Tuesday, January 13, 2026

ಸತ್ಯ | ನ್ಯಾಯ |ಧರ್ಮ

ಅಷ್ಟು ಪ್ರೀತಿಯಿದ್ದರೆ ಬೀದಿ ನಾಯಿಗಳನ್ನು ನಿಮ್ಮ ಮನೆಯಲ್ಲಿ ಸಾಕಿಕೊಳ್ಳಿ: ಮಹಿಳೆಗೆ ಸುಪ್ರೀಂ ಕೋರ್ಟ್ ಸಲಹೆ

ದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಕಡಿತದ ಘಟನೆಗಳ ಕುರಿತು ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನಾಯಿ ಕಡಿತವನ್ನು ತಡೆಯಲು ರಾಜ್ಯಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪ್ರತಿ ನಾಯಿ ಕಡಿತಕ್ಕೂ ರಾಜ್ಯಗಳು ಭಾರೀ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ. ನಾಯಿ ಕಡಿತದಿಂದ ಗಾಯವಾಗಿದೆಯೇ ಅಥವಾ ಸಾವು ಸಂಭವಿಸಿದೆಯೇ? ಸಂತ್ರಸ್ತರು ಮಕ್ಕಳೇ ಅಥವಾ ವೃದ್ಧರೇ ಎಂಬುದೆಲ್ಲ ಲೆಕ್ಕಕ್ಕಿಲ್ಲ; ಪ್ರತಿ ನಾಯಿ ಕಡಿತದ ಘಟನೆಗೂ ರಾಜ್ಯಗಳು ಭಾರೀ ಪರಿಹಾರ ನೀಡುವಂತೆ ಆದೇಶಿಸುವ ಸಾಧ್ಯತೆಯಿದೆ ಎಂದು ಪೀಠ ಹೇಳಿದೆ. ಅಷ್ಟೇ ಅಲ್ಲದೆ, ಬೀದಿ ನಾಯಿಗಳಿಗೆ ಆಹಾರ ನೀಡುವವರೂ ಕೂಡ ಈ ಘಟನೆಗಳಿಗೆ ಹೊಣೆಗಾರರಾಗಬೇಕಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

“ನಾಯಿ ಕಡಿತದ ಘಟನೆಗಳ ವಿಚಾರಣೆ ನ್ಯಾಯಾಲಯದ ಪ್ರಕ್ರಿಯೆಯಾಗಿ ಉಳಿದಿಲ್ಲ, ಬದಲಿಗೆ ನ್ಯಾಯಾಲಯವು ಒಂದು ಸಾರ್ವಜನಿಕ ವೇದಿಕೆಯಂತೆ ಬದಲಾಗಿದೆ,” ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಬೇಸರ ವ್ಯಕ್ತಪಡಿಸಿದರು. “ನಾಯಿ ಕಡಿತ ತಡೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಯಾವುದಾದರೂ ಕ್ರಿಯಾ ಯೋಜನೆ (Action Plan) ಇದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ನಾವು ಅರ್ಧ ದಿನ ಸಮಯ ಮೀಸಲಿಡಬೇಕಾಗುತ್ತದೆ.

ನಾವು ಕಾನೂನುಬದ್ಧ ನಿಯಮಗಳ ಜಾರಿಯನ್ನು ಮಾತ್ರ ನೋಡುತ್ತೇವೆ. ನಮ್ಮನ್ನು ಆ ಕೆಲಸ ಮಾಡಲು ಬಿಡಿ. ರಾಜ್ಯಗಳು ನಾಯಿ ಕಡಿತ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಕಾರಣ, ಪ್ರತಿ ಘಟನೆಗೂ ರಾಜ್ಯಗಳ ಮೇಲೆ ಭಾರೀ ಪರಿಹಾರದ ಹೊರೆ ಹೊರಿಸಬೇಕಾಗಬಹುದು,” ಎಂದು ಕೋರ್ಟ್ ಎಚ್ಚರಿಸಿತು.

‘ನಾಯಿಗಳನ್ನು ನಿಮ್ಮ ಮನೆಯಲ್ಲಿಟ್ಟುಕೊಳ್ಳಿ’:

ಬೀದಿ ನಾಯಿಗಳ ವಿಷಯವು ಭಾವನಾತ್ಮಕ ವಿಷಯ ಎಂದು ವಕೀಲೆ ಮೇನಕಾ ಗುರುಸ್ವಾಮಿ ಹೇಳಿದ್ದಕ್ಕೆ ನ್ಯಾಯಾಲಯ ವ್ಯಂಗ್ಯವಾಗಿ ಪ್ರತಿಕ್ರಿಯಿಸಿತು. “ಬಹಳ ಕಾಲದಿಂದ ಈ ‘ಭಾವನೆಗಳು’ ಕೇವಲ ನಾಯಿಗಳಿಗೆ ಮಾತ್ರ ಸೀಮಿತವಾಗಿರುವಂತೆ ಕಾಣುತ್ತಿದೆ” ಎಂದು ಚುಚ್ಚಿತು. ಇದಕ್ಕೆ ಪ್ರತಿಕ್ರಿಯಿಸಿದ ಮೇನಕಾ, ವಿಷಯ ಅದಲ್ಲ, ತಾನು ಮನುಷ್ಯರ ಬಗ್ಗೆಯೂ ಅಷ್ಟೇ ಕಾಳಜಿ ವಹಿಸುತ್ತೇನೆ ಎಂದರು. ಆಗ ಕೊಂಚ ಕೋಪದಿಂದಲೇ ಪ್ರತಿಕ್ರಿಯಿಸಿದ ಕೋರ್ಟ್, “ಹಾಗಾದರೆ ಒಳ್ಳೆಯದು. ಒಂದು ಕೆಲಸ ಮಾಡಿ. ಆ ನಾಯಿಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ” ಎಂದು ಖಾರವಾಗಿ ಹೇಳಿತು.

ನಾಯಿ ಕಡಿತದ ಘಟನೆಗಳ ಕುರಿತು ಹಿಂದಿನ ವಿಚಾರಣೆ ಜನವರಿ 9 ರಂದು ನಡೆದಿತ್ತು. ದೇಶದಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿರುವುದರ ಬಗ್ಗೆ ಕಳೆದ ವರ್ಷ ನವೆಂಬರ್ 7 ರಂದು ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page