ದೇಶಾದ್ಯಂತ ಬಂಧಿತ ಪ್ರತಿಭಟನಾಕಾರರ ತಕ್ಷಣವೇ ಬಿಡುಗಡೆ ಮಾಡಿ – CJP ಆಗ್ರಹ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ (Paper leak) ವಿರೋಧಿಸಿ ನಡೆಯುತ್ತಿರುವ ಹೋರಾಟದ ನಡುವೆ ದೇಶಾದ್ಯಂತ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ (Central Government) ತನ್ನ ಭರವಸೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಘಟನೆ ಒತ್ತಾಯಿಸಿದೆ. ವಿದ್ಯಾರ್ಥಿಗಳ ಹಾಗೂ ಯುವಜನರ ಹಿತರಕ್ಷಣೆಗಾಗಿ ನೀಡಿದ ಮಾತುಗಳನ್ನು ಸರ್ಕಾರ ತಡಮಾಡದೇ ಜಾರಿಗೆ ತರಬೇಕು ಎಂದು ಸಿಜೆಪಿ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಕರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಪರೀಕ್ಷಾ ಅಕ್ರಮಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿಗಳ ಕುಟುಂಬಗಳಿಗೆ ತಕ್ಷಣವೇ ಸೂಕ್ತ ಪರಿಹಾರ ಧನ ನೀಡಬೇಕು ಹಾಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಎಲ್ಲಾ ಎಫ್‌ಐಆರ್‌ಗಳು ಮತ್ತು ಕಾನೂನು ಪ್ರಕರಣಗಳನ್ನು ಹಿಂಪಡೆಯಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.

ಪರೀಕ್ಷಾ ಸೋರಿಕೆ ತಡೆಯಲು ಹೊಸ ಕಠಿಣ ಕಾನೂನು ತರುವುದಾಗಿ ಹಾಗೂ ಅಕ್ರಮ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಲು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರ ಹಾಗೂ ಸಿಜೆಪಿ ನಾಯಕರ ನಡುವೆ ಸರಣಿ ಮಾತುಕತೆಗಳು ನಡೆದಿದ್ದು, ಪರಿಹಾರ ವಿತರಣೆ ಮತ್ತು ಪ್ರಕರಣಗಳ ವಾಪಸಾತಿ ಬೇಡಿಕೆಗಳಿಗೆ ಸರ್ಕಾರ ತತ್ವಶಃ ಸಮ್ಮತಿ ಸೂಚಿಸಿದೆ. ಆದರೆ, ಸಚಿವರ ರಾಜೀನಾಮೆ ವಿಷಯದಲ್ಲಿ ಸರ್ಕಾರ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.

ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಲಪ್ರಯೋಗ ನಡೆಸಿದ್ದಕ್ಕೆ ಸರ್ಕಾರ ಹಾಗೂ ಭದ್ರತಾ ಪಡೆಗಳು ಕ್ಷಮೆಯಾಚಿಸಬೇಕು ಎಂದು ಸಿಜೆಪಿ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ. ಸರ್ಕಾರ ನೀಡಿರುವ ಭರವಸೆಗಳನ್ನು ಲಿಖಿತ ರೂಪದಲ್ಲಿ ತಕ್ಷಣ ಜಾರಿಗೆ ತರದಿದ್ದರೆ, ಈ ಜನಾಕ್ರೋಶದ ಹೋರಾಟವು ದೇಶದ ಪ್ರತಿಯೊಂದು ಮೂಲೆಗೂ ವಿಸ್ತರಿಸಲಿದೆ ಎಂದು ಸಿಜೆಪಿ ವಕ್ತಾರರು ಎಚ್ಚರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು