ಬಿಎಂಟಿಸಿಯಲ್ಲಿ ಮೊಬೈಲ್‌ ಲೌಡ್ ಸ್ಪೀಕರ್ ಹಾಕಿದ್ರೆ – ಹಾಕಿದರೆ ಬಸ್‌ನಿಂದ ಕೆಳಕ್ಕೆ

ಬೆಂಗಳೂರು: ಸಿಲಿಕಾನ್ ಸಿಟಿಯ ಸಾರಿಗೆ ವ್ಯವಸ್ಥೆಯ ಜೀವನಾಡಿಯಾಗಿರುವ ಬಿಎಂಟಿಸಿ (BMTC) ಬಸ್‌ಗಳಲ್ಲಿ ಸಹಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಮೊಬೈಲ್ ಪ್ರಿಯರಿಗೆ ಸಂಸ್ಥೆಯು ಬಿಗ್ ಶಾಕ್ ನೀಡಿದೆ. ಮೆಟ್ರೋ, ಆಟೋ ಮತ್ತು ಕ್ಯಾಬ್‌ಗಳ ಪೈಪೋಟಿಯ ನಡುವೆಯೂ ಲಕ್ಷಾಂತರ ಜನರು ನಿತ್ಯ ಬಿಎಂಟಿಸಿಯನ್ನೇ ಅವಲಂಬಿಸಿದ್ದಾರೆ. ಆದರೆ, ಬಸ್‌ಗಳಲ್ಲಿ ಪ್ರಯಾಣಿಸುವಾಗ ಮೊಬೈಲ್ ಲೌಡ್ ಸ್ಪೀಕರ್ ಆನ್ ಮಾಡಿ ಜೋರಾಗಿ ಹಾಡು ಕೇಳುವುದು, ರೀಲ್ಸ್, ಯೂಟ್ಯೂಬ್ ವಿಡಿಯೋ ಹಾಗೂ ಧಾರಾವಾಹಿಗಳನ್ನು ವೀಕ್ಷಿಸುವ ಮೂಲಕ ಪಕ್ಕದ ಸೀಟಿನವರಿಗೆ ತೊಂದರೆ ಕೊಡುವವರ ಸಂಖ್ಯೆ ಹೆಚ್ಚಾಗಿದೆ. ಇಂತಹ ಸೌಂಡ್ ಪಾರ್ಟಿಗಳಿಗೆ ಬ್ರೇಕ್ ಹಾಕಲು ಬಿಎಂಟಿಸಿ ಈಗ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ.

ಲೌಡ್ ಸ್ಪೀಕರ್ ಹಾಕಿದರೆ ಬಸ್‌ನಿಂದ ಕೆಳಕ್ಕೆ!
ನಮ್ಮ ಮೆಟ್ರೋ ಮಾದರಿಯಲ್ಲೇ ಬಿಎಂಟಿಸಿ ಕೂಡ ಈಗ ಎಚ್ಚೆತ್ತುಕೊಂಡಿದ್ದು, ಬಸ್‌ಗಳಲ್ಲಿ ಇತರರಿಗೆ ತೊಂದರೆಯಾಗುವಂತೆ ಮೊಬೈಲ್ ಬಳಸದಂತೆ ಪ್ರಯಾಣಿಕರಿಗೆ ಖಡಕ್ ವಾರ್ನಿಂಗ್ ನೀಡಿದೆ. ಮೋಟಾರ್ ವೆಹಿಕಲ್ ಕಾಯ್ದೆಯಡಿ ಇಂತಹ ವರ್ತನೆಗಳಿಗೆ ನೇರವಾಗಿ ದಂಡ ವಿಧಿಸಲು ಸದ್ಯ ನಿರ್ವಾಹಕರಿಗೆ ಕಾನೂನಾತ್ಮಕ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ತಂತ್ರ ರೂಪಿಸಿರುವ ಸಂಸ್ಥೆಯು, ಲೌಡ್ ಸ್ಪೀಕರ್ ಹಾಕಿ ಕಿರಿಕಿರಿ ಮಾಡುವವರಿಗೆ ಮೊದಲಿಗೆ ಎಚ್ಚರಿಕೆ ನೀಡುವಂತೆ ನಿರ್ವಾಹಕರಿಗೆ ಸೂಚಿಸಿದೆ. ಒಂದು ವೇಳೆ ನಿರ್ವಾಹಕರ ವಾರ್ನಿಂಗ್‌ಗೆ ಕ್ಯಾರೆ ಎನ್ನದೆ ಹಠ ಹಿಡಿಯುವ ಪ್ರಯಾಣಿಕರನ್ನು ತಕ್ಷಣವೇ ಬಸ್‌ನಿಂದ ಅರ್ಧಕ್ಕೇ ಕೆಳಕ್ಕೆ ಇಳಿಸಲು ಸಂಸ್ಥೆಯು ಕಳೆದ ವಾರವೇ ಅಧಿಕೃತ ಆದೇಶ ಹೊರಡಿಸಿದೆ.

ಬೆಂಗಳೂರಿನಲ್ಲಿ 25 ಲಕ್ಷ ಗಡಿ ದಾಟಿದ ಕಾರುಗಳು:
ಇದೇ ವೇಳೆ ರಾಜಧಾನಿಯ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಮತ್ತೊಂದು ಆಘಾತಕಾರಿ ಅಂಕಿ-ಅಂಶ ಹೊರಬಿದ್ದಿದೆ. ಬೆಂಗಳೂರಿನ ರಸ್ತೆಗಿಳಿಯುವ ಖಾಸಗಿ ಕಾರುಗಳ ಸಂಖ್ಯೆ ಬರೋಬ್ಬರಿ 25 ಲಕ್ಷದ ಗಡಿ ದಾಟಿದೆ. ಸದ್ಯ ನಗರದಲ್ಲಿ ಒಟ್ಟು 25,20,535 ಖಾಸಗಿ ಕಾರುಗಳು ಸಂಚರಿಸುತ್ತಿದ್ದು, ಕೇವಲ ಜೂನ್ ತಿಂಗಳೊಂದರಲ್ಲೇ 13,519 ಹೊಸ ಕಾರುಗಳು ನೋಂದಣಿಯಾಗಿವೆ.

ಜೂನ್ ತಿಂಗಳಲ್ಲಿ ಒಟ್ಟಾರೆ 78,000 ಹೊಸ ವಾಹನಗಳು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ರಿಜಿಸ್ಟರ್ ಆಗಿದ್ದು, ಇದರೊಂದಿಗೆ ಬೆಂಗಳೂರಿನ ಒಟ್ಟು ವಾಹನಗಳ ಸಂಖ್ಯೆ ಬರೋಬ್ಬರಿ 1 ಕೋಟಿ 28 ಲಕ್ಷಕ್ಕೆ ತಲುಪಿದೆ. ನಗರದಲ್ಲಿ ಈ ಪ್ರಮಾಣದಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದಲೇ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಸಮಸ್ಯೆ ನಿಯಂತ್ರಣ ಸಿಗದಷ್ಟು ಭೀಕರವಾಗುತ್ತಿದೆ ಎಂದು ಸಾರಿಗೆ ಇಲಾಖೆಯ ವರದಿ ಆತಂಕ ವ್ಯಕ್ತಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು