Monday, January 20, 2025

ಸತ್ಯ | ನ್ಯಾಯ |ಧರ್ಮ

ಐಐಟಿ ಬಾಬಾ: ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಪೋಷಕರ ಕಾಳಜಿ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ‘ ಐಐಟಿ ವಾಲಿ ಬಾಬಾ ’ ಎಂದು ಜನಪ್ರಿಯತೆ ಗಳಿಸುತ್ತಿರುವ ಅಭಯ್ ಸಿಂಗ್ ಅವರ ತಂದೆ, ವಕೀಲ ಕರಣ್ ಸಿಂಗ್ ಗ್ರೆವಾಲ್ , ತಮ್ಮ ಮತ್ತು ತಮ್ಮ ಪತ್ನಿಯ ನಡುವಿನ ದಾಂಪತ್ಯ ಸಮಸ್ಯೆಯಿಂದಾಗಿ, ತಮ್ಮ ನಡುವಿನ ಸಂಘರ್ಷದಿಂದಾಗಿ ತಮ್ಮ ಮಗ ಕುಟುಂಬವನ್ನು ಬಿಟ್ಟು ಹೋಗಿರುವುದಾಗಿ ಜನವರಿ 19, 2024 ರ ಭಾನುವಾರದಂದು ಹೇಳಿದ್ದಾರೆ. ಝಜ್ಜರ್ ಬಾರ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಗ್ರೆವಾಲ್ ಅವರು ತಮ್ಮ ಮಗ ನೇರ ಮತ್ತು ಸತ್ಯವಂತನಾಗಿದ್ದು, ತಾವು ನೀಡಿದ ಕಾರಣವೇ ಆತ ಮನೆ ಬಿಟ್ಟು ಹೋಗಲು ನಿಜವಾದ ಕಾರಣ ಎಂದು ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 70 ವರ್ಷ ವಯಸ್ಸಿನ ಕರಣ್‌ ಸಿಂಗ್‌ ಅವರು ತಮ್ಮ ಮಗನ ಬಗ್ಗೆ ಮಾತನಾಡಿರುವುದನ್ನು ವರದಿ ಮಾಡಿದ್ದು, ಬಾಲ್ಯದಲ್ಲಿಯೇ ಕೌಟುಂಬಿಕ ಹಿಂಸೆಯಿಂದ ಅವರು ಆಳವಾಗಿ ಘಾಸಿಗೊಂಡಿದ್ದರು ಎಂದು ಹೇಳಿದ್ದಾರೆ. ಕೌಟುಂಬಿಕ ಸಮಸ್ಯೆಗಳಿಂದಾಗಿ ಮಕ್ಕಳು ಎದುರಿಸುವ ಸಮಸ್ಯೆಗಳ ಕುರಿತು ಕಾನೂನುಗಳ ಅಗತ್ಯವನ್ನು ಹೇಳುವ ಸಂಶೋಧನಾ ಲೇಖನಬನ್ನು ಅಭಯ್ ಸಿಂಗ್‌ ಬರೆದಿದ್ದಾರೆ ಎಂದು ಕರಣ್‌ ಸಿಂಗ್‌ ಹೇಳಿದ್ದಾರೆ. ಗ್ರೆವಾಲ್ ಅವರು ತಮ್ಮ ಮಗ ಅಭಯ್ ಒಬ್ಬ ಸಂವೇದನಾಶೀಲ ವ್ಯಕ್ತಿ, ದನಿಯಲ್ಲಿ ಆಗುವ ಸಣ್ಣ ಸಣ್ಣ ಬದಲಾವಣೆಗಳನ್ನೂ ಗ್ರಹಿಸಬಲ್ಲವನು ಎಂದು ಹೇಳಿದ್ದಾರೆ. “ಬಹುಶಃ ಅದಕ್ಕಾಗಿಯೇ ಅವನು ನನ್ನನ್ನು ಕಟ್ಟುನಿಟ್ಟಿನ ತಂದೆ ಎಂದು ಭಾವಿಸಿದ್ದನು” ಎಂದು ಅವರು ಮಗನ ಬಗ್ಗೆ ಹೇಳಿದ್ದಾರೆ.

ಪ್ರತಿ ಮನೆಯಲ್ಲೂ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಇರುವುದು ಸಾಮಾನ್ಯವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾ, ಅಭಯ್ ಈ ಜಗಳಗಳಿಂದಾಗಿ ಆಂತರಿಕವಾಗಿ ತುಂಬಾ ನೊಂದಿದ್ದ ಎಂದು ಅವರ ತಂದೆ ಕರಣ್‌ ಸಿಂಗ್‌ ಹೇಳಿದ್ದಾರೆ. “ದಂಪತಿಗಳು ಇದರಿಂದ ಪಾಠ ಕಲಿಯಬೇಕು, ತಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ತಮ್ಮ ಜಗಳಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು,” ಎಂದು ಗ್ರೆವಾಲ್ ಹೇಳಿದರು.

ಗ್ರೇವಾಲ್‌ ಅಭಯ್ ಮತ್ತು ಹಿರಿಯ ಮಗಳು “ಶುದ್ಧ ಆತ್ಮಗಳು” ಎಂದು ಕರೆದು, ಅವರು ಎಂದಿಗೂ ಸುಳ್ಳು ಹೇಳಲಿಲ್ಲ ಎಂದು ಹೇಳಿದ್ದಾರೆ.

ತನ್ನ ಮಗನನ್ನು ಗೃಹಸ್ಥ ಜೀವನಕ್ಕೆ ಮರಳಲು ಒತ್ತಾಯಿಸುತ್ತೀರಾ ಎಂದು ಕೇಳಿದಾಗ, “ಅವನು ನನ್ನ ಒಬ್ಬನೇ ಮಗ, ಮತ್ತು ಅಂತಹ ನಿರ್ಧಾರದಿಂದ ಯಾವುದೇ ಪೋಷಕರಿಗೆ ಸಂತೋಷವಾಗುವುದಿಲ್ಲ. ಆದರೆ ಈಗ, ಅವನು ಎಲ್ಲಿದ್ದರೂ ಅವನು ಸಂತೋಷವಾಗಿರಲಿ ಮತ್ತು ಆರೋಗ್ಯವಂತನಾಗಿರಲಿ ಎಂದು ನಾನು ಪ್ರಾರ್ಥಿಸಬಲ್ಲೆ,” ಎಂದು ಹೇಳಿದ್ದಾರೆ.

“ನನ್ನ ಜೀವನದಲ್ಲಿ ನಾನು ಗಳಿಸಿದ್ದು ಮತ್ತು ಸಂಪಾದಿಸಿದ್ದೆಲ್ಲವೂ ಅವನಿಗೆ ಸೇರಿದ್ದು. ತಾನು ಹಿಡಿದ ಈ ಮಾರ್ಗವು ಅತೃಪ್ತಿಕರವಾಗಿದ್ದರೆ, ಅದನ್ನು ಬಿಟ್ಟುಬಿಡುತ್ತೇನೆ ಎಂದು ಅಭಯ್ ಸ್ವತಃ ಸಂದರ್ಶನವೊಂದರಲ್ಲಿ ಹೇಳಿದ್ದರಲ್ಲಿ ನನಗೆ ಭರವಸೆ ಇದೆ,” ಎಂದು ಗ್ರೆವಾಲ್ ಹೇಳಿದ್ದಾರೆ.

ಅಭಯ್ ಅವರ ತಾಯಿ ಶೀಲಾ ದೇವಿ ವಕೀಲರಾಗಿದ್ದು, ಪತಿ ಕರಣ್ ಸಿಂಗ್ ಅವರ ಅಭಿಪ್ರಾಯವನ್ನೇ ಹೊಂದಿದ್ದಾರೆ. “ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಒಳ್ಳೆಯ ನೆಲೆಯನ್ನು ಕಂಡುಕೊಳ್ಳಲು ಮತ್ತು ಸ್ಥಿರವಾದ ಕುಟುಂಬ ಜೀವನವನ್ನು ನಡೆಸಲು ಬಯಸುತ್ತಾರೆ. ಆದರೆ ಈಗ, ತಾನು ಬದುಕಲು ಆರಿಸಿಕೊಂಡಿರುವ ಯಾವುದೇ ನೆಲೆಯಲ್ಲೂ ಅವನು ಸಂತೋಷವನ್ನು ಕಂಡುಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಅವರು ಹೇಳಿದರು.

ಬಾಲ್ಯದ ಸಂಕಟಗಳು!

ಅಭಯ್ 1990ರ ಮಾರ್ಚ್ 3 ರಂದು ಜನ್ಮರ್ ಜಿಲ್ಲೆಯ ಸಾಸ್ಕೃಲಿ ಗ್ರಾಮದಲ್ಲಿ ಜನಿಸಿದರು. ಅಭಯ್‌ ಹುಟ್ಟುವಾಗ ಅವರಿಗೆ ಎರಡು ವರ್ಷದ ಅಕ್ಕ ಇದ್ದರು. ಅವರೊಂದಿಗೆ ಅನ್ಯೋನ್ಯ ಬಾಂಧವ್ಯವನ್ನು ಹೊಂದಿದ್ದರು. ಮದುವೆಯ ನಂತರ ಅಭಯ್‌ ಅವರ ಅಕ್ಕ ಕೆನಡಾಕ್ಕೆ ತೆರಳಿ ಈಗ ಅಮೇರಿಕಾದಲ್ಲಿ ನೆಲೆಸಿದ್ದಾರೆ.

ಏಳನೇ ತರಗತಿಯವರೆಗೆ ಅಭಯ್ ಅವರು ಜಜ್ಜರ್‌ನಲ್ಲಿ ಓದಿದ್ದಾರೆ ಅವರ ತಂದೆ ಗ್ರೆವಾಲ್ ಉಲ್ಲೇಖಿಸಿದ್ದಾರೆ. ಅದರ ನಂತರ, ಅವರು ದೆಹಲಿಯಲ್ಲಿ ಐಐಟಿಗಾಗಿ ತಯಾರಿ ನಡೆಸಿದರು ಮತ್ತು ಅವರ ಮೊದಲ ಪ್ರಯತ್ನದಲ್ಲಿಯೇ, 2008 ರಲ್ಲಿ 18 ನೇ ವಯಸ್ಸಿನಲ್ಲಿ ಐಐಟಿ ಮುಂಬೈಗೆ ಪ್ರವೇಶಾತಿ ಪಡೆದರು. 2014 ರಲ್ಲಿ ಬಿಟೆಕ್ ಮುಗಿಸಿದ ನಂತರ, ಅಭಯ್ ಐಐಟಿ ಮುಂಬೈನಲ್ಲಿ ಡಿಸೈನಿಂಗ್‌ನಲ್ಲಿ ಎಂಟೆಕ್ ಅನ್ನು ಪಡೆದರು.

ಸುಮಾರು ಎರಡು ವರ್ಷಗಳ ನಂತರ, 2017 ರಲ್ಲಿ, ಅಭಯ್ ಅವರ ಸಹೋದರಿ ವಿವಾಹವಾಗಿ ಕೆನಡಾಕ್ಕೆ ತೆರಳಿದರು. ತಮ್ಮ ಸಹೋದರಿಯ ಕೆನಡಾಗೆ ಹೋದ ನಂತರ ಅಭಯ್‌ಗೆ ಒಂಟಿತನ ಕಾಡಲು ಆರಂಭಿಸಿತು. ಇದಕ್ಕೆ ಚಿಕಿತ್ಸೆ ಪಡೆಯಲು ವೈದ್ಯರ ಬಳಿಗೂ ಹೋಗಿದ್ದರು. ವೈದ್ಯರು ಅಭಯ್‌ಗೆ ಈ ಖಿನ್ನತೆಯಿಂದ ಹೊರಬರಲು ಕೆಲಸದಲ್ಲಿ ತೊಡಗಿಸಿಕೊಳ್ಳುವ ಸಲಹೆಯನ್ನು ನೀಡಿದ್ದರು. ಈ ಕಾರಣಕ್ಕಾಗಿ ಅಭಯ್ ಕಂಪನಿಯೊಂದರಲ್ಲಿ ಕೆಲಸ ಮಾಡಿದರು, ಆದರೆ ಆ ನಂತರ ತನ್ನ ಸಹೋದರಿಯೊಂದಿಗೆ ಕೆನಡಾಕ್ಕೆ ಹೋದರು.

“ಅವನು ತನ್ನ ಅಕ್ಕನೊಂದಿಗೆ ಕೆಲ ಸಮಯದವರೆಗೆ ಇದ್ದ. ನಂತರ, ಅಲ್ಲಿ ಕೆಲಸ ಸಿಕ್ಕದ ಮೇಲೆ ಪ್ರತ್ಯೇಕ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದನು. ಅಲ್ಲಿ ಕೆಲವು ತಿಂಗಳು ಕೆಲಸ ಮಾಡಿದ ನಂತರ, ಕೋವಿಡ್ -19 ಕಾರಣದಿಂದಾಗಿ ಲಾಕ್‌ಡೌನ್ ವಿಧಿಸಲಾಯಿತು. ಆಗ ಅಲ್ಲಿ ಅಭಯ್‌ಗೆ ತನ್ನ ಸಹೋದರಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಹಲವಾರು ತಿಂಗಳ ಲಾಕ್‌ಡೌನ್‌ ತೆಗೆದುಹಾಕಿದ ಮೇಲೆ ಅಭಯ್ ಭಾರತಕ್ಕೆ ವಾಪಾಸ್ ಬಂದರು.

“2022 ರಲ್ಲಿ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರುವಿನ ಈಶ ಯೋಗ ಕೇಂದ್ರಕ್ಕೆ ಹೋದರು ಮತ್ತು ಅಲ್ಲಿ ಸುಮಾರು ಆರು ತಿಂಗಳ ಕಾಲ ಇದ್ದರು. ಅವರು ಜಜ್ಜರ್‌ಗೆ ಹಿಂದಿರುಗಿದರು. ನಂತರ ಮೂರು ತಿಂಗಳ ಕಾಲ ದೆಹಲಿಯಲ್ಲಿ ಆಧ್ಯಾತ್ಮಿಕತೆಯನ್ನು ಅಧ್ಯಯನ ಮಾಡಿದರು. ಅಭಯ್ ನಂತರ ಧರ್ಮಶಾಲಾಗೆ ಭೇಟಿ ನೀಡಿದರು ಮತ್ತು ರಿಷಿಕೇಶಕ್ಕೆ ಪ್ರವಾಸ ಮಾಡಿದರು. ಆದರೆ ಸುಮಾರು ಆರು ತಿಂಗಳ ಹಿಂದೆ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದನು., ನಾವು ಪದೇ ಪದೇ ಮನೆಗೆ ಬರುವಂತೆ ಕೇಳಿದಾಗ ಅವನು ಒಪ್ಪಲಿಲ್ಲ. ನಂತರ ಕುಟುಂಬದ ಸದಸ್ಯರಿಗೆ ಅವನನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ,” ಎಂದು ಗ್ರೆವಾಲ್ ಹೇಳಿದ್ದಾರೆ..

“ಅಭಯ್ ಬಾಬಾನ ಮೊದಲ ವೀಡಿಯೋ ನೋಡಿದಾಗಲೇ ಶಾಕ್ ಆಯ್ತು. ಅಭಯ್ ಈ ದಾರಿ ಇಷ್ಟವಾಗದಿದ್ದರೆ ಇದನ್ನೂ ಬಿಟ್ಟು ಬಿಡುತ್ತೇನೆ ಎಂದು ಅವನು ಹೇಳಿರುವ ಹಲವು ವಿಡಿಯೋಗಳನ್ನು ನೋಡಿದ್ದೆ. ಒಂದು ದಿನ ತಾನೇ ಮನೆಗೆ ಬರುತ್ತೇನೆ ಎಂದು ಹೇಳಿರುವುದು ಒಂದು ಸಮಧಾನ, ನಾವು ಕರೆದರೆ ಅವನು ಬರುವುದಿಲ್ಲ,” ಎಂದು ಅಭಯ್‌ ತಂದೆ ಕರಣ್‌ ಸಿಂಗ್‌ ಹೇಳಿದ್ದಾರೆ.

ಗ್ರೆವಾಲ್ ಭಾವುಕರು, ತಮ್ಮ ಮಗನನ್ನು ತುಂಬಾ ಪ್ರೀತಿಸುತ್ತಿದ್ದರು. ಶಾಲೆಗೆ ಹೋಗುವ ಮೊದಲು ಅಭಯ್ ಅವರ ಸೈಕಲ್ ಅನ್ನು ಹೇಗೆ ಸಿದ್ದಪಡಿಸುತ್ತಿದ್ದರು ಎಂಬುದನ್ನು ನೆನಪಿಸಿಕೊಂಡರು. “ಅಭಯ್ ತುಂಬಾ ಸಂವೇದನಾಶೀಲನಾಗಿದ್ದ ಮತ್ತು ಕೌಟುಂಬಿಕ ಕಲಹಗಳಿಂದ ನೊಂದುಹೋಗಿದ್ದ. ಈ ಜಗಳಗಳು ಮಕ್ಕಳ ಮೇಲೆ ಅಂತಹ ದೊಡ್ಡ ಪರಿಣಾಮ ಬೀರುತ್ತವೆ ಎಂದು ನನಗೆ ತಿಳಿದಿರಲಿಲ್ಲ. ಆದ್ದರಿಂದ ನಾನು ತಮ್ಮ ತಮ್ಮ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಜಗಳಗಳನ್ನು ನಿಲ್ಲಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ” ಎಂದು ಅವರು ಹೇಳಿದರು.

ಆಧ್ಯಾತ್ಮದ ಹಾದಿ

ಪ್ರಯಾಗ್‌ರಾಜ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವಾಗ, ಐಐಟಿ ವಾಲಿ ಬಾಬಾ ಎಂದು ದೀಡೀರ್‌ ಖ್ಯಾತಿ ಪಡೆದಿರುವ ಅಭಯ್ ಸಿಂಗ್ ತನ್ನ ಹೆತ್ತವರ ನಡುವಿನ ಜಗಳಗಳಿಂದ ತಾನು ನೊಂದಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

ಕಾಲೇಜು, ಶಾಲಾ ದಿನಗಳನ್ನು ನೆನಪಿಸಿಕೊಳ್ಳುತ್ತಾ ತಮ್ಮ ಪ್ರೇಯಸಿಯ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅಭಯ್ ಅವರು ತಾವು ಏನು ಮಾಡಿದರೂ ತಮ್ಮ ಕುಟುಂಬಕ್ಕೆ ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ. ಮದುವೆಯ ಬಗ್ಗೆ ಅವರಿಗೆ ಆಸಕ್ತಿ ಇರಲಿಲ್ಲ ಮತ್ತು ಮನೆಯಿಂದ ದೂರ ಹೋಗಲು ಬಯಸಿದ್ದರು.

ತಮಗೊಬ್ಬ ಪ್ರೇಯಸಿ ಇದ್ದದ್ದು, ಸುಮಾರು ನಾಲ್ಕು ವರ್ಷಗಳ ಕಾಲ ಜೊತೆಯಾಗಿ ಇದ್ದರು ಎಂದು ಅಭಯ್ ಬಹಿರಂಗಪಡಿಸಿದ್ದರು, ಆದರೆ ಇದು ಮದುವೆಯ ಹಂತದ ವರೆಗೆ ತಲುಪಲಿಲ್ಲ. ತಂದೆ-ತಾಯಿಯ ಜಗಳ ನೋಡಿ ಮದುವೆಯಾಗಲು ಇಷ್ಟವಾಗಲಿಲ್ಲ ಎಂದಿದ್ದರು. ಒಂಟಿಯಾಗಿ ಇದ್ದು ಸಂತೋಷದಿಂದ ಇರುವುದೇ ಉತ್ತಮ ಎಂದು ಅನ್ನಿಸಿತು ಎಂದು ಅಭಯ್ ಹೇಳಿದ್ದರು.

ಶಾಲೆಯಿಂದ ಬಂದ ನಂತರ ನಿದ್ದೆ ಮಾಡಿ ರಾತ್ರಿ 12 ಗಂಟೆಗೆ ಏಳುತ್ತಿದ್ದೆ ಎಂದು ಅವರು ಹೇಳಿದ್ದರು. “ಈಗ, ನಾನು ವಿಜ್ಞಾನದ ಮೂಲಕ ಆಧ್ಯಾತ್ಮಿಕತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಮತ್ತು ಆಳವಾಗಿ ಅರಿಯಲು ಪ್ರಯತ್ನಿಸುತ್ತಿದ್ದೇನೆ . ಎಲ್ಲವೂ ಶಿವ, ಶಿವನೇ ಸತ್ಯ, ಮತ್ತು ಶಿವನೇ ಸುಂದರ,” ಎಂದು ಅವರು ಹೇಳಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page