Wednesday, June 19, 2024

ಸತ್ಯ | ನ್ಯಾಯ |ಧರ್ಮ

ನಾವೆದ್ದು ನಿಲ್ಲದಿದ್ದರೆ, ಸಂವಿಧಾನ ಉಳಿಯದು

ನಾವೆದ್ದು ನಿಲ್ಲದಿದ್ದರೆ,
ಸಂವಿಧಾನ ಉಳಿಯದು.
ಪ್ರಜಾಪ್ರಭುತ್ವ ಉಳಿಯದು.

ದುಡಿದು ನಾಡು ಕಟ್ಟಿದವರು
ಬದುಕಿಗಾಗಿ ಅಲೆದರು
ಸೂರಿಲ್ಲದೆ ಬಳಲಿದರು,
ಕೂಳಿಲ್ಲದೆ ಸತ್ತರು.
ನೂರಲ್ಲ ಸಾವಿರಾರು
ಕೋಟಿ ಕೋಟಿ ಜನಗಳು

ನಾವೆದ್ದು ನಿಲ್ಲದಿದ್ದರೆ
ಬೆವರ ಪಾಲು ಧಕ್ಕದು,
ನೆಲೆಯು ಎಂದು ಕಾಣದು.

ಧನ ಸಾಗಿಸೋ ರೈತರನ್ನು
ಕಳ್ಳರೆಂದು ಒಡೆದರು.
ಸತ್ಯವನ್ನು ಬರೆದವರ
ಗುಂಡಿಕ್ಕಿ ಕೊಂದರು
ಕೋಮು ದ್ವೇಷ ಬಿತ್ತಿದರು.
ಬೆಂಕಿಯನ್ನು ಹಚ್ಚಿದರು.

ನಾವೆದ್ದು ನಿಲ್ಲದಿದ್ದರೆ
ಸ್ವಾತಂತ್ರ್ಯ ಉಳಿಯದು
ಸತ್ಯವಿಲ್ಲಿ ನಿಲ್ಲದು

ಕಣ್ಣೆದುರೆ ಭ್ರಷ್ಟಾಚಾರ
ಹಗಲಲ್ಲೆ ಅತ್ಯಚಾರ
ಆರೋಗ್ಯವು ವ್ಯಾಪಾರ
ನೀರಿಗೂ ಹಾಹಕರ
ಬಡವರ ಎದೆಯಲ್ಲಿ
ಬೆಂಕಿ ಹತ್ತಿ ಉರಿದಿದೆ

ನಾವೆದ್ದು ನಿಲ್ಲದಿದ್ದರೆ
ಅನ್ಯಾಯ ಅಳಿಯದು
ಭ್ರಷ್ಟಾಚಾರ ತೊಲಗದು

ಕಾನೂನುಗಳ ಕಂತೆ ಕಟ್ಟಿ
ಬಜಾರಲ್ಲಿ ಮಾರುತ್ತಿಹರು
ರಾಜಕೀಯ ಧರ್ಪದಲ್ಲಿ
ದೇಶವನ್ನು ಒಡೆಯುತ್ತಿಹರು
ಪ್ರಜೆಗಳಿಲ್ಲಿ ಪ್ರಭುಗಳಲ್ಲ
ಪರಕೀಯತೆ ಕಾಡಿದೆ‌

ನಾವೆದ್ದು ನಿಲ್ಲದಿದ್ದರೆ
ನ್ಯಾಯವಿಲ್ಲಿ ಸಿಕ್ಕದು,
ದೇಶ ನಾಶವಾಗುವುದು

ಅನ್ನ ಬೆಳೆವ ಭೂಮಿಯನ್ನು
ಕೊಳ್ಳೆ ಒಡೆಯೋ ಹುನ್ನಾರ
ಹಣದ ದೊರೆಗಳೆಲ್ಲಾ ಸೇರಿ
ದೋಚುತ್ತಾರೆ ಊರೂರ
ಬೀದಿಯಲ್ಲಿ ಬದುಕು ಬಂದು
ಬಾಯಿ ಬಾಯಿ ಬಡಿದಿದೆ.

ನಾವೆದ್ದು ನಿಲ್ಲದಿದ್ದರೆ,
ಊರು ಕೇರಿ ಉಳಿಯದು,
ಬದುಕು ಬರಡು ಆಗುವುದು.

ಸಂವಿಧಾನ ಸುಟ್ಟರು
ಅರಾಜಕತೆ ತಂದರು
ಮನುಷ್ಯತ್ವ ಕೊಲೆಯಾಗಿದೆ
ನಾಡು ಮಸಣವಾಗಿದೆ
ಅಸಹಿಷ್ಣುತೆ ಕಟ್ಟೆ ಒಡೆದು
ನೆತ್ತರು ಹರಿದಿದೆ

ನಾವೆದ್ದು ನಿಲ್ಲದಿದ್ದರೆ
ಸಂವಿಧಾನ ಉಳಿಯದು
ಪ್ರಜಾಪ್ರಭುತ್ವ ಉಳಿಯದು

ನಾವೆದ್ದು ನಿಲ್ಲ ಬೇಕಿದೆ
ಸಂವಿಧಾನದ ಉಳಿಲು
ಪ್ರಜಾಪ್ರಭುತ್ವ ಉಳಿಸಲು.

✍️ ಶಶಿರಾಜ್ ಹರತಲೆ

Related Articles

ಇತ್ತೀಚಿನ ಸುದ್ದಿಗಳು