ಹೊಸದೆಹಲಿ: ದೇಶದ ಪ್ರಧಾನಮಂತ್ರಿ RSS ಪ್ರಚಾರಕ್ ಸಂಸ್ಕಾರಕ್ಕೆ ಬದ್ಧರಾಗಿ 75ನೇ ವರ್ಷಕ್ಕೆ ನಿವೃತ್ತಿ ಘೋಷಿಸಬೇಕು ಇಲ್ಲದೇ ಹೋದಲ್ಲಿ ಅವರು ಬೇರೆ ರೀತಿಯಲ್ಲಿ ತಮ್ಮ ಕುರ್ಚಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ನಾಯಕ ಹಾಗೂ ವಕೀಲ ಸುಬ್ರಮಣಿಯನ್ ಸ್ವಾಮಿ ಎಚ್ಚರಿಸಿದ್ದಾರೆ.
ಇತ್ತೀಚೆಗೆ ತಮ್ಮ ಮೋದಿ ಟೀಕೆಯಿಂದಲೇ ಸುದ್ದಿಯಲ್ಲಿರುವ ಸುಬ್ರಣಿಯಮ್ ಸ್ವಾಮಿ ಈಗ ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿದ್ದಾರೆ. ಅವರ ಟಾರ್ಗೆಟ್ ಮೋದಿ ಅಜೆಂಡಾ ಮುಂದುವರೆದಿದ್ದು, ಮುಂದಿನ ತಿಂಗಳ ಹದಿನೇಳಕ್ಕೆ ಮೋದಿ ಪ್ರಧಾನಿ ಸ್ಥಾನದಿಂದ ಸ್ವಯಂಪ್ರೇರಿತರಾಗಿ ಇಳಿಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ತಮ್ಮ ಟ್ವೀಟಿನಲ್ಲಿ “ಮೋದಿ ಅವರು RSS ಪ್ರಚಾರಕ್ ಸಂಸ್ಕಾರಕ್ಕೆ ಬದ್ಧರಾಗಿ, ಸೆಪ್ಟೆಂಬರ್ 17 ರಂದು ತಮ್ಮ 75 ನೇ ವರ್ಷದ ಹುಟ್ಟುಹಬ್ಬದ ನಂತರ ಮಾರ್ಗದರ್ಶನ ಮಂಡಲಕ್ಕೆ ನಿವೃತ್ತಿ ಘೋಷಿಸದಿದ್ದರೆ, ಅವರು ಇತರ ವಿಧಾನಗಳಿಂದ ತಮ್ಮ ಪ್ರಧಾನಿ ಕುರ್ಚಿಯನ್ನು ಕಳೆದುಕೊಳ್ಳುತ್ತಾರೆ” ಎಂದು ಬರೆದಿದ್ದಾರೆ.
ಮೋದಿ ಸರ್ಕಾರ ಮೊದಲ ಸಲ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ 75 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ನಾಯಕರಿಗೆ ಮಂತ್ರಿಗಿರಿ ನಿರಾಕರಿಸಲಾಗಿತ್ತು. ಅಂದಿನಿಂದ ಈ ಸಂಪ್ರದಾಯವನ್ನು ಬಿಜೆಪಿಯಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ. ಈ ನಿಯಮದಿಂದಾಗಿ ಪಕ್ಷದ ಹಿರಿಯ ನಾಯಕರಾದ ಅಡ್ವಾಣಿ, ಜಸ್ವಂತ್ ಸಿಂಗ್, ಮುರಳಿ ಮನೋಹರ್ ಜೋಷಿ ಮೊದಲಾದವರು ಪಕ್ಷ ಅಧಿಕಾರಕ್ಕೆ ಬಂದರೂ ಮಂತ್ರಿಯಾಗಲಾರದೆ ಮನೆಯಲ್ಲಿ ಕುಳಿತಿದ್ದರು.
ಇದೀಗ ಮೋದಿಯವರ ಸರದಿ ಬಂದಿದ್ದು, ಈ ಕುರಿತು ಸುಬ್ರಮಣ್ಯಮ್ ಸ್ವಾಮಿ ಎಚ್ಚರಿಕೆಯನ್ನೂ ನೀಡಿರುವುದರಿಂದಾಗಿ ಮೋದಿಯವರ ಮುಂದಿನ ನಡೆಯ ಕುರಿತು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ.