ ಗಂಗೆ ತನ್ನ ಪಕ್ಕದಲ್ಲಿಯೇ ಕೂರುವಂತೆ ನೋಡಿಕೊಂಡ. ಆತಂಕದಿಂದಲೆ ಅವನ ಪಕ್ಕ ಬಂದು ಕೂತ ಗಂಗೆ, ತಾನು ಹಿಡಿದಿದ್ದ ಬಟ್ಟೆಯ ಬ್ಯಾಗನ್ನು ತಮ್ಮಿಬ್ಬರ ಮಧ್ಯೆ ಅಡ್ಡಗೋಡೆಯಂತಿಟ್ಟು ಮೈಗೆ ಮೈ ತಾಗದಂತೆ ಎಚ್ಚರದಿಂದ ಅಂತರ ಕಾಯ್ದುಕೊಂಡೇ ಊರು ಮುಟ್ಟಿದಳು.

ಬಸ್ಸು ಹೊಸ ನಾರಿಪುರದ ಸರ್ಕಲ್  ಸೇರಿದಾಗ ಅದಾಗಲೇ ರಾತ್ರಿ ಎಂಟಾಗಿತ್ತು.  ಹುಣ್ಣಿಮೆಯ ಆಸುಪಾಸಾದ್ದರಿಂದ ಬೆಳದಿಂಗಳು ಹಾಲು ಚೆಲ್ಲಿದಂತಿತ್ತು. ಮೈಲು ದೂರವಿದ್ದ ಹಳೇನಾರಿಪುರದತ್ತ ಹೆಜ್ಜೆಹಾಕತೊಡಗಿದ ಮೋಹನ  ಗಂಗೆಯನ್ನು “ನಿಮಗೆ ಪಿಕ್ಚರ್ ಅಂದ್ರೆ ಬಹಳ ಇಷ್ಟ ಅಲ್ವ. ಇವತ್ತಿನ ಪಿಕ್ಚರ್ ಇಷ್ಟ ಆಯ್ತ” ಎಂದು ಕೇಳಿದ. ಓಹೋ…ಎಂದು ಮತ್ತೆ ಆ ಸಿನಿಮಾದ ವರ್ಣನೆಗಿಳಿದಳು ಗಂಗೆ. ಹೀಗೆ ಇಬ್ಬರು ಮಾತಾನಾಡುತ್ತಾ ಹಳೆನಾರಿಪುರದ ತಿರುವಿಗೆ ಬಂದರು. ಅಲ್ಲಿ ಧುತ್ತನೆ ನಿಂತ ಗಂಗೆ “ಇದು ನಮ್ಮ ಹೊಲ ಕನಿ” ಎಂದು ತೋರಿಸಿದಳು. ಆ ಹೊಲದತ್ತ ಕಣ್ಣು ಹಾಯಿಸಿದ ಮೋಹನ “ರೀ ಗಂಗೂ ಈ ಬೆಳದಿಂಗಳಲ್ಲಿ ಆ ರಾಗಿ ಕಣ ಎಷ್ಟು ಚೆನ್ನಾಗಿ ಕಾಣ್ತಿದೆ ನೋಡಿ. ಬನ್ರಿ  ಸ್ವಲ್ಪ ಹೊತ್ತು  ಕೂತು ಹೋಗೋಣ” ಎಂದು ಕರೆದ. “ಅಯ್ಯೋ… ಮೊದ್ಲೆ ತಡ ಆಗ್ಬುಟೈತೆ ಬ್ಯಾಡ ಬನ್ನಿ ನಮ್ಮ ಅಣ್ಣದಿರು  ಮೊದ್ಲೆ ಉರ್ಕು ಮುಂಡೇವು ಯಾಕ್ ಅವರ ಕೈಲಿ ಒಂದು ಮಾತ್ ಕೇಳದು” ಎಂದು ಹೇಳಿದಳು. ಮತ್ತೆ ಮೋಹನ “ನಾನು ನಿಮ್ಮ ಗಂಡ ಯಾರಿಗು ಹೆದ್ರು ಬೇಕಾಗಿಲ್ಲ” ಎನ್ನುವ ಮಾತನ್ನು  ಅವಳ ನೆನಪಿಗೆ ತಂದು ಧೈರ್ಯ ತುಂಬಿದ. 

ಯಾವುದೋ ಹಿಂದಿ ಹಾಡೊಂದನ್ನು ಮೆಲುವಾಗಿ ಹಾಡುತ್ತಾ, ಹೊಲದ ಕಡೆ ಹೆಜ್ಜೆ ಹಾಕುತ್ತಿದ್ದ ಮೋಹನನ ಹಾಡು ಕೇಳಿ ತಲೆ ದೂಗಿದ ಗಂಗೆ ” ಅಯ್ಯೋ ನೀವು ಪಿಚ್ಚರೋರಂಗೆ ಎಷ್ಟ್ ಚನಾಗಿ ಹಾಡ್ತಿರಿ. ನಿಮ್ಗೆ ಹಾಡೆಳಕು ಬತ್ತದೆ ಅನ್ನಿ ಹಂಗಾರೆ” ಎಂದು ಬೆರಗಿನಿಂದ ಕೇಳಿದಳು. “ಹೂಂ… ಗಂಗು ಅವ್ರೆ….ನನ್ನ ಸ್ಕೂಲ್ ಡೇಸ್ ನಿಂದ ಹಿಡಿದು ಕಾಲೇಜ್ ಡೇಸಿನವರೆಗೂ ಹಾಡೇಳದ್ರಲ್ಲಿ ನಾನೆ ಹೀರೋ. ಇಲ್ಲಿ ತನಕ ಒಬ್ರಿಗೂ ಫಸ್ಟ್ ಪ್ರೈಸ್ ಬಿಟ್ಕೊಟ್ಟಿಲ್ಲ ಗೊತ್ತಾ.. ಕೇಳುಸ್ಕೊತಿರ ಅಂದ್ರೆ ಬನ್ನಿ, ಇನ್ನೊಂದಿಷ್ಟು ಹಾಡ್ತಿನಿ” ಎಂದು ಹೇಳಿ ಗಂಗೆಯೊಂದಿಗೆ ರಾಗಿ ಕಣದಲ್ಲಿ ಬಂದು ಕೂತ. ಇಂಪಾಗಿ ಹಿಂದಿ ಹಾಡೊಂದನ್ನು ಹಾಡ‌ತೊಡಗಿದ ಮೋಹನ ಹಾಡುತ್ತಾ ಹಾಡುತ್ತಾ ಉದ್ದೀಪನಕ್ಕೊಳಗಾಗಿ ಗಂಗೆಯನ್ನು ಬಾಚಿ ತಬ್ಬಿ, ಹಣೆಗೊಂದು ಮುತ್ತಿಟ್ಟೇ ಬಿಟ್ಟ. 

 “ಗಂಡುಸ್ರು ಮುಟ್ಟುದ್ರೆ ಮಕ್ಳಯ್ತವೆ ಕನಿರ್ಲೆ. ಯಾವ ಕಾರ್ಣುಕ್ಕೂ ಆ ಬಡ್ಡೆತ್ತವ್ಗಳತ್ರುಕ್ ಮಾತ್ರ ಸುಳಿಬ್ಯಾಡಿ ಎಚ್ಚುರ್ವಾಗಿರಿ” ಎಂದು ಊರಿನ ದೊಡ್ಡದಾದ ಹೆಣ್ಣು ಮಕ್ಕಳನ್ನೆಲ್ಲಾ  ಆಗಾಗ ಎಚ್ಚರಿಸುತ್ತಿದ್ದ,  ಮಂಟಿಕೊಪ್ಪಲ ಸೋಬಾನೆ ರಾಜಮ್ಮಜ್ಜಿಯ ಮಾತನ್ನೇ ಇದುವರೆಗೂ ಭಯ ಭಕ್ತಿಯಿಂದ ಚಾಚು ತಪ್ಪದೆ ಪಾಲಿಸಿಕೊಂಡು ಬಂದಿದ್ದ ಗಂಗೆ,  ದೊಡ್ಡ ಆಘಾತ ಆದವಳಂತೆ ” ಅಯ್ಯಯ್ಯಪ್ಪೋ ಕೆಟ್ಟೆ ಕಣ್ರೋ ಯಾರಾದ್ರು ನನ್ನ ಕಾಪಾಡ್ರಪ್ಪೋ ಮಕ್ಳಾಗ್ಬುಟ್ರೆ ನನ್ನ್ ಗತಿ ಏನ್ರಪ್ಪೋ” ಎಂದು ಚೀರಿ ಎದ್ದೆನೋ ಬಿದ್ದೆನೋ ಎಂಬಂತೆ ಓಡಿಬಂದು ಮನೆ ಸೇರಿ ಕೊಂಡಳು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌

ಇದನ್ನೂ ಓದಿ-ಗಂಗೆ ಮತ್ತು ಮೋಹನನ ಪಿಚ್ಚರ್‌ ಪಯಣ

Related Articles

ಇತ್ತೀಚಿನ ಸುದ್ದಿಗಳು