Monday, July 28, 2025

ಸತ್ಯ | ನ್ಯಾಯ |ಧರ್ಮ

ಇದು ನುಡಿದಂತೆ ನಡೆದವರು v/s ನಂಬಿಕೆ ದ್ರೋಹಿಗಳ ನಡುವಿನ ಚುನಾವಣೆ: ಸಿ.ಎಂ.ಸಿದ್ದರಾಮಯ್ಯ

ದಾವಣಗೆರೆ ಮೇ 4: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ನಾನೇ ಗೆದ್ದ ಹಾಗೆ ಎಂದು ಸಿ.ಎಂ.ಸಿದ್ದರಾಮಯ್ಯ ಘೋಷಿಸಿದರು.

ದಾವಣಗೆರೆಯಲ್ಲಿ ನಡೆದ ಪ್ರಜಾಧ್ವನಿ ಜನಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಕರೆ ನೀಡಿ ಮಾತನಾಡಿದರು.

ಹತ್ತತ್ತು ವರ್ಷ ಪ್ರಧಾನಿಯಾಗಿ ಮೋದಿ ಮಾಡಿದ್ದೇನು ಎನ್ನುವುದನ್ನು ಭಾರತೀಯರಿಗೆ ತಿಳಿಸಿ ಮತ ಕೇಳುತ್ತಿಲ್ಲ. ಬದಲಿಗೆ ಹೊಸ ಹೊಸ ಸುಳ್ಳುಗಳನ್ನು ಹೊತ್ತುಕೊಂಡು ಬಂದಿದ್ದಾರೆ ಎಂದರು.

ಇಂಥಾ ಬಿಜೆಪಿಗೆ ಅನುಕೂಲ ಮಾಡಿಕೊಡಲು ಪಕ್ಷೇತರ ಅಭ್ಯರ್ಥಿಯಾಗಿ ವಿನಯ್ ಸ್ಪರ್ಧಿಸುತ್ತಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ವಿನಯ್ ಗೆ ಓಟು ಹಾಕಿದರೆ,ಬಿಜೆಪಿಗೆ ಓಟು ಹಾಕಿದಂತೆ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ನೀವುಗಳು ಹಾಕುವ ಪ್ರತೀ ಓಟು ನನಗೇ ಹಾಕಿದಂತೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಕಣದಲ್ಲಿ ಇದ್ದೇನೆ ಎಂದುಕೊಂಡು ಮತ ಹಾಕಿ ಭರ್ಜರಿ ಬಹುಮತದಿಂದ ಕಾಂಗ್ರೆಸ್ ಗೆಲ್ಲಿಸಿ ಎಂದು ಕರೆ ನೀಡಿದರು.

15 ಲಕ್ಷ ರೂಪಾಯಿ ಪ್ರತಿಯೊಬ್ಬ ಭಾರತೀಯರ ಖಾತೆಗೆ ಹಾಕ್ತೀನಿ ಎಂದು ನಂಬಿಸಿದ ಮೋದಿ ಈ ಹತ್ತು ವರ್ಷದಲ್ಲಿ 15 ರೂಪಾಯಿ ಕೂಡ ಹಾಕಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸ್ತೀನಿ ಎಂದು ಭಾರತೀಯರನ್ನು ನಂಬಿಸಿದ್ರು, ಕೆಲಸ ಕೇಲಿದ್ರೆ ಪಕೋಡ ಮಾರಾಟ ಮಾಡಿ ಎಂದು ನಂಬಿಕೆ ದ್ರೋಹ ಮಾಡಿದ್ರು‌. ಇಂಥಾ ನಂಬಿಕೆ ದ್ರೋಹಿಗಳಿಗೆ ಓಟು ಹಾಕಬೇಡಿ ಎಂದು ಕರೆ ನೀಡಿದರು.

ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ರೈತರನ್ನು ನಂಬಿಸಿದರು. ಆದರೆ ರೈತರ ಖರ್ಚು ಮೂರು ಪಟ್ಟು ಆಗುವಂತೆ ಮಾಡಿ ರೈತರಿಗೂ ದ್ರೋಹ ಮಾಡಿದ್ರು.

ಬೆಲೆ ಏರಿಕೆಗೆ ಬ್ರೇಕ್ ಹಾಕುವುದಾಗಿ ಭಾರತೀಯರನ್ನು ನಂಬಿಸಿ ಓಟು ತಗೊಂಡ್ರು. ಈಗ ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ, ಕಾಳು, ಅಡುಗೆ ಎಣ್ಣೆ ಸೇರಿ ಎಲ್ಲದರ ಬೆಲೆಯೂ ಆಕಾಶ ಮುಟ್ಟಿತು‌. ಹೀಗೆ ನಿರಂತರವಾಗಿ ಭಾರತೀಯರಿಗೆ ದ್ರೋಹ ಬಗೆಯುತ್ತಲೇ ಇದ್ದಾರೆ. ನಿಮ್ಮ ಪ್ರತಿಯೊಂದು ಓಟಿಗೂ ದ್ರೋಹ ಬಗೆದಿದ್ದಾರೆ. ಇದೇ ದ್ರೋಹಿಗಳಿಂದ ಮತ್ತೆ ಮತ್ತೆ ಮೋಸ ಹೋಗಬೇಡಿ ಎಂದು ಕರೆ ನೀಡಿದರು.

ನುಡಿದಂತೆ ನಡೆದವರು v/s ನಂಬಿಕೆ ದ್ರೋಹಿಗಳ ನಡುವಿನ ಚುನಾವಣೆ

ಈ ಚುನಾವಣೆ ನುಡಿದಂತೆ ನಡೆದವರ ಮತ್ತು ನಂಬಿಕೆ ದ್ರೋಹಿಗಳ ನಡುವಿನ ಚುನಾವಣೆ. ನೀವು ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಮತ ಹಾಕಿ. ನುಡಿದಂತೆ ನಡೆದು ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ನಿಮ್ಮ ಓಟಿನ ಘನತೆ ಹೆಚ್ಚಿಸಿದವರಿಗೆ ನಿಮ್ಮ ಮತ ನೀಡಿ ಎಂದು ಕರೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page