Friday, June 21, 2024

ಸತ್ಯ | ನ್ಯಾಯ |ಧರ್ಮ

ʼನಾನು ದಡ್ ನನ್ ಮಗʼ: ಪ್ರಜಾಕೀಯದ ಬಗ್ಗೆ ಬೇಸರಗೊಂಡು ಪೋಸ್ಟ್‌ ಹಾಕಿದ ಉಪೇಂದ್ರ

ಬೆಂಗಳೂರು: ನೆರೆರಾಜ್ಯದಲ್ಲಿ ನಟ ಪವನ್ ಕಲ್ಯಾಣ್‌ ಗೆದ್ದ ಬೆನ್ನಲ್ಲೆ ತಮ್ಮ ಪ್ರಜಾಕೀಯ ಪಕ್ಷದ ಬಗ್ಗೆ ಬೇಸರಪಟ್ಟುಕೊಂಡು ನಟ ಉಪೇಂದ್ರ ಇನಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಪವನ್‌ ಅವರನ್ನು ಗೆಲ್ಲಿಸಲು ತೆಲುಗಿನ ಜನ 14 ವರ್ಷ ತೆಗೆದುಕೊಂಡರು, ಉಪೇಂದ್ರ ಅವರನ್ನು ಗೆಲ್ಲಿಸಲು ಕನ್ನಡಿಗರು ಎಷ್ಟು ವರ್ಷ ತೆಗೆದುಕೊಳ್ಳುತ್ತಾರೋ’ ಎಂದಿರುವ ಉಪೇಂದ್ರ ತಮ್ಮ ಪಕ್ಷ ‘ಪ್ರಜಾಕೀಯ’ದ ಸಿದ್ದಾಂತ ಬಗ್ಗೆ ಜನರಿಗೆ ಅರ್ಥವಾಗದೇ ಇರುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

‘ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್… ನಾನು ಗೆಲ್ಲಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವು ಹೇಳಿದ ಹಾಗೆ ಮಾಡುತ್ತೇನೆ. ಗೆದ್ದೆ ಗೆಲ್ಲುತ್ತೇನೆ. ನೀವು ಗೆಲ್ಲೋದು ಯಾವಾಗ ಅಂತ ನೀವು ಯೋಚನೆ ಮಾಡಿ. ಮುಂದಿನ ಚುನಾವಣೆಯಲ್ಲಿ ನನಗೆ ಕೆಲಸ ಕೊಡುತ್ತಿರಾ ಅಂದ್ರೆ ನಿಲ್ಲುತ್ತೇನೆ. ಆಗಲೂ ನೀವು ಎಮೋಷನಲ್‌ ಪ್ರಚಾರ ಮಾಡಬೇಕು. ಸಭೆ ಸಮಾರಂಭ ಎಲ್ಲವನ್ನು ಮಾಡಿ. ಕಷ್ಟಪಡಿ.. ಆಮೇಲೆ ಐದು ವರ್ಷ ನೀವೇನು ಬೇಕಾದರೂ ಮಾಡಿಕೊಳ್ಳಿ ನಾನು ಕೇಳುವುದಕ್ಕೆ ಬರಲ್ಲ ಅಂದರೆ… ಉಸ್‌..ಏನು ಬರೀಬೇಕೋ ಗೊತ್ತಾಗುತ್ತಿಲ್ಲ. ಈ ದಡ್ಡ ನನ್ನ ಮಗಂಗೆ ಯಾವನಾದ್ರೂ ಇನ್ನು ಮೇಲೆ ಬುದ್ದಿವಂತಾ ಅಂದರೆ ಅಷ್ಟೇ… ಸೆಂದಾಗಿರಕ್ಕಿಲ್ಲಾ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಪವನ್ ಕಲ್ಯಾಣ್‌ ಅವರ ಜನಸೇನಾ ಪಕ್ಷಕ್ಕೆ ಅಭೂತ ಪೂರ್ವ ಫಲಿತಾಂಶ ಬಂದಿದ್ದು, ಇದಾದ ಬೆನ್ನಲ್ಲೇ ಉಪೇಂದ್ರ ಅವರ ಪ್ರಜಾಕೀಯ ಪಕ್ಷವನ್ನು ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಹೋಲಿಸಿ ಅನೇಕ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಪಕ್ಷ ಬೆಳೆಸುವುದರಲ್ಲಿ ಪವನ್‌ ಕಲ್ಯಾಣ್ ಅವರಿಗಿದ್ದ ಆಸಕ್ತಿಯನ್ನು ಉಪೇಂದ್ರ ಅವರು ತೋರಿಸುತ್ತಿಲ್ಲ ಎನ್ನುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

2018ರಲ್ಲಿ ‘ಉತ್ತಮ ಪ್ರಜಾಕೀಯ ಪಕ್ಷ’ವನ್ನು ಕಟ್ಟಿ ಬೆಳೆಸಿದ್ದ ಉಪೇಂದ್ರ ಅವರು, 2019 ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಇಲ್ಲಿಯವರೆಗೆ ನಡೆದ ಯಾವುದೇ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿಗೆ ಗೆಲುವು ದಕ್ಕಿಲ್ಲ. ಹೀಗಾಗಿ ಅವರಿಗೆ ತಮ್ಮ ಪ್ರಜಾಕೀಯ ರಾಜಕೀಯ ಸಿದ್ಧಾಂತದ ಬಗ್ಗೆಯೇ ಬೇಸರ ಬಂದಂತಿದೆ. ಅವರ ಪೋಸ್ಟ್‌ ಓದಲು ಇಲ್ಲಿ ಕ್ಲಿಕ್ಕಿಸಿ.

Related Articles

ಇತ್ತೀಚಿನ ಸುದ್ದಿಗಳು