Thursday, October 30, 2025

ಸತ್ಯ | ನ್ಯಾಯ |ಧರ್ಮ

15 ದಿನಗಳ ಒಳಗೆ ರಸ್ತೆ ನಿರ್ಮಿಸದಿದ್ರೆ ಕಾಂಪೌಂಡ್ ನೆಲಸಮ – ಆರ್.ಪಿ ವೆಂಕಟೇಶ್ ಮೂರ್ತಿ

ಹಾಸನ : ನಗರದ ಸಮೀಪ ಇರುವ ಉದ್ದೇಶಿತ ವಿಮಾನ ನಿಲ್ದಾಣದ ಸುತ್ತ ನಿರ್ಮಿಸಲಾಗಿರುವ ಕಾಂಪೌಂಡ್ ಹೊರಗೆ ಕನಿಷ್ಠ 30 ಅಡಿ ರಸ್ತೆ ನಿರ್ಮಿಸಿಕೊಡಲು ಕ್ರಮಕೈಗೊಳ್ಳಬೇಕು. 15 ದಿನಗಳ ಒಳಗೆ ರಸ್ತೆ ನಿರ್ಮಿಸದಿದ್ದರೇ ಹಳ್ಳಿ ಜನರು ಎಲ್ಲಾ ಸೇರಿ ಕಾಂಪೌಂಡ್ ಬೀಳಿಸುವುದು ಅನಿವಾರ್ಯವಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಾಸನದ ಬಳಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ಹಲವು ಕನಸುಗಳಲ್ಲಿ ಒಂದು. 1980ರ ದಶಕದಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾಗ ಈ ಕನಸು ಹುಟ್ಟಿತು. 1994ರಲ್ಲಿ ಅವರು ಮುಖ್ಯಮಂತ್ರಿ ಆದಾಗ ರೂಪ ಪಡೆದು, ೧೯೯೬ರಲ್ಲಿ ಪ್ರಧಾನಿ ಆದರೂ ಅದು ಕಾಗದದಲ್ಲೇ ಸೀಮಿತವಾಯಿತು. ಆದರೆ ಅವರು ಅಧಿಕಾರದಲ್ಲಿದ್ದಾಗಲೂ ಇಲ್ಲದಾಗಲೂ ಈ ಯೋಜನೆಯ ಪ್ರಸ್ತಾಪವನ್ನು ಬಿಡಲಿಲ್ಲ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹೆಚ್ಚುವರಿ ಭೂಮಿ ಬೇಡಿಕೊಂಡ ಬಳಿಕ ಜಿಲ್ಲಾಡಳಿತ 539 ಎಕರೆ ಜಮೀನು ಸ್ವಾಧೀನಪಡಿಸಿತು. ಸರ್ಕಾರ ನೀಡಿದ ಜಾಗದ ಸುತ್ತ ಎತ್ತರದ ಗೋಡೆ ಮತ್ತು ಮುಳ್ಳಿನ ತಂತಿಯ ಸರಪಳಿಯು ನಿರ್ಮಿಸಲಾಯಿತು. ಆದರೆ ಕೆಲಸ ಮುಗಿದು ವರ್ಷಗಳು ಕಳೆದರೂ ವಿಮಾನಗಳ ಹಾರಾಟ ಕಾಣಿಸಲಿಲ್ಲ. ದ್ಯಾವಲಾಪುರ, ಮೈಲನಹಳ್ಳಿ, ತೆಂಡೆಹಳ್ಳಿ, ಲಕ್ಷ್ಮೀಸಾಗರ, ಬೂವನಹಳ್ಳಿ ಈ ಹಳ್ಳಿಗಳ ರೈತರು ಪ್ರತಿದಿನ ಕಷ್ಟ ಅನುಭವಿಸುತ್ತಿದ್ದಾರೆ ಎಂದರು. ಕಾಂಪೌಂಡ್ ಗೋಡೆಗಳು ಮನೆಗಳ ಅಂಗಳವರೆಗೂ ಬಂದಿವೆ. ರೈತರು ತಮ್ಮ ಹೊಲಗಳಿಗೆ ಹೋಗುತ್ತಿದ್ದ ಕಾಲುದಾರಿಗಳು, ಬಂಡಿದಾರಿಗಳು ಬಂದ್ ಆಗಿವೆ. ದ್ಯಾವಲಾಪುರ ಮತ್ತು ಬೂವನಹಳ್ಳಿ ನಡುವಿನ ರಸ್ತೆ ಕೂಡ ಬಂದ್ ಆದರೆ ಸುತ್ತಮುತ್ತಲ ಗಾಡೇನಹಳ್ಳಿ, ಮೆಳಗೋಡು, ಚೌರಿ ಕೊಪ್ಪಲು, ಚಟ್ಟನಹಳ್ಳಿ ಹಳ್ಳಿಗಳ ಜನರಿಗೆ ಹಾಸನ ನಗರ ತಲುಪುವುದು ಕನಸಾಗುತ್ತದೆ. ಮೈಲನಹಳ್ಳಿಯ ನೀರಿನ ಕಟ್ಟೆಯ ಮೂಲೆಯನ್ನು ಪ್ರಾಧಿಕಾರವು ಕಬಳಿಸಿ ಗೋಡೆ ಕಟ್ಟಿದ ಪರಿಣಾಮ ನೀರಿನ ಸಂಚಾರವೇ ನಿಂತು, ರೈತರು ಬೆಳೆ ಬೆಳೆಯಲಾಗದ ಸ್ಥಿತಿಗೆ ತಲುಪಿದ್ದಾರೆ. ದ್ಯಾವಲಾಪುರದ ರೈತರು ತಮ್ಮ ಹೊಲಗಳಿಗೆ ಹೋಗಲು ಮಳೆನೀರಿನ ಗುಂಡಿಯ ಕಾಲುವೆಯಲ್ಲಿ ಬಗ್ಗಿ ತೆವಳುತ್ತಾ ಹೋಗಬೇಕಾದ ದುಃಸ್ಥಿತಿ ಎದುರಿಸುತ್ತಿದ್ದಾರೆ. ದನಕರುಗಳು ಸಹ ಆ ಗುಂಡಿಯಲ್ಲಿ ಬೆನ್ನು ಬಗ್ಗಿಸಿ ನುಸುಳುವಂತಾಗಿದೆ ? ಅಭಿವೃದ್ಧಿಯ ಈ ದೃಶ್ಯವು ಕಣ್ಣೀರು ತರಿಸುತ್ತದೆ. ಹಿಂದಿನ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಪರ್ಯಾಯ ರಸ್ತೆ ನಿರ್ಮಾಣ ಅಗತ್ಯವಿದ್ದು, ಗೋಡೆಗೆ ದಾರಿ ಬಿಡಬೇಕು ಎಂದು ಸೂಚಿಸಿದ್ದರೂ, ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಕಿವಿಗೊಡಲಿಲ್ಲ. ಅವರು ನಮ್ಮ ಮಾತನ್ನು ಕೇಳಲಿಲ್ಲ, ನೋವನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂದು ಗ್ರಾಮಸ್ಥರು ಕೋಪೋದ್ಗಾರ ವ್ಯಕ್ತಪಡಿಸಿದ್ದಾರೆ.    

ರೈತರು ಸರ್ಕಾರ ಮತ್ತು ಜಿಲ್ಲಾಡಳಿತದ ಮುಂದೆ ಮೂರು ಸ್ಪಷ್ಟ ಬೇಡಿಕೆಗಳನ್ನು ಇಟ್ಟಿದ್ದಾರೆ ವಿಮಾನ ನಿಲ್ದಾಣ ಕಾಂಪೌಂಡ್ ಹೊರಭಾಗದಲ್ಲಿ ಕನಿಷ್ಠ ೩೦ ಅಡಿ ಅಗಲದ ರಸ್ತೆ ನಿರ್ಮಿಸಬೇಕು. ಇನ್ನು ೧೫ ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ, ರೈತರು ಹಳ್ಳಿಗರ ಸಹಕಾರದಿಂದ ತಮ್ಮ ಹಕ್ಕಿನ ದಾರಿಯಲ್ಲಿ ನಿರ್ಮಿಸಲಾದ ಗೋಡೆಗಳನ್ನು ಸ್ವತಃ ಒಡೆದು ಹಾಕುವಂತಾಗುತ್ತದೆ. ಬೆಳೆ ನಷ್ಟ ಅನುಭವಿಸಿದ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದಲ್ಲದೇ ನಮ್ಮ ಭೂಮಿ, ನಮ್ಮ ಬೆವರು, ನಮ್ಮ ಹಕ್ಕು. ಇವುಗಳೆಲ್ಲಾ ಗೋಡೆಯ ಒಳಗೆ ಬಂಧಿಯಾಗಿವೆ. ಈಗ ನಾವು ಮೌನವಾಗಿರುವುದಿಲ್ಲ ಎಂದು ರೈತರು ಎಚ್ಚರಿಸಿದ್ದಾರೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಪ್ರಮೀಳಾ, ನಾಗರಾಜು, ಹೊನ್ನೇಗೌಡ, ಶಂಕರ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page