Friday, March 7, 2025

ಸತ್ಯ | ನ್ಯಾಯ |ಧರ್ಮ

ಮರಣ ಹೊಂದಿದ ಕೋಳಿ, ಪಕ್ಷಿಗಳು ಕಂಡುಬಂದಲ್ಲಿ ಮುಟ್ಟದಂತೆ ಜಾಗೃತಿ ವಹಿಸಿ: ಡಿಹೆಚ್‌ಓ ಡಾ ಯಲ್ಲಾ ರಮೇಶಬಾಬು

ಬಳ್ಳಾರಿ,ಮಾ.07: ಸಾರ್ವಜನಿಕರು ಕೋಳಿಶೀತ ಜ್ವರಕ್ಕೆ ಸಂಬಂಧಿಸಿದಂತೆ ಭಯಬೇಡ. ತಮ್ಮ ಸುತ್ತ-ಮುತ್ತ ತಾವಾಗಿಯೇ ಮರಣ ಹೊಂದಿದ ಕೋಳಿ, ಪಕ್ಷಿಗಳು ಕಂಡುಬಂದಲ್ಲಿ ಮುಟ್ಟದಂತೆ ಜಾಗೃತಿ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದರು.

ಶುಕ್ರವಾರ ಬಳ್ಳಾರಿ ತಾಲ್ಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಕೋಳಿಶೀತ ಜ್ವರಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ತಂಡವು ಮನೆ ಭೇಟಿಯ ಮೂಲಕ ಆರೋಗ್ಯ ಜಾಗೃತಿ ನೀಡುತ್ತಿರುವುದರ ಕುರಿತು ಪರಿಶೀಲಿಸಿ ಅಲ್ಲಿನ ಜನತೆಯೊಂದಿಗೆ ಮಾತನಾಡಿದರು.

ಕೋಳಿಶೀತ ಜ್ವರವು (ಹಕ್ಕಿಗಳಿಗೆ ಸಂಬಂಧಿಸಿದ) ವೈರಾಣುಗಳಿಂದ ಉಂಟಾಗಿದ್ದು, ಸೋಂಕು ತಗುಲಿದ ಹಕ್ಕಿಗಳಿಂದಾಗುವ ವಿಸರ್ಜನೆ, ಶ್ವಾಸೋಚ್ಛಾಸ ಕ್ರಿಯೆ ಮತ್ತು ರಕ್ತದಿಂದ ಹರಡುತ್ತದೆ. ಹಾಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ ಎಂದರು.

ಕೋಳಿಶೀತ ಜ್ವರ (ಬರ್ಡ್ ಫ್ಲೂ) ಪ್ರಕರಣ ವರದಿಯಾದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷೇತ್ರ ಸಿಬ್ಬಂದಿಯವರಿಂದ ಮನೆ ಭೇಟಿ ಮೂಲಕ ಜನತೆಗೆ ಜಾಗೃತಿ ನೀಡಲಾಗುತ್ತಿದ್ದು, ತಮ್ಮ ವ್ಯಾಪ್ತಿಯ ಆಕಸ್ಮಿಕವಾಗಿ ಕೋಳಿ ಹಾಗೂ ಇತರೆ ಪಕ್ಷಿಗಳು ಮೃತಪಟ್ಟಿರುವ ಮಾಹಿತಿ ಬಂದರೆ ಅವುಗಳನ್ನು ಮುಟ್ಟಬಾರದು ಎಂದು ಅವರು ಹೇಳಿದರು.

ಗ್ರಾಮಸ್ಥರಲ್ಲಿ ಅಥವಾ ಸೋಂಕು ವರದಿಯಾದ ಬೇರೆ ಊರಿನಿಂದ ಆಗಮಿಸಿದ ಯಾರಿಗಾದರೂ ಕೆಮ್ಮು, ತೀವ್ರಜ್ವರ, ಉಸಿರಾಟದಲ್ಲಿ ತೊಂದರೆ, ಮೂಗು ಸೋರುವಿಕೆ, ತಲೆನೋವು, ಸ್ನಾಯುಗಳ ನೋವು, ಗಂಟಲಿನ ಊತ ಕಂಡುಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಔಷಧೋಪಾರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸೋಂಕು ತಗುಲಿದ ಕೋಳಿ ಮರಿಗಳ ಪುಕ್ಕಗಳನ್ನು ತರಿಯುವ ಮತ್ತು ಹತ್ಯೆಮಾಡುವ ಕಾರ್ಯಗಳಲ್ಲಿ ನಿರತರಾದ ವಯಸ್ಕರಲ್ಲಿ ಹೆಚ್ಚಾಗಿ ಈ ಸೋಂಕು ಬರಬಹುದು. ಕಾರಣ ಸೋಂಕು ತಗಲಿದ, ಸಾಯುವ ಹಂತದಲ್ಲಿರುವ ಕೋಳಿಗಳಿರುವ ವಾತಾವರಣದಲ್ಲಿ ನಿರತರಾದ ಮಕ್ಕಳಿಗೂ ಈ ಸೋಂಕು ಹರಡುತ್ತದೆ. ಹಾಗಾಗಿ ವ್ಯಾದಿಗೊಳಗಾದ ಅಥವಾ ಆಕಸ್ಮಿಕವಾಗಿ ಮರಣ ಹೊಂದಿದ ಹಕ್ಕಿಗಳನ್ನು ಕೈಯಿಂದ ಮುಟ್ಟಬಾರದು. ಒಂದು ವೇಳೆ ಮನೆಯಲ್ಲಿ ಸಾಕಿದ ಇಲ್ಲವೇ, ಸೋಂಕು ಕಂಡುಬಂದ ಕೋಳಿ, ಹಕ್ಕಿಗಳ ಪುಕ್ಕಗಳನ್ನು ತೆಗೆಯಬಾರದು ಅಥವಾ ಕೈಯಿಂದ ಮುಟ್ಬಬಾರದು ಎಂದು ತಿಳಿಸಿದರು.

ಹಕ್ಕಿಗಳು ವೈರಾಣು ಸೋಂಕನ್ನು ಹೊಂದಿರಬಹುದಾಗಿದ್ದು, ಮಕ್ಕಳು ಸ್ಪರ್ಶಮಾಡುವುದಕ್ಕಾಗಲಿ ಅಥವಾ ಅವುಗಳೊಂದಿಗೆ ಆಟ ಆಡುವುದಾಗಲೀ ಅಥವಾ ಸಾಗಿಸುವುದಾಗಲಿ ಬಿಡಬಾರದು. ಸಾರ್ವಜನಿಕರು ಭಯಪಡದೆ ಆಕಸ್ಮಿಕವಾಗಿ ಕೋಳಿ, ಹಕ್ಕಿಗಳನ್ನು ಮುಟ್ಟಿದರೆ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಉಜ್ಜಿಕೊಳ್ಳದಂತೆ ಎಚ್ಚರವಹಿಸಬೇಕು. ಈಗಾಗಲೇ ಜಿಲ್ಲಾಡಳಿತದಿಂದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಅಗತ್ಯ ಔಷಧಿಗಳ ಲಭ್ಯತೆ ಮಾಡಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಕೋಳಿಶೀತ ಜ್ವರ ಕಂಡುಬಂದ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿದರು.

ಈ ವೇಳೆ ಜಿಲ್ಲಾ ಆರೋಗ್ಯಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಆರೋಗ್ಯ ನೀರಿಕ್ಷಣಾಧಿಕಾರಿ ಮಹೀಂದ್ರ ಸಿಂಗ್, ಆಶಾ ಕಾರ್ಯಕರ್ತೆಯರಾದ ಪದ್ಮಾವತಿ, ಈರಮ್ಮ, ಲತಾ, ಯಶೋಧಾ, ಸೇರಿದಂತೆ ಗ್ರಾಮಸ್ಥರು ಇದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page