Monday, June 17, 2024

ಸತ್ಯ | ನ್ಯಾಯ |ಧರ್ಮ

ಯಡಿಯೂರಪ್ಪ ಮೇಲಿನ ಅಕ್ರಮ ಡಿನೋಟಿಫಿಕೇಷನ್ ಪ್ರಕರಣ ಬೇರೊಂದು ಪೀಠಕ್ಕೆ ವರ್ಗಾವಣೆ

ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 26 ಎಕರೆ ಡಿನೋಟಿಫಿಕೇಷನ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಅಲಂ ಪಾಷಾ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಯು.ಯು.ಲಲಿತ್ ಈ ವಿಚಾರಣೆಯನ್ನು ಬೇರೊಂದು ಪೀಠಕ್ಕೆ ವರ್ಗಾಯಿಸುವಂತೆ ಸೂಚಿಸಿದ್ದಾರೆ.

ಮುಂದಿನ ತಿಂಗಳು ನ್ಯಾ.ಯು.ಯು.ಲಲಿತ್ ಅವರು ನಿವೃತ್ತರಾಗುವ ಕಾರಣ ಮತ್ತು ಈಗ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಆಗಿರುವ ಲಲಿತ್ ಈ ಹಿಂದೆ ಸೀನಿಯರ್ ಕೌನ್ಸಿಲ್ ಆಗಿದ್ದಾಗ ಯಡಿಯೂರಪ್ಪ ಮತ್ತು ಜನಾರ್ಧನ ರೆಡ್ಡಿ ಪರ ವಕಾಲತ್ತು ವಹಿಸಿರೋ ಕಾರಣಕ್ಕೆ ಇದನ್ನು ತಾನು ಸದಸ್ಯನಲ್ಲದ ಪೀಠ ವಿಚಾರಣೆ ನಡೆಸಲಿ ಎಂದಿದ್ದಾರೆ. ಆ ಕಾರಣ ದೀಪಾವಳಿಯ ನಂತರ ನ್ಯಾ.ಲಲಿತ್ ಅವರು ಇಲ್ಲದ ಪೀಠದಲ್ಲಿ ಈ ಪ್ರಕರಣ ಸಂಬಂಧ ಅರ್ಜಿ ವಿಚಾರಣೆ ನಡೆಯಲಿದೆ.

ಇನ್ನೊಂದು ಭ್ರಷ್ಟಾಚಾರ ಪ್ರಕರಣದಲ್ಲಿ ಹಾಲಿ ಸಚಿವ ಎಸ್.ಟಿ.ಸೋಮಶೇಖರ್ ಈ ಹಿಂದೆ ಬಿಡಿಎ ಅಧ್ಯಕ್ಷರಾಗಿದ್ದ ಸಮಯದಲ್ಲಿ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೂಡ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ಹಿಡಿದಿದೆ.

ಸ್ವತಃ ಜನಪ್ರತಿನಿಧಿಯೂ ಆಗಿರುವ ಯಡಿಯೂರಪ್ಪ ಅವರನ್ನು ವಿಚಾರಣೆ ನಡೆಸಲು ಕಾನೂನಿನ ಅಡಿಯಲ್ಲಿ ತೊಡಕು ಇರುವುದರಿಂದ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದೆ. ಈ ತನಿಖೆಗೆ ರಾಜ್ಯಪಾಲರ ಪೂರ್ವಾನುಮತಿ ಇಲ್ಲದೇ ಮುಂದುವರೆಯುವಂತಿಲ್ಲ ಎಂದು ಯಡಿಯೂರಪ್ಪ ಪರ ವಕೀಲರು ವಾದ ಮಂಡಿಸಿದ್ದರು. ಸಧ್ಯ ಈ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ಹಿಡಿದಿದೆ.

ಈ ಪ್ರಕರಣದ ಅಡಿಯಲ್ಲಿ ಕೇವಲ ಯಡಿಯೂರಪ್ಪರ ವಿಚಾರಣೆ ಅಷ್ಟೇ ತಡೆ ಹಿಡಿದಿದ್ದು, ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೇರಿದಂತೆ ಪ್ರಕರಣದಲ್ಲಿ ಉಲ್ಲೇಖಿತರಾದ ಒಟ್ಟು 9 ಮಂದಿ ಪ್ರತಿವಾದಿಗಳಿಗೆ ನೊಟೀಸ್ ಜಾರಿ ಮಾಡಿರುವ ಸುಪ್ರೀಂಕೋರ್ಟ್ 4 ವಾರಗಳ ಒಳಗೆ ಉತ್ತರಿಸುವಂತೆ ಸೂಚನೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು