ನವದೆಹಲಿ: ಅಧಿಕೃತ ದಾಖಲೆಗಳಾದ ಪಾಸ್ಪೋರ್ಟ್ ಅಥವಾ ವೀಸಾ ಇಲ್ಲದೇ ಭಾರತವನ್ನು ಪ್ರವೇಶಿಸುವ ವಿದೇಶಿಯರಿಗೆ ಐದು ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸಲು ಭಾರತ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ
. ನಕಲಿ ಪಾಸ್ಪೋರ್ಟ್ ಅಥವಾ ಪ್ರವಾಸದ ದಾಖಲೆಯೊಂದಿಗೆ ಭಾರತವನ್ನು ಪ್ರವೇಶಿಸುವುದು, ಭಾರತದಲ್ಲಿ ತಂಗುವುದು ಅಥವಾ ಭಾರತದಿಂದ ನಿರ್ಗಮಿಸಿದಲ್ಲಿ ಎರಡರಿಂದ ಏಳು ವರ್ಷ ವರೆಗೆ ಜೈಲು ಶಿಕ್ಷೆ ಹಾಗೂ ಒಂದು ಲಕ್ಷದಿಂದ ಹತ್ತು ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ.
ವಲಸೆ ಮತ್ತು ವಿದೇಶಿಯರ ಮಸೂದೆ-2025ನ್ನು ಪ್ರಸಕ್ತ ಲೋಕಸಭಾ ಅಧಿವೇಶನದಲ್ಲೇ ಮಂಡಿಸಲು ಸಿದ್ಧತೆ ನಡೆದಿದ್ದು, ವಲಸೆ ಮತ್ತು ವಿದೇಶಿಯರನ್ನು ನಿಯಂತ್ರಿಸುವ ವಿದೇಶಿಯರ ಕಾಯ್ದೆ-1946, ಪಾಸ್ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯ್ದೆ-1920, ವಿದೇಶಿಯರ ನೋಂದಣಿ ಕಾಯ್ದೆ-1939 ಮತ್ತು ಇಮಿಗ್ರೇಶನ್ (ಕ್ಯಾರಿಯರ್ಸ್ ಲಯಾಬಿಲಿಟಿ) ಕಾಯ್ದೆ-2000 ಹೀಗೆ ನಾಲ್ಕು ಕಾಯ್ದೆಗಳ ವಿವಿಧ ನಿಬಂಧನೆಗಳು ಒಂದರ ಮೇಲೊಂದು ವ್ಯಾಪಿಸುವ ಹಿನ್ನೆಲೆಯಲ್ಲಿ ಇವುಗಳ ಬದಲಾಗಿ ಒಂದೇ ಸಮಗ್ರ ಶಾಸನ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಸದ್ಯಕ್ಕೆ ಮೌಲಿಕ ಪಾಸ್ಪೋರ್ಟ್ ಅಥವಾ ಪ್ರಯಾಣದ ದಾಖಲೆ ಇಲ್ಲದೇ ಭಾರತವನ್ನು ಪ್ರವೇಶಿಸುವ ವಿದೇಶಿಯರಿಗೆ ಐದು ವರ್ಷ ಜೈಲು ಮತ್ತು ದಂಡ ವಿಧಿಸಬಹುದಾಗಿದೆ. ನಕಲಿ ದಾಖಲೆಗಳ ಮೂಲಕ ಭಾರತಕ್ಕೆ ಪ್ರವೇಶ ಪಡೆಯುವವರಿಗೆ 8 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
ಹೊಸ ಮಸೂದೆಯ ಅನ್ವಯ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು, ಇಂಥ ವರ್ಗದ ವಿದೇಶಿಯರಿಗೆ ನಿರ್ದಿಷ್ಟಪಡಿಸಿದ ನೋಂದಣಿ ಅಧಿಕಾರಿ ಜತೆಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ.