Home ಬ್ರೇಕಿಂಗ್ ಸುದ್ದಿ ಹಾಸನಾಂಬೆ ಉತ್ಸವ ಟೆಂಡರ್‌ನಲ್ಲಿ ಅಕ್ರಮ -ಲೋಕಾಯುಕ್ತರ ಎಂಟ್ರಿ

ಹಾಸನಾಂಬೆ ಉತ್ಸವ ಟೆಂಡರ್‌ನಲ್ಲಿ ಅಕ್ರಮ -ಲೋಕಾಯುಕ್ತರ ಎಂಟ್ರಿ

0

ಹಾಸನ: ಹಾಸನಾಂಬೆ ದೇವಸ್ಥಾನ ವಾರ್ಷಿಕ ದರ್ಶನೋತ್ಸವದ ವೇಳೆ ನಡೆದ ವಿದ್ಯುತ್ ದೀಪಾಲಂಕಾರ ಸೇರಿದಂತೆ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ಆರಂಭವಾಗಿದೆ.

ಆರ್‌ಟಿಐ ಕಾರ್ಯಕರ್ತ ಮನು ಸಲ್ಲಿಸಿದ ದೂರಿನ ಆಧಾರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಹಾಸನದಲ್ಲಿ ಮಹಾನಗರಪಾಲಿಕೆ ಅಧಿಕಾರಿಗಳು ಹಾಗೂ ಸಂಬಂಧಿತ ಇಂಜಿನಿಯರ್‌ಗಳನ್ನು ವಿಚಾರಣೆ ನಡೆಸಿದರು. ಮಹಾನಗರಪಾಲಿಕೆ ಕಚೇರಿ ಆವರಣದಲ್ಲೇ ನಡೆದ ವಿಚಾರಣೆಯಲ್ಲಿ ವಿದ್ಯುತ್ ದೀಪಾಲಂಕಾರ ಗುತ್ತಿಗೆ ನೀಡುವಲ್ಲಿ ನಿಯಮಾವಳಿ ಪಾಲನೆಯಾಗಿಲ್ಲ ಎಂಬ ಆರೋಪಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಯಿತು. ಉತ್ಸವದ ವೇಳೆ ವಿದ್ಯುತ್ ದೀಪಾಲಂಕಾರಕ್ಕೆ ಲಕ್ಷಾಂತರ ರೂಪಾಯಿ ದುಂದು ವೆಚ್ಚ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೀಪಾಲಂಕಾರ ಒಂದರಲ್ಲೇ 15 ಲಕ್ಷಕ್ಕೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಖರೀದಿಸಿದ ಸಾಮಗ್ರಿಗಳ ಮೌಲ್ಯಕ್ಕಿಂತ ಹೆಚ್ಚಾಗಿ ಹಣ ವ್ಯಯಿಸಲಾಗಿದೆ ಎಂಬುದೂ ದೂರಿನ ಅಂಶವಾಗಿದೆ.

ಮುಜರಾಯಿ ಇಲಾಖೆಯ ಗ್ರೇಡ್-1 ದೇವಸ್ಥಾನವಾಗಿರುವ ಹಾಸನಾಂಬೆ ದೇವಸ್ಥಾನದ ಉತ್ಸವದಲ್ಲಿ ಪ್ರತೀ ವರ್ಷವೂ ಒಂದೇ ಗುತ್ತಿಗೆದಾರನಿಗೆ ಟೆಂಡರ್ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ವಿದ್ಯುತ್ ಲೈಟಿಂಗ್ಸ್, ಹೂವಿನ ಅಲಂಕಾರ ಸೇರಿದಂತೆ ಬಹುತೇಕ ಎಲ್ಲಾ ಕಾಮಗಾರಿಗಳನ್ನೂ ಒಬ್ಬರಿಗೇ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಉತ್ಸವದಲ್ಲಿ ಅನುಭವ ಹೊಂದಿದವರಿಗೆ ಆದ್ಯತೆ ನೀಡಬೇಕು ಎಂಬ ನಿಯಮವನ್ನು ಸೇರಿಸಿ ನಿರ್ದಿಷ್ಟ ಗುತ್ತಿಗೆದಾರನಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಲವರು ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳ ನೆರವಿನಿಂದ ಒಬ್ಬರ ಪರವಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂಬ ಅಂಶವನ್ನು ಪ್ರಸ್ತಾಪಿಸಲಾಗಿದೆ.

ಲೋಕಾಯುಕ್ತ ಅಧಿಕಾರಿ ಗಾಯತ್ರಿ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ಮಹಾನಗರಪಾಲಿಕೆ ಇಂಜಿನಿಯರ್ ಸುಜಾತಾ ಹಾಗೂ ನಿವೃತ್ತ ಇಂಜಿನಿಯರ್ ರಂಗಸ್ವಾಮಿ ಅವರನ್ನು ಪ್ರಶ್ನಿಸಲಾಯಿತು. ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ ತನಿಖಾಧಿಕಾರಿ, ಸರಿಯಾದ ದಾಖಲೆ ನೀಡದಿದ್ದಲ್ಲಿ ಅದನ್ನೇ ವರದಿಯಲ್ಲಿ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು ಎನ್ನಲಾಗಿದೆ. ದೂರುದಾರನ ಸಮ್ಮುಖದಲ್ಲೇ ದಾಖಲೆ ಪರಿಶೀಲನೆ ನಡೆಸಿದ ಅಧಿಕಾರಿಗಳು, ಸಲ್ಲಿಸಿದ ದಾಖಲೆಗಳ ಸಮರ್ಪಕತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆಂದು ತಿಳಿದುಬಂದಿದೆ. ಅಧಿಕಾರಿಗಳ ಪ್ರಶ್ನೆಗೆ ಮಹಾನಗರಪಾಲಿಕೆ ಸಿಬ್ಬಂದಿ ತಬ್ಬಿಬ್ಬಾದ ಘಟನೆ ಕೂಡ ಗಮನಸೆಳೆಯಿತು.

You cannot copy content of this page

Exit mobile version